ಕರ್ನಾಟಕದ ಹಸಿರು ಸ್ವಾಮಿಗಳು ಎಂದೇ ಖ್ಯಾತರಾದ, ಕರ್ನಾಟಕದೆಲ್ಲೆಡೆ ಭಗವದ್ಗೀತಾ ಅಭಿಯಾನ ನಡೆಸಿ ಮನೆಮಾತಾಗಿರುವ ಶ್ರೀ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಇವರು ಸಮಾಜದ ಉನ್ನತಿಗಾಗಿ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಪರಿಸರ ಕುರಿತಾಗಿ ನಡೆಸುತ್ತಿರುವ ಕಾರ್ಯಕ್ರಮಗಳು ಅಗಣಿತವಾದದ್ದು. ಸಮಾಜವನ್ನು ಸತ್ಪಥದಲ್ಲಿ ಕೊಂಡೊಯ್ಯಲು ಅವರು ಮಾಡುತ್ತಿರುವ ಕಾರ್ಯ ದೈವಪ್ರೇರಿತವಾದುದು. ಇಂದಿನ ಮಕ್ಕಳೇ ನಾಳಿನ ನಾಗರೀಕರಾದ್ದರಿಂದ ಅಂಥಹ ನಾಗರೀಕರನ್ನು ಉತ್ತಮರನ್ನಾಗಿಸಲು ಶ್ರೀಗಳು ಪ್ರಸ್ತುತ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ, ಶ್ರೀ ರಾಜರಾಜೇಶ್ವರೀ ವಿದ್ಯಾಸಂಸ್ಥೆಯ ಅಡಿಯಲ್ಲಿ ಶ್ರೀನಿಕೇತನ ಶಾಲೆ ಎಂಬ ಕೇಂದ್ರೀಯ ಪಠ್ಯಕ್ರಮದ ಸಂಸ್ಥೆಯನ್ನು 2005 ನೇ ಇಸವಿಯಲ್ಲಿ ನಾಡಿಗಗಲ್ಲಿಯಲ್ಲಿರುವ ಶ್ರೀಮಠದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಪ್ರಾರಂಭಿಸಿದರು. ಪ್ರತ್ಯೇಕ ಆಡಳಿತ ವರ್ಗ ಹೊಂದಿರುವ ಈ ಸಂಸ್ಥೆಯು ಶ್ರೀಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಮೌಲ್ಯಯುತ ಶಿಕ್ಷಣ ನೀಡುವತ್ತ ಸತತ ಶ್ರಮಿಸುತ್ತಿದೆ. ಶಾಲೆಯ ಆಗುಹೋಗುಗಳು ಹಾಗೂ ವಿದ್ಯಾರ್ಥಿಗಳ ಪ್ರಗತಿಯನ್ನು ಸ್ವತಃ ಶ್ರೀ ಗುರುಗಳೇ ಖುದ್ದಾಗಿ ಆಗಮಿಸಿ ಪರಿಶೀಲಿಸುತ್ತಾರೆ.
ಪ್ರಾರಂಭದಲ್ಲಿ ಕೇವಲ 15 ವಿದ್ಯಾರ್ಥಿಗಳಿಂದ ಆರಂಭಿಸಿ ಪ್ರಸ್ತುತವಾಗಿ LKG, UKG ಒಳಗೊಂಡು ಪೂರ್ವ-ಪ್ರಾಥಮಿಕ ತರಗತಿಯಿಂದ 10 ನೇ ತರಗತಿಯವರೆಗೆ 900 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 50 ಬೋಧಕ ಹಾಗೂ 42 ಬೋಧಕೇತರ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 2010 ನೇ ಇಸವಿಯಲ್ಲಿ ಸಂಸ್ಥೆಯು ಸುಂದರ ಪ್ರಕೃತಿಯ ಮಡಿಲಾದ ಇಸಳೂರಿನಲ್ಲಿ 8.5 ಎಕರೆ ವಿಶಾಲವಾದ ನಿವೇಶನವನ್ನು ಹೊಂದಿ ಸುಮಾರು 5.5 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಿರುತ್ತದೆ. ಈ ಸಂಸ್ಥೆಯು ಈಗ (2023 ಕ್ಕೆ) 17 ವರ್ಷ ಪೂರ್ಣಗೊಳಿಸಿರುತ್ತದೆ. ಮಳಗಿಯಲ್ಲಿ ಈ ಸಂಸ್ಥೆಯ ಅಡಿಯಲ್ಲಿ ಚಿಕ್ಕದಾಗಿ ಒಂದು ಶಾಲೆಯೂ ಕೂಡ ಕಾರ್ಯ ನಿರ್ವಹಿಸುತ್ತಿದೆ. ಶಿರಸಿಯ ಸುತ್ತಮುತ್ತಲಿನ 30 ಕಿ.ಮೀ. ಅಂತರದ ಹಳ್ಳಿಗಳಿಂದಲೂ ಮಕ್ಕಳಿಗೆ ಸಿ.ಬಿ.ಎಸ್.ಸಿ. ಪಠ್ಯಕ್ರಮದ ಶಿಕ್ಷಣವನ್ನು ನೀಡಲು ಹದಿನೈದು ಬಸ್ಸುಗಳು ಕಾರ್ಯ ನಿರ್ವಹಿಸುತ್ತಿದೆ. ಶಾಲೆಯು ಅನೇಕ ಪುಸ್ತಕಗಳನ್ನೊಳಗೊಂಡ ಗ್ರಂಥಾಲಯ ಹಾಗೂ ವಿಜ್ಞಾನ ಪ್ರಯೋಗಾಲಯವನ್ನೂ ಒಳಗೊಂಡಿದೆ. ಪಠ್ಯಪೂರಕ ಚಟುವಟಿಕೆಗಳಾದ ಸಂಗೀತ, ಚಿತ್ರಕಲೆ, ಕಂಪ್ಯೂಟರ್ ಇತ್ಯಾದಿ ಶಿಕ್ಷಣವನ್ನು ನುರಿತ ಶಿಕ್ಷಕರಿಂದ ನೀಡಲಾಗುತ್ತಿದೆ. ಶಾಲೆಯಲ್ಲಿ ಸಿ.ಬಿ.ಎಸ್.ಇ. ಆಂಗ್ಲಮಾಧ್ಯಮದ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕಾರಯುತ ಶಿಕ್ಷಣವನ್ನು ನೀಡಲಾಗುತ್ತಿದೆ.
ರಾಷ್ಟ್ರೋತ್ಥಾನದ ಸಮಿತ್ ಸಂಸ್ಥೆಯ ಸಹಭಾಗಿತ್ವದಲ್ಲಿ ಯೋಗ ಹಾಗೂ ಕಥಾ ಭಾರತಿ ಎಂಬ ಕಥೆಗಳ ಮೂಲಕ ಮೌಲ್ಯಗಳನ್ನು ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದೇವೆ. ಸಾಮಾಜಿಕ ಪಿಡುಗಾದ ದುರ್ವಸನಗಳನ್ನು ತಡೆಯುವ ಸಲುವಾಗಿ ಪ್ರತೀ ವರ್ಷ ಹತ್ತನೇ ತರಗತಿ ಮಕ್ಕಳಿಗೆ ವ್ಯಸನಮುಕ್ತ ಸಮಾಜ ಎಂಬ ಶೀರ್ಷಿಕೆಯಲ್ಲಿ ಶ್ರೀಗಳು ಹಾಗೂ ಖ್ಯಾತ ವೈದ್ಯರುಗಳಿಂದ ತಿಳುವಳಿಕಾ ಶಿಬಿರವನ್ನು ಏರ್ಪಡಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ಶುಲ್ಕದೊಂದಿಗೆ ಸಿ.ಬಿ.ಎಸ್.ಸಿ. ಶಿಕ್ಷಣವನ್ನು ನೀಡಲಾಗುತ್ತಿದೆ. ಅಲ್ಲದೇ ಅತ್ಯಂತ ಕಡಿಮೆ ವೆಚ್ಚದಲ್ಲಿ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ರಾಷ್ಟ್ರೀಯ ಒಲಂಪಿಯಾಡ್ ಸಂಸ್ಥೆಗಳಿಂದ ವಿವಿಧ ವಿಷಯಗಳ ಒಲಂಪಿಯಾಡ್‌ಗಳನ್ನು ಏರ್ಪಡಿಸಲಾಗುತ್ತದೆ. ಇದರಿಂದ ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಾಮರ್ಥ್ಯ ವೃದ್ಧಿಯಾಗುತ್ತದೆ. ಈ ಒಲಂಪಿಯಾಡ್‌ನಲ್ಲಿ ಹಲವು ವಿದ್ಯಾರ್ಥಿಗಳು ರಾಷ್ಟ್ರೀಯ ಹಂತದ ರ‌್ಯಾಕ್‌ಗಳನ್ನು ಪಡೆದಿರುತ್ತಾರೆ. ಈ ಶಾಲೆಯು ಪಠ್ಯಕ್ರಮದ ಜೊತೆಗೆ ಅನೇಕ ಸಂಸ್ಕಾರ ನೀಡುವ ಕಾರ್ಯದಲ್ಲಿ ಮುನ್ನಡೆಯುತ್ತಿದೆ. ಪ್ರತಿನಿತ್ಯ ಭಗವದ್ಗೀತೆ ಪಠಣ, ಸಂಸ್ಕೃತ ಶ್ಲೋಕ ಪಠಣ, ಯೋಗ ತರಬೇತಿ ಮುಂತಾದ ಜೀವನ ಶಿಕ್ಷಣವನ್ನು ಕಲಿಸಲಾಗುತ್ತಿದೆ. ದೈಹಿಕ, ಮಾನಸಿಕ, ಭಾವನಾತ್ಮಕ, ಬೌದ್ಧಿಕ, ಆಧ್ಯಾತ್ಮಿಕ, ಸ್ಥರವನ್ನು ಹೊಂದಿರುವ ಪಂಚಮುಖಿ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಶಾಲೆಯಲ್ಲಿ ಎರಡು ಅಪರೂಪದ ಔಷಧೀಯ ಸಸ್ಯಗಳನ್ನು ಹೋದಿರುವ ಧನ್ವಂತರಿ ವನ ಹಾಗೂ ಸರಸ್ವತೀ ವನವನ್ನು ನಿರ್ಮಿಸಲಾಗಿದೆ. ಈ ಮೂಲಕ ಮಕ್ಕಳಿಗೆ ಸಸ್ಯ ಸಂಪತ್ತಿನ ಬಗ್ಗೆ ಜ್ಞಾನವನ್ನೂ ಹಾಗೂ ತನ್ಮೂಲಕ ಕೃಷಿ ಕುರಿತಾದ ಚಟುವಟಿಕೆಗಳನ್ನೂ ಸಹ ಕಲಿಸಲಾಗುತ್ತಿದೆ. ವಿವಿಧ ಸಂಘಗಳಾದ ಲಿಯೋ, ರೋಟರಿ ಇಂಟರ್ಯಾಕ್ಟ್, ಫಿಲಾಟಲಿ, ಪರಿಸರ, ವಿಜ್ಞಾನ, ಸಾಹಿತ್ಯ ಹಾಗೂ ಪರಂಪರಾ ಸಂಘಗಳ ಮೂಲಕ ವಿವಿಧ ಸಹಪಠ್ಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳಾದ ಚಿತ್ರಕಲೆ, ಸಂಗೀತ, ಸಾಹಿತ್ಯ, ರಂಗೋಲಿ, ಭಾಷಣ, ರಸಪ್ರಶ್ನೆ, ಭಗವದ್ಗೀತೆ ಶ್ಲೋಕ ಪಠಣ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಯೋಗದ ಕುರಿತು ತರಬೇತಿ ನೀಡಲು ಖ್ಯಾತ ಯೋಗಾಚಾರ್ಯರಾದ ಶ್ರೀ ಶಂಕರನಾರಾಯಣ ಶಾಸ್ತ್ರಿಗಳು ಆಗಾಗ ಭೇಟಿ ನೀಡಿ ಯೋಗತರಬೇತಿಯನ್ನು ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಪ್ರತ್ಯೇಕವಾಗಿ ನೀಡುತ್ತಿದ್ದಾರೆ.
ಶಾಲೆಯಲ್ಲಿ ವಿವಿಧ ಮಹತ್ವದ ಕಾರ್ಯಕ್ರಮಗಳಾದ ಪರಿಸರ ದಿನಾಚರಣೆ, ನೀರಿನ ದಿನ, ವಿಶ್ವಹಾಲಿನ ದಿನಾಚರಣೆ, ಸತ್ವಪೂರ್ಣ ಆಹಾರ ದಿನ, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಗಾಂಧಿ ಜಯಂತಿ, ಗಣರಾಜ್ಯೋತ್ಸವ, ಸಂವಿಧಾನ ದಿನಾಚರಣೆ, ಶಾರದಾಪೂಜೆ ಹಾಗೂ ಆಯುಧ ಪೂಜೆ, ಕಾರ್ತಿಕ ದೀಪೋತ್ಸವ ಮುಂತಾದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಗಣ್ಯವ್ಯಕ್ತಿಗಳ ಉಪನ್ಯಾಸದೊಂದಿಗೆ ನಡೆಸುತ್ತಿದ್ದೇವೆ. ಶಾಲಾಪ್ರಾರಂಭವನ್ನು ಸರಸ್ವತೀ ಹವನ ಹಾಗೂ ಅಕ್ಷರಾಭ್ಯಾಸ ಎಂಬ ಕಾರ್ಯಕ್ರಮಗಳೊಂದಿಗೆ ಪ್ರಾರಂಭಿಸಲಾಗುತ್ತದೆ. ಈದಿನ ಶ್ರೀಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಎಲ್ಲಾ ವಿದ್ಯಾರ್ಥಿಗಳಿಗೆ ಅಭಯ ಆಶೀರ್ವಾದವನ್ನು ನೀಡುತ್ತಾರೆ. ಶ್ರೀಗಳು ನಡೆಸುವ ಭಗವದ್ಗೀತಾ ಅಭಿಯಾನದಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಅಲ್ಲದೇ ಅನೇಕ ವರ್ಷಗಳಿಂದ ಜಿಲ್ಲಾ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿರುತ್ತಾರೆ. ಪ್ರತೀವರ್ಷವೂ ಭಾರತ ಸಂಸ್ಕೃತಿ ಪ್ರತಿಷ್ಠಾನ ನಡೆಸುವ ರಾಮಾಯಣ ಹಾಗೂ ಮಹಾಭಾರತ ಪರೀಕ್ಷೆಯಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಪಡೆಯುತ್ತಿದ್ದಾರೆ. ರೋಟರಿ ಹಾಗೂ ಲಿಯೋಕ್ಲಬ್ ವಿದ್ಯಾರ್ಥಿಗಳು ಅನೇಕ ವಿಭಾಗೀಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ. ಸಹೋದಯ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಉನ್ನತ ಶ್ರೇಣಿಯ ಬಹುಮಾನಗಳನ್ನು ಪಡೆದಿರುತ್ತಾರೆ. ಈವರೆಗಿನ ಎಲ್ಲಾ 10 ನೇ ತರಗತಿ ಫಲಿತಾಂಶವು 100% ಆಗಿರುವು ನಮ್ಮ ಸಂಸ್ಥೆಯ ಹೆಮ್ಮೆಯ ಸಂಗತಿಯಾಗಿದೆ. 10 ನೇ ತರಗತಿಯಲ್ಲಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಶ್ರೀ ವಿ.ಟಿ. ಹೆಗಡೆ ಜಾನ್ಮನೆ, ಶ್ರೀ ತಿಮ್ಮಪ್ಪ ಗೋಪಾಲ ಭಟ್, ಶ್ರೀ ಜಿ.ಆರ್. ಭಟ್ ಕುಂಬಾರಕೊಟ್ಟಿಗೆ, ಶ್ರೀ ಆರ್.ಜಿ. ಅಕದಾಸ್ ಮತ್ತು ಸೀತಾ ಅಕದಾಸ್, ಶ್ರೀ ದಾಮೋದರ್ ಭಟ್, ಶ್ರೀಮತಿ ಮತ್ತು ಶ್ರೀ ರಾಜೇಂದ್ರ ಭಟ್ ಹೂವಿನ ಮನೆ, ಶ್ರೀಮತಿ ಮತ್ತು ಶ್ರೀ ಸುದರ್ಶನ ಹೆಗಡೆ, ಶ್ರೀ ಕೆ.ಎಸ್. ಹೆಗಡೆ ಕೆಸಿನಮನೆ, ಶ್ರೀ ರಮಣ ಜೋಶಿ, ಶ್ರೀ ಮಹೇಶ ವಿ. ಭಟ್, ಅಮೂಲ್ಯ ಭಟ್ ಕೆನಡಾ, ಐ.ಪಿ.ಹೆಗಡೆ ಹೀಗೆ ಅನೇಕ ಮಹನೀಯರು ನೀಡಿದ ದತ್ತಿನಿಧಿಯ ಸಹಾಯದಿಂದ ಪಾರಿತೋಷಕ ಹಾಗೂ ನಗದು ಪುರಸ್ಕಾರಗಳನ್ನು ಶ್ರೀಗಳು ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಇನ್ನೂ ಹೆಚ್ಚಿನ ಸಾಧನೆಗಳಿಗೆ ಹಾಗೂ ಸಂಸ್ಥೆಯ ಬೆಳವಣಿಗೆಗೆ ಇನ್ನೂ ಹೆಚ್ಚಿನ ದತ್ತನಿಧಿ ಹಾಗೂ ದಾನಿಗಳು ಸಹಕರಿಸಬೇಕಾಗಿದೆ. ಫಿಲ್ಯಾಟಲಿ ಕ್ಲಬ್‌ನ ವಿದ್ಯಾರ್ಥಿಗಳು ಅಂಚೆ ಇಲಾಖೆಯು ನಡೆಸಿದ ದೀನ್‌ದಯಾಳ್ ಸ್ಪರ್ಶ್ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯದಲ್ಲಿಯೇ ಅತಿ ಹೆಚ್ಚು ಬಹುಮಾನಗಳನ್ನು ಪಡೆದ ಶಾಲೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಶಾಲೆಯಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಸ್ವತಃ ಶ್ರೀಗಳೇ ಆಗಮಿಸಿ ಬಹುಮಾನ ವಿತರಿಸುತ್ತಿದ್ದಾರೆ. 10ನೇ ತರಗತಿ ಉತ್ತೀರ್ಣರಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆರೆಡೆ ತೆರಳುವ ವಿದ್ಯಾರ್ಥಿಗಳಿಗೆ ದೀಕ್ಷಾಂತ ಎಂಬ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಅದರಲ್ಲಿ ಶ್ರೀಗಳು ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಹಾಗೂ ತನ್ಮೂಲಕ ಹೇಗೆ ದೇಶದ ಉತ್ತಮ ಪ್ರಜೆಯಾಗಬೇಕೆಂದು ಆಪ್ತ ನುಡಿಗಳ ಮೂಲಕ ತಿಳಿಹೇಳುತ್ತಾರೆ. ಪ್ರತೀ ವರ್ಷವೂ ಶಾಲಾ ವಾರ್ಷಿಕೋತ್ಸವವನ್ನು ಅತ್ಯಂತ ವಿಜೃಂಬಣೆಯಿಂದ ಅಚರಿಸಲಾಗುತ್ತಿದೆ. ಹಾಗೂ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅನೇಕ ಮೌಲ್ಯಯುತ ಕಾರ್ಯಗಳ ಮೂಲಕ ಭಾರತೀಯ ಸಂಸ್ಕೃತಿ ಕಲೆ ಸಾಹಿತ್ಯಗಳ ಕುರಿತು ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಾರೆ. ಪ್ರತೀ ವರ್ಷವೂ 9 ಹಾಗೂ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಹಾಗೂ ಇತರ ವಿದ್ಯಾರ್ಥಿಗಳಿಗೆ ವಿವಿಧ ಸಂಘಗಳ ಅಡಿಯಲ್ಲಿ ಅಧ್ಯಯನ ಪ್ರವಾಸ ಏರ್ಪಡಿಸಲಾಗುತ್ತಿದೆ. ಈವರೆಗೆ 361 ಹತ್ತನೇ ತರಗತಿಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳೆಲ್ಲ, ಐ.ಐ.ಟಿ., ಎನ್.ಐ.ಟಿ., ಐ.ಐ.ಎಸ್.ಸಿ., ಎಂಎಸ್.ಸಿ ವೈದ್ಯಕೀಯ, ಅರೆವೈದ್ಯಕೀಯ, ಇಂಜನಿಯರಿಂಗ್, ವಾಣಿಜ್ಯ ವಿಷಯಗಳಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದು ಉನ್ನತ ವ್ಯಾಸಂಗ ನಡೆಸುತ್ತಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರದೊಂದಿಗೆ ಸಮಾಜದ ಉತ್ತಮ ಪ್ರಜೆಗಳಾಗಿ ಸಂಸ್ಥೆಗೆ ಶಿಖರ ಪ್ರಾಯರಾಗಿದ್ದಾರೆ. ಈ ಎಲ್ಲಾ ಸಾಧನೆಯ ಹಿಂದೆ ಶ್ರೀಗಳ ಆಶೀರ್ವಾದ ಹಾಗೂ ಅವರು ಮಕ್ಕಳಿಗೆ ನೀಡುತ್ತಿರುವ ಸಂಸ್ಕಾರಯುತ ಶಿಕ್ಷಣವೇ ಕಾರಣವಾಗಿದೆ.
ಸಂಗ್ರಹ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ