Shree Swarnavalli Bhaktavranda

🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ದೈವಶಕ್ತಿಯ-ಗುರುಭಕ್ತಿಯ ಅನಾವರಣ

    
    ವಿಶಿಷ್ಟವಾದ ಹೂವಿನ ಅಲಂಕಾರ, ದೀಪಗಳ ಸರಮಾಲೆಗಳಿಂದ ಶೋಭಿಸುವ ಪ್ರಾಕಾರ, ಮಧ್ಯದ ಗರ್ಭಗುಡಿಯಲ್ಲಿ ಸ್ವರ್ಣಾಲಂಕೃತ ದೇವತೆಗಳ ಸಾನ್ನಿಧ್ಯ,  ಯತಿಗಳ ಸಾನ್ನಿಧ್ಯದಿಂದ ಪರಿಶೋಭಿಸುತ್ತಿರುವ ಪ್ರಾಕಾರವೇದಿಕೆ, ಆ ವೇದಿಕೆಯಲ್ಲಿ ಬಾಲಶಂಕರರಂತೆ ಕಂಗೊಳಿಸುತ್ತಿರುವ ನೂತನ ಯತಿಗಳು, ಅವರಿಗೆ ದೀಕ್ಷಾದಂಡಸಹಿತವಾಗಿ ಯೋಗಪಟ್ಟ ನಾಮಧೇಯವನ್ನಿತ್ತು ಹರಸುತ್ತಿರುವ ಹಿರಿಯ ಶ್ರೀ ಶ್ರೀಗಳವರು, ಈ ಎಲ್ಲ ಅಭೂತಪೂರ್ವ ಕ್ಷಣಗಳಿಗೆ ಸಾಕ್ಷಿಯಾಗುತ್ತಿರುವ ಭಕ್ತಜನಸ್ತೋಮ; ಈ ಎಲ್ಲ ವೈಭವಗಳ ಸಾಕಾರಕ್ಕೆ ಇಂದಿಗೆ ಒಂದು ವರ್ಷ ಸಂಪನ್ನವಾಯಿತು.

 ಹೂವಿನ ಅಲಂಕಾರದಿಂದ ಕಣ್-ಮನಗಳನ್ನು ತಂಪಾಗಿಸಿಕೊಂಡವರು ಅನೇಕರು, ಅಬ್ಬಾ! ಎಷ್ಟೊಂದು ಚೆಂದದ ಅಲಂಕಾರ! ಎಂದು ಮೂಗಿನ ಮೇಲೆ ಬೆರಳಿಟ್ಟು ಆಶ್ಚರ್ಯ ವ್ಯಕ್ತಪಡಿಸಿದ ಭಕ್ತರು ಹಲವರು. ರಾತ್ರಿ ಬೆಳಗಾಗುವುದರಲ್ಲಿ ಅದ್ಭುತವಾದ ಪುಷ್ಪಲೋಕವನ್ನೇ ಧರೆಗಿಳಿಸಿದಂತೆ ಶ್ರೀ ಮಠದ ಚಿತ್ರಣವನ್ನೇ ಬದಲಿಸಿದ  ಹೂವಿನ ಅಲಂಕಾರವೋ ಎಂಬ ಹಾಗೆ ಮೂಕವಿಸ್ಮಿತರಾದವರು ಇನ್ನು ಹಲವರು. ಹೀಗೆ ೨೦೨೪-ರ ಫೆಬ್ರವರಿ ೧೮-ರಿಂದ ೨೨-ರ ವರೆಗೆ ಐದು ದಿನಗಳ ಕಾಲ ನಡೆದ ಅಭೂತಪೂರ್ವ ‘ಶಿಷ್ಯಸ್ವೀಕಾರ’ ಕಾರ್ಯಕ್ರಮವನ್ನು ಸಾಗರೋಪಾದಿಯಲ್ಲಿ ಬಂದು ಭಕ್ತರು ಕಣ್ತುಂಬಿಕೊಂಡರು.

 ಸನ್ಯಾಸ ದೀಕ್ಷೆಯ ಎಲ್ಲ ಕಾರ್ಯಕ್ರಮಗಳೂ ಯಾವುದೇ ಅಡೆತಡೆಗಳಿಲ್ಲದೇ, ಶಾಸ್ತ್ರೋಕ್ತವಾಗಿ, ಸರ್ವಾಂಗಸುಂದರವಾಗಿ ಸಂಪನ್ನವಾಗಿರುವುದು ‘ದೈವಶಕ್ತಿ’ಯ ಹಾಗೂ ‘ಗುರು’ಭಕ್ತಿಯ ಅನಾವರಣವೇ ಸರಿ. 
ಇಂತಹ ಅಭೂತಪೂರ್ವವಾದ ಸಂದರ್ಭಕ್ಕೆ ಶ್ರೀ ಮಠವು ಸಾಕ್ಷಿಯಾಗಿ ಇಷ್ಟು ಬೇಗ ಒಂದು ವರ್ಷ ಕಳೆಯಿತು ಎಂದರೆ ಆಶ್ಚರ್ಯವಾಗುತ್ತದೆ. 

ಮಗ ಹುಟ್ಟಿದ ಸಂತೋಷದಲ್ಲಿ ತಾಯಿಯು ಹೇಗೆ ತನ್ನ ಎಲ್ಲ ನೋವುಗಳನ್ನು ಮರೆಯವಳೋ, ಸಂತೋಷದಿಂದ ಪುತ್ರೋತ್ಸವವನ್ನು ಹೇಗೆ  ಅನುಭವಿಸುವಳೋ, ಅದೇ ರೀತಿಯಲ್ಲಿ ಪರಮಪೂಜ್ಯ ಶ್ರೀ ಶ್ರೀಗಳವರು ಶಿಷ್ಯೋತ್ಸವವನ್ನು ಸಂಭ್ರಮಿಸಿದ ಆ ಕಾಲ ಇಂದಿಗೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಅನೇಕ ದಿನಗಳ ಕಾಲ ವಿಶ್ರಾಂತಿ-ನಿದ್ರೆಗಳನ್ನು ಬಿಟ್ಟಿದ್ದರೂ ಮೈ-ಮನಗಳಲ್ಲಿ ಕುಂದದ ಉತ್ಸಾಹ, ಇಮ್ಮಡಿಸಿದ ಅಲೌಕಿಕ ಸಂತೋಷ ಇವೆಲ್ಲವೂ ದೈವಶಕ್ತಿಯ ಅನಾವರಣವಾದರೆ, ‘ಶಿಷ್ಯಸ್ವೀಕಾರ’ದ ಎಲ್ಲ ಕಾರ್ಯಕ್ರಮಗಳಿಗೆ ತಮ್ಮ ದಿವ್ಯ ಸಾನ್ನಿಧ್ಯವನ್ನು ನೀಡಿ, ಮಾರ್ಗದರ್ಶನ ಮಾಡುತ್ತಾ ಶಿಷ್ಯರಲ್ಲಿ ಉತ್ಸಾಹವನ್ನು ತುಂಬುತ್ತಿದ್ದ ಶ್ರೀ ಗುರುಗಳ ಎಲ್ಲ ಸಂಕಲ್ಪ-ಆದೇಶಗಳನ್ನೂ ಪರಿಪೂರ್ಣವಾದ ಶ್ರದ್ಧಾ-ಭಕ್ತಿಗಳಿಂದ ಸಾಕಾರಗೊಳಿಸುತ್ತಿದ್ದ ಶಿಷ್ಯಭಕ್ತರ ಪಾಲ್ಗೊಳ್ಳುವಿಕೆಯು ಗುರುಭಕ್ತಿಯ ಅನಾವರಣವಾಗಿತ್ತು. ಆ ದಿನಗಳನ್ನು ನೆನಪಿಸಿಕೊಂಡರೆ ಮೈ-ಮನಗಳೆಲ್ಲ ಪುಳಕಗೊಳ್ಳುತ್ತವೆ. ಶ್ರೀ ಶ್ರೀಗಳವರು ತಮ್ಮ ಶಿಷ್ಯರನ್ನು ನೋಡಿದ ತಕ್ಷಣ ದೇಹದಲ್ಲಿ ಅಡಗಿದ ಎಲ್ಲ ನೋವುಗಳು ಮಾಯವೋ ಎಂಬಂತೆ ಕಾಣುತ್ತಿದ್ದರು. ಅವರ ಆ ಉತ್ಸಾಹ ಎಲ್ಲಿಲ್ಲದ ಆನಂದ ಇವನ್ನೆಲ್ಲ ನೋಡಿ ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲುತ್ತಿರಲಿಲ್ಲ. 

ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಲು ನಿಯೋಜಿತರಾದ ಬ್ರಹ್ಮಚಾರಿಗಳು ದೀಕ್ಷಾಂಗವಾಗಿ ನಡೆಯುವ ಎಲ್ಲಾ  ಕಾರ್ಯ-ಕಲಾಪಗಳಲ್ಲಿ ಅತ್ಯಂತ ಶ್ರದ್ಧೆಯಿಂದ ಪಾಲ್ಗೊಳ್ಳುತ್ತಿದ್ದರು. ಸೂರ್ಯೋದಯಕ್ಕಿಂತ  ಪೂರ್ವದಲ್ಲಿ ಪೂರ್ಣಾಹುತಿಯನ್ನು ನೆರವೇರಿಸಬೇಕು ಎಂಬ ನಿಯಮದಂತೆ ವಿರಜಾಹೋಮವನ್ನು ಬೆಳಗಿನ ಜಾವ ೩ ಗಂಟೆಯಿಂದಲೇ ಆರಂಭಿಸಿ, ಸಕಾಲದಲ್ಲಿ ಪೂರ್ಣಗೊಳಿಸಿದರು. ವೇದ-ವೇದಾಂಗಗಳ ಅಧ್ಯಯನ ಸಂಪನ್ನರಾದ, ಶ್ರೌತಕರ್ಮಗಳಲ್ಲಿ ನಿಷ್ಣಾತರಾದ ನಾಡಿನ ಅನೇಕ ಹಿರಿಯ ವಿದ್ವಾಂಸರ ಉಪಸ್ಥಿತಿ ಹಾಗೂ ಭಾಗವಹಿಸುವಿಕೆಯಲ್ಲಿ ಸಂನ್ಯಾಸಸ್ವೀಕಾರದ ವಿಧಿವಿಧಾನಗಳು ನೆರವೇರಿದವು. ಈ ವಿಧಿ ವಿಧಾನಗಳು ಇಷ್ಟು ಅಚ್ಚುಕಟ್ಟಾಗಿ ನಡೆದಿರುವುದು ಉಭಯ ಶ್ರೀಗಳ ಸಂತೋಷ ಉತ್ಸಾಹ ಇನ್ನೂ ಇಮ್ಮಡಿಯಾಗಲು ಒಂದು ಕಾರಣ. 

 ಶಾಲ್ಮಲಾ ನದಿಯಲ್ಲಿ ಸನ್ಯಾಸ ದೀಕ್ಷಾ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು. ಬ್ರಹ್ಮಚಾರಿಗಳ ದೃಢ ಸಂಕಲ್ಪ ಇಲ್ಲಿ ಎದ್ದು ತೋರುತ್ತಿತ್ತು. ವೇದಮಂತ್ರಗಳ ಉಚ್ಚಾರದಿಂದ ಅವರ ಮನಸ್ಸು ಇನ್ನಷ್ಟು ಸತ್ವಯುತವಾಗಿತ್ತು. ತನಗೆ ದೀಕ್ಷಾವಸ್ತ್ರ, ದಂಡ, ಕಮಂಡಲು, ಆಸನ ಇತ್ಯಾದಿಗಳನ್ನು ನೀಡಿ ಸನ್ಯಾಸ ದೀಕ್ಷೆಯನ್ನು ನೀಡುವ ಶ್ರೀ ಗುರುಗಳ ಮೇಲೆ ಅವರಿಗೆ ಇರುವ ಅಪಾರ ಶದ್ಧಾ - ಭಕ್ತಿಯೂ ಕೂಡ ಇನ್ನೊಂದು ವಿಧದಿಂದ ಗುರುಭಕ್ತಿಯ ಅನಾವರಣವೆಂದೇ ಹೇಳಬೇಕು. ದೀಕ್ಷೆಯನ್ನು ನೀಡುವ ಹಾಗೂ ಸ್ವೀಕರಿಸುವ ಆ ದೃಶ್ಯವನ್ನು ಹತ್ತಿರದಿಂದ ನೋಡಿದ ನಮ್ಮೆಲ್ಲರ ಸೌಭಾಗ್ಯವನ್ನು ಶಬ್ದಗಳಿಂದ ವರ್ಣಿಸಲು ಸಾಧ್ಯವಿಲ್ಲ. 

ಹುಟ್ಟಿದ ಕರುವಿನೊಂದಿಗೆ ಹಸುವು ಬರುವ ಹಾಗೆ ರಥಬೀದಿಯಲ್ಲಿ ಹಿರಿಯ ಶ್ರೀಗಳೊಂದಿಗೆ ಬಾಲಯತಿಗಳು ಸಾಗಿ ಬರುತ್ತಿರುವಾಗ ಸಾಗರೋಪಾದಿಯಲ್ಲಿ ಸೇರಿದ ಜನರಿಂದ, ವೇದಘೋಷ, ಜಯಘೋಷ, ಮಂಗಳವಾದ್ಯಗಳು ಮೊಳಗಿದವು.  ಕಣ್ಣುಗಳನ್ನು ಮುಚ್ಚಿ ಸ್ವಲ್ಪ ಹೊತ್ತು ಕುಳಿತು ಈ ದೃಶ್ಯವನ್ನು ಚಿಂತಿಸಿದರೆ ಇಂದಿಗೂ ಆ ಅಲೌಕಿಕ ವೈಭವದ ಸಾಕ್ಷಾತ್ಕಾರ ಉಂಟಾಗುತ್ತದೆ. ಶ್ರೀ ಶಂಕರರ ಶ್ರೇಷ್ಠ ಪರಂಪರೆಯಲ್ಲಿ ಬಂದ ನಾಡಿನ ಅನೇಕ ಯತಿವರೇಣ್ಯರ ಸಮ್ಮುಖದಲ್ಲಿ ಪರಮಪೂಜ್ಯರು ತಮ್ಮ ಶಿಷ್ಯರಿಗೆ *ಶ್ರೀ ಆನಂದಬೋಧೇಂದ್ರಸರಸ್ವತೀ, ಶ್ರೀ ಆನಂದಬೋಧೇಂದ್ರಸರಸ್ವತೀ, ಶ್ರೀ ಆನಂದಬೋಧೇಂದ್ರಸರಸ್ವತೀ* ಎಂದು ಮೂರು ಬಾರಿ ಉಚ್ಚರಿಸಿ ಯೋಗಪಟ್ಟ ನಾಮವನ್ನಿತ್ತ ಆ ಕ್ಷಣದಿಂದ ಶ್ರೀ ಸ್ವರ್ಣವಲ್ಲೀ ಗುರುಪರಂಪರೆಯು ಇನ್ನಷ್ಟು ಶ್ರೀಮಂತವಾಯಿತು. ಶ್ರೀ ಸ್ವರ್ಣವಲ್ಲೀ ಪರಂಪರೆಗೆ ಶ್ರೀ ಆನಂದಬೋಧೇಂದ್ರಸರಸ್ವತೀ ಶ್ರೀಗಳವರು ಸೇರಿದಾಗ ಶಿಷ್ಯಕೋಟಿಗೆ ಉಂಟಾದ ‘ಆನಂದಬೋಧ’ವು ದೈವಶಕ್ತಿಯ-ಗುರುಭಕ್ತಿಯ ಅನಾವರಣವಲ್ಲದೇ ಇನ್ನೇನು!

ಡಾ ll ಮಹಾಬಲೇಶ್ವರ ಭಟ್ಟ ಕಿರಕುಂಭತ್ತಿ 
ಶ್ರೀ ಗುರುಪ್ರಸಾದ ಹೆಗಡೆ ಮಾಳಕೊಪ್ಪ.

ಭೀಮನಪಾದ " ವೆಂಬ ಸೋಂದಾದ ಪಾವನಪುಣ್ಯಭೂಮಿ.( ಶಿವರಾತ್ರಿಯ ವಿಶೇಷ ಬರಹ)

" ಭೀಮನಪಾದ " ವೆಂಬ ಸೋಂದಾದ ಪಾವನಪುಣ್ಯಭೂಮಿ.( ಶಿವರಾತ್ರಿಯ  ವಿಶೇಷ ಬರಹ)
-----------------------------
ಸೋಮಧಾಪುರ,ಸುಧಾಪುರ,ಅಮೃತಪುರ,ಸೋವದೆ,ಸ್ವಾದಿ,ಸೋದೆ ಎಂಬಿತ್ಯಾದಿ ಹೆಸರುಗಳಿಂದ ಇತಿಹಾಸ ಕಾಲದಲ್ಲಿ ಗುರುತಿಸಿಕೊಂಡ ಈಗಿನ ಸೋಂದಾ ಕ್ಷೇತ್ರ ಆಧ್ಯಾತ್ಮಿಕವಾಗಿ,ಧಾರ್ಮಿಕವಾಗಿಯೂ ಪುಣ್ಯಭೂಮಿಯಾಗಿದೆ.ಸೋದೆಅರಸರು ತಮ್ಮ ಕಾಲಾವಧಿಯಲ್ಲಿ ಆಡಳಿತಕ್ಕೆ ಸೂಕ್ತ ಕ್ಷೇತ್ರವೆಂದು ಭಾವಿಸಿ ಇದನ್ನೇ ತಮ್ಮ ರಾಜಧಾನಿಯಾಗಿಸುವ ಹಿಂದೆಯೂ ಈ ಕ್ಷೇತ್ರ ಹೊಂದಿದ ಆಧ್ಯಾತ್ಮಿಕ ಹಿನ್ನೆಲೆಯೇ ಪ್ರಮುಖ ಕಾರಣವಾಗಿತ್ತು. ಕ್ರಿ.ಶ ನಾಲ್ಕನೇ ಶತಮಾನಕ್ಕೂ ಮೊದಲೇ ಸೋಂದಾ ಕ್ಷೇತ್ರದಲ್ಲಿ ಸರ್ವಸಂಗಪರಿತ್ಯಾಗಿಗಳು ತಮ್ಮ‌ ಯೌಗಿಕ ಸಿದ್ಧಿಗಾಗಿ ಈ ಕ್ಷೇತ್ರದಲ್ಲಿನ ಶಾಲ್ಮಲಾ ನದಿಯ ಪ್ರಶಾಂತ ಪರಿಸರವನ್ನೇ ಆಯ್ಕೆಮಾಡಿಕೊಂಡಿದ್ದರು.ಶಾಲ್ಮಲೆ ಇಲ್ಲಿ ತನ್ನ ಹರಿವಿಗೆ ರೌದ್ರತೆಯ ಲಕ್ಷಣವನ್ನು ನೀಡದೆ ಶಾಂತತೆಯ ಸ್ವರೂಪವನ್ನು ನೀಡಿ ನಿರ್ಮಲ ಸ್ವರೂಪಿಣಿಯಾಗಿ ಯೋಗಿಗಳಿಗೆ ತಮ್ಮ ತಪಸ್ಸಿಗೆ,ಧಾರ್ಮಿಕ ಆಚರಣೆಗೆ ಅನುಕೂಲವಾಗುವ ತೀರ್ಥಸ್ವರೂಪಿಣಿಯಾಗಿಯೂ ಶತಶತಮಾನಗಳಿಂದ ಹರಿಯುತ್ತಿದ್ದಾಳೆ.ಇಂತಹ ಪಾವನವಾಹಿನಿಯ ದಂಡೆಯ ಮೇಲಿನ ಪುಣ್ಯ ಸ್ಥಳವೇ ಸೋಂದಾದ " ಭೀಮನ ಪಾದ" ಈ ಸ್ಥಳಕ್ಕೆ ಈ ಹೆಸರು ಬರಲು ಕಾರಣವಾದದ್ದು ಇಲ್ಲಿನ ಬಂಡೆಯ ಮೇಲೆ ಕೆತ್ತಲಾದ ಪ್ರಾಚೀನ ಪಾದಗಳಿಂದ.ಕ್ರಿ.ಶ ೧೪ ನೇ ಶತಮಾನದಲ್ಲಿ ಶ್ರೀ ಸ್ವರ್ಣವಲ್ಲೀ ಮಠ ಇಲ್ಲಿಯೇ ಇತ್ತು.ಇಲ್ಲಿಂದ ಶ್ರೀಮಠ ಈಗಿರುವ ಸ್ಥಳಕ್ಕೆ ಸ್ಥಳಾಂತರವಾದದ್ದು ಕ್ರಿ.ಶ ೧೫೫೫ ರಲ್ಲಿ.ಆಗ ಸೋದೆ ಪ್ರದೇಶವನ್ನು ಆಳ್ವಿಕೆ ಮಾಡುತ್ತಿದ್ದ ಇಮ್ಮಡಿ ಅರಸಪ್ಪ ಮಹಾಪ್ರಭುಗಳು ಈಗಿರುವ ಸ್ಥಳದಲ್ಲಿ ಶ್ರೀಮಠಕ್ಕೆ ಹೊಸ ಕಟ್ಟಡವನ್ನು ನಿರ್ಮಿಸಿ ಅದಕ್ಕೆ " ಸ್ವರ್ಣವಲ್ಲೀ " ಎಂಬ ನೂತನ ಹೆಸರನ್ನು ನೀಡಿದ ಕುರಿತು ಶಾಸನಾಧಾರಗಳಿವೆ.ಅದಕ್ಕೂ ಪೂರ್ವದಲ್ಲಿ ಶ್ರೀಮಠ " ಹೊನ್ನಳ್ಳಿ" ಮಠವೆಂದು ಕರೆಯಲ್ಪಡುತ್ತಿತ್ತು.ಅರಸಪ್ಪ ಮಹಾಪ್ರಭುಗಳಿಗೆ ಮೊದಲ ಮೂರೂ ಸಂತಾನಗಳೂ ಪುತ್ರಿಯರ ಸ್ವರೂಪದಲ್ಲಿ ಪ್ರಾಪ್ತಿಯಾಗಿದ್ದವು. ( ವೀರಮ್ಮಾಜಿ,ಲಕ್ಷ್ಮೀ,ಅರಸಾದೇವಿಯರು) ಹೀಗಾಗಿ ಪುತ್ರ ಸಂತಾನವಿಲ್ಲದೆ,ಮುಂದಿನ‌ಉತ್ತರಾಧಿಕಾರಿಯಿಲ್ಲದೆ ಪರಿತಪಿಸುತ್ತಿದ್ದ ಅರಸಪ್ಪಪ್ರಭುವಿಗೆ ಅನುಗ್ರಹಸ್ವರೂಪಿಯಾಗಿ ಗೋಚರಿಸಿದವರೇ " ಭೀಮನಪಾದ" ದಲ್ಲಿ ಸದಾ ತಪಸ್ಸಿನಲ್ಲಿಯೇ ಇರುತ್ತಿದ್ದ ಈಗಿನ ಸ್ವರ್ಣವಲ್ಲೀ ಮಠದ ಅಂದಿನ ಪೀಠಾಧಿಪತಿಗಳಾದ ಶ್ರೀ ಹಿರೇಚಂದ್ರಶೇಖರ ಸರಸ್ವತೀ ಮಹಾಸ್ವಾಮಿಗಳು.ಇವರು ಆ ಕಾಲದಲ್ಲಿ ತಮ್ಮ ತಪಸ್ಸು,ಅನುಷ್ಠಾನಗಳಿಂದಲೇ ಹೆಸರಾಗಿದ್ದ ಮಹಾನ್ ಯತಿಗಳು.ಇವರ ಬಳಿ ಬಂದ ಅರಸಪ್ಪ ಪ್ರಭು ತನ್ನ ಸಮಸ್ಯೆಯನ್ನು ಹೇಳಿಕೊಂಡಾಗ ಪೂಜ್ಯ ಯತಿಗಳು ಭಗವಂತನನ್ನು ಪ್ರಾರ್ಥಿಸಿ ಭೀಮನ ಪಾದ ಕ್ಷೇತ್ರದಲ್ಲಿ ಶಿವನ ಲಿಂಗವೊಂದನ್ನು ಸ್ಥಾಪಿಸಲು ಸೂಚನೆ ನೀಡಿದರು.ತತ್ಪರಿಣಾಮ‌  ಒಂದು ವರ್ಷದೊಳಗೆ ಅರಸನಿಗೆ ಪುತ್ರ ಸಂತಾನ ಪ್ರಾಪ್ತಿಯಾಗಿ ಆತನಿಗೆ " ಭೈರವ" ಎಂಬ ಹೆಸರನ್ನಿಡಲಾಯಿತು.ಮುಂದೆ ಆತನೇ " ಭೈರವರಸ"ನೆಂದು ಗುರುತಿಸಿಕೊಂಡ.ಮುಂದೆ ಇದೇ ಹರಕೆ ಪರಂಪರೆ ಮುಂದುವರೆದು ಶಾಲ್ಮಲೆಯ ತಟದಲ್ಲಿ ತಮ್ಮ‌ಇಷ್ಟಾರ್ಥಗಳ ನೆರವೇರಿಕೆಗಾಗಿ ಲಿಂಗಗಳನ್ನ‌ಕೆತ್ತಿಸಿಕೊಡುವ ಹರಕೆಯ ಪರಂಪರೆ ಬೆಳೆದದ್ದು ಇತಿಹಾಸ.ಇದಕ್ಕೆಲ ಕಾರಣರಾದವರು ಶ್ರೀ ಹಿರೇಚಂದ್ರಶೇಖರ ಸರಸ್ವತೀ ಮಹಾಸ್ವಾಮಿಗಳು.ಇವರ ನಂತರ ಮಠದ ಪೀಠವನ್ನಲಂಕರಿಸಿದ ಎಲ್ಲ ಯತಿಗಳೂ ಇದೇ ತಪಸ್ಸನ್ನು ಈ ಕ್ಷೇತ್ರದಲ್ಲಿ ಆಚರಿಸುತ್ತಾ ಇದನ್ನೊಂದು ಪರಮಪಾವನ‌ ಪುಣ್ಯ ಭೂಮಿಯನ್ನಾಗಿಸಿದರು.ಈ ಭಿಮನಪಾದ ಕ್ಷೇತ್ರದಲ್ಲಿ ಅನೇಕ ರೀತಿಯ ವಿಶಿಷ್ಟ ಶಿಲ್ಪಗಳು,ಲಿಂಗಗಳು ಇವೆ.ಅವುಗಳಲ್ಲಿ ಮುಖ್ಯವಾಗಿ ಇಲ್ಲಿನ ಒಂದು ಬಂಡೆಯ ಮೇಲಿರುವ ಕದಂಬ ಪೇಟಿಕಾಶಿರದ ಬ್ರಾಹ್ಮಿ ಸಂಸ್ಕೃತ ಬರಹ ಹಾಗೂ ಅದರ ಬದಿಯಲ್ಲಿರುವ ಮಂಡಲಾಕಾರದ ಚಿತ್ರ ಸಂಕೇತಗಳು ಸ್ವಾರಸ್ಯಕರವಾಗಿವೆ.ಇದೇ ಪ್ರದೇಶದಲ್ಲಿ ಕಲ್ಯಾಣ ಚಾಳುಕ್ಯ ಕಾಲದ ( ಕ್ರಿ.ಶ ೧೧-೧೩ ನೇ ಶತಮಾನ) ಶಿಲ್ಪಗಳೂ ಇವೆ.ಇನ್ನೊಂದು ಬಂಡೆಯ ಮೇಲೆ ಶಾಸನವೊಂದಿದ್ದು ಇದು ಕಲ್ಯಾಣ ಚಾಳುಕ್ಯರ ತ್ರಿಭುವನಮಲ್ಲನ ಕಾಲದ್ದಾಗಿದೆ.ಇದರ ಪ್ರಕಾರ " ಪ್ರಕಾಶತೀರ್ಥರ ಅನುಯಾಯಿಯಾದ ರಾಜೇಂದ್ರನಾಥನು ಕೇಶವಮೂರ್ತಿಯೊಂದನ್ನು ಪ್ರತಿಷ್ಠಾಪಿಸಿದನು ಎಂಬುದಾಗಿದೆ.ಹಾಗು ಅದರ ಪೂಜೆಗಾಗಿ ಗ್ರಾಮವೊಂದನ್ನು ದತ್ತಿಬಿಟ್ಟ ಉಲ್ಲೇಖವಿದೆ.ಈ ಕಾಲಘಟ್ಟದ ಮತ್ತೊಂದು ಬಂಡೆಗಲ್ಲು ಶಾಸನವು ಲಿಂಗಪೂಜೆ ಮತ್ತು ತೀರ್ಥಸ್ನಾನದ ಉಲ್ಲೇಖವನ್ನು ಒಳಗೊಂಡಿದೆ.ಅದರ ಮೇಲೆ ಕೆತ್ತಿರುವ ಐದುಲಿಂಗಗಳ ರೇಖಾಚಿತ್ರ ಸ್ವಾರಸ್ಯಕರವಾಗಿದೆ.ಈ ಬಂಡೆಯ ಸಮೀಪ ಒಂದು ಭಗ್ನ ಶಿವಲಿಂಗವಿದ್ದು ಇದನ್ನು ಷಟ್ಚಕ್ರದ ಸಂಕೇತದಲ್ಲಿ ಪದ್ಮಾಕೃತಿಯಿಂದ ಮೂಡಿಬಂದಂತೆ ಕೆತ್ತಲಾಗಿದ್ದು ಶಿವಲಿಂಗದ ಶಿರೋಭಾಗ ಮಾತ್ರ ಭಗ್ನವಾಗಿದೆ.ಹೊರವಲಯದಿಂದ ೪-೬-೧೦-೧೨-೧೬-೨ ಪದ್ಮಗಳನ್ನು ಕ್ರಮವಾಗಿ ಕೆತ್ತಿದ್ದು ಇವುಗಳ ಮಧ್ಯದಲ್ಲಿ ಶಿವಲಿಂಗವಿದೆ.ಇದು ಅತ್ಯಂತ ಅಪರೂಪದಲ್ಲಿ ಅಪರೂಪವಾದ ಶಿವ ಸಂಬಂಧೀ ಕೆತ್ತನೆಯಾಗಿದ್ದು ಉನ್ನತ ಮಟ್ಟದ ಆಧ್ಯಾತ್ಮಿಕ ಸಂದೇಶವನ್ನು ನೀಡುತ್ತದೆ.ಆಧ್ಯಾತ್ಮ ಮತ್ತು ಧಾರ್ಮಿಕ ಚಿಂತನೆಯಲ್ಲಿ ಯಾರು ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೋ ಅಂತವರಲ್ಲಿ ಏಳು ಚಕ್ರಗಳು ಹೆಚ್ಚು ಶಕ್ತಿಯುತವಾಗಿರುತ್ತದೆ ಎನ್ನಲಾಗುತ್ತದೆ. ಮನುಷ್ಯನ ದೇಹದಲ್ಲಿ ಪವಿತ್ರವಾದ ಆತ್ಮವಿರುತ್ತದೆ, ಆತ್ಮದ ಸುತ್ತಲೂ ವಿಶಿಷ್ಟ ಶಕ್ತಿಯ ಪ್ರಭೆ ಆವರಿಸಿರುತ್ತದೆ. ಅಂತೆಯೇ ದೇಹದಲ್ಲಿ ಏಳು ಪ್ರಮುಖ ಚಕ್ರಗಳಿರುತ್ತವೆ. ಅವೆಲ್ಲವೂ ನಮ್ಮಲ್ಲಿರುವ ಧನಾತ್ಮಕ ಶಕ್ತಿಯನ್ನು ಪ್ರತಿಬಿಂಬಿಸುತ್ತವೆ. ಯಾರು ಸಕಾರಾತ್ಮಕ ರೀತಿಯ ವರ್ತನೆಯನ್ನು ಹೊಂದಿರುತ್ತಾರೋ ಆಧ್ಯಾತ್ಮ ಮತ್ತು ಧಾರ್ಮಿಕ ಚಿಂತನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೋ ಅಂತವರಲ್ಲಿ ಈ ಏಳು ಚಕ್ರಗಳು ಹೆಚ್ಚು ಶಕ್ತಿಯುತವಾಗಿರುತ್ತದೆ ಎನ್ನಲಾಗುತ್ತದೆ. ನಮ್ಮ ದೇಹದಲ್ಲಿನ ಒಂದು ಲಕ್ಷದ ಎಪ್ಪತ್ತೆರಡು ಸಾವಿರ ನಾಡಿಗಳು ಆಧ್ಯಾತ್ಮಿಕ ಮತ್ತು ಜೀವಶಕ್ತಿಯ ವಾಹಕಗಳಾಗಿವೆ. ಅವುಗಳಲ್ಲಿ 109 ಮುಖ್ಯ ನರ ಕೇಂದ್ರಗಳು, ಆ 109 ನರ ಕೇಂದ್ರಗಳಲ್ಲಿ ಒಂಬತ್ತು ಅತ್ಯಂತ ಪ್ರಮುಖವಾದ ಕೇಂದ್ರಗಳು ಒಂಬತ್ತರಲ್ಲಿ ಈ ಏಳು ವಿಶೇಷ ಪ್ರಾಮುಖ್ಯತೆ ಪಡೆದುಕೊಂಡಿವೆ. ಈ ನರಕೇಂದ್ರಗಳು ಅಥವಾ ಚಕ್ರಗಳು ಪ್ರಜ್ಞೆ ಭಾವನೆ ಸಂವೇದನೆ ಮತ್ತು ಅನುಭವಗಳಂತಹ ಸಂಗತಿಗಳನ್ನು ಒಳಗೊಂಡಿದೆ. ಈ  ಚಕ್ರಗಳನ್ನು ವಿಶೇಷವಾಗಿ ಈ ಹೆಸರುಗಳಿಂದ ಕರೆಯಲಾಗುವುದು. ಮೊದಲನೇಯದಾಗಿ ಚತುರ್ದಳ ಇದನ್ನು ಮೂಲಾಧಾರ ಚಕ್ರ ಎನ್ನಲಾಗುತ್ತದೆ. ಇದು ಬೆನ್ನು ಮೂಳೆಯ ಮಧ್ಯದಲ್ಲಿರುವ ಚಕ್ರ,  ಮೂಲಾಧಾರ ಚಕ್ರವೂ ಸಕ್ರಿಯಗೊಂಡಾಗ ವ್ಯಕ್ತಿ ತನ್ನ ಜೀವನದಲ್ಲಿ ಹೆಚ್ಚು ಉತ್ಸಾಹವನ್ನು ಅನುಭವಿಸುತ್ತಾನೆ.  ಇದು ಭೂಮಿಯ ಅಂಶದೊಂದಿಗೆ ಸಂಬಂಧಿಸಿದೆ. ಎರಡನೆಯದಾಗಿ ಷಟ್ದಳ, ಇದನ್ನು ಸ್ವಾಧಿಷ್ಟಾನ ಚಕ್ರವೆಂದು ಕರೆಯಲಾಗುತ್ತದೆ. ಇದು ಮಾನವನ ದೇಹದಲ್ಲಿ ಇರುವ ಎರಡನೇ ಪ್ರಮುಖ ಚಕ್ರ ಈ ಚಕ್ರವು ಸೃಜನಶೀಲತೆ, ಅಧಿಕ ಚಟುವಟಿಕೆ ಮತ್ತು ಲೌಕಿಕತೆಗೆ ಸಂಬಂಧಿಸಿದೆ. ಈ ಚಕ್ರವು ನೀರಿನೊಂದಿಗೆ ಸಂಬಂಧಿಸಿದೆ.ಮೂರನೇಯದಾಗಿ ದಶದಳ ಇದನ್ನು ಮಣಿಪೂರ ಚಕ್ರ ಎನ್ನಲಾಗುತ್ತದೆ. ಇದು ಪ್ರಮುಖವಾಗಿ ನಾಲ್ಕು ರೂಪದಲ್ಲಿ ಅಥವಾ ನಾಲ್ಕು ಭಾವನೆಗಳಲ್ಲಿ ಪ್ರಕಟವಾಗುತ್ತದೆ.ಅಸೂಯೆ,ಔದಾರ್ಯ, ಸಂತೋಷ ಮತ್ತು  ದುರಾಸೆ. ಈಚಕ್ರವು ಬೆಂಕಿಯೊಂದಿಗೆ ಸಂಬಂಧಿಸಿದೆ. ನಾಲ್ಕನೆಯದಾಗಿ ದ್ವಾದಶದಳ. ಇದನ್ನು ಅನಾಹತ ಚಕ್ರ ಎಂಬುದಾಗಿ ಕರೆಯಲಾಗುತ್ತದೆ. ಇದು ಭಯ, ಪ್ರೀತಿ, ದ್ವೇಷವನ್ನು ಪ್ರತಿನಿಧಿಸುತ್ತದೆ. ಐದನೆಯದಾಗಿ ಷೋಡಶದಳ ಅಥವಾ ವಿಶುದ್ಧಿ ಚಕ್ರ. ಇದು ಗಂಟಲಿನ ಭಾಗದಲ್ಲಿನ ಚಕ್ರ. ಇದು ಅನುಭವಿಸುವ ಸಂವೇದನೆಯನ್ನು ಪ್ರತಿಬಿಂಬಿಸುತ್ತದೆ. ಆರನೆಯದಾಗಿ ದ್ವಿದಳ ಚಕ್ರ ಅಥವಾ ಆಜ್ಞಾಚಕ್ರ. ಇದು ಹಣೆಯ ಭಾಗದಲ್ಲಿ ಬರುತ್ತದೆ. ಜ್ಞಾನ ಮತ್ತು ಅರಿವು ಎಂಬುದು ಇದರಿಂದ ಚಿತ್ರಿಸಲ್ಪಟ್ಟಿದೆ.ಕೊನೆಯದಾಗಿ ಸಹಸ್ರಾರ ಚಕ್ರ ಇದು ಪರಮಾತ್ಮನ ಸ್ಥಾನ ಇಲ್ಲಿ ಲಿಂಗವನ್ನು ಕೆತ್ತಲಾಗಿದೆ. ಅತಿಂದ್ರಿಯ ಎನ್ನುವುದು ವ್ಯಕ್ತಿಗೆ ಇರುವ ಮೂರನೇ ಕಣ್ಣು ಎಂದು ಹೇಳಲಾಗುತ್ತದೆ. ಶಿವನು ಮೂರನೇ ಕಣ್ಣನ್ನು ಹೊಂದಿರುವುದು ಹಾಗೂ ಕೋಪ ಬಂದಾಗ ಆ ಕಣ್ಣು ತೆರೆದು ಕೋಪಕ್ಕೆ ಕಾರಣವಾಗುವ ವಸ್ತು ಸುಡುವುದು ಎಂದು ಹೇಳಲಾಗುವುದು. ಈ ಚಕ್ರವು ಕೋಪ,ಜ್ಞಾನ ಮತ್ತು ಜಾಗೃತಿಯನ್ನು ಪ್ರತಿನಿಧಿಸುತ್ತದೆ.ಭೀಮನಪಾದದಲ್ಲಿ ಕೆತ್ತಲಾದ ಈ ವಿಶೇಷ ಶಿಲ್ಪವು ಒಟ್ಟಾರೆಯಾಗಿ ಸಾಧಕನಾದವನು ಮೂಲದಿಂದಲೇ ಸಾಧನೆಯನ್ನು ಮಾಡುತ್ತಾ ಸಿದ್ಧಿಯನ್ನು ಪಡೆಯಬೇಕೆಂಬ ಉನ್ನತ ಸಂದೇಶವನ್ನು ಸಾರುತ್ತಿದೆ.ಸೋಮಸೂತ್ರವು ಶಕ್ತಿಸ್ವರೂಪವೂ ಆಗಿದ್ದು ಶಕ್ತಿಯು ಜ್ಞಾನಚಕ್ರವನ್ನು ದಾಟಿಯೇ ಸಾಗುತ್ತದೆ .ಈ ಹಿನ್ನೆಲೆಯಲ್ಲಿ ಈ ಕ್ಷೇತ್ರ ಒಂದು ಕಾಲದಲ್ಲಿ ಅಪಾರವಾದ ಆಧ್ಯಾತ್ಮಿಕ ಮತ್ತು ಧಾರ್ಮಿಕ ತಳಹದಿಯ ತಪಸ್ಸಿನ ಕ್ಷೇತ್ರವಾಗಿತ್ತೆಂಬುದು ಇದರಿಂದ ತಿಳಿದುಬರುತ್ತದೆ.ಇದೇ ಪ್ರದೇಶದಲ್ಲಿರುವ ಮತ್ತೊಂದು ದೊಡ್ಡ ಬಂಡೆಯ ಅಂಚಿನಲ್ಲಿ ಜಟಾಧಾರಿಯಾದ ಶಿವಯೋಗಿ ತಪೋನಿರತನಾಗಿರುವ ಶಿಲ್ಪವಿದೆ.ಪದ್ಮಾಸನದಲ್ಲಿ ಕುಳಿತ ಈ ಯೋಗಿ ರುದ್ರಾಕ್ಷಿ,ಬಲಕ್ಕೆ ಕಮಂಡಲು,ಯಜ್ಞೋಪವಿತ ಧರಿಸಿದ್ದು ಕಂಡುಬರುತ್ತದೆ.ಎಡಭಾಗದಲ್ಲಿ ದಂಡವೊಂದನ್ನು ಪ್ರತ್ಯೇಕವಾಗಿ ರೇಖಿಸಿದೆ.ಈ ಯೋಗಿಯ ಮುಖದಲ್ಲಿ ಯೌಗಿಕ ತೇಜಸ್ಸು ಎದ್ದುಕಾಣುತ್ತದೆ.ಇದನ್ನು ಶಿಲ್ಪಶೈಲಿಯ ಆಧಾರದ ಮೇಲೆ ಕಲ್ಯಾಣ ಚಾಳುಕ್ಯರ ಕಾಲದ್ದೆಂದು ( ಕ್ರಿ.ಶ ೧೧-೧೩ ನೇ ಶತಮಾನ) ಹೇಳಬಹುದು. ಅದೇ ರೀತಿ ಇಲ್ಲಿ ಇನ್ನೂ ಕೆಲವು ಶಿಲ್ಪಗಳಿದ್ದು ಶಿವಲಿಂಗ,ಮಂಡಲ,ತಾಡೋಲೆ ಕಟ್ಟುಗಳನ್ನು ಕತ್ತರಿಯಾಗಿಟ್ಟಂತೆ ಇಟ್ಟ ಶಿಲ್ಪ,ಹಸು,ಕರು,ನಂದಿ ಮುಂತಾದ ಶಿಲ್ಪಗಳನ್ನೂ ಕಾಣಬಹುದು.ಅದೇ ರೀತಿ ಕನ್ನಡ,ತಿಗಳಾರಿ,ದೇವನಾಗರಿ ಲಿಪಿಯ ಹರಕೆಯ ಬರಹಗಳನ್ನೂ ಕಾಣಬಹುದು.ಇವೆಲ್ಲ ಸೋದೆ ಅರಸರ ಕಾಲದ ಮತ್ತು ನಂತರದ ಕಾಲದ್ದಾಗಿವೆ.ಒಟ್ಟಾರೆಯಾಗಿ ಇದರಿಂದ ತಿಳಿದು ಬರುವ ಸಂಗತಿ ಎಂದರೆ ಸಾವಿರಾರು ವರ್ಷಗಳಿಂದ ಈ ಪ್ರದೇಶ ಯೋಗಿಗಳ ತಪಸ್ಸಿಗೆ ಬಳಕೆಯಾಗುತ್ತಿದ್ದ ಪುಣ್ಯ ಭೂಮಿಯಾಗಿದೆ.ಮುಂದೆ ಶ್ರೀ ಸ್ವರ್ಣವಲ್ಲಿ ಯತಿ ಪರಂಪರೆ ಈ ಪುಣ್ಯಪ್ರಭಾವವನ್ನು ತಮ್ಮ‌ಅನೂಚಾನ,ಅವಿಚ್ಛಿನ್ನ ತಪಸ್ಸಿನಿಂದ ಹೆಚ್ಚಿಸಿದ್ದು ಐತಿಹಾಸಿಕ ಸತ್ಯವಾಗಿದೆ.ಇಂದಿಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಈ ಕ್ಷೇತ್ರದಲ್ಲಿ ಶಿವರಾತ್ರಿಯ ಸಂದರ್ಭದಲ್ಲಿ ಪೂಜೆಯನ್ನು ಆಚರಿಸುತ್ತಾ ತಮ್ಮ‌ಪೂರ್ವಪೀಠಾಧಿಪತಿಗಳ ಅನುಷ್ಠಾನ ಪರಂಪರೆಯನ್ನು ಮುಂದುವರೆಸಿದ್ದಾರೆ.

ಡಾ.ಲಕ್ಷ್ಮೀಶ್ ಹೆಗಡೆ ಸೋಂದಾ
ಇತಿಹಾಸಕಾರರು, ಸದಸ್ಯರು,ನ್ಯಾಷನಲ್ ಫೆಲೊಶಿಪ್ ಕಮಿಟಿ,ದೆಹಲಿ