🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಯಜುರ್ವೇದ- ಕಿರುಪರಿಚಯ

 


       ಈ ಯಜುರ್ವೇದವು ಯಜ್ಞಸಂಬದ್ಧವಾದ ವಿಷಯಗಳನ್ನೇ ಒಳಗೊಂಡಿರುವುದು. ಇವುಗಳಲ್ಲಿ ಅಕ್ಷರಗಳ/ಛಂದಸ್ಸಿನ ಮಿತಿ ಅಷ್ಟು ಕಟ್ಟುನಿಟ್ಟಾಗಿಲ್ಲವೆಂಬ ಅಭಿಪ್ರಾಯ "ಯಜುಷಾಮನಿಯಮಿತಾಕ್ಷರತ್ವಾತ್ ಛಂದೋ ನ ವಿದ್ಯತೇ" ಎನ್ನುವ ವಾಕ್ಯದ ಮೂಲಕ ಹೊಮ್ಮುತ್ತದೆ. ಆದರೆ "ಛಂದೋ ಹೀನೋ ನ ಶಬ್ದೋऽಸ್ತಿ" ಅರ್ಥಾತ್ ಛಂದಸ್ಸಿನಿಂದ ಕೂಡಿರದ ಶಬ್ದವಿಲ್ಲ ಎನ್ನುವ ಮತವು ವಿದ್ವಾಂಸರಿಂದಲೇ ಸ್ಪಷ್ಟೀಕರಿಸಲ್ಪಟ್ಟಿರುವುದರಿಂದ ಯಜುರ್ವೇದವೂ ಛಂದೋಬದ್ಧವೇ ಸರಿ. ಮತ್ತೆ ಯಜುರ್ವೇದವು ಪಾರಾಯಣಕ್ಕೆ ಅತ್ಯಂತ ಆಪ್ಯಾಯಮಾನವಾಗಿರುವುದು ಸಹ ಈ ವಾದಕ್ಕೆ ಪುಷ್ಟಿಯನ್ನು ನೀಡುತ್ತದೆ. 

     ಯಜುರ್ವೇದದಲ್ಲಿ ಎರಡು ವಿಧ. ಶುಕ್ಲಯಜುರ್ವೇದ ಮತ್ತು ಕೃಷ್ಣಯಜುರ್ವೇದ ಎಂಬುದಾಗಿ. ಇವುಗಳಲ್ಲಿ ಶುಕ್ಲಯಜುರ್ವೇದಕ್ಕೆ ವಾಜಸನೇಯಸಂಹಿತೆಯೂ ಕೃಷ್ಣಯಜುರ್ವೇದಕ್ಕೆ ತೈತ್ತರೀಯಸಂಹಿತೆಯೂ ಮುಖ್ಯ ಶಾಖೆಗಳು. 

    ವಾಜಸನೇಯಸಂಹಿತೆಯ ಕರ್ತೃ ವಾಜಸನ ಋಷಿಯ ಪುತ್ರನಾದ ಯಾಜ್ಞವಲ್ಕ್ಯವಾಜಸನೇಯ. ಹಾಗಾಗಿಯೇ ಈ ಶಾಖೆ 'ವಾಜಸನೇಯೀ' ಶಾಖೆಯಾಗಿರುವುದು. ಇದರಲ್ಲಿಯೂ ಮಂದೆ ಕಾಣ್ವ ಮತ್ತು ಮಾಧ್ಯಂದಿನ ಎನ್ನುವ ಶಾಖೆಗಳು ಕಂಡುಬರುವವು.

    ಯಜುರ್ವೇದದಲ್ಲಿ ೧೦೧ ಶಾಖೆಗಳಿವೆಯೆಂದು ಮತ. ಆದರೆ ವಾಜಸನೇಯೀ ಮತ್ತು ತೈತ್ತರೀಯಸಂಹಿತೆಗಳನ್ನು ಹೊರತುಪಡಿಸಿದರೂ ಉಳಿದಂತೆ ಮೂರು ಶಾಖೆಗಳು, ಕಾಠಕ, ಕಪಿಸ್ಥಲಕಾಠ ಹಾಗೂ ಮೈತ್ರಾಯಣೀ ಅಂದರೆ ಒಟ್ಟಿನಲ್ಲಿ ಐದು ಶಾಖೆಗಳು ಮಾತ್ರ ಉಪಲಬ್ಧವಾಗಿವೆ. 

     ಯಜ್ಞದಲ್ಲಿ ಯಜುರ್ವೇದಸಂಬಂಧೀ ಮಂತ್ರಗಳನ್ನು ಪ್ರಯೋಗ ಮಾಡುವವನನ್ನು 'ಅಧ್ವರ್ಯು' ಎನ್ನುವರು. ಈತನಿಗೆ ಉಪಯುಜ್ಯವಾದ ಮಂತ್ರಗಳನ್ನೆಲ್ಲ ಶುಕ್ಲಯಜುರ್ವೇದದಲ್ಲಿ ಅನುಕ್ರಮವಾಗಿ ವ್ಯವಸ್ಥೆಗೊಳಿಸಿದ್ದು, ಕೃಷ್ಣಯಜುರ್ವೇದದಲ್ಲಿ ಮಂತ್ರಗಳನ್ನು ಹಾಗೂ ಅವುಗಳ ಪ್ರಯೋಗದ ಕಾಲ ಮತ್ತು ವಿಧಿಗಳನ್ನು ನೀಡಲಾಗಿದೆ. 

     ಶುಕ್ಲ ಎಂದರೆ ಶುದ್ಧ ಎನ್ನುವುದಾಗಿ ಅರ್ಥ ಬರುವುದು. ಕೃಷ್ಣ ಎನ್ನುವುದು ಇದಕ್ಕೆ ವಿರುದ್ಧವಾಗಿರುವ ಅರ್ಥವನ್ನು ನೀಡುವುದು. ಹಾಗಾದರೆ ಏಕೆ ವೇದವೊಂದರಲ್ಲಿ ಈ ವಿಧವಾದ ಶಾಖಾಭೇದವುಂಟಾಗಿರಬಹುದೆಂದು ನೋಡಿದರೆ ಅದಕ್ಕೆ ಅರ್ಥವಾದವಾಗಿ ಒಂದು ಕಥೆಯುಂಟು. 

     ಹಿಂದೆ ಕೃಷ್ಣದ್ವೈಪಾಯನ ವ್ಯಾಸರು ವೇದಗಳನ್ನು ವಿಭಾಗ ಮಾಡಿದ ನಂತರ ತಮ್ಮ ಶಿಷ್ಯರಾದ ಪೈಲ, ವೈಶಂಪಾಯನ, ಜೈಮಿನಿ ಮತ್ತು ಸುಮಂತುವಿಗೆ ಅನುಕ್ರಮವಾಗಿ ಅವುಗಳನ್ನು ಬೋಧಿಸಿದರಂತೆ. ವೈಶಂಪಾಯನರಿಂದ ಯಜುರ್ವೇದವು ಯಾಜ್ಞವಲ್ಕ್ಯರಿಗೆ ದೊರೆತಿತು. ಒಮ್ಮೆ ಕಾರಣಾಂತರಗಳಿಂದ ಯಾಜ್ಞವಲ್ಕ್ಯರ ಮೇಲೆ ವೈಶಂಪಾಯನರಿಗೆ ಕೋಪವುಂಟಾಗಿ ತಾವು ಕಲಿಸಿದ ವೇದಗಳನ್ನೆಲ್ಲ ಮರಳಿ ನೀಡಲು ಆದೇಶಿಸಿದರಂತೆ. ಯಾಜ್ಞವಲ್ಕ್ಯರು ಗುರುಗಳ ಮಾತಿನಂತೆ ತಮ್ಮ ಯೋಗಸಾಮರ್ಥ್ಯದಿಂದ ಕಲಿತ ವೇದವನ್ನು ಕಾರಿಕೊಂಡರಂತೆ. ಆಗ ವೈಶಂಪಾಯನರ ಅಪ್ಪಣೆಯಂತೆ ಇತರ ಶಿಷ್ಯರು ತಿತ್ತಿರಿಪಕ್ಷಿಗಳ ರೂಪದಲ್ಲಿ ಅದನ್ನು ಸ್ವೀಕರಿಸಿದರಂತೆ. ಅದರಿಂದಲೇ ಕೃಷ್ಣಯಜುರ್ವೇದವು ತೈತ್ತರೀಯಸಂಹಿತೆಯೆಂದು ಹೆಸರಾಯಿತು. ತದನಂತರ ವೇದಗಳನ್ನು ಕಳೆದುಕೊಂಡಿದ್ದರಿಂದ ದುಃಖಿತರಾದ ಯಾಜ್ಞವಲ್ಕ್ಯರು ಸೂರ್ಯನನ್ನು ಉಪಾಸಿಸಿ ಆತನಿಂದ ವೇದವನ್ನು ಮರಳಿ ಪಡೆದುಕೊಂಡರಂತೆ. ಸೂರ್ಯನಿಂದ ಉಪದೇಶಿಸಲ್ಪಟ್ಟಿದ್ದರಿಂದ ಅದು ಶುಕ್ಲಯಜುರ್ವೇದವೆಂದು ಪ್ರಸಿದ್ಧವಾಯಿತು. ಆಗ ಸೂರ್ಯ ಕುದುರೆ (ವಾಜಿ)ಯ ರೂಪದಲ್ಲಿ ಬಂದು ಉಪದೇಶಿಸಿದ್ದರಿಂದ ವಾಜಸನೇಯೀ ಸಂಹಿತೆಯೆಂದೂ ಹೆಸರಾಯಿತು. 

      ಇಲ್ಲಿನ ಮತ್ತೊಂದು ಸೂಕ್ಷ್ಮವೆಂದರೆ ಕೃಷ್ಣಯಜುರ್ವೇದವೇ ಯಜುರ್ವೇದದ ಪ್ರಾಚೀನಶಾಖೆಯಾಗಿದ್ದು, ತದನಂತರ ಅದನ್ನು ವ್ಯವಸ್ಥಿತಗೊಳಿಸಿದ್ದು ಶುಕ್ಲಯಜುರ್ವೇದವಾಯಿತೆಂಬುದು. 

      ಶುಕ್ಲಯಜುರ್ವೇದದಲ್ಲಿ ಜಾಬಾಲ, ಬೌಧೇಯ, ಕಾಣ್ವ, ಶಾಪೇಯ, ಕಾಪೋಲ, ಮಾಧ್ಯಂದಿನ ಇತ್ಯಾದಿ ಹದಿನೈದು ಶಾಖೆಗಳಿರುವುದು ತಿಳಿದುಬರುವುದಾದರೂ ಹಿಂದೆ ಹೇಳಿದ ಎರಡು ಶಾಖೆಗಳನ್ನು ಬಿಟ್ಟು ಮಿಕ್ಕ ಶಾಖೆಗಳು ಲುಪ್ತವಾಗಿವೆ. ಇಲ್ಲಿ ೪೦ ಅಧ್ಯಾಯಗಳೂ, ಪ್ರತಿಯೊಂದು ಅಧ್ಯಾಯದಲ್ಲಿ ಕಂಡಿಕಾ ಎಂಬ ಸಣ್ಣ ಸಣ್ಣ ಭಾಗಗಳೂ ಇವೆ. ಮೊದಲ ಇಪ್ಪತ್ತೈದು ಅಧ್ಯಾಯಗಳಲ್ಲಿ ದರ್ಶಪೂರ್ಣಮಾಸ, ಅಶ್ವಮೇಧ, ರಾಜಸೂಯ, ವಾಜಪೇಯಾದಿ ಯಜ್ಞಗಳನ್ನು, ಅವುಗಳಿಗೆ ಯಜ್ಞಕುಂಡಾದಿಗಳನ್ನು ರಚನೆ ಮಾಡುವ ರೀತಿಯನ್ನೂ ವಿವರಿಸಿದ್ದರೆ ಮುಂದಿನ ಹದಿನೈದು ಅಧ್ಯಾಯಗಳಲ್ಲಿ ಪುರುಷಮೇಧ, ಪ್ರವರ್ಗ್ಯ ಮೊದಲಾದ ಯಜ್ಞಗಳನ್ನು ಮಾಡುವ ವಿಧಿಗಳನ್ನು ತಿಳಿಸಲಾಗಿದೆ. ಇವುಗಳನ್ನು ಖಿಲಭಾಗಗಳೆನ್ನುವರು. 

     ಕೃಷ್ಣಯಜುರ್ವೇದದಲ್ಲಿ ಏಳು ಕಾಂಡಗಳಿವೆ. ಒಟ್ಟು ೪೪ ಪ್ರಪಾಠಕಗಳು ಅಥವಾ ಅಧ್ಯಾಯಗಳಿವೆ. ಪ್ರತಿ ಅಧ್ಯಾಯದಲ್ಲಿಯೂ ಅನುವಾಕಗಳೆಂಬ ವಿಭಾಗಗಳೂ, ಅವುಗಳಲ್ಲಿ ೫೦ ಪದಗಳಿಗೊಂದರಂತೆ ಪಂಚಾಶತ್ ಎಂಬ ಭಾಗಗಳೂ ಇವೆ. 

      ಉಪನಿಷದ್ಭಾಗದಲ್ಲಿ ಶುಕ್ಲಯಜುರ್ವೇದವು 'ಈಶಾವಾಸ್ಯೋಪನಿಷತ್ತನ್ನೂ', ಕೃಷ್ಣಯಜುರ್ವೇದವು 'ತೈತ್ತರೀಯ ಉಪನಿಷತ್ತನ್ನೂ' ಒಳಗೊಂಡಿದೆ. ಶುಕ್ಲದಲ್ಲಿನ ಈಶಾವಾಸ್ಯವು ಮೇಲೆ ಹೇಳಿದ ಖಿಲಭಾಗದಲ್ಲಿನ ಕೊನೆಯ ಅಧ್ಯಾಯ..

ಲೇಖನ - ಶ್ರೀ ನಚಿಕೇತ ಹೆಗಡೆ ಗೋಡೆ. 

ಪ್ರಸರಣ - ಶ್ರೀ ಸ್ವರ್ಣವಲ್ಲೀ ಭಕ್ತವೃಂದ.