🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಸಹಸ್ರಲಿಂಗ ಮಠ (ಭೀಮನಪಾದ)

                      

ಭೀಮನ ಪಾದ 



ಸಹಸ್ರಲಿಂಗ ಭೀಮನಪಾದದಲ್ಲಿನ  ಕೆಲವು ಶಿಲ್ಪಕಲಾ ಕುರುಹುಗಳು

               ರಮಣೀಯ ಪ್ರಕೃತಿಯ ಸೌಂದರ್ಯ. ಝುಳು ಝುಳು ಹರಿಯುವ ಶಾಲ್ಮಲಾ ನದಿಯ ನಿನಾದ. ಅದರ ಜೊತೆ ಪಕ್ಷಿಗಳ ಚಿಲಿಪಿಲಿ ಶಬ್ದ ಸೇರಿ ಪ್ರಕೃತಿಯೇ ಸಂಗೀತಸಂಜೆ ನಡೆಸುತ್ತಿದೆಯೋ ಎಂಬತೆ ಭಾಸವಾಗುತ್ತದೆ. ಮುಸ್ಸಂಜೆಯ ಸಮಯದಲ್ಲಿ ಕುಳಿತು ನದಿಯಂಚಿನಲ್ಲಿನಲ್ಲಿ ಕುಳಿತು ಧ್ಯಾನನಿರತನಾದರೆ ಎಲ್ಲಿಲ್ಲದ ಆನಂದ. ಎಂದೂ ಕಾಣದ ಏಕಾಗ್ರತೆ ನಮ್ಮನ್ನು ಆವರಿಸುವುದಂತೂ ನಿಜ. ಹೌದು ಇದು ಪ್ರಪಂಚದ ಎಲ್ಲಾ ಗೌಜು-ಗದ್ದಲಗಳಿಂದ ದೂರವಿರುವ ಸುಂದರ ತಾಣ. ಮೊದಲು ನಮ್ಮ ಮಠ ಇದ್ದಿತ್ತೆನ್ನಲಾದ ಸಹಸ್ರಲಿಂಗ ಮಠದ ಸ್ಥಳ. ಈಗ ಭೀಮನಪಾದ ಎಂಬ ಸ್ಥಳವೇ ಅದು.

                ಶ್ರೀ ಕಾಶೀ ಕ್ಷೇತ್ರದಲ್ಲಿ ಆದಿಗುರು ಶಂಕರಾಚಾರ್ಯರಿಂದ ಸ್ಥಾಪಿತವಾದ ಶ್ರೀ ಸ್ವರ್ಣವಲ್ಲೀಮಠವು ಶಿಷ್ಯಾನುಗ್ರಹಕ್ಕೋಸ್ಕರ ಶಿಷ್ಟರ ಪಾಲಕರಾದ ರಾಜ ಮಹಾರಾಜರ ಬಿನ್ನಹದಂತೆ ಕಾಲಚಕ್ರದಲ್ಲಿ ಗೌರವ ಮರ್ಯಾದೆಗಳೊಂದಿಗೆ ಬೇರೆ ಬೇರೆ ಕಡೆ ಸ್ಥಳಾಂತರಗೊಂಡಿತು. ಅಲ್ಲದೆ ಎಲ್ಲೆಡೆಯೂ ಚ್ಯುತಿಬಾರದಂತೆ ಧರ್ಮ ಪ್ರಸಾರ ಮಾಡುತ್ತಾ ಬಂದಿದೆ. ಕಾಶಿ, ಉಜ್ಜಯಿನಿ, ಗೋಕರ್ಣ, ಕಡತೋಕ ಹೀಗೆ ಪ್ರಸಿದ್ಧ ಸ್ಥಳಗಳಲ್ಲಿ ಶಿಷ್ಯಾನುಗ್ರಹ ಮಾಡಿದ ನಮ್ಮ ಮಠದ ಪೀಠಾಧೀಶರು ಸುಧಾಪುರದ ಅರಸರಾದ ನಾಯಕ ವಂಶಸ್ಥರಿಂದ ಗೌರವಾದರಗಳಿಂದ ಆಮಂತ್ರಿತರಾಗಿ ಸಹಸ್ರಲಿಂಗ ಎಂಬ ಸ್ಥಳಕ್ಕೆ ಚಿತ್ತೈಸಿದರು. ಅಂದಿನ ಗುರುಪುಂಗವರು ಧರ್ಮಾಚರಣೆಗಳನ್ನು ಮಠದ ಪದ್ದತಿಯಂತೆ ಅನೂಚಾನವಾಗಿ ಅಲ್ಲಿ ನಡೆಸುತ್ತಾ ಬಂದರು. ಆದರೆ ಒಂದು ದಿನ ಕರಾಳ ರಾತ್ರಿಯಂದು ದರೋಡೆಕೋರರಿಂದ ಶ್ರೀಮಠವು ಲೂಟಿಗೊಳಗಾಯಿತು. ನಂಬಿಬಂದ ಮಠಕ್ಕೆ ರಕ್ಷಣೆ ಕೊಡಲಾಗಲಿಲ್ಲವಲ್ಲ ಎಂದು ಮನನೊಂದ ಅಂದಿನ ಅರಸನು ಈಗಿರುವ ಸ್ಥಳದಲ್ಲಿ ಅಂದರೆ ಗೋಸೂರು ಎಂಬ ಅರಣ್ಯದ ಮಧ್ಯದಲ್ಲಿ ಮಠಕ್ಕೆ ಸೂಕ್ತ ಸ್ಥಳವನ್ನಾರಿಸಿದನು. ಅಲ್ಲದೆ ಗುರ್ವಾಜ್ಞೆಯಂತೆ ಆ ಸ್ಥಳದಲ್ಲಿ ಭವ್ಯವಾದ ಹಾಗೂ ಭದ್ರವಾದ ನೂತನ ಮಠವನ್ನು ನಿರ್ಮಿಸಿ ಆ ಸ್ಥಳಕ್ಕೆ ಸ್ವರ್ಣವಲ್ಲೀ ಎಂದು ಹೆಸರಿಟ್ಟನು. ಅಂದಿನಿಂದ ಅಂದರೆ ಸುಮಾರು 500 ವರ್ಷಗಳಿಂದ ಬಂಗಾರದ ಬಳ್ಳಿಯು (ಶ್ರೀ ಸ್ವರ್ಣವಲ್ಲೀ ಮಠವು) ನಿತ್ಯ ಪೂಜೆ, ಉತ್ಸವ, ನಿತ್ಯಾನ್ನದಾನ , ವಿದ್ಯಾದಾನ ಇತ್ಯಾದಿ ಸ್ವರ್ಣ ಪುಷ್ಪಗಳಿಂದ ಧರ್ಮ ಪರಿಮಳವನ್ನು ಹರಡುತ್ತಿದೆ.

             ಸಹಸ್ರಲಿಂಗ ಎಂದೊಡನೆ ಮನಸ್ಸಿಗೆ ಬರುವುದು ಸಾವಿರ ಶಿವಲಿಂಗ ಎಂಬುದು. ಶಾಲ್ಮಲಾ ನದಿಯಲ್ಲಿ ದೇವರ ಹೊಳೆ ಎಂಬಲ್ಲಿಂದ ಪ್ರಾರಂಭಿಸಿ ಮಠವಿದ್ದಿತ್ತೆನ್ನಲಾದ ಭೀಮನಪಾದ ಎಂಬ ಸ್ಥಳದವರೆಗೂ ನದಿಯ ಒಡಲೊಳಗೆ ಕಲ್ಲಿನಲ್ಲಿ ಕೆತ್ತಲಾದ ಸಹಸ್ರಾರು ಲಿಂಗಗಳನ್ನು ಕಾಣಬಹುದು. ಪ್ರಸ್ತುತ ಸಹಸ್ರಲಿಂಗವೆಂದೇ ಕರೆಯಲ್ಪಡುವ ಸ್ಥಳದಲ್ಲಿ ಅತಿ ಹೆಚ್ಚು ಲಿಂಗಗಳಿವೆಯಾದರೂ ನದಿಯುದ್ದಕ್ಕೂ ಲಿಂಗಗಳಿರುವುದು ವಿಶೇಷ. ಪ್ರತಿಯೊಂದು ಇತಿಹಾಸಕ್ಕೂ ಅದರದೇ ಮಹತ್ವವಿರುವ ಕಥಾನಕವಿರುತ್ತದೆ. ಸಹಸ್ರಲಿಂಗಕ್ಕೂ ಅದರದೇ ಐತಿಹ್ಯವಿದೆ. ಭೀಮನ ಪಾದ ಎಂಬ ಸ್ಥಳದಲ್ಲಿ ಅನೇಕ ಲಿಂಗಗಳಲ್ಲದೆ ಇತಿಹಾಸದ ಬರಹಗಳನ್ನೂ ಕಾಣಬಹುದು. ತಿಗಳಾರಿ ಲಿಪಿಯಂತಿರುವ ಕಲ್ಲಿನ ಮೇಲಿರುವ ಬರಹಗಳು ಐತಿಹಾಸಿಕ ಪುಟವನ್ನು ನಮ್ಮೆದುರು ತೆರೆದಿಡುತ್ತದೆ.

     ಭೀಮನಪಾದ ಎಂದರೆ ನಮಗೆ ಒಬ್ಬ ವ್ಯಕ್ತಿಯ ಹೆಜ್ಜೆ ಎಂದು ತಿಳಿಯುತ್ತದೆ. ಹೌದು ಭೀಮನ ಪಾದದಲ್ಲಿ ಸುಮಾರು ಒಂದುವರೆ ಅಡಿಗಿಂತಲೂ ಉದ್ದದ ಎರಡೂ ಪಾದಗಳ ಗುರುತಿದೆ. ಸ್ಥಳ ಪರಿಚಯವಿರುವ ಯಾರನ್ನಾದರೂ ಜೊತೆಯಲ್ಲಿ ಕರೆದುಕೊಂಡು ಹೋದರೆ ಇಲ್ಲಿಯ ಪ್ರತಿಯೊಂದೂ ಅಂಶವನ್ನು ಗಮನಿಸಬಹುದು. ಅನೇಕ ಚಿಕ್ಕ ಚಿಕ್ಕ ಶಿವಲಿಂಗಗಳು, ಅದರ ಪಕ್ಕದಲ್ಲಿ ನಂದಿ, ವಾಸುಕಿಯ ಚಿತ್ರಗಳು. ಆದರೆ ಎಲ್ಲವೂ ನಿಮಗೆ ಸರಿಯಾಗಿ ಗೋಚರಿಸುವುದಿಲ್ಲ. ಇತಿಹಾಸ ಬರಹಗಳಲ್ಲದೇ ಅನೇಕ ವಿಶೇಷ ಚಿತ್ರಗಳನ್ನೂ ನಾವಲ್ಲಿ ಗಮನಿಸಬಹುದು.

                ಸ್ವಲ್ಪ ಕಾಡಿನ ಮಧ್ಯದಲ್ಲಿ ಸಾಗುವ ದಾರಿ. ಅತಿವಿರಳ ಜನರ ಓಡಾಟ. ಇನ್ನೇನು ಮುಂದೆ ದಾರಿಯಿಲ್ಲ ನದಿ ತೀರ ಸಮೀಪಿಸಿದ್ದೇವೆ ಎನ್ನುವಾಗ ನದಿಯ ಮಧ್ಯದಲ್ಲಿ ಬೃಹದಾಕಾರದ ಕಲ್ಲಿನ ಹಾಸು. ಮಧ್ಯ ಮಧ್ಯದಲ್ಲಿ ಆ ಕಲ್ಲನ್ನು ಸೀಳಿಕೊಂಡು ಹರಿಯುವ ನೀರು. ಸ್ವಲ್ಪ ತೇವಭರಿತ ಮರಳು ಮಣ್ಣು ಮಿಶ್ರಿತ ಜಾಗದಲ್ಲಿ ಹತ್ತಾರು ಹೆಜ್ಜೆ ನಡೆದು ಸಾಗಿದರೆ ಮೊದಲು ಕಲ್ಲುಬಂಡೆಯಮೇಲೆ ಗೋಚರವಾಗುವವನೇ ಆದಿಪೂಜ್ಯ ಗಣಾಧಿಪ. ಅಲ್ಲಿಯೇ ಎಡಭಾಗದ ಪ್ರತ್ಯೇಕ ಬಂಡೆಯೊಂದನ್ನು ಗಮನಿಸಿದರೆ ಕಾಣುವುದು ಸ್ವಲ್ಪ ಭಗ್ನಗೊಂಡ ವೇದವ್ಯಾಸರ ಮೂರ್ತಿ. ಹಾಗೇ ಮುಂದೆ ಹೋದರೆ ಎದುರಿಗೆ ಒಂದು ಇತಿಹಾಸವಿರುವ ಶಿವಲಿಂಗ. ಅಲ್ಲಿಂದ ಮುಂದೆ ಪಾದ ಹಾಗೂ ಅನೇಕ ಚಿಕ್ಕ ಶಿವಲಿಂಗಗಳು ಕಾಣಸಿಗುತ್ತವೆ. ಮುಂದೆ ಸಾಗಿದರೆ ತುಂಡರಿಸಿದ ದೇವರ ವಿಗ್ರಹ. ಅನೇಕ ಶಾಸನಗಳೂ ಅಲ್ಲಲ್ಲಿ ಕಾಣಸಿಗುತ್ತವೆ. ಮುಂದೆ ಎರಡು ಬಂಡೆಗಳ ಮಧ್ಯ ಸಿಕ್ಕಿ ಹಾಕಿಕೊಂಡಂತೆ ಭಾಸವಾಗುವ ನಾಗದೇವರ ಕಲ್ಲು. ಅದರ ಎದುರಲ್ಲಿ ಪದ್ಮದಳಗಳ ಮೇಲೆ ಇರುವ ಶಿವಲಿಂಗ. ಅಲ್ಲೇ ಪಕ್ಕದಲ್ಲಿ ಕಲ್ಲಿನ ಬೃಹತ್ ಪೀಠ. ಆದರೆ ಹೋಗುವಾಗ ನಿಧಾನ. ಯಾಕೆಂದರೆ ಸರಿಯಾಗಿ ಗಮನಿಸದೇ ಎಲ್ಲಿಯೂ ಕಾಲಿಡುವಂತಿಲ್ಲ. ಯಾಕೆಂದರೆ ನದಿಯ ಮಧ್ಯದ ಕಲ್ಲುಬಂಡೆಗಳ ಮೇಲೆ ಕೆತ್ತಲಾದ ಈ ಎಲ್ಲಾ ಲಿಂಗಗಳು, ವಿಗ್ರಹಗಳು ಹಾಗೂ ಶಾಸನಗಳು. ಸುಮ್ಮನೇ ನೋಡಿದರೆ ಕಾಣದಷ್ಟು ಚಿಕ್ಕದಾಗಿಯೂ ಇವೆ. ತುಳಿದರೆ ಮಹಾಪಾಪಕ್ಕೆ ಗುರಿಯಾಗಬೇಕಾದೀತು. 

                ಶಾಸ್ತ್ರಗಳು ಹರಿಯ ಆತ್ಮ ಶಿವ , ಶಿವನ ಆತ್ಮ ಹರಿ ಎಂದು ಹೇಳುತ್ತವೆ. ಈ ಅಭೇದಭಾವವನ್ನು ಇಲ್ಲಿ ಕಾಣಬಹುದು. ಪ್ರತಿ ಸಂವತ್ಸರದ ಶಿವರಾತ್ರಿಯಂದು ಇಲ್ಲಿ ವಿಶೇಷ. ಇಲ್ಲಿಯ ಒಂದು ಶಿವಲಿಂಗದ ಬಳಿ ಮಹಾಶಿವರಾತ್ರಿಯ ದಿನ ಶ್ರೀ ಸ್ವರ್ಣವಲ್ಲೀ ಮಠದ ಪೂಜ್ಯ ಗುರುಗಳ ಸಮ್ಮುಖದಲ್ಲಿ ಶಿವನ ಆರಾಧನೆಯ ಜೊತೆಗೆ ಶ್ರೀ ಸತ್ಯನಾರಾಯಣನ ಪೂಜೆಯೂ ನೆರವೇರುವ ಏಕೈಕ ಪುಣ್ಯ ಸ್ಥಳ. ಶಿವ-ವಿಷ್ಣು ಒಬ್ಬರಿಗೊಬ್ಬರು ಆರಾಧ್ಯರು. ಜಗತ್ತಿನಲ್ಲಿ ಮತ್ತೆಲ್ಲೂ ಕಾಣಸಿಗದ ಭಾಗ್ಯವಿದು. ಶಿವನ ಆರಾಧನೆಯ ದಿನದಂದು ಶಿವ-ವಿಷ್ಣು ಈರ್ವರ ಪೂಜೆಯೂ ಇಲ್ಲಿ ನಡೆಯುತ್ತದೆ. ಅನೇಕ ಭಕ್ತರು ಆದಿನ ಇಲ್ಲಿ ಬಂದು ಪೂಜೆಯನ್ನು ಕಣ್ತುಂಬಿಕೊಳ್ಳುತ್ತಾರೆ.

ಭೀಮನಪಾದದಲ್ಲಿ ಶ್ರೀ ಶ್ರೀಗಳಿಂದ ಸತ್ಯನಾರಾಯಣನ ಪೂಜೆ

                 ಇನ್ನು ಕಲ್ಲಿನ ಆ ಪೀಠದಮೇಲೆ ಮಕರ ಸಂಕ್ರಾಂತಿಯ ದಿನದಂದು ಪೂಜ್ಯ ಶ್ರೀ ಶ್ರೀಗಳವರು ನದಿಯಲ್ಲಿ ಸಂಕ್ರಮಣ ಸ್ನಾನವನ್ನಾಚರಿಸಿ ಅನುಷ್ಠಾನಗೈಯ್ಯುತ್ತಾರೆ. ಶಿವರಾತ್ರಿಯ ದಿನವೂ ಈ ಸ್ಥಳದಲ್ಲಿ ಪೂಜ್ಯರ ವಿಶೇಷ ಅನುಷ್ಠಾನವಿರುತ್ತದೆ. ಇಂಥಹ ಪರಮಪವಿತ್ರ ಕ್ಷೇತ್ರವನ್ನು ಸಂದರ್ಶಿಸಿ, ಕೆಲಕಾಲ ಧರ್ಮಾಚರಣೆಯಲ್ಲಿ ತೊಡಗುವ ಅವಕಾಶ ದೊರೆತವರೇ ಪುಣ್ಯವಂತರು.

ಸಂಕ್ರಾಂತಿ ಸ್ನಾನ - ಭೀಮನಪಾದ 

ಲೇಖಕರು - ಶ್ರೀ ಸುಬ್ರಹ್ಮಣ್ಯ ಜೋಶಿ ಕೋಡಿಗಾರ್ 

ಸಂಗ್ರಹ- ಸ್ವರ್ಣವಲ್ಲೀ ಭಕ್ತವೃಂದ