ಸೃಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ ।
ಇಷ್ಟ ಮೊಹಕ ದಿವ್ಯಗುಣಗಳೊಂದು ಕಡೆ ॥
ಕಷ್ಟ ಭೀಭತ್ಸ ಘೋರಂಗಳಿನ್ನೊಂದು ಕಡೆ ।
ಕ್ಲಿಷ್ಟವೀ ಬ್ರಹ್ಮಕೃತಿ - ಮಂಕುತಿಮ್ಮ ॥ ೨೬ ॥
ಆಹಾ ಎಂತಹ ವಿಸ್ಮಯ... ಜಗತ್ತಿನ ಸೃಷ್ಟಿಯನ್ನು ವಿಶ್ಲೇಷಣೆ ಮಾಡುವಂಥಾ ವಿಚಾರ. ಈ ಸೃಷ್ಟಿಯಾಗುವುದಕ್ಕೆ ಉದ್ದೇಶ್ಯವು ಏನಿತ್ತು ಎಂದು ಯೋಚಿಸುತ್ತಾರೆ ಮಾನ್ಯ ಗುಂಡಪ್ಪನವರು. ಅದೊಂದು ಬ್ರಹ್ಮಗಂಟು. ಬಿಡಿಸಲಾಗದ್ದು. ಏಕೆಂದರೆ ಎಂತೆಂತಾ ಮಹಾ ಮಹಿಮರು ಈ ವಿಷಯದಲ್ಲಿ ಯೋಚನೆ ಜಿಜ್ಞಾಸೆ ತಪಸ್ಸು ಧ್ಯಾನ ಎಲ್ಲ ಮಾಡಿ ತಮಗೆ ತೋಚಿದ್ದನ್ನು ನಮಗೆ ಉಲ್ಲೇಖಿಸಿ ಕೊಟ್ಟಿದ್ದಾರೆ. ವೈಜ್ಞಾನಿಕ ಪರಿಭಾಷೆಗಳು ಬೇರೆ, ವೇದಾನ್ವಯ ಪರಿಭಾಷೆಗಳು ಬೇರೆ. ಸಿದ್ಧಾಂತಗಳು ಬೇರೆ , ನಂಬಿಕೆಗಳು ಬೇರೆ. ಆದರೆ ಎಲ್ಲೂ ಸಹಮತವಿಲ್ಲ. ಗಮನಿಸಿ ೯ನೆ ಕಗ್ಗಕ್ಕೆ ವಿವರಣೆ ನೀಡುವಾಗ ಕೆಲವು ಸೃಷ್ಟಿಯ ವಿಷಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಮಂಡಿಸಿದ್ದೆ. ಅಂದು ಇಡೀ ವಿಶ್ವದ ಸೂಕ್ಷ್ಮ ವಿಚಾರ ಮಂಡಿಸಿದ್ದೆ. ಎಷ್ಟು ಅಗಾಧ, ಎಷ್ಟು ವಿಸ್ತಾರ ನಮ್ಮ ಯೋಚನೆಗೆ ನಿಲುಕದಷ್ಟು, ಎಂದು ಯೋಚಿಸಿದಾಗ ನಮ್ಮ ಅಲ್ಪ ಇರುವಿಕೆಯನ್ನು ನಾವು ಗುರುತಿಸಬಹುದು. ಅಂತೆಯೇ ಅಗಾಧತೆಯನ್ನು ಗುರುತಿಸಿ ಅದರತ್ತ ಸಾಗಲು ಸದಾ ಯತ್ನವಿರಬೇಕು ಎನ್ನುವುದೂ ಸಹ ಧ್ವನಿತವಾಗಿದೆ.
ಲೇಖಕರು : ತಿಮ್ಮಣ್ಣ ಭಟ್ ಬೆಂಗಳೂರು
ಪ್ರಸರಣ : ಶ್ರೀ ಸ್ವರ್ಣವಲ್ಲೀ ಭಕ್ತವೃಂದ