🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಕಗ್ಗಸೌರಭ-11

 ಕಗ್ಗಸೌರಭ - 11


ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ ।

ಮೃತ್ಯು ಕುಣಿಯುತಲಿಹನು ಕೇಕೆಹಾಕುತಲಿ ॥

ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ ।

ಎತ್ತಲಿದಕೆಲ್ಲ ಕಡೆ? - ಮಂಕುತಿಮ್ಮ ॥ ೧೧ ॥

ವಿಶ್ವ ಮಹಾ ಯುದ್ಧ. ಇಡೀ ವಿಶ್ವವೇ ಅಲುಗಾಡುವಂಥ ಯುದ್ಧ. ಎಲ್ಲೆಲ್ಲೂ ರಕ್ತಪಾತ. ಎಲ್ಲೆಲ್ಲೂ ಯುದ್ಧದ ಕೂಗು. ಅದು ಈ ಭೂಮಿಗೆ ಆವರಿಸಿಕೊಂಡ ದುರ್ದೈವ. ಎಲ್ಲೆಲ್ಲೂ ಮೃತ್ಯುವಿನ ತಾಂಡವ. ಯುದ್ಧದಲ್ಲಿ, ತಂದೆಯನ್ನೂ, ಅಣ್ಣನನ್ನೋ, ಮಗನನ್ನೂ, ಮಿತ್ರನನ್ನೋ, ತಮ್ಮನನ್ನೋ, ಭೂಮಿಯನ್ನೋ, ಆ ಊರಿನ ಮಣ್ಣಿನ ಋಣವನ್ನೋ, ಕಳೆದುಕೊಂಡವರೆ ಬಹಳ ಜನ. ಕಳೆದುಕೊಂಡವರೆಲ್ಲರಿಗೂ ನೋವು. ಕಳೆದುಕೊಳ್ಳದವರಿಗೂ ಕಳೆದುಕೊಂಡವರ ನೋವಿಗಾಗಿ ಸಂತಾಪ. ಒಟ್ಟಾರೆ ಇಡೀ ಭೂಮಿಗೆ ಸೂತಕದ ಭಾವ. ಎಲ್ಲ ಕಡೆಯಿಂದಲೂ ಸಾವಿನ ನಷ್ಟದ ಸಮಾಚಾರ. ಪ್ರತಿನಿತ್ಯ ಈ ಸಮಾಚಾರಗಳನೆಲ್ಲ ಕೇಳಿ ಕೇಳಿ, ಪತ್ರಿಕೆಗಳಲ್ಲಿ ಓದಿ ಓದಿ ತಲೆ ಸುತ್ತುವಂತಾಗುತ್ತದೆ. ಇದಕ್ಕೆಲ್ಲ ಎಂದಿಗಾದರೂ ಕೊನೆಯುಂಟೆ ಎಂದು ಲೋಕ ಶಾಂತಿಗಾಗಿ ಮರುಗುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ

ನಿರೂಪಣೆ - ತಿಮ್ಮಣ್ಣ ಭಟ್, ಬೆಂಗಳೂರು.

ಪ್ರಸರಣ - ಶ್ರೀ ಸ್ವರ್ಣವಲ್ಲಿ ಭಕ್ತವೃಂದ.