ಜೀವಗತಿಗೊಂದು ರೇಖಾಲೇಖವಿರಬೇಕು ।
ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ ॥
ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ? ।
ಆವುದೀ ಜಗಕಾದಿ? - ಮಂಕುತಿಮ್ಮ ॥ ೨೫ ॥
ಒಂದು ಹಡಗನ್ನು ನಡೆಸಲು ನಾವಿಕನಿಗೆ ಒಂದು ದಿಕ್ಸೂಚಿ ಇರುತ್ತದೆ. ಸುತ್ತಲೂ ಸಮುದ್ರ ಮಧ್ಯದಲ್ಲಿ ಹಡಗು. ತನ್ನ ಗಮ್ಯದ ಕಡೆಗೆ ಹೋಗಲು ಆ ನಾವಿಕನಿಗೆ ದಿಕ್ಕನ್ನು ತೋರಲು ಒಂದು ದಿಕ್ಸೂಚಿ ಬೇಕು. ಆ ದಿಕ್ಸೂಚಿಯ ಸೂಚನೆಯಂತೆ ನಾವಿಕನು ಮುಂದುವರೆಯುತ್ತಾನೆ. ಆಗ ಹಡಗು ಆ ದಿಕ್ಕಿನಲ್ಲಿ ನೇರ ಹೋಗುತ್ತದೆ. ಆದರೆ ಜೀವನದ ಗತಿಗೆ ದಿಕ್ಸೂಚಿ ಯಾವುದು, ಇಲ್ಲ . ಅಂಥಹ ಒಂದು ದಿಕ್ಸೂಚಿ ಬೇಕು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಅಂದರೆ ಜೀವನದ ಗತಿಗೆ ಒಂದು ನೇರ ನಡೆ ಇಲ್ಲ. ಆ ನೇರ ನಡೆ ಬೇಕಾದರೆ ಒಂದು ನೇರ ಗೆರೆ ಬೇಕು ಎನ್ನುತ್ತಾರೆ. ಹೌದು ಇಡೀ ಬದುಕಿಗೆ ಒಂದು ನಿರ್ಧಿಷ್ಟ ಗತಿ ಅಥವಾ ಒಂದು ನಿರ್ಧಿಷ್ಟ ಯಾನದ ದಾರಿ ಇಲ್ಲ. ಆದರೆ ಗುರಿಯಿಲ್ಲದ ಜೀವನ ಸತ್ವಹೀನ. ಆದ್ದರಿಂದ ಗುರಿಯನ್ನು ಸಾಧಿಸಲು ಅಗತ್ಯವಿರುವ ದಿಕ್ಸೂಚಿಯನ್ನು ಪ್ರಯತ್ನ ಪೂರ್ವಕವಾಗಿ ರೂಪಿಸುವ ಯತ್ನವಿರಬೇಕು.
ಲೇಖಕರು: ತಿಮ್ಮಣ್ಣ ಭಟ್ ಬೆಂಗಳೂರು
ಪ್ರಸರಣ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ