🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಕಗ್ಗಸೌರಭ-9

 ಕಗ್ಗಸೌರಭ- ೯




ಏನು ಭೈರವಲೀಲೆಯೀ ವಿಶ್ವವಿಭ್ರಮಣೆ ।

ಏನು ಭೂತಗ್ರಾಮನರಡ್ತನೊನ್ಮಾದ ॥

ಏನಗ್ನಿ ಗೋಳಗಳು! ಏನಂತರಾಳಗಳು! ।

ಏನು ವಿಸ್ಮಯ ಸೃಷ್ಟಿ! - ಮಂಕುತಿಮ್ಮ ॥ ೯ ॥

ಏನಿದು ಭೈರವ ಲೀಲೆ. ಏನಿದು ಇಡೀ ವಿಶ್ವದ ಸುತ್ತಾಟ. ಏನಿದು ಪಂಚ ಮಹಾ ಭೂತಗಳ ಮತ್ತು ಆ ಭೂತಗಳ ವಾಸಸ್ಥಳವಾದ ಆ ಮಹಾ ಚೈತನ್ಯ ಮತ್ತು ಮತ್ತು ಆ ಚೈತನ್ಯದ ಉನ್ಮಾದಭರಿತ ನರ್ತನ.  ಏನಿದು ಅಗ್ನಿ ಗೋಳಗಳು ಈ ಸೃಷ್ಟಿಯ ಅಂತರಾಳ. ಆಹಾ ಎಂತಹ ಈ ವಿಸ್ಮಯ ಈ ಸೃಷ್ಟಿ. ಇದು ಈ ಕಗ್ಗದ ಅಂತರ್ಯದ ಭಾವ. 

ಸೌರವ್ಯೂಹಗಳು, ಕ್ಷೀರಪಥಗಳು, ಆಕಾಶಗಂಗೆಗಳು ಮತ್ತು ಇಡೀ ವಿಶ್ವ. ಈ ವಿಶ್ವದ ಅಂತರ್ಯದಲ್ಲಿ ನಡೆಯುವ ಅಗ್ನಿಸ್ಪೋಟಗಳು, ಹೊಸ ಹೊಸ ನಕ್ಷತ್ರಗಳ, ಗ್ರಹಗಳ ಹುಟ್ಟು, ಸಿಡಿತ, ಒಂದರೊಳಗೆ ಒಂದು ವಿಲೀನವಾಗುವ ಪ್ರಕ್ರಿಯೆ, ಇವೆಲ್ಲವನ್ನೂ ನಾವು ಕಾಣುವುದಿರಲಿ, ಊಹಿಸಲೂ ಅಸಾಧ್ಯವಾದ ರೂಪ.

ಇವುಗಳ ಮುಂದೆ ನಾವೆಷ್ಟರವರು? ನಮ್ಮ ಸಾಮರ್ಥ್ಯದ ಮಿತಿ ಏನು?  ನಾವು ಅಹಂಕಾರಪಡಲು ಏನಾದರೂ ಕಾರಣವಿದೆಯೇ? ಈ ವಿಸ್ಮಯಭರಿತ ಮತ್ತು ವಿಚಿತ್ರವಾದ ವಿಶ್ವ, ಅದರ ನಿಗೂಢತೆ ಮತ್ತು ಇದರ ಸೃಷ್ಟಿಕರ್ತನ ಸಾಮರ್ತ್ಯಗಳ ಬಗ್ಗೆ ಆಲೋಚಿಸುತ್ತಾ, ಅಧೈರ್ಯ ಪಡದೇ ಇದೇ ಅಂಶಗಳು ನಮ್ಮ ವಿಶ್ವಾಸ ವೃದ್ಧಿಗೆ ಕಾರಣವಾಗಲಿ.

ನಿರೂಪಣೆ - ತಿಮ್ಮಣ್ಣ ಭಟ್, ಬೆಂಗಳೂರು. 

ಪ್ರಸರಣ- ಶ್ರೀ ಸ್ವರ್ಣವಲ್ಲಿ ಭಕ್ತವೃಂದ