🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಕಗ್ಗ ಸೌರಭ - 18

ಕಗ್ಗ ಸೌರಭ - 18

ನದಿಯ ತೆರೆಯವೊಲುರುಳಿ ಹೊರಳುತಿರುವುದು  ಜೀವ ।
ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲವದಕೆ  ॥
ಬದುಕೇನು ಸಾವೇನು ಸೊದೆಯೇನು ವಿಷವೇನು? ।
ಉದಕಬುದ್ಬುದವೆಲ್ಲ! - ಮಂಕುತಿಮ್ಮ ॥ ೧೮ ॥

ಹಿಂದಿನ ಕಗ್ಗದಲ್ಲಿ ಈ ಹಳತು ಹೊಸತನದ ತಿಕ್ಕಾಟವನ್ನು ಅಮೃತಕ್ಕಾಗಿ ನಡೆಯುವ ಸಮುದ್ರ ಮಂಥನಕ್ಕೆ ಹೋಲಿಸಿದರು ಮಾನ್ಯ ಡಿ.ವಿ.ಜಿ ಯವರು.ಆದರೆ ಇಂದಿನ ಕಗ್ಗದಲ್ಲಿ ಒಂದು ವೇದಾಂತದ ಮಾತನ್ನು ಸೂಚಿಸಿದ್ದಾರೆ. ಇಡೀ ಜೀವನವನ್ನು ಅವರು ಒಂದು ನದಿಯ ತೆರೆ ಅಥವಾ ಅಲೆಯಂತೆ ಎಂದಿದ್ದಾರೆ. ಒಂದು ನಿಮಿಷವೂ ಒಂದೇ ತೆರನಾಗಿ ಇರದ ನದಿಯ ತೆರೆಗೆ ಹೋಲಿಸಿದ್ದಾರೆ.

ಯಾವುದೂ ನಿರಂತರವಲ್ಲ, ನಿಶ್ಚಯವಿಲ್ಲ, ನಿಶ್ಚಯವಿದ್ದರೂ ನಮಗೆ ಅದರ ಅರಿವಿಲ್ಲ. ಅಂತಹ ಭಾವಗಳನ್ನೇ ವ್ಯಕ್ತಪಡಿಸುತ್ತಾರೆ ಶ್ರೀ ಗುಂಡಪ್ಪನವರು.ಇದು ವೇದಾಂತದ ಮಾತು. ಇದು ಸತ್ಯ. ಈ ಸತ್ಯದ ತಳಹದಿಯಲ್ಲೇ ನಮ್ಮ ಜೀವನ ಸಾಗಬೇಕು. ಆದರೆ ನಾವು ” ಅಯ್ಯೋ ಜೀವನವೆಲ್ಲ ನಶ್ವರ, ಯಾವುದೂ ಶಾಶ್ವತವಲ್ಲ ನಾನೇಕೆ ಏನಾದರೂ ಮಾಡಬೇಕು” ಎಂದು ನಿರಾಸೆಯ ಭಾವ ತಳೆಯಬಾರದು. ಅದು ಬದುಕಿಗೆ ಮಾರಕ. ಬದುಕಿಗೆ ಪೂರಕವಾದ ಸದಾಶಾಭಾವನ್ನೇ ಇಟ್ಟುಕೊಂಡು ಜೀವನವನ್ನು ಸಾಗಿಸಬೇಕು. ” ಸದಶಾಭಾವವಷ್ಟೇ” ಇರಬೇಕು. ಎಲ್ಲವೂ ಯಾವುದೋ ಒಂದು ಪರಮ ಶಕ್ತಿಯ ಅಧೀನದಲ್ಲಿ ಮತ್ತು ಅದರ ಇಚ್ಚೆಯಂತೆ ನಡೆಯುತ್ತದೆ. ನಮ್ಮ ಪ್ರಮೇಯವಿದ್ದಂತೆ ಕಂಡರೂ ಇಲ್ಲದ ಮತ್ತು ಅದಕ್ಕೆ ತದ್ವಿರುದ್ಧವಾದ ಅನುಭವಗಳು ನಮಗೆ ಆಗುತ್ತವೆ. ಹಾಗಾಗಿ ನಾವು ಆ ಪರಮ ಶಕ್ತಿಯ ಅಧೀನದಲ್ಲಿರುವುದರಿಂದ ಅದಕ್ಕೆ ಡಿ.ವಿ.ಜಿ.ಯವರು ಹೇಳುವಂತೆ ” ಆ ವಿಚಿತ್ರಕೆ ಶರಣಾಗೋ ” ಎಂಬಂತೆ ಇರಬೇಕು.ಆದರೆ ಜೀವನದಲ್ಲಿ ಇದ್ದರೂ ಯಾವುದಕ್ಕೂ ಅಂಟದೆ ತಾವರೆ ಎಲೆಯ ಮೇಲಿನ ನೀರ ಹನಿಯಂತೆ ಇರಬೇಕು. ಇದ್ದರೆ ನೆಮ್ಮದಿ, ಸುಖ ಮತ್ತು ಆನಂದ. ಹೇಳುವುದು ಸುಲಭ ಆಚರಣೆ ಬಹಳ ಕಷ್ಟ . ಆದರೆ ಅಸಾಧ್ಯವಲ್ಲವಲ್ಲ. ಪ್ರಯತ್ನ ಪಡೋಣ ಎಂದೋ ಒಂದು ದಿನ ನಮಗೂ ಆ ಆನಂದದ ನೆಲೆ ಸಿಗಬಹುದು.ಇಂಥಹ ಆಶಯಗಳನ್ನು ಇಟ್ಟುಕೊಂಡಿರಬೇಕು.

ನಿರೂಪಣೆ - ತಿಮ್ಮಣ್ಣ ಭಟ್, ಬೆಂಗಳೂರು
ಪ್ರಸರಣ- ಶ್ರೀ ಸ್ವರ್ಣವಲ್ಲೀ ಭಕ್ತವೃಂದ