ನರರ ಭಯಬಯಕೆಗಳೆ ಸುರರ ತಾಯ್ತಂದೆಗಳೊ? ।
ಸುರರಟ್ಟಹಾಸದಿನೆ ನರಭಕ್ತಿಯೊರಲೋ? ॥
ಪರಿಕಿಸುವರೇನವರ್ಗಳನ್ಯೋನ್ಯಶಕ್ತಿಗಳ? ।
ಧರುಮವೆಲ್ಲಿದರಲ್ಲಿ? - ಮಂಕುತಿಮ್ಮ ॥ ೨೪ ॥
ಮನುಷ್ಯರ ಬಯಕೆಗಳೇ ಈ ದೇವತೆಗಳಿಗೆ ತಂದೆ ತಾಯಿಗಳೋ ಅಥವಾ ಮನುಜರ ಶಕ್ತಿಯ ರೂಪವೇ ದೇವರೋ ಎನ್ನುವ ಪ್ರಶ್ನೆ. ಈ ವಿಶ್ವದ ಎಲ್ಲವನ್ನೂ ಸೃಷ್ಟಿಸಿ ನಡೆಸಿಕೊಂಡು ಹೋಗುವ ಆ ಪರಮಾತ್ಮನಿರುವಾಗ, ಮನುಷ್ಯರು ತಮ್ಮ ತಮ್ಮ ಸಣ್ಣ ಸಣ್ಣ ಬಯಕೆಗಳನ್ನು ಈಡೇರಿಸಿಕೊಳ್ಳಲು ಬೇರೆ ಬೇರ ದೇವತೆಗಳನ್ನು ಸೃಷ್ಟಿಸಿಕೊಂಡಿರುವುದರಿಂದ, ಅವರಿಗೆ ನಮ್ಮ ಬಯಕೆಗಳೇ ತಂದೆ ತಾಯಿಗಳ ಸ್ಥಾನದಲ್ಲಿರುವುದು ತತ್ಯವಲ್ಲವೇ? ಹಾಗಾಗಿ ನಾವೇ ನಮ್ಮ ಕಲ್ಪನಾ ಶಕ್ತಿಯಿಂದ, ಆ ಪರಮಾತ್ಮನ ಸೃಷ್ಟಿ ಎಲ್ಲಕ್ಕೂ ದೇವತಾ ರೂಪವನ್ನು ಕೊಟ್ಟಿರುವುದರಿಂದ, ಮನುಷ್ಯರ ಬಯಕೆಗಳೇ ದೇವತೆಗಳಿಗೆ ತಂದೆ ತಾಯಿ ಸ್ಥಾನದಲ್ಲಿದ್ದಾವೆ.
ಲೇಖಕರು: ತಿಮ್ಮಣ್ಣ ಭಟ್ ಬೆಂಗಳೂರು
ಪ್ರಸರಣ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ