🌸*ಶ್ರೀ ಸರ್ವಜ್ಞೇಂದ್ರಾಷ್ಟಕಮ್*🌸
ಸರ್ವಜ್ಞೇಂದ್ರಂ ನಿತ್ಯಾನಂದಂ
ನೌಮ್ಯಾಚಾರ್ಯಂ ಭಾಗ್ಯಾಲ್ಲಬ್ಧಂ|
ಶಿಷ್ಯೈರ್ಭಕ್ತ್ತೈರ್ನಿತ್ಯಂ ಧ್ಯೇಯಂ
ನಿತ್ಯೇ ತತ್ವೇ ಗಾಢಂ ನಿಷ್ಠಂ ॥೧॥
(ನಮ್ಮ ಯಾವುದೋ ಭಾಗ್ಯ ವಿಶೇಷದಿಂದ ದೊರಕಿದ,ಭಕ್ತ ಜನರಿಂದ ಸದಾ ಧ್ಯಾನಿಸಲ್ಪಡುವ,ನಿತ್ಯವಾದ ಭಗವತ್ ತತ್ವದಲ್ಲಿ ಗಾಢ ನಿಷ್ಠೆಯನ್ನು ಹೊಂದಿದ್ದ,ಯಾವಾಗಲೂ ಆನಂದಪೂರ್ಣರಾಗಿದ್ದ ಶ್ರೀ ಸರ್ವಜ್ಞೇಂದ್ರ ಯತಿಗಳನ್ನು ವಂದಿಸುತ್ತೇನೆ)
ಅಂಬಾಸೇವಾsಸಕ್ತಂ ಭಕ್ತ್ಯಾ
ಯಸ್ಮಾನ್ನೈಕೇ ವೃದ್ಧಿಂ ಪ್ರಾಪ್ತಾಃ|
ಸಿದ್ಧಿಃ ಸರ್ವಾ ನೌಮ್ಯಾಚಾರ್ಯಂ
ಸರ್ವಜ್ಞೇಂದ್ರಂ ನಿತ್ಯಾನಂದಂ॥೨॥
(ಭಕ್ತಿಯಿಂದ ಜಗನ್ಮಾತೆಯ ಸೇವೆಯಲ್ಲಿ ಸದಾ ನಿರತರಾಗಿದ್ದ, ಅವರ ಅನುಗ್ರಹದಿಂದ ,ಅನೇಕರು ಅನೇಕ ವಿಧವಾದ ಏಳ್ಗೆಯನ್ನು ಹೊಂದಿದರು.ಎಲ್ಲ ವಿಧವಾದ ಯೋಗ ಸಿದ್ಧಿಯನ್ನು ಪಡೆದ ಆಚಾರ್ಯರು ಅವರು. ಅಂತಹ ನಿತ್ಯಾನಂದಪೂರ್ಣರಾದ ಸರ್ವಜ್ಞೇಂದ್ರ ಯತಿಗಳನ್ನು ವಂದಿಸುತ್ತೇನೆ.)
ತೇಜಃಪೂರ್ಣೇ ನೇತ್ರೇ ಯಸ್ಯ
ಶಿಷ್ಯಪ್ರೇಮ್ಣಾ ಪೂರ್ಣೋ ಹಾಸಃ|
ಸಿಧ್ಯಾಪೂರ್ಣಾ ವಾಙ್ನೌಮೀಶಂ
ಸರ್ವಜ್ಞೇಂದ್ರಂ ನಿತ್ಯಾನಂದಂ ॥೩॥
(ಯಾರ ಕಣ್ಣುಗಳು ತೇಜಸ್ಸಿನಿಂದ ಪೂರ್ಣವಾಗಿದೆಯೋ,ಶಿಷ್ಯರ ಕುರಿತಾದ ಪ್ರೇಮಭಾವದಿಂದ ಪೂರ್ಣವಾದ ನಗುವು ಯಾರ ಮುಖದಲ್ಲಿ ಇರುವುದೋ,ಯಾರ ಮಾತು ವಾಕ್ಸಿದ್ಧಿಯಿಂದ ಪೂರ್ಣವಾಗಿರುವುದೋ ,ಅಂತಹ ನಿತ್ಯಾನಂದಪೂರ್ಣರಾದ ಸರ್ವಜ್ಞೇಂದ್ರ ಯತಿಗಳನ್ನು ವಂದಿಸುತ್ತೇನೆ.)
ಜಾತಂ ವಿಘ್ನೇಶಸ್ಯೈವಾನ್ಹಿ
ಮುಕ್ತಂ ವಿಘ್ನೇಶಸ್ಯೈವಾನ್ಹಿ|
ವೈನಾಯಕ್ಯಾsಕೃತ್ಯಾ ಜುಷ್ಟಂ
ಸರ್ವಜ್ಞೇಂದ್ರಂ ನಿತ್ಯಾನಂದಂ॥೪॥
(ಭಗವಾನ್ ಗಣೇಶನಿಗೆ ಇಷ್ಟವಾದ ಚತುರ್ಥೀ ತಿಥಿಯಂದು ಜನ್ಮತಳೆದು , ಅದೇ ತಿಥಿಯಲ್ಲೇ ಮೋಕ್ಷಸಾಮ್ರಾಜ್ಯವನ್ನು ಸೂರೆಗೊಂಡ ,ವಿನಾಯಕನಂತೆ ಕುಬ್ಜವಾದ ಸುಂದರವಾದ ದೇಹಸಂಪತ್ತನ್ನು ಹೊಂದಿದ್ದ ನಿತ್ಯಾನಂದ ಪೂರ್ಣರಾಗಿದ್ದ ಶ್ರೀ ಸರ್ವಜ್ಞೇಂದ್ರ ಯತಿಗಳನ್ನು ವಂದಿಸುತ್ತೇನೆ)
ಸಂನ್ಯಾಸಾಖ್ಯೋ ಯೋಗಃ ಪೂರ್ಣಃ
ರೇಖಾಚೋರ್ಧ್ವಾ ಯತ್ಪಾದಾದಃ|
ಲಕ್ಷ್ಮಪ್ರಾಪ್ತಂ ಪೂರ್ಣಂ ಯಸ್ಯ
ಸರ್ವಜ್ಞೇಂದ್ರಂ ನಿತ್ಯಾನಂದಂ॥೫॥
(ಯಾರಲ್ಲಿ (ಜ್ಯೋತಿಷ್ಯ ಶಾಸ್ತ್ರಪ್ರಕಾರ)ಸಂನ್ಯಾಸ ಯೋಗವು ಪೂರ್ಣವಾಗಿತ್ತೋ,ಯಾವ ಮಹಾತ್ಮರ ಪಾದ ತಲದಲ್ಲಿ ಸಂನ್ಯಾಸಸೂಚಕವಾದ ಊರ್ಧ್ವರೇಖೆಯಿತ್ತೋ, ಇನ್ನೂ ಅನೇಕ ವಿಧದಲ್ಲಿ ಸಂನ್ಯಾಸದ ಪೂರ್ಣಲಕ್ಷಣಗಳು ಯಾರಲ್ಲಿ ಆಶ್ರಯ ಪಡೆದಿದ್ದವೋ,ಅಂತಹ ನಿತ್ಯಾನಂದಪೂರ್ಣರಾದ ಸರ್ವಜ್ಞೇಂದ್ರ ಯತಿಗಳನ್ನು ವಂದಿಸುತ್ತೇನೆ.)
ವಿಷ್ಣು ಬ್ರಹ್ಮೇಶಾನಂ ರೂಪೆ
ಮಾತೃಸ್ನಿಗ್ಧಂ ಕೋಪೇ ರುದ್ರಂ|
ಶ್ರದ್ಧಾವತ್ಸು ಕ್ಲಿನ್ನಂ ಪ್ರೀತ್ಯಾ
ಸರ್ವಜ್ಞೇಂದ್ರಂ ನಿತ್ಯಾನಂದಂ॥೬॥
(ಯಾರು ರೂಪದಲ್ಲಿ ಹರಿ ಹರ ಬ್ರಹ್ಮರಿಗೆ ಸಮಾನರೋ,ಯಾರು ಕೋಪದಲ್ಲಿ ರುದ್ರನಿಗೆ ಸಮಾನರೋ,ಯಾರು ಸೌಮ್ಯ ಸ್ವಭಾವದಲ್ಲಿ ತಾಯಿಗೆ ಸಮಾನರೋ,ಶ್ರದ್ಧೆಯುಳ್ಳವರ ವಿಷಯದಲ್ಲಿ ಯಾರು ಅತ್ಯಂತ ಮೃದು ಸ್ವಭಾವವುಳ್ಳವರಾಗಿದ್ದರೋ,ಅಂತಹ ನಿತ್ಯಾನಂದಪೂರ್ಣರಾಗಿದ್ದ ಸರ್ವಜ್ಞೇಂದ್ರ ಯತಿಗಳನ್ನು ವಂದಿಸುತ್ತೇನೆ.)(ಪೂಜ್ಯ ಗುರುಗಳಿಗೆ ಧರ್ಮಶ್ರದ್ಧೆಯುಳ್ಳವರ ಕುರಿತಾಗಿ ಅತ್ಯಂತ ವಾತ್ಸಲ್ಯ ಮತ್ತು ಅಧಾರ್ಮಿಕರೂ,ಡಾಂಭಿಕರ ಕುರಿತಾಗಿ ,ಸಂದರ್ಭ ಬಂದಾಗ,ಕೋಪವಿರುತ್ತಿತ್ತು.)
ಪುತ್ರಾದ್ಯಾಪ್ತಂ ಬಹುಭಿರ್ಯಸ್ಮಾತ್
ಸಂಸಾರಾಬ್ಧೇಃ ಪಾರಂ ನೀತಾಃ |
ನಿಷ್ಠಾಮನ್ಯೇ ಧರ್ಮೇ ಪ್ರಾಪ್ತಾಃ
ಸರ್ವಜ್ಞೇಂದ್ರಂ ನಿತ್ಯಾನಂದಂ॥೭॥
(ಯಾರ ಅನುಗ್ರಹ ಪ್ರಭಾವದಿಂದ ಅನೇಕರು ಸಂತಾನ ಲಾಭವನ್ನು ಹೊಂದಿದರೋ,ಇನ್ನು ಕೆಲವರು ಸಂಸಾರ ಬಂಧನದಿಂದ ಬಿಡುಗಡೆ ಹೊಂದಿದರೊ, ಅಂತಹ ನಿತ್ಯಾನಂದಪೂರ್ಣರಾದ ಸರ್ವಜ್ಞೇಂದ್ರ ಯತಿಗಳನ್ನು ವಂದಿಸುತ್ತೇನೆ.)
ಶ್ರೀಚಕ್ರಾರ್ಚಾನಿಷ್ಠಾsನನ್ಯಾ
ಸಿಂಹಾಸ್ಯೇಶಶ್ರದ್ಧಾsನನ್ಯಾ|
ಕಾಲೇಧರ್ಮಾಚರ್ಯಾsನನ್ಯಾ
ಮೇ ಭಕ್ತಿಃಸ್ಯಾತ್ ತಸ್ಯಾsನನ್ಯಾ॥೮॥
(ಯಾರಿಗೆ ಶ್ರೀಚಕ್ರಾರ್ಚನೆಯಲ್ಲಿ ಅನನ್ಯವಾದ ನಿಷ್ಠೆಯಿತ್ತೋ,ಭಗವಾನ್ ನರಸಿಂಹ,ಚಂದ್ರಮೌಲೀಶ್ವರರಲ್ಲಿ ಅನನ್ಯವಾದ ಶ್ರದ್ಧೆಯಿತ್ತೋ,ಯಾರು ಸಮಯಕ್ಕೆ ಸರಿಯಾಗಿ ಧರ್ಮಾಚರಣೆ ನಡೆಸುವಲ್ಲಿ ಅನನ್ಯ ಸದೃಶರೋ, ಅಂತಹ ಮಹಾತ್ಮರಾದ ಸರ್ವಜ್ಞೇಂದ್ರ ಯತಿಗಳಲ್ಲಿ ನನಗೆ ಅನನ್ಯವಾದ ಭಕ್ತಿಯುಂಟಾಗಲಿ)
ರಚನೆ:- ಶ್ರೀ ಶ್ರೀಮತ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು (ಶ್ರೀಸ್ವರ್ಣವಲ್ಲೀ ಮಹಾಸಂಸ್ಥಾನಮ್)
ಸಂಗ್ರಹ:- ಶ್ರೀ ಸ್ವರ್ಣವಲ್ಲೀ ಭಕ್ತವೃಂದ

