🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

*ಹೃನ್ಮಂದಿರದಲ್ಲಿ ರಾಮ ಪ್ರತಿಷ್ಠಿತನಾಗಲೀ*

 *ಹೃನ್ಮಂದಿರದಲ್ಲಿ ರಾಮ ಪ್ರತಿಷ್ಠಿತನಾಗಲಿ*




ಶ್ರೀ ಶಂಕರಾಚಾರ್ಯರು ಶ್ರೀರಾಮನನ್ನು ಕುರಿತು ಎರಡು ಹಾಗೂ ಹನೂಮಂತನನ್ನು ಕುರಿತು ಒಂದು ಸ್ತೋತ್ರಗಳನ್ನು ಬರೆದಿದ್ದಾರೆ. ಅದರಲ್ಲಿ ಒಂದು ಶ್ಲೋಕ ಹೀಗಿದೆ-

*ಸ ಪುಣ್ಯಃ ಸ ಗಣ್ಯಃ ಶರಣ್ಯೋ ಮಮಾಯಂ*

*ನರೋ ವೇದ ಯೋ ದೇವ ಚೂಡಾಮಣಿಂ ತ್ವಾಮ್|*

ಅಂದರೆ- ಹೇ ರಾಮನೇ, ಯಾವ ಮನುಷ್ಯನು ದೇವಚೂಡಾಮಣಿಯಾದ ನಿನ್ನನ್ನು ಅರಿತು ಶರಣಾಗಿರುವನೋ ಅಂಥ ಮನುಷ್ಯನು ಪುಣ್ಯವಂತನೆಂದೂ ಗಣ್ಯನೆಂದೂ ನಾನು ಭಾವಿಸುತ್ತೇನೆ- ಎಂದು ಈ ಭಾಗದ ಅರ್ಥ.


ರಾಮಭುಜಂಗಸ್ತೋತ್ರದಲ್ಲಿ ಇನ್ನೊಂದು ಸ್ವಾರಸ್ಯಕರವಾದ ಶ್ಲೋಕವಿದೆ. ಓದಿ ಆನಂದಿಸಿ-


*ಅಸೀತಾಸಮೇತೈರಕೋದಂಡಭೂಷೈಃ*

*ಅಸೌಮಿತ್ರಿವಂದ್ಯೈರಚಂಡಪ್ರತಾಪೈಃ|*

*ಅಲಂಕೇಶಕಾಲೈರಸುಗ್ರೀವಮಿತ್ರೈಃ*

*ಅರಾಮಾಭಿಧೇಯೈರಲಂ ದೇವತೈರ್ನಃ||*

ಸೀತೆಯಿಂದೊಡಗೂಡದೇ ಇರುವ, ಕೋದಂಡಭೂಷಣನಲ್ಲದ, ಲಕ್ಷ್ಮಣನಿಂದ ವಂದಿತನಿರದ, ಅಪರಿಮಿತ ಶೌರ್ಯವಿಲ್ಲದ, ರಾವಣನನ್ನು ಕೊಲ್ಲದ, ಸುಗ್ರೀವನ ಮೈತ್ರಿಯನ್ನು ಹೊಂದದ, ರಾಮನೆಂಬ ಹೆಸರನ್ನು ಹೊಂದಿರದ ಬೇರೆ ದೇವತೆಗಳಿಂದ ನನಗೇನು ಪ್ರಯೋಜನ?

ಇದು ಶೈವರೆಂದು ಗುರುತಿಸಲ್ಪಡುವ ಶಂಕರರು ಬರೆದಿರುವ ಶ್ಲೋಕ. ರಾಮನ ಕಾರ್ಯಗಳನ್ನು ಹೆಸರಿಸುತ್ತಾ ಇಂಥ ಸತ್ಕಾರ್ಯಗಳನ್ನು ಮಾಡದ ದೇವತೆಗಳು ನನಗೆ ಬೇಡ ಎಂದು ವಾಚ್ಯವಾಗಿಯೇ ಹೇಳಿಬಿಟ್ಟಿದ್ದಾರೆ ಶಂಕರರು. (ಇಲ್ಲಿ ರಾಮನನ್ನು ವರ್ಣಿಸಲು ಬಳಸಿದ ಪದಗಳು ಯಾವುದೋ ನರೇಂದ್ರನಿಗೆ ಅನ್ವಯವಾದಂತೆ ನಿಮಗೆ ಕಂಡರೆ ನೀವೇ ಹೊಣೆಗಾರರು; ನಾನಲ್ಲ)

ಶಂಕರಾಚಾರ್ಯರ ಪರಂಪರೆಯವರು ಶೈವರು, ಅವರಿಗೆ ವಿಷ್ಣುವಿನ ಅವತಾರವಾದ ರಾಮನೆಂದರೆ ಇಷ್ಟವಿಲ್ಲ ಎಂದು ಕೆಲವರು ಹೇಳುತ್ತಾರೆ. ಅವರಿಗಾಗಿಯೇ ಸ್ವತಃ ಶಂಕರರೇ ಬರೆದ ಈ ಶ್ಲೋಕವನ್ನು ನೀಡಿಬೇಕಾಯಿತು.


ಶ್ರೀರಾಮನನ್ನು ಪ್ರತಿಷ್ಠಾಪಿಸಿ ಮಂದಿರವೊಂದನ್ನು ಕಟ್ಟುವ ಮೂಲಕ ರಾಮನಿಗೆ ಮನೆಕಟ್ಟಿಕೊಡುತ್ತಿದ್ದಾರೆ ಅಂತ ಯಾರೋ ಹೇಳಿದರು. ಕೇಳಿ ನಗು ಬಂತು. ಯಾಕೆ ಅಂತೀರಾ? ಈ ಶ್ಲೋಕ ನೋಡಿ-

*ಶಿಲಾಪಿ ತ್ವದಂಘ್ರಿಕ್ಷಮಾಸಂಗಿರೇಣು*

*ಪ್ರಸಾದಾದ್ಧಿ ಚೈತನ್ಯಮಾಧತ್ತ ರಾಮ|*

*ನರಸ್ತ್ವತ್ಪದದ್ವಂದ್ವಸೇವಾವಿಧಾನಾತ್*

*ಸುಚೈತನ್ಯಮೇತೀತಿ ಕಿಂ ಚಿತ್ರಮತ್ರ||*

ಶಿಲೆಯೂ ಕೂಡ ರಾಮನ ಪಾದದ ಧೂಳಿನ ಕಣದ ಸ್ಪರ್ಶಮಾತ್ರದಿಂದ ಸಚೇತನವಾಯಿತು(ಅಹಲ್ಯೆ). ಹೇ ರಾಮನೇ, ಮನುಷ್ಯನು ನಿನ್ನ ಪಾದದ್ವಯದ ಸೇವೆಯನ್ನು ಮಾಡುವುದರಿಂದ ಉತ್ತಮವಾದ ಚೈತನ್ಯವನ್ನು ಹೊಂದುವುದರಲ್ಲಿ ಸಂಶಯವಿಲ್ಲ.

ಶಾಪಗ್ರಸ್ತ ಶಿಲೆಯನ್ನೇ ಉದ್ಧಾರಮಾಡಿದವನು ರಾಮ, ಅಂಥ ರಾಮನಿಗೆ ನಾವು ಮನೆ ಕಟ್ಟಿಕೊಡುತ್ತಿದ್ದೇವೆ ಎಂದು ಹೇಳುವುದು ಹಾಸ್ಯಾಸ್ಪದವಲ್ಲವೇ? ಮಂದಿರ ಕಟ್ಟುತ್ತಿರುವುದು ರಾಮನ ಪಾದದ ಸೇವೆಯನ್ನು ಮಾಡಿ ನಾವು ಸಚೈತನ್ಯರಾಗುವುದಕ್ಕಾಗಿ. ಅಷ್ಟೇ.


ವೇದೋಕ್ತ ಹೋಮ- ಹವನಗಳಲ್ಲಿ ಒಂದು ಶ್ಲೋಕ ಬರುತ್ತದೆ. 

*ಪ್ರಮಾದಾತ್ ಕುರ್ವತಾಂ ಕರ್ಮ*

*ಪ್ರಚ್ಯವೇತಾಧ್ವರೇಷು ಯತ್|*

*ತದ್ವಿಷ್ಣೋಃ ಸ್ಮರಣಾದೇವ* *ಸಂಪೂರ್ಣಂ ಸ್ಯಾದಿತಿ ಶ್ರುತಿಃ।।*

ಕರ್ಮಾಂಗದಲ್ಲಿ ಯಾವುದೇ ರೀತಿಯ ಲೋಪ ಅಥವಾ ನ್ಯೂನತೆ, ಅಪೂರ್ಣತೆಗಳು ಉಂಟಾದಲ್ಲಿ ಆ ದೋಷವು ವಿಷ್ಣುವಿನ ಸ್ಮರಣೆ ಮಾತ್ರದಿಂದಲೇ ಪೂರ್ಣವಾಗುತ್ತದೆ ಎಂದು ಶ್ರುತಿಗಳು ಹೇಳುತ್ತವೆ.

ಅಂದಮೇಲೆ ವಿಷ್ಣುವಿಗೆ ಅಪೂರ್ಣವನ್ನು ಪೂರ್ಣಗೊಳಿಸುವ ಗುಣವಿದೆ ಎಂಬುದನ್ನು ನಾವು ಮರೆಯುವಂತಿಲ್ಲ.


ಬಲಿ ಎಂಬ ಉತ್ತಮ ಅಸುರನಿದ್ದ. ಅವನು ಅನೇಕ ಯಜ್ಞಯಾಗಾದಿಗಳನ್ನು ಮಾಡಿದ್ದ ಹಾಗೂ ನೂರನೇ ಮಹಾಯಾಗವನ್ನು ಮಾಡುತ್ತಾ ಇದ್ದ. ಈ ನೂರನೇ ಯಾಗವು ಪೂರ್ಣಗೊಂಡರೆ ಆತನೇ ಇಂದ್ರನಾಗುತ್ತಿದ್ದ. ಹಾಗೂ ಅದೂ ಸರಿಯಾದ ಮಾರ್ಗವೇ ಆಗಿತ್ತು. ಆದರೆ ಈಗಾಗಲೇ ಇರುವ ಇಂದ್ರ ಕೂಡ ನೂರು ಯಾಗಗಳನ್ನು ಪೂರೈಸಿಯೇ ಪದವಿಯನ್ನು ಸಂಪಾದನೆ ಮಾಡಿದವನಾಗಿದ್ದ. ಅವನು ಸ್ಥಾನಭ್ರಷ್ಠನಾಗುವುದು ನ್ಯಾಯವಾಗಿರಲಿಲ್ಲ. ಹಾಗಾಗಿ ಬಲಿಯನ್ನು ತಡೆಯಬೇಕಿತ್ತು. ಯಜ್ಞದ ಅರ್ಧದಲ್ಲೇ ವಾಮನಾವತಾರವಾಯಿತು. ವಾಮನನಾಗಿ ದಾನ ಪಡೆದ ವಿಷ್ಣುವು ತ್ರಿವಿಕ್ರಮನಾಗಿ ಬಲಿಯನ್ನು ಪಾತಾಳಕ್ಕೆ ತಳ್ಳಿದ. ಮಹಾಯಾಗ ಅಪೂರ್ಣವಾಗಿತ್ತು. ಆದರೂ ಬಲಿಯು ಮುಂದಿನ ಮನ್ವಂತರಕ್ಕೆ ಇಂದ್ರನಾಗುವ ಅರ್ಹತೆಯನ್ನು ಪಡೆದಿದ್ದ. ಹೇಗೆ ಬಲ್ಲಿರಾ? ವಾಮನನ ಆಗಮನದಿಂದಲೇ ಯಜ್ಞ ಪೂರ್ಣವಾಗಿಹೋಯಿತು. ನೂರು ಮಹಾಯಾಗಗಳನ್ನು ಮಾಡಿದ ಪುಣ್ಯ ಬಲಿಗೆ ಪ್ರಾಪ್ತವಾಯಿತು. 


ಅಪೂರ್ಣವಾಗಿದ್ದರೂ ಪೂರ್ಣವಾಗಿದ್ದರೂ ರಾಮನ ಪ್ರತಿಷ್ಠೆ ಆಗುವ ತನಕ ಮಂದಿರ ಅಪೂರ್ಣವೇ. ರಾಮನ ಪ್ರತಿಷ್ಠೆ ಆಯಿತು ಅಂತಾದರೆ ಮಂದಿರ ಅಪೂರ್ಣವಾಗಿದ್ದರೂ ಪೂರ್ಣವಾದಂತೆಯೇ ಸರಿ. ಅಲ್ಲವೇ? 


ಶಂಕರಾಚಾರ್ಯರು ಅದ್ವೈತ ತತ್ತ್ವದ ಪ್ರತಿಪಾದಕರು. *ಏಕಂ ಸತ್ ವಿಪ್ರಾ ಬಹುಧಾ ವದಂತಿ* ಇರುವುದು ಒಂದೇ *ಸತ್* . ಅದನ್ನೇ ಭಕ್ತರು ರಾಮ ಎನ್ನಲಿ, ಶಿವ ಎನ್ನಲಿ, ಶಕ್ತಿ ಎನ್ನಲಿ, ಗಣಪ ಎನ್ನಲಿ, ಯಾವ ಹೆಸರಿದ್ದರೂ ಶಂಕರಾಚಾರ್ಯರಿಗೆ ಫರಕ್ ಆಗುವುದಿಲ್ಲ. ಆ ಕಾರಣಕ್ಕಾಗಿಯೇ ಶಂಕರರು ಪಂಚಾಯತನ ಪೂಜೆಯನ್ನು ರೂಢಿಗೆ ತಂದಿದ್ದರು. ಎಲ್ಲರನ್ನೂ *ಒಂದು* ಗೂಡಿಸುವುದು ಶಂಕರರ ಉದ್ದೇಶವೇ ಹೊರತು ಹುಳುಕು ಹುಡುಕಿ ಒಡೆಯುವುದಲ್ಲ.


ಶಿವಾನಂದಲಹರಿಯ ಈ ಶ್ಲೋಕ ನೋಡಿ-

*ಮಾರ್ಗಾವರ್ತಿತ ಪಾದುಕಾ ಪಶುಪತೇರಂಗಸ್ಯ ಕೂರ್ಚಾಯತೇ*

*ಗಂಡೂಷಾಂಬುನಿಶೇಚನಂ ಪುರರಿಪೋರ್ದಿವ್ಯಾಭಿಷೇಕಾಯತೇ|*

*ಕಿಂಚಿದ್ಭಕ್ಷಿತಮಾಂಸಶೇಷಕವಲಂ ನವ್ಯೋಪಹಾರಾಯತೇ*

*ಭಕ್ತಿಃ ಕಿಂ ನ ಕರೋತ್ಯಹೋ ವನಚರೋ ಭಕ್ತಾವತಂಸಾಯತೇ||*

ಪಾದರಕ್ಷೆಯಿಂದ ಧೂಳು ತೊಡೆದ, ಬಾಯಿಂದ ನೀರು ತಂದು ಅಭಿಷೇಕ ಮಾಡಿದ, ತಿಂದುಳಿದ ಮಾಂಸವನ್ನೇ ನೈವೇದ್ಯವನ್ನಾಗಿ ಅರ್ಪಿಸಿದ ವನಚರನಾದ ಬೇಡರಕಣ್ಣಪ್ಪನು ಭಕ್ತಶ್ರೇಷ್ಠನಾದನು. ಹೇಗೆಂದರೆ ಭಕ್ತಿ! ಭಕ್ತನಲ್ಲಿ ಭಕ್ತಿಯನ್ನು ಕಂಡ ಯಾವ ದೇವನೂ ಭಕ್ತನ ಉಳಿದೆಲ್ಲ ವಿಷಯಗಳನ್ನು ಕ್ಷಮಿಸಿ ಭಕ್ತಿಯನ್ನು ಮಾತ್ರ ಸ್ವೀಕರಿಸುತ್ತಾನೆ.

ಇದೂ ಶಂಕರಾಚಾರ್ಯರ ಶ್ಲೋಕವೇ. 

ಹೌದು. ಧರ್ಮಶಾಸ್ತ್ರ ಇದೆ. ಅದು ಒಂದಿಷ್ಟು ಕಟುವಾಗಿಯೇ ಹೇಳುತ್ತದೆ. ಶಾಸ್ತ್ರದೃಷ್ಟಿಯಲ್ಲಿ ಹೇಳುವುದಾದರೆ - ಪ್ರತಿಷ್ಠಾಪನೆಯ ಯಜಮಾನ, ಗರ್ಭಗುಡಿಪ್ರವೇಶ ಇತ್ಯಾದಿಗಳಲ್ಲಿ ವಿಧಿ-ನಿಷೇಧಗಳಿವೆ. ಅಷ್ಟೇ ಏಕೆ ವಸ್ತ್ರಸಂಹಿತೆ ಕೂಡ ಇರಬಹುದು. ಆದರೆ ಔತ್ತರಾತ್ಯ ಹಾಗೂ ದಾಕ್ಷಿಣಾತ್ಯ ಪದ್ಧತಿಗಳಲ್ಲಿ ಇರುವ ವ್ಯತ್ಯಾಸ ಯಾತ್ರಿಕರಿಗೆ ಅರಿವಿಗೆ ಬಾರದ ವಿಷಯವೇನಲ್ಲ. ದಕ್ಷಿಣಭಾರತದಲ್ಲಿ ನಿಮ್ನವರ್ಗದವರಿಗೆ ಗರ್ಭಗುಡಿ ಪ್ರವೇಶವನ್ನು ತಡೆಯುವ ಧರ್ಮಶಾಸ್ತ್ರ ಉತ್ತರಭಾರತದಲ್ಲಿ ಸುಮನಿದ್ದುಬಿಡುತ್ತದೆ. ದಕ್ಷಿಣದಲ್ಲಿ ಮಡಿ- ಮೈಲಿಗೆಗಳ ಬಗ್ಗೆ ನಿಷ್ಟುರವಾಗಿರುವ ಧರ್ಮಶಾಸ್ತ್ರ ಉತ್ತರದಲ್ಲಿ ಅಂಗಿ ಧರಿಸಿ ಪೂಜೆ ಮಾಡಲು ಅನುಮತಿಸುತ್ತದೆ. ವೇದಗಳ ಅರ್ಥವನ್ನು ಅರಿತಿದ್ದ ವೈವಸ್ವತಮನು ಎಂಬ ರಾಜ ತನ್ನ ಆಡಳಿತದ ಅನುಕೂಲಕ್ಕಾಗಿ ಮಾಡಿಕೊಂಡ ಸಂವಿಧಾನವೇ ಮನುಸ್ಮೃತಿ. ಈ ಸ್ಮೃತಿಗಳೆಲ್ಲವೂ ಹೀಗೆಯೇ. ಆಯಾ ಕಾಲಘಟ್ಟದಲ್ಲಿ ರಾಜರು ಆಡಳಿತದ ಅನುಕೂಲಕ್ಕಾಗಿ ವೇದವಿದರಿಂದ ಬರೆಸಿಕೊಂಡ ಸಂವಿಧಾನಗಳೇ ಸ್ಮೃತಿಗಳು. ಈ ಸ್ಮೃತಿಗಳೇ ಧರ್ಮಶಾಸ್ತ್ರದ ಮೂಲಗ್ರಂಥಗಳು. ಹಾಗಾಗಿಯೇ ಒಂದು ಸ್ಮೃತಿಯಲ್ಲಿ ಉಕ್ತವಾದ ವಿಷಯಕ್ಕೂ ಇನ್ನೊಂದು ಸ್ಮೃತಿಯಲ್ಲಿ ಉಕ್ತವಾದ ವಿಷಯಕ್ಕೂ ವೈರುಧ್ಯ ಬರುವುದುಂಟು. ಅಷ್ಟೇ ಅಲ್ಲ ಕೆಲವೊಮ್ಮೆ ರಾಜಾಜ್ಞೆಯು ಧರ್ಮಶಾಸ್ತ್ರವನ್ನು ನಿಯಂತ್ರಿಸುವುದುಂಟು. ಅಂದರೆ ದೇಶ-ಕಾಲ ಭೇದವನ್ನು ಅನುಸರಿಸಿ ಧರ್ಮಶಾಸ್ತ್ರ ಹೊಂದಿಕೊಳ್ಳುತ್ತದೆ ಅಂತಾಯಿತಲ್ಲವೇ? ಅಂದಮೇಲೆ ಧಾರ್ಮಿಕನಾಗಿರುವ ವ್ಯಕ್ತಿ ಮುಂದಾಳುವಾಗಿರುವಾಗ ಅವನ ಮೇಲೆ ವಿಶ್ವಾಸವಿಟ್ಟು ಬೆನ್ನಿಗೆ ನಿಲ್ಲಬೇಕು ಎನ್ನುವುದೊಂದೇ ಧರ್ಮಶಾಸ್ತ್ರ ಎಂಬ ಅಭಿಪ್ರಾಯ ನನ್ನದು. ಸನ್ಯಾಸಿಗಳು ಎಲ್ಲವನ್ನೂ ಬಿಟ್ಟು, ಎಲ್ಲವನ್ನೂ ಮೀರಿ ಮುಂದಕ್ಕೆ ಹೋಗಿರುತ್ತಾರೆ ಅಂದಮೇಲೆ ಅವರ ಜಾತಿಯನ್ನು ಶೋಧನೆ ಮಾಡುವುದು ನ್ಯಾಯವಲ್ಲ ಎಂದು ನನ್ನ ಅನಿಸಿಕೆ. 


ಪೂರ್ವಪುಣ್ಯದಿಂದ ಒಬ್ಬ ವ್ಯಕ್ತಿ ಸನ್ಯಾಸಿಯಾಗಬಹುದು, ಶಂಕರಾಚಾರ್ಯಪೀಠದ ಅಧಿಪತಿಯೂ ಆಗಬಹುದು. ಕಾಲ ಕಳೆಯುತ್ತ ಅವರಿಗೆ ವಯಸ್ಸೂ ಆಗಬಹುದು. ಅದು ಮುಖ್ಯವಲ್ಲ. ಶಂಕರರ ತತ್ತ್ವಗಳನ್ನು ಎಷ್ಟು ಅರ್ಥಮಾಡಿಕೊಂಡಿದ್ದಾರೆ ಎಂಬುದು ಮಾತ್ರ ಮುಖ್ಯ. ಅಹಂಕಾರ ಮಮಕಾರ- ಷಡ್ವರ್ಗಗಳ ಮುಷ್ಟಿಯಿಂದ ಬಿಡಿಸಿಕೊಳ್ಳುವುದು ಶ್ರೇಯಸ್ಕರ ಎಂದಷ್ಟೇ ಹೇಳಿದರೆ ಸಾಕು. ನಮ್ಮ ದೌರ್ಬಲ್ಯದ ಪರಿಣಾಮ ದೇಶದ ಮೇಲೆ ಆಗುವಂತಿದ್ದರೆ ಸುಮ್ಮನಿರುವುದೇ ಒಳ್ಳೆಯ ಆಯ್ಕೆ. ಗುರುನಿಂದನೆಯ ದೋಷ ಬಂದಿದ್ದರೆ ಶಂಕರಾಚಾರ್ಯರೇ ನನ್ನನ್ನು ಕಾಪಾಡಲಿ.


ಭೌತಿಕವನ್ನು ಕುರಿತಾದ ವಿಷಯಗಳನ್ನು ಆಧಿಭೌತಿಕ ಎಂದು ಕರೆಯುತ್ತೇವೆ. ಪಂಚಭೂತಗಳು ಅಥವಾ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಾಣುವ ಜೀವಿಗಳನ್ನೂ ಸೇರಿದಂತೆ ಸಕಲ ಚರಾಚರಗಳನ್ನು ಭೂತ ಎಂಬ ಪದದಿಂದ ಹೇಳಲಾಗುತ್ತದೆ. ಕಾಣುತ್ತದೆಯಾದ್ದರಿಂದ, ಅನುಭವಕ್ಕೆ ಬರುತ್ತದೆಯಾದ್ದರಿಂದ ಇವು ಇವೆ ಎನ್ನುತ್ತೇವೆ. ಆದರೆ ತಾತ್ತ್ವಿಕವಾಗಿ ಅಥವಾ ಅದ್ವೈತಿಗಳು ಹೇಳುವಂತೆ ಪಾರಮಾರ್ಥಿಕವಾಗಿ ಈ ಕಾಣುವ ಜಗತ್ತು ಮಿಥ್ಯೆ. ಅಂದರೆ *ಇದೇ ಪರಮಸತ್ಯವಲ್ಲ* ಎಂದರ್ಥ. ಇದಕ್ಕೂ ಮೀರಿದ ಪರಮಸತ್ಯವೊಂದಿದೆ. *ಸತ್ಯಂ ಜ್ಞಾನಮನಂತಂ ಬ್ರಹ್ಮ* ಎಂದು ಉಪನಿಷತ್ತುಗಳು ವಿವರಿಸುವ ಬ್ರಹ್ಮವೊಂದೇ ಸತ್ಯ. *ಬ್ರಹ್ಮಸತ್ಯಂ ಜಗನ್ಮಿಥ್ಯಾ* ಎಂಬುದಕ್ಕೆ ಶಂಕರಾಚಾರ್ಯರು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತಾರೆ. ಸರಿ; ಕೃತಕವಾದ ಈ ಜಗತ್ತು ಮಿಥ್ಯ ಎಂದಾದಮೇಲೆ ಮಂದಿರವೂ ಮಿಥ್ಯೆಯೇ ಆಗಿರಬೇಕು, ರಾಮನೂ ಕೂಡ! ಇದು ತಾತ್ತ್ವಿಕವಾದ ವಿಷಯ. ಪರಮಾರ್ಥದ ಬಗ್ಗೆ ಮಾತನಾಡುವಾಗ ಒಪ್ಪೋಣ. ಆದರೆ ವ್ಯಾವಹಾರಿಕವಾದ ಜಗತ್ತು ಮಿಥ್ಯೆ ಇರಬಹುದು ಆದರೆ ಅಸತ್ಯವಲ್ಲ. ಜಗತ್ತಿಗೆ ವ್ಯಾವಹಾರಿಕ ಸತ್ಯತ್ವ ಇದೆ. ಈ ವಿಷಯವನ್ನು ನಿಮಗೆ ಗೊಂದಲ ಉಂಟುಮಾಡುವುದಕ್ಕಾಗಿ ಹೇಳಿಲ್ಲ. ತತ್ತ್ವ ಅಂತ ಒಂದು ಇರುತ್ತದೆ. ವ್ಯವಹಾರ ಅಂತ ಒಂದು ಇರುತ್ತದೆ. ಇವೆರಡನ್ನೂ ಮಿಶ್ರಮಾಡಿ ಅನೇಕರು ಜನರ ದಾರಿ ತಪ್ಪಿಸುತ್ತಾರೆ. ಸಮಾಜಕ್ಕೆ ಮಂದಿರ ಬೇಕು, ಶ್ರದ್ಧಾವಂತರಿಗೆ ಮಂದಿರ ಬೇಕು. "ಇದು ನನ್ನ ಅಪ್ಪನ ಕೋಟು" ಅಂತ ಮಗ ಜೋಪಾನ ಮಾಡುವುದಿಲ್ಲವೇ? ಇದು ನನ್ನ ರಾಮನ ನೆಲ, ಇದು ನನ್ನ ರಾಮನ ಆವಾಸ.. ಇತ್ಯಾದಿಗಳೇ ಭಕ್ತರ ಅಸ್ಮಿತೆ. ರಾಮ ಎಲ್ಲಕಡೆಯೂ ಇದ್ದಾನೆ ಎಂಬುದು ತಾತ್ತ್ವಿಕತೆ; ರಾಮ ಮಂದಿರದಲ್ಲೇ ಇದ್ದಾನೆ ಎಂಬುದು ಶ್ರದ್ಧೆ. ಇವೆರಡೂ ಸತ್ಯವೇ. ಮಹರ್ಷಿಗಳು ತತ್ತ್ವಜ್ಞಾನಿಗಳು ಎಲ್ಲಿ ಬೇಕಾದರೂ ರಾಮನನ್ನು ಕಂಡಾರು! ಆದರೆ ನನಗೆ ಆ ಯೋಗ್ಯತೆ ಇದೆಯಾ ಎಂದು ನಾವು ನೋಡಿಕೊಳ್ಳಬೇಕಲ್ಲವೇ? ಕೃಷ್ಣನಿಗೆ ಯೋಗ್ಯತೆ ಇದೆ ಭಗವದ್ಗೀತೆ ಹೇಳಿದ; ನಾನು ಭೂತ! (ಉಳಿದಿದ್ದು ವಾಕ್ಯಶೇಷ, ನಿಮಗೆ ಅರ್ಥವಾಗಿರತ್ತೆ ಬಿಡಿ)


ಆತ್ಮೀಯರೇ, ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಸ್ಥಾನದಲ್ಲಿ ರಾಮಮಂದಿರ ನಿರ್ಮಾಣವಾಗಿ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿದೆ. ಇದು ನಾವು ಜೀವಿಸಿರುವ ಕಾಲಘಟ್ಟದಲ್ಲಿ ನಡೆಯುತ್ತಿರುವುದು ನಮ್ಮೆಲ್ಲರ ಅನೇಕ ಜನ್ಮಗಳ ಪುಣ್ಯದ ಫಲ. ಈ ಕಾರಣಕ್ಕಾಗಿ ನಾವೆಲ್ಲ ಹೆಮ್ಮೆಪಡಬೇಕು ಮತ್ತು ನಮ್ಮಿಂದ ಸಾಧ್ಯವಿರುವ ಸೇವೆ ಸಲ್ಲಿಸಬೇಕು. ಕೊನೆಯ ಪಕ್ಷ ರಾಮತಾರಕ ಜಪ ಮಾಡಬಹುದಲ್ಲ. ಅಯೋಧ್ಯೆಯ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗುವುದು ಅಸಾಧ್ಯವಿರಬಹುದು. ಆದರೆ ನಮ್ಮ ನಮ್ಮ ಹೃದಯವೆಂಬ ಮಂದಿರದಲ್ಲಿ ಶ್ರೀರಾಮನನ್ನು ಅಷ್ಟಬಂಧಪೂರ್ವಕವಾಗಿ ಪ್ರತಿಷ್ಠಾಪನೆ ಮಾಡಿಕೊಳ್ಳುವುದು ಸಾಧ್ಯವಿದೆ. ನಂತರ ಮನೋಮಂದಿರದ ರಾಮನಿಗೆ ನಿತ್ಯಪೂಜೆ ಸಲ್ಲಲಿ.


- ವಿದ್ವಾನ್.ಮಂಜುನಾಥ. ಭಟ್ ಹುಲ್ಗಾನು

ಉಪನ್ಯಾಸಕರು, ಅದ್ವೈತ ವಿದ್ವಾಂಸರು.

ಶಿವಮೊಗ್ಗ.