ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ? ।
ನಾವರಿಯಲಾರದೆಲ್ಲದರೊಟ್ಟು ಹೆಸರೆ? ॥
ಕಾವನೊರ್ವನಿರಲ್ಕೆ ಜಗದ ಕಥಯೇಕಿಂತು? ।
ಸಾವು ಹುಟ್ಟುಗಳೆನು? - ಮಂಕುತಿಮ್ಮ ॥ ೫ ॥
ಈ ಜಗತ್ತಿನ ಅಥವಾ ಸೃಷ್ಟಿಯಲ್ಲಿ ನಡೆಯುವ ವಿಧ್ಯಮಾನಗಳನ್ನೆಲ್ಲ, ಅದರ ನಿಜ ಸ್ವರೂಪ ಮತ್ತು ಕಾರ್ಯ ವೈಖರಿ ಮತ್ತು ಆ ವಿಧ್ಯಮಾನಗಳಿಗೆ ಕಾರಣ ಮತ್ತು ಕಾರಕ ಯಾರು ಏನು ಅಂದು ಇಂದಿಗೂ ಮಾನವನಿಗೆ ಅರ್ಥೈಸಲಾಗಿಲ್ಲ. ವಿಜ್ಞಾನದ ಮೂಲಕ ಅವನು ಕಂಡು ಹಿಡಿದುಕೊಂಡಿರುವುದು ಕೇವಲ ಸಾವಿರಕ್ಕೆ ಒಂದು ಪಾಲೂ ಇಲ್ಲ. ಅಷ್ಟೇ ಅಲ್ಲ ನಿರಂತರ ಬದಲಾಗುತ್ತ ಹೊಸ ಹೊಸ ಆಯಾಮವನ್ನು ತಳೆಯುವ ಈ ಸೃಷ್ಟಿಯನ್ನು ಅರಿಯಲು ವಿಜ್ಞಾನದ ಪ್ರಯೋಗಗಳಿಂದ ಸಾಧ್ಯವೇ? ಹಾಗಾಗಿ ಅವನು ಗುಹ್ಯನು ಎನ್ನುವ ಅರ್ಥ.
ಹಾಗೆ, ಆ ದೇವರು ಈ ಪ್ರಪಂಚವನ್ನು ಮತ್ತು ಇಲ್ಲಿರುವ ಎಲ್ಲವನ್ನೂ ಸೃಷ್ಟಿಸಿ ಎಲ್ಲರನ್ನೂ ಕಾಪಾಡುವವನಾಗಿದ್ದರೆ, ಎಲ್ಲರೂ ಸಮಾನವಾಗಿ ಸುಖವಾಗಿರಬೇಕಲ್ಲವೆ? ಈ ಹುಟ್ಟು ಸಾವುಗಳೇಕೆ? ನೋವು ದುಃಖಗಳೇಕೆ ? ಮನುಷ್ಯ ಮನುಷ್ಯರಲ್ಲಿ ಇಷ್ಟೊಂದು ಬೇಧವೇಕೆ? ಆ ದೇವರು ಎಲ್ಲರನ್ನೂ ಕಾಯುವವನದರೆ ಎಲ್ಲರನ್ನು ಸಮಾನವಾಗಿ ಕಾಯಬೇಕಲ್ಲವೇ? ಈ ಸಾವು ನೋವುಗಳಿಗೇನು ಅರ್ಥ? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಸಾಮಾನ್ಯವಾಗಿ ಎಲ್ಲರಲ್ಲೂ ಅವರವರ ಜೀವನದ ಯಾವುದಾದರೂ ಘಳಿಗೆಯಲ್ಲಿ ಉದ್ಭವಿಸಿರಬಹುದು.
ನಿಜವ ತಿಳಿಯುವಲ್ಲಿ ಸಾರ್ಥಕತೆ ಇದೆ.
ನಿರೂಪಣೆ - ತಿಮ್ಮಣ್ಣ ಭಟ್, ಬೆಂಗಳೂರು.
ಸಂಗ್ರಹ - ಸ್ವರ್ಣವಲ್ಲಿ ಭಕ್ತವೃಂದ
.jpg)