ಶಿವನು ಕೇವಲ ಶಿವನಲ್ಲ. ಶಿವನೇ ಸೃಷ್ಟಿಕರ್ತ ಬ್ರಹ್ಮನು, ಶಿವನೇ ಪಾಲಕ ಹರಿಯು, ಶಿವನೇ ಇಂದ್ರಾದಿ ದೇವನು. ಅಷ್ಟೇ ಯಾಕೇ ಶಿವನೇ ಜಗದ್ಯಂತ್ರದ ಪ್ರತಿಯೊಂದೂ ಕಣವು. ಇದನ್ನು ಸ್ವಲ್ಪ ವಿವರಿಸಿದರೆ ಅರ್ಥವಾಗಬಹುದು. ಆದಿಶಂಕರಾಚಾರ್ಯರು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಆ ಅದ್ವೈತ ತತ್ವವೇ ಸಕಲ ಜಗತ್ತಿನ ಪರಮಾರ್ಥವಾಗಿದೆ, ಅದೇ ಅದ್ವೈತ ಅಂತಿಮ ಸತ್ಯವಾಗಿದೆ. ಜಗದಾದಿಯಲ್ಲಿ ನಿರಾಕಾರ ಪರಬ್ರಹ್ಮ ಪರಮಾತ್ಮನು ತನ್ನ ಲೀಲಾನಾಟಕಕ್ಕೋಸ್ಕರ ಜಗತ್ಸೃಷ್ಟಿಯನ್ನು ಆರಂಭಿಸಿದನು. ತನ್ನ ನಿರಾಕಾರ ರೂಪಕ್ಕೆ ಸತ್ವಾಗುಣಗಳ ಉಪಾದಿಯನ್ನು ಹೊಂದಿ ಸಾಕಾರ ರೂಪದಲ್ಲಿ ಪ್ರಕಟಗೊಂಡನು. ತನ್ನಂತರದಲ್ಲಿ ತನ್ನನ್ನು ತಾನೇ ಎರಡಾಗಿ ವಿಭಜಿಸಿಕೊಂಡು ಪ್ರಕೃತಿ- ಪುರುಷ ರೂಪ ತಾಳಿದನು. ಈ ಪೃಕೃತಿ-ಪುರುಷ ರೂಪಗಳೇ ಸದಾಶಿವ ಹಾಗೂ ಆದಿಶಕ್ತಿ. ನಂತರದಲ್ಲಿ ಇದೇ ಸ್ವರೂಪಗಳು ಸತ್ವಾದಿ ಗುಣಗಳಿಗನುಸಾರವಾಗಿ ಸೃಷ್ಟಿಯ ಪ್ರತ್ಯೇಕ ಕಾರ್ಯಕ್ಕೋಸ್ಕರ ಮತ್ತೆ ಪುರುಷ ರೂಪವಾಗಿ ಜಗತ್ಸೃಷ್ಟಿಗಾಗಿ ಬ್ರಹ್ಮನಾಗಿ ಸತ್ವಗುಣದಿಂದ, ಜಗತ್ಪಾಲನೆಗಾಗಿ ವಿಷ್ಣುವಾಗಿ ರಜೋಗುಣದಿಂದ ಹಾಗೂ ಲಯಕಾರಕನಾಗಿ ರುದ್ರನಾಗಿ ತಮೋಗುಣಯುಕ್ತವಾಗಿ ಪ್ರಕಟವಾದರು. ಹಾಗೂ ಅವರ ಶಕ್ತಿ ಸ್ವರೂಪವಾಗಿ ಕ್ರಮವಾಗಿ ಸರಸ್ವತಿ, ಲಕ್ಷ್ಮಿ, ಪಾರ್ವತಿ ರೂಪತಾಳಿತು. ಹೀಗೆ ಪ್ರಕಟಗೊಂಡ ರೂಪಗಳಿಂದ ಪ್ರಾರಂಭಿಸಿ ಇಂದ್ರಾದಿ ದೇವತೆಗಳು ಸತ್ವಗುಣಗಳಿಂದಲೂ, ಅಸುರಾದಿಗಳು ತಮೋಗುಣಯುಕ್ತರಾಗಿಯೂ ಜನಿಸಿದರು. ಎಲ್ಲಾಗುಣಗಳಿಂದ ಮಾನವನ ಜನನವಾಯಿತು. ಹೀಗೆ ಆ ಪರಬ್ರಹ್ಮ ಪರಮಾತ್ಮನ ಅಂಶದಿಂದಲೇ ಜಗತ್ತಿನ ಅಣು, ತೃಣ, ಕಾಷ್ಠಾದಿಗಳು, ಸಕಲ ಚರಾಚರಗಳೂ ಸೃಷ್ಟಿಯಾದವು. ಹೇಗೆ ಅಗ್ನಿಯಿಂದ ಹೊರಡುವ ಜ್ವಾಲೆಗಳು ಹಾಗೂ ಜ್ವಾಲೆಗಳಿಂದ ಹೊರಡುವ ಕಿಡಿಗಳೂ ಅಗ್ನಿಯ ಅಂಶವಾಗಿರುವುದೋ ಹಾಗೆಯೇ ಜಗತ್ತಿನ ಪ್ರತಿಯೊಂದೂ ಅಣುವೂ ಆ ಪರಬ್ರಹ್ಮ ಪರಮಾತ್ಮನ ಅಂಶವೇ ಆಗಿದೆ.
ಹೀಗೆ ನಮ್ಮ ಭಕ್ತಿಗನುಗುಣವಾಗಿ ಬೇರೆ ಬೇರೆ ದೇವತೆಗಳನ್ನು ನಮ್ಮ ಇಷ್ಟಾರ್ಥದಂತೆ ಆರಾಧಿಸುತ್ತೇವೆ. ಪ್ರತಿಯೊಂದು ದೇವತೆಗಳ ಹಬ್ಬಗಳನ್ನು ಶದ್ಧಾ-ಭಕ್ತಿಯಿಂದ ಆಚರಿಸುತ್ತೇವೆ. ಆದರೆ ಆ ಎಲ್ಲ ದೇವತೆಗಳ ಮೂಲ ಸ್ವರೂಪನ ಆರಾಧನೆ ಹೇಗೆ ಮಾಡುತ್ತೇವೆ, ಯಾವ ದಿನ ಮಾಡುತ್ತೇವೆ, ಅದರ ವಿಧಾನಗಳೇನು ತಿಳಿದಿದೆಯೇ. ಹೌದು ಈ ಲೇಖನದ ಮೂಲ ಮೂಲ ವಿಷಯ ಅದೇ ಆಗಿದೆ. ಮಾಘ ಕೃಷ್ಣ ಚತುರ್ದಶಿಯು ಆ ಪರಬ್ರಹ್ಮ ಪರಮಾತ್ಮನ ಆರಾಧನೆಯ ದಿನವಾಗಿದೆ. ಆ ದಿನ ನಾವು ಶಿವರಾತ್ರಿ ಎಂಬುದಾಗಿ ಆಚರಿಸುತ್ತೇವೆ.
ಶ್ರೂಯತಾಂ ಧರ್ಮಸರ್ವಸ್ವಂ ಶಿವರಾತ್ರೌ ಶಿವಾರ್ಚನಂ ವ್ರಲಗ್ನವಿಧಾನೇನ ಸ್ವರ್ಗಂ ಪುಣ್ಯೇನಕರ್ಮಣಾ||
ಶಿವರಾತ್ರಿಯ ದಿನ ವಿಧಾನೋಕ್ತವಾಗಿ ಶಿವಾರಾಧನೆಯನ್ನು ಮಾಡಿದರೆ ಆ ಒಂದು ಪುಣ್ಯ ಫಲದಿಂದ ಸ್ವರ್ಗ (ಮೋಕ್ಷ) ಪ್ರಾಪ್ತವಾಗುವುದಲ್ಲದೇ ಇಹ ಜನ್ಮದಲ್ಲಿ ಇಷ್ಟಾರ್ಥಗಳನ್ನು ಪಡೆಯಲು ಸಾಧ್ಯ. ಹಾಗಾದರೆ ಆ ಇಷ್ಟಾರ್ಥ ಪ್ರದವಾದ ವ್ರತದ ವಿಧಾನಗಳೇನು, ಯಾವ ರೂಪದಲ್ಲಿ ಶಿವನನ್ನು ಪೂಜಿಸಬೇಕು, ಯಾವ ಯಾವ ರೂಪದಲ್ಲಿ ಪೂಜಿಸಿದರೆ ಏನು ಫಲ ಎಂಬುದನ್ನು ತಿಳಿಯೋಣ.
ಚತುರ್ದಶ್ಯಾಂ ನಿರಾಹಾರೋ ಭೂತ್ವಾಶಂಭೋ ಪರೇಹನಿ| ಭೋಕ್ಷಯೇsಹಂ ಭುಕ್ತಿಮುಕ್ತ್ಯರ್ಥಂ ಶರಣಂ ಮೇ ಭವೇಶ್ವರ||
ಚತುರ್ದಶಿಯ ದಿನದಂದು ನಿರಾಹಾರನಾಗಿ ಸದಾಶಿವನ ಪೂಜೆಯನ್ನು ಮಾಡಬೇಕು. ಸಾಯಂಕಾಲದಲ್ಲಿ ಕಪ್ಪು ಎಳ್ಳು ಸೇರಿಸಿದ ನೀರಿನಿಂದ ಸ್ನಾನ ಮಾಡಿ ಭಸ್ಮ ತ್ರಿಪುಂಡ್ರ, ರುದ್ರಾಕ್ಷಗಳನ್ನು ಧರಿಸಿ ಮುಸ್ಸಂಜೆಯಿಂದ ಶಿವ ಪೂಜೆಯನ್ನಾರಂಭಿಸಬೇಕು. ಶಿವನಿಗೆ ಯಾಮಪೂಜೆಯು ಶ್ರೇಷ್ಠವಾದದ್ದು. ಹಿಂದಿನ ದಿನ ಸೂರ್ಯಾಸ್ತದಿಂದಾರಂಭಿಸಿ ಮರುದಿನ ಸೂರ್ಯೋದಯದವರೆಗೆ ನಾಲ್ಕು ಯಾಮಗಳು. ಪ್ರತಿ ಯಾಮದಲ್ಲೂ ಅರ್ಘ್ಯ, ಪಾದ್ಯಾದಿಗಳಿಂದೊಳಗೊಂಡ ಉಪಚಾರ ಪೂಜೆಗಳನ್ನು ಮಾಡಬೇಕು. ಶತಾವರ್ತಿ, ಏಕಾದಶಾವರ್ತಿ ಅಥವಾ ಕನಿಷ್ಠಪಕ್ಷ ಒಂದಾವರ್ತಿಯಾದರೂ ರುದ್ರ ನಮಕ-ಚಮಕ ಮಂತ್ರಗಳಿಂದ ಅಭಿಷೇಕವನ್ನು ಮಾಡಬೇಕು. ಧೂಪ-ದೀಪ, ನೈವೇದ್ಯಾದಿಗಳನ್ನು ಮಾಡಬೇಕು. ಪ್ರಾರ್ಥನಾಪೂರ್ವಕ ಪತ್ರ-ಪುಷ್ಪವನ್ನು ಅರ್ಪಿಸಿ ವ್ರತಾರ್ಘ್ಯವನ್ನು ಬಿಡಬೇಕು. ಶಿವನಿಗೆ ದತ್ತೂರ, ಕರವೀರ ಹಾಗೂ ಬಿಲ್ವಪತ್ರೆಯು ಶ್ರೇಷ್ಠವು. ಸಹಸ್ರನಾಮಾಷ್ಟೋತ್ತರಗಳಿಗೆ ಬಿಲ್ವಾರ್ಚನೆ ಮಾಡಬೇಕು. ಹೀಗೆ ರಾತ್ರಿಯೆಲ್ಲ ಜಾಗರಣ ಮಾಡಿ ಪ್ರಾತಃಕಾಲದಲ್ಲಿ ಸ್ನಾನ ಮಾಡಿ ಪುನಃ ಶಿವನನ್ನು ಪೂಜಿಸಬೇಕು. ನಂತರದಲ್ಲಿ ಹನ್ನೆರಡು ಅಥವಾ ಕನಿಷ್ಠ ಪಕ್ಷ ಒಬ್ಬ ಸದ್ಬ್ರಾಹ್ಮಣನಿಗಾದರೂ ದಾನಗಳನ್ನು ಕೊಟ್ಟು, ಸಂತರ್ಪಣೆ ಮಾಡಿ ವ್ರತ ಸಮಾಪ್ತಿ ಮಾಡಬೇಕು.
ಮೃಣ್ಮಯ ಅಥವಾ ಪಾರ್ಥಿವ ಲಿಂಗ ಪೂಜೆ ಮಾಡುವುದಾದಲ್ಲಿ ಶುಭ್ರವಾದ ಮಣ್ಣನ್ನು ತಂದು ಗಾಳಿಸಿ ಲಿಂಗ ಮಾಡಬೇಕು. ಆ ಲಿಂಗವು ಎಂಭತ್ತು ಗುಂಜಿ ಪ್ರಮಾಣಕ್ಕಿಂತ ಕಡಿಮೆಯಾಗಬಾರದು.ಅಂದರೆ "ಅಂಗುಷ್ಠಮಾನಾದಧಿಕಂ ವಿತಸ್ತ್ಯವಧಿ ಸುಂದರಂ| ಪಾರ್ಥಿವಂ ರಚಯೇಲ್ಲಿಂಗಂ ನ ನ್ಯೂನಂ ನಾಧಿಕಂ ಚತತ್|| ಮಾಡಿದ ಲಿಂಗವು ಅಂಗುಷ್ಠ ಪ್ರಮಾಣಕ್ಕಿಂತ ಚಿಕ್ಕದೂ-ದೊಡ್ಡದೂ ಆಗಿರಬಾರದೆಂದರ್ಥ.
"ಆಯುಷ್ಮಾನ್ ಬಲವಾನ್ ಶ್ರೀಮಾನ್ ಪುತ್ರವಾನ್ ಧನವಾನ್ ಸುಖೀ| ವರಮಿಷ್ಟಂ ಲಭೇಲ್ಲಿಂಗಂ ಪಾರ್ಥಿವಂ ಯಃ ಸಮಾಚರೇತ್|| ಅಂದರೆ ಪಾರ್ಥಿವ ಲಿಂಗದ ಪೂಜೆ ಮಾಡುವುದರೊಂದ ಆಯುಷ್ಯವಂತರೂ, ಬಲಯುತರೂ, ಶ್ರೀಮಂತರೂ, ಪುತ್ರಪ್ರಾಪ್ತಿಯೂ, ಧನವಂತರೂ, ಸುಖಿಗಳೂ ಆಗುವುದಲ್ಲದೆ ಇಚ್ಚಿಸಿದ ಫಲವನ್ನು ಪಡೆಯಬಹುದಾಗಿದೆ. ಮೃತ್ತಿಕಾಲಿಂಗದಂತೆ ಬಾಣಲಿಂಗವೂ ಶ್ರೇಷ್ಠವಾದದ್ದು. ಏಳುಬಾರಿ ಲಿಂಗವನ್ನು ತೂಕ ಮಾಡಿದಾಗಲೂ ಪ್ರತಿಬಾರಿಯೂ ಅದರ ಭಾರವು ಹೆಚ್ಚಾಗುತ್ತದೆ ಹೊರತು ಸಮನಾಗಿರುವುದಿಲ್ಲ, ಇದು ಉತ್ತಮ ಬಾಣ ಲಿಂಗದ ವಿಶೇಷ ಲಕ್ಷಣವಾಗಿದೆ. ಈ ಲಕ್ಷಣಗಳಿಂದೊಡಗೂಡಿದ ಲಿಂಗವನ್ನು ನರ್ಮದಾ ಬಾಣಲಿಂಗ ಎನ್ನುತ್ತಾರೆ. ಇನ್ನು ಸುವರ್ಣ-ರಜತಾದಿ ಲಿಂಗಗಳಿಗೆ ಪಂಚಸೂತ್ರಿ ಪರೀಕ್ಷಾ ಕ್ರಮವಿದೆ. ಆ ಕ್ರಮವಾಗಿ ಪರೀಕ್ಷಿಸಿಯೇ ಪೂಜಿಸಬೇಕು. ಆದರೆ "ದ್ವಾಪರೇ ಪಾದರಂ ಶ್ರೇಷ್ಠಂ ಮೃಣ್ಮಯಂತು ಕಲೌಯುಗೇ" ಈ ವಚನದಂತೆ ಕಲಿಯುಗದಲ್ಲಿ ಪಾರ್ಥಿವ ಲಿಂಗದ ಪೂಜೆ ಶ್ರೇಷ್ಠವಾದದ್ದು. ಸಹಸ್ರಸಂಖ್ಯೆಯಲ್ಲಿ ಮೃಣ್ಮಯ ಲಿಂಗವನ್ನು ಪೂಜಿಸುವ ವಿಶೇಷ ಕ್ರಮವೂ ಒಂದಿದೆ.
ಇನ್ನು ಲಿಂಗ ಭೇದದ ಪಲ ವಿಶೇಷಗಳನ್ನು ನೋಡುವುದಾದರೆ ವಜ್ರಲಿಂಗದಿಂದ ಆಯುಷ್ಯ ಪ್ರಾಪ್ತವಾಗುವುದು. ಮುತ್ತಿನ ಲಿಂಗದಿಂದ ರೋಗ ನಾಶವು. ವೈಢೂರ್ಯ ಲಿಂಗದಿಂದ ಶತ್ರುನಾಶ. ಐಶ್ವರ್ಯ ಪ್ರಾಪ್ತಿಗಾಗಿ ಪದ್ಮರಾಗ ಲಿಂಗ. ಪುಷ್ಯರಾಗದಿಂದ ಸುಖ, ಇಂದ್ರನೀಲದಿಂದ, ಯಶಸ್ಸು, ಪಚ್ಚೆಯಿಂದ ಪುಷ್ಟಿ ಪ್ರಾಪ್ತಿಯಾದರೆ ಸ್ಪಟಿಕಲಿಂಗದಿಂದ ಸಕಲ ಕಾಮನೆಗಳೂ ಈಡೇರುತ್ತವೆ. ಬೆಳ್ಳಿಯಿಂದ ರಾಜ್ಯಪ್ರಾಪ್ತಿ ಹಾಗೂ ಪಿತೃಮುಕ್ತಿಯ ಫಲವನ್ನು ಹೇಳಲಾಗಿದೆ. ಬಂಗಾರದ ಲಿಂಗದಿಂದ ಸತ್ಯಲೋಕ ಪ್ರಾಪ್ತಿ ಹಾಗೂ ಸ್ಥಿರ ಲಕ್ಷ್ಮೀ, ತಾಮ್ರದಿಂದ ಪುಷ್ಟಿ ಮತ್ತು ಆಯುಷ್ಯ, ಹಿತ್ತಾಳೆಯಿಂದ ತುಷ್ಟಿ, ಕಂಚಿನಿಂದ ಕೀರ್ತಿ, ಲೋಹದಿಂದ ಶತ್ರುನಾಶ, ಸೀಸದಿಂದ ಆಯುಷ್ಯ, ಗಂಧದಿಂದ ಸೌಭಾಗ್ಯ, ಪಿಷ್ಟ(ಹಿಟ್ಟು) ಲಿಂಗದಿಂದ ಪುಷ್ಟಿ, ರೋಗನಾಶ ಮತ್ತು ಸುಖ ಪ್ರಾಪ್ತಿಯಾಗುತ್ತದೆ. ಉದ್ದಿನ ಹಿಟ್ಟಿನ ಲಿಂಗದಿಂದ ಸ್ತ್ರೀ ಲಾಭ, ಬೆಣ್ಣೆಯ ಲಿಂಗದಿಂದ ಸುಖ, ಗೋಮಯ ಲಿಂಗದಿಂದ ರೋಗನಾಶ, ಬೆಲ್ಲದ ಲಿಂಗದಿಂದ ಅನ್ನಾಹಾರ ಪ್ರಾಪ್ತಿ, ಬಿದಿರಿನ ಮೊಳಕೆಯ ಲಿಂಗದಿಂದ ವಂಶವೃದ್ಧಿ ಹೀಗೆಲ್ಲ ಪ್ರತ್ಯೇಕ ಪಲಗಳನ್ನು ಹೇಳಿದರೂ ಸಹ ಪರದಲ್ಲಿ ಮೋಕ್ಷಪ್ರಾಪ್ತಿಯೆಂದು ಹೇಳಲಾಗುತ್ತದೆ. ಅಲ್ಲದೆ ನಾವು ಗಮನಿಸಬೇಕಾದದ್ದೆಂದರೆ ಜಗದ್ವಾಪಕನಾದ ಪರಶಿವನನ್ನು ಸಕಲ ವಸ್ತುಗಳಲ್ಲಿಯೂ ಆರಾಧಿಸಬಹುದು. ಅಂದರೆ ಜಗತ್ತಿನ ಪ್ರತಿಯೊಂದು ಕಣವೂ ಪರಮಾತ್ಮನ ಅಂಶವೇ ಆಗಿದೆ.
ಪ್ರತಿ ತಿಂಗಳ ಕೃಷ್ಣ ಚತುರ್ದಶಿಯಂದು ಮಾಸ ಶಿವರಾತ್ರಿಯನ್ನು ಆಚರಿಸುವ ಕ್ರಮವೂ ಇದೆ. ಇದು ಕಾಮ್ಯ ಶಿವರಾತ್ರಿ ಎಂದು ಕರೆಯಲ್ಪಡುತ್ತದೆ. ಮನೆಯಲ್ಲಿ ಎರಡು ಲಿಂಗವನ್ನು ಪೂಜಿಸಬಾರದು. ಸ್ತ್ರೀಯರು ಬಾಣಲಿಂಗವನ್ನು ಸ್ಪರ್ಶಿಸಬಾರದು. ಶಿವನಿರ್ಮಾಲ್ಯವಾದ ಪತ್ರ, ಪುಷ್ಪ, ಫಲ, ಜಲಗಳು ಗ್ರಾಹ್ಯವಲ್ಲ. ಶಿವ ನೈವೇದ್ಯವನ್ನು ಭಕ್ಷಿಸಿದರೆ ಚಾಂದ್ರಾಯಣ ಹಾಗೂ ಸಾಂತಪನ ಕೃಚ್ಛ್ರವನ್ನು ಆಚರಿಸಬೇಕು. ಆದರೂ ಅವು ಶಾಲಿಗ್ರಾಮ ಸಂಪರ್ಕದಿಂದ ಗ್ರಾಹ್ಯವಾಗುತ್ತದೆ. ಜ್ಯೋತಿರ್ಲಿಂಗ, ಸ್ವಯಂಭೂಲಿಂಗ ಹಾಗೂ ಸಿದ್ಧಪುರುಷರು ಸ್ಥಾಪಿಸಿದ ಲಿಂಗಗಳಿಗೆ ಈ ಅಗ್ರಾಹ್ಯ ದೋಷವಿರುವುದಿಲ್ಲ. ಭಸ್ಮ, ರುದ್ರಾಕ್ಷಿ ಧಾರಣೆಯಿಲ್ಲದೆ ಮಾಡಿದ ಶಿವಪೂಜೆಯು ನಿಷ್ಫಲವು. ಶಿವಲಿಂಗಕ್ಕೆ ಕೈಗಾಣದಿಂದ ತೆಗೆದ ಎಳ್ಳೆಣ್ಣೆಯಿಂದ ಇಪ್ಪತ್ತೈದು ಫಲ ಪ್ರಮಾಣದಲ್ಲಿ ಅಭ್ಯಂಗವನ್ನು ಮಾಡಬೇಕು, ನೂರು ಫಲ ಪ್ರಮಾಣದಿಂದ ನೀರಿನ ಅಭಿಷೇಕ, ಮಹಾಭಿಷೇಕವು ಎರಡುಸಾವಿರ ಫಲ ಜಲಪ್ರಮಾಣವಾಗಿದೆ. ಶಿವನಿಗೆ ಉಷ್ಣೋದಕ ಹಾಗೂ ಶಿತೋದಕದಿಂದ ಅಭಿಷೇಕ ಮಾಡಬಹುದು. ಒಟ್ಟಿನಲ್ಲಿ ಶಿವಾರ್ಚನೆಯಿಂದಲೇ ಸಕಲ ದೇವತೆಗಳ ಪೂಜಾ ಫಲಗಳೂ ದೊರಕುತ್ತವೆ, ಸಕಲ ಇಷ್ಟಾರ್ಥಗಳೂ ಸಿದ್ಧಿಸುತ್ತವೆ.
ಧ್ಯಾಯೇನ್ನಿತ್ಯಂ ಮಹೇಶಂ ರಜತಗಿರಿನಿಭಂ ಚಾರು ಚಂದ್ರಾವತಂಸಂ ರತ್ನಾಕಲ್ಪೋಜ್ವಲಾಂಗಂ ಪರಶುಮೃಗವರಾಭೀತಿಹಸ್ತಂ ಪ್ರಸನ್ನಮ್|
ಪದ್ಮಾಸೀನಂ ಸಮಂತಾತ್ ಸ್ತುತಮಮರಗಣೈರ್ವ್ಯಾಘ್ರಕೃತ್ತಿಂ ವಸಾನಂ ವಿಶ್ವಾದ್ಯಂ ವಿಶ್ವವಂದ್ಯಂ ನಿಖಿಲಭಯಹರಂ ಪಂಚವಕ್ತ್ರಂ ತ್ರಿಣೇತ್ರಂ||
ಲೇಖನ- ಶ್ರೀ ಸುಬ್ರಹ್ಮಣ್ಯ ಜೋಶಿ ಕೋಡಿಗಾರ
ಪ್ರಸರಣ - ಶ್ರೀ ಸ್ವರ್ಣವಲ್ಲೀ ಭಕ್ತವೃಂದ.
ಚಿತ್ರ - ಗೂಗಲ್
