ಶ್ರೀ ಗುರುಚರಣಾರವಿಂದಾಭ್ಯಾಂ ನಮಃ
ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಇತ್ಯಾದಿ ಬಿರುದಾಂಕಿತ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನಾಧೀಶ್ವರ, ಶ್ರೀಮತ್ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳವರ ಕರಕಮಲ ಸಂಜಾತ
ಶ್ರೀ ಶ್ರೀಮತ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಗುರುಪೀಠಾರೋಹಣದ ಶುಭ ಸಮಾರಂಭದ ಕಾಲದಲ್ಲಿ
ಶ್ರೀಮಠದ ಧರ್ಮಾಡಳಿತದ ವ್ಯಾಪ್ತಿಗೊಳಪಟ್ಟ ಸಮಸ್ತ ಶಿಷ್ಯಮಂಡಳಿಯ ಪರವಾಗಿ ಸಮರ್ಪಿಸುವ
"ಬಿನ್ನವತ್ತಳೆ"
ನೂತನ ಶ್ರೀಗುರುವರ್ಯರೆ, ತಮ್ಮ ಪೀಠಾರೋಹಣದ ನಿಮಿತ್ತ ಶ್ರೀಮಠದ ಶಿಷ್ಯಕೋಟಿಗೆಲ್ಲ ಒಂದು ಸುವರ್ಣಾವಕಾಶ ಒದಗಿಸಿಕೊಟ್ಟಿರುತ್ತೀರಿ. ಪರಮಪೂಜ್ಯ ಜಗದ್ಗುರು ಭಗವತ್ ಶಂಕರಾಚಾರ್ಯರ ಸಚ್ಛಿಷ್ಯ ಶ್ರೀಮತ್ ಭಾಸ್ಕರೇಂದ್ರ ಸರಸ್ವತೀಯವರಿಂದ ವಿಧಿವತ್ ಸಂನ್ಯಾಸ ದೀಕ್ಷೆ ಪಡೆದ ಶ್ರೀಮತ್ ವಿಶ್ವವಂದ್ಯಸರಸ್ವತೀ ಸ್ವಾಮಿಗಳವರಿಂದ ಶುಭಾರಂಭವಾಗಿ ಈವರೆಗೂ ಅವಿಚ್ಛಿನ್ನವಾಗಿ ನಡೆದುಬಂದಿರುವ ಗುರುಪರಂಪರೆಯಲ್ಲಿ ೪೪ ನೆಯವರಾದ ಶ್ರೀಮತ್ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳವರು ಬ್ರಹ್ಮೈಕ್ಯರಾಗಲು ಆ ಮಹಾತ್ಮರ ಪೀಠ ಪರಂಪರೆಯ ಉತ್ತರಾಧಿಕಾರಿಯ ಗುರು ಗೌರವಕ್ಕೆ ತಕ್ಕವರನ್ನು ಅರಸುವ ಸಮಯಕ್ಕೆ ಉತ್ತಮ ಪುರೋಹಿತರ ಮನೆಯಲ್ಲಿ ಚರಿತ್ರ ಸಂಪನ್ನ ತಂದೆ-ತಾಯಿಗಳಿಂದ ಜನ್ಮಕ್ಕೆ ಬಂದು, ಸಕಾಲಕ್ಕೆ ಸತ್ಸಂಸ್ಕಾರ ಪಡೆದು ಸದ್ವಿದ್ಯಾ ವ್ಯಾಸಂಗ ಮಾಡಿರುವ ಸಕಲ ಸಂನ್ಯಾಸ ಸಲ್ಲಕ್ಷಣಗಳಿಂದ ಕೂಡಿರುವ ತಮ್ಮನ್ನು ತತ್ಕೂಡಲೇ ತಮ್ಮ ತಂದೆ-ತಾಯಿಗಳನ್ನೊಪ್ಪಿಸಿ ಕರೆತಂದು, ಬ್ರಹ್ಮೈಕ್ಯ ಶ್ರೀಗಳವರ ಸಮಾಧಿಯ ಕಾಲಕ್ಕೆ ದಂಡಸನ್ಯಾಸ ರೀತ್ಯಾ ಶ್ರೀಮತ್ ಸರ್ವಜ್ಞೇಂದ್ರ ಸರಸ್ವತೀಯವರ ಕರಕಮಲಸಂಜಾತರೆಂದು ಶಿಷ್ಯರೆಲ್ಲ ವ್ಯಾವಹಾರಿಕವಾಗಿ ಒಪ್ಪಿಕೊಂಡಿರುತ್ತಾರೆ. ಆದರೆ ಶಾಸ್ತ್ರಪ್ರಮಾಣದಂತೆ ತಮಗೆ ಶ್ರೀಮಠದ ಉತ್ತರದಾಯಿತ್ವವನ್ನೊದಗಿಸಲು ಶ್ರೀಮಜ್ಜಗದ್ಗುರು ಆದ್ಯಶಂಕರಾಚಾರ್ಯ ಸಂಸ್ಥಾಪಿತ ಪೀಠಪರಂಪರೆಯವರೇ ಆದ ಶ್ರೀ ಕಾಂಚೀ ಕಾಮಕೋಟಿ ಪೀಠಾಧೀಶ ಶ್ರೀಮಚ್ಚಂದ್ರಶೇಖರೇಂದ್ರ ಸರಸ್ವತೀ ಕರಕಮಲ ಸಂಜಾತ ಶ್ರೀಮತ್ ಜಯೇಂದ್ರ ಸರಸ್ವತೀ ಸ್ವಾಮಿಗಳವರಿಂದ ಮಹಾವಾಕ್ಯೋಪದೇಶಾದಿ ವಿಧಿವತ್ ಸಂನ್ಯಾಸದೀಕ್ಷೆ ಕೊಡಿಸಿ ಶ್ರೀಮತ್ ಸರ್ವಜ್ಞೇಂದ್ರ ಸರಸ್ವತೀ ಕರಕಮಲ ಸಂಜಾತ ಶ್ರೀಮತ್ ಗಂಗಾಧರೇಂದ್ರ ಸರಸ್ವತೀ ಎಂಬ ಶುಭ ನಾಮಕರಣ ಮಾಡಿಸಿದ್ದೂ ಕೂಡ ಶ್ರುತಪಟ್ಟಿದೆ. ಹಾಗೂ ತಾವುಗಳು ಶ್ರೀಮಠದ ಧಾರ್ಮಿಕ ಪರಂಪರೆಯ ವಿಧಿವಿಧಾನಗಳಂತೆ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗುರುಪೀಠದಲ್ಲಿ ಸಮಸ್ತ ಶಿಷ್ಯರ ಗೌರವಾದರ ಪಡೆದು ೪೫ ನೆಯವರಾಗಿ ಅಭಿಷಿಕ್ತರಾಗಿರುತ್ತೀರಿ.
ಗುರುಸ್ಥಾನದ ಅಭಾವದಿಂದುಂಟಾದ ಶಿಷ್ಯರೆಲ್ಲರ ಅವ್ಯಕ್ತ ಭಯ ದುಃಖಗಳನ್ನು ಸದ್ಭಾವಪೂರಿತವಾದ ಈ ಧಾರ್ಮಿಕ ಪೀಠಾರೋಹಣ, ಮಹಾಸಮಾರಂಭವು ದೂರೀಕರಿಸಿ ನಮ್ಮಲ್ಲಿ ಧೈರ್ಯ-ಸ್ಥೈರ್ಯಗಳನ್ನು ಮೂಡಿಸಿದೆ.
ಬ್ರಹ್ಮೀಭೂತರಾದ ನಮ್ಮ ಶ್ರೀಗಳವರು ಕೆಲದಿನಗಳ ಹಿಂದೆ ತುಂಬಾ ಅಸ್ವಸ್ಥರಾದಾಗ ಶ್ರೀಮಠದ ಆಡಳಿತ ಮಂಡಳಿಯವರು ಮತ್ತು ಕೆಲ ಅಭಿಮಾನಿ ಶಿಷ್ಯರುಗಳು ಶ್ರೀ ಸ್ವಾಮಿಗಳಲ್ಲಿ ಉತ್ತರಾಧಿಕಾರಿಗಳ ಪ್ರಸ್ತಾಪವೆತ್ತಿದಾಗ ಶ್ರೀಗಳವರು ಎಲ್ಲರಿಗೂ ಧೈರ್ಯ ಹೇಳಿ ಉತ್ತರಾಧಿಕಾರಿಗಳ ಅನ್ವೇಷಣೆಯಲ್ಲಿ ನಿರ್ದೇಶಿಸಿದ್ದರಲ್ಲದೇ, ಯೋಗ್ಯ ಉತ್ತರಾಧಿಕಾರಿಗಳು ದೊರೆತು ಅವರಿಗೆ ಯೋಗ್ಯ ಧರ್ಮಾಧಿಕಾರಿಗಳಿಂದಲೇ ಸಂನ್ಯಾಸದೀಕ್ಷೆ ದೊರಕಿ ಎಲ್ಲವೂ ಯಥಾಸಾಂಗವಾಗಿ ಸಾಗಲಿ ಎಂದು ಹರಸಿದ್ದರಲ್ಲದೆ, ತಮಗೆ ಮಾಘಮಾಸದಲ್ಲಿಯೇ ದೀಕ್ಷೆ ದೊರಕಿದುದನ್ನು ಸೂಚ್ಯವಾಗಿ ಸೂಚಿಸಿದರು. ಮಹಾತ್ಮರ ಆ ಸೂಚ್ಯ ನುಡಿ ಅಕ್ಷರಶಃ ಈಗ ನಿಜವಾಯಿತು. ಇದಕ್ಕೆಲ್ಲ ಶ್ರೀಗಳವರ ದಿವ್ಯ ಅನುಗ್ರಹ ಶಕ್ತಿಯೇ ಕಾರಣವೆನ್ನುವದರಲ್ಲಿ ಸಂದೇಹವಿಲ್ಲ.
ಪೀಠಾರೋಹಣದೊಂದಿಗೆ ಶ್ರೀಮಠದ ಸ್ಥಿರ-ಚರ ಆಸ್ತಿಗಳಿಗೆ ಸಂಬಂಧಿಸಿದ ವ್ಯವಹಾರಗಳ ಗುರುತರವಾದ ಹೊಣೆಗಾರಿಕೆಯೂ ತಮಗೆ ಪ್ರಾಪ್ತವಾಗಿರುತ್ತದೆ. ಅವುಗಳನ್ನೆಲ್ಲ ಉಳಿಸಿ ಬೆಳೆಸಿಕೊಂಡು ಹೋಗುವ ಉತ್ತರದಾಯಿತ್ವ ಇಂದಿನಿಂದ ತಮ್ಮದಾಗಿದೆ. ಈ ಉತ್ತರದಾಯಿತ್ವದಲ್ಲಿ ಶಿಷ್ಯ ಸಮುದಾಯದ ಸಹಾಯ ಸಹಕಾರವೂ ಬೇಕಾಗುತ್ತದೆ ಎನ್ನುವುದನ್ನು ನಾವು ಮರೆಯುವದಿಲ್ಲ. ಶಿರಸಿ, ಯಲ್ಲಾಪುರ ತಾಲೂಕುಗಳನ್ನೊಳಗೊಂಡಂತೆ ಸಿದ್ದಾಪುರ, ಸುಪಾ ತಾಲೂಕುಗಳ ಹಲ ಗ್ರಾಮಘಟಕಗಳಲ್ಲದೇ, ಮಿರ್ಜಾನದಿಂದ ಬೈಂದೂರುವರೆಗೆ ಹಬ್ಬಿರುವ ವಿಶಾಲ ಸೀಮೆಗಳ ಹವ್ಯಕ, ರಾಮಕ್ಷತ್ರಿಯ, ಶೀಲಿಗ ಹಾಗೂ ಮರಾಠಿಗಳನ್ನೊಳಗೊಂಡು ಶಿಷ್ಯ ಸಮುದಾಯ ಈ ಸಂಸ್ಥಾನದ ಭಜಕರು, ಇವರೆಲ್ಲ ಕುಲಾಚಾರ, ಧರ್ಮಾಚಾರ, ವ್ಯಾಪಾರ, ವ್ಯವಹಾರ, ವಿಚಾರಗಳಲ್ಲಿ ವೈವಿಧ್ಯತೆ ಉಳ್ಳವರು. ಆದರೆ ಇವರೆಲ್ಲರೂ ಶ್ರೀಮಠದ ಆದೇಶದ ಅಡಿಯಲ್ಲಿ ತಮ್ಮ ತಮ್ಮ ಧರ್ಮಜಾಗೃತಿ, ಶಿಕ್ಷಣ, ಸಂಸ್ಕಾರ-ಸಂಸ್ಕೃತಿಗಳ ಬೆಳವಣಿಗೆಗಳನ್ನು ಕಂಡುಕೊಳ್ಳಲು ಸದಾ ಬಯಸುವವರು. ಈ ಎಲ್ಲ ಶಿಷ್ಯರ ಭಾವನೆಗಳಿಗೆ ಕಾಮಧೇನುವಾಗಿ ಸ್ಪಂದಿಸುವ ಮಹಾನ್ ಹೊಣೆಗಾರಿಕೆ ತಮಗೀಗ ಬಂದಿದೆ.
ಬ್ರಹ್ಮೈಕ್ಯ ಶ್ರೀಮತ್ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳವರು ವಿದ್ಯೆಯಲ್ಲಿ, ಅನುಷ್ಠಾನದಲ್ಲಿ, ಆಧ್ಯಾತ್ಮಿಕ ಅನುಭವದಲ್ಲಿ, ಆದರಾಥಿತ್ಯದಲ್ಲಿ, ಶಿಷ್ಯವಾತ್ಸಲ್ಯದಲ್ಲಿ ಅದ್ವಿತೀಯರಾಗಿದ್ದರು. ಸಮಾಜದ ಧರ್ಮವೃಕ್ಷದ ತಾಯಿಬೇರಾದ ತಮ್ಮಲ್ಲಿ ಆ ಮಹಾತ್ಮರ ಆದರ್ಶಗಳು ಮೈಗೂಡಿಬಂದು ತನ್ಮೂಲಕ ನಮ್ಮೆಲ್ಲರಲ್ಲಿ ಒಂದಾಗಿ ಬರಲಿ.
ಸದ್ಗುರುವರ್ಯರೆ, ನಮ್ಮ ಶ್ರೀಮಠಕ್ಕೆ ಸಾವಿರಾರು ವರ್ಷಗಳ ಪವಿತ್ರ ಇತಿಹಾಸಪರಂಪರೆಯಿದೆ. ಸಮೃದ್ಧವಾದ ಪ್ರಾದೇಶಿಕ ಹಿನ್ನೆಲೆಯಿದೆ. ಅನೂಚಾನವೂ, ಸಾತ್ವಿಕವೂ, ದಿವ್ಯವೂ ಆದ ಧರ್ಮಾನುಷ್ಠಾನ ಪರಂಪರೆಯಿದೆ. ಇದನ್ನೆಲ್ಲ ಲಕ್ಷಿಸಿ ತಾವು ಮಧುರ ಹಾಗೂ ಪವಿತ್ರ ಗುರುಶಿಷ್ಯ ಭಾವ-ಬಾಂಧವ್ಯಗಳಿಗೆ ಸ್ಪಂದಿಸಿ ಈ ಸಂಧಿಕಾಲದಲ್ಲಿ ಶ್ರೀಮಠದ ಆಸ್ತಿಕ ಶಿಷ್ಯಕೋಟಿಗೂ ಹಾಗೂ ಶ್ರೀಮಠಕ್ಕೂ ಸಂಬಂಧಪಟ್ಟ ಸಾತ್ವಿಕ ಸಂಪತ್ತು ಕಳೆಯದ ಹಾಗೆ, ಮುಳುಗದ ಹಾಗೆ ಶಿಷ್ಯರ ಸೂಕ್ತ ಸಹಾಯ ಸಹಕಾರ ಪಡೆದು ರಕ್ಷಿಸಿ ಮುನ್ನಡೆಸಬೇಕೆಂದು ಬೇಡಿಕೊಳ್ಳುತ್ತೇವೆ. ಶ್ರೀಮಠವು ಧರ್ಮಪೀಠವೂ ಆಗಿರುವುದರಿಂದ ಅನೂಚಾನವಾದ ಅನುಷ್ಠಾನ, ಐಹಿಕ ಆಮುಷ್ಮಿಕ ವಿಚಾರ-ಆಚಾರಗಳು ಶ್ರೀಮಠದಿಂದಲೇ ನಮ್ಮಲ್ಲಿ ಹರಿದುಬಂದು ಸಂರಕ್ಷಿತವಾಗುವಂತೆ ಅನುಗ್ರಹಿಸಬೇಕು. ಅಲ್ಲದೆ ಸಂಸ್ಕೃತಿ-ಸಂಸ್ಕೃತಗಳಿಗೆ ಸೇರಿದ ಶಿಕ್ಷಣಗಳು ಶ್ರೀಮಠದ ನೆರವಿನಿಂದ ಅಲ್ಲಲ್ಲಿ ಸಿಗುವಂತಾಗಿ ಸಮಾಜದ ಓರೆ-ಕೋರೆಗಳಲ್ಲಿರುವ ಕಡುಬಡವರಿಗೂ ಅವಕಾಶ ಸಿಗುವಂತೆ ಅನುಗ್ರಹಿಸಿ ಅಭಯ ಪ್ರದಾನ ಮಾಡಿ ಸಕಲ ಶಿಷ್ಯವೃಂದವನ್ನು ಕಾಪಾಡಬೇಕೆಂದು ಏಕಕಂಠದಿಂದ ತಮ್ಮಲ್ಲಿ ಬಿನ್ನವಿಸಿಕೊಳ್ಳುತ್ತೇವೆ.
ಶ್ರೀಗುರುಪೀಠಕ್ಕೂ, ಪೀಠಸ್ಥ ಸದ್ಗುರುವರ್ಯರಿಗೂ ದೀರ್ಘದಂಡ ಪ್ರಣಾಮಗಳು.
ಸೀಮಾಧ್ಯಕ್ಷರಾದಿಯಾಗಿ ಸಮಸ್ತ ಶಿಷ್ಯ ಸಮುದಾಯದ ಪರವಾಗಿ,
ಎಸ್.ಆರ್.ಹೆಗಡೆ ಕಡವೆ ಗೌರವಾಧ್ಯಕ್ಷರು
ಜಿ.ಎಮ್.ಹೆಗಡೆ ಹುಳಗೋಳ
ಪ್ರಧಾನ ಕಾರ್ಯದರ್ಶಿ
ಜಿ.ಎಸ್.ಹೆಗಡೆ ಅಜ್ಜೀಬಳ
ಅಧ್ಯಕ್ಷರು
ಪ್ರಮೋದ ಸಂ|| ಮಾಘ ಕೃಷ್ಣ ೪ ಯು ಶನಿವಾರ, ತಾ: ೨.೨.೧೯೯೧
ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನಂ