ಮಾನವರೋ ದಾನವರೋ ಭೂಮಾತೆಯ ತಣಿಸೆ ।
ಶೋಣಿತವನೆರೆಯುವರು ಬಾಷ್ಪ ಸಲುವುದಿರೆ? ॥
ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ ।
ಸೌನಿಕನ ಕಟ್ಟೆಯೇಂ? - ಮಂಕುತಿಮ್ಮ ॥ ೧೨ ।।
ಇವರೇನು ಮನುಷ್ಯರೋ ಅಥವಾ ರಾಕ್ಷಸರೋ? ಈ ಭೂಮಾತೆಯನು ತಣಿಸಲು ಅಂದರೆ ದಾಹವಿಂಗಿಸಲು ಕಣ್ಣೇರು ಸುರಿಸುವಬದಲು ರಕ್ತವನ್ನು ಸುರಿಸಿಹರಲ್ಲ! ಈ ಪ್ರಪಂಚದಲ್ಲಿನ ಹಗೆ ಮತ್ತು ಹೊಗೆಗಳನ್ನು ನೋಡಿದರೆ ಇಡೀ ಪ್ರಪಂಚವೇ ಕಟುಕನ ಜಗುಲಿಯಂತಿದೆ
ಅಂದಿನ ಪ್ರಪಂಚ ಯುದ್ಧ ಹಾಗೂ ಜಗತ್ತಿನ ಒಟ್ಟೂ ಇತಿಹಾಸ ಗಮನಿಸಿದರೆ ತಿಳಿಯುವ ಕುತೂಹಲಕಾರಿ ಅಂಶವೆಂದರೆ...
ಭಾರತವು ಯಾವುದೇ ಅನ್ಯ ದೇಶದಮೇಲೆ ದಾಳಿ ಮಾಡಿದ್ದನ್ನು ಯಾವುದಾದರೂ ಪುಸ್ತಕದಲ್ಲಿ ಕಂಡಿದ್ದೀರಾ? ಅಖಂಡವಾಗಿದ್ದ ಭಾರತ ೨೦೦ ವರ್ಷಗಳಲ್ಲಿ ತುಂಡು ತುಂಡಾಗಿ ಹರಿದು ಹಂಚಿಹೋಗಿದೆ. ಅಹಂಕಾರ ದುರಾಸೆ ಈ ಎಲ್ಲ ಯುದ್ಧಗಳಿಗೂ ಕಾರಣವಾಗಿತ್ತು. ಈ ಜಗತ್ತಿನಲ್ಲಿ ಮಾನವರು ಸುಸಂಸ್ಕೃತ ಪ್ರಾಣಿಗಳು. ಅನ್ಯ ಪ್ರಾಣಿಗಳಿಗಿಂತ ಭಿನ್ನ. ಮಾನವತೆಯಿಂದ ತನ್ನ ಜೀವನವನ್ನು ಮತ್ತು ಅನ್ಯರ ಜೀವನವನ್ನೂ ಸಹ ಸುಂದರವಾಗಿ ರೂಪಿಸಿಕೊಳ್ಳಬಲ್ಲ ಶಕ್ತಿ ಅವನಿಗೆ ಇದೆ. ಆದರೆ ಅಹಂಕಾರದಿಂದ ತನ್ನ ಬುಡಕ್ಕೆ ತಾನೇ ಕೊಳ್ಳಿ ಇಟ್ಟುಕೊಂಡು ಅನ್ಯರನೂ ಸುಡುವ ಈ ದಾನವೀ ಅಥವಾ ಪೈಶಾಚಿಕ ಪ್ರವೃತ್ತಿ ಏಕೆ?ದರಣಿ ಸಸ್ಯಶ್ಯಾಮಲವಾಗಿರಬೇಕಾದರೆ, ನೀರು ಮತ್ತು ಶ್ರಮದ ಅವಶ್ಯಕತೆ ಇದೆ. ಅದನ್ನುಳಿದು ದ್ವೇಷದ ಬೀಜ ಮತ್ತು ರಕ್ತದ ಸಿಂಚನವಾದರೆ, ಬೆಳೆ ಬೆಳೆದೀತೆ? ಹೊಟ್ಟೆ ತುಂಬೀತೆ? ಹಗೆಯ ಹೊಗೆಯಿಂದ ಉಸಿರು ಕಟ್ಟುತ್ತದೆಯೇ ಹೊರತು ಜೀವ ಪೋಷಣೆಯಾಗದು. ಜೀವನದ ನಡೆಯದು. ಈ ಪ್ರಪಂಚದ ಗತಿಯೇನು? ಅದು ಹಾಗಾದರೆ ಇಡೀ ಪ್ರಪಂಚವೇ ಕಟುಕನ ಜಗಲಿಯಂತಾಗುತ್ತದೆ ಅಲ್ಲವೆ? ಅಂಥಹ ಭಾವಗಳನ್ನೇ ಮಾನ್ಯ ಶ್ರೀ ಗುಂಡಪ್ಪನವರು ವ್ಯಕ್ತ ಪಡಿಸುತ್ತಾರೆ ಈ ಕಗ್ಗದಲ್ಲಿ. ಒಂದು ಸಣ್ಣ ಬೀದಿ ಜಗಳ ದಿಂದ ಹಿಡಿದು ಒಂದು ಮಹಾ ಪ್ರಪಂಚ ಯುದ್ಧಕ್ಕೂ ಮಾನವತೆಯ ಕೊರತೆ ಮತ್ತು ಅಹಂಕಾರಭರಿತ ದಾನವತೆಯೇ ಕಾರಣ. ದ್ವೇಷವೇ ಕಾರಣ ಇದರಿಂದ ನಾಶವೇ ಹೊರತು ಬಾಳು ಇಲ್ಲ ಎಂದು ನಾವೂ ಸಹ ಅರಿತು ನಮ್ಮ ನಮ್ಮಲ್ಲಿ ಇರುವ ಅಂತಹ ವಿನಾಶಕಾರಿ ಭಾವಗಳನ್ನು ತೊಡೆದು, ಈ ಇಡೀ ಜಗತ್ತನ್ನು ಸುಂದರ ತಾಣವನ್ನಾಗಿ ಪರಿವರ್ತಿಸಲು ಪ್ರಯತ್ನಿಸುವ ಅಗತ್ಯವಿದೆ ಅಲ್ಲವೇ??
ನಿರೂಪಣೆ - ತಿಮ್ಮಣ್ಣ ಭಟ್, ಬೆಂಗಳೂರು.
ಪ್ರಸರಣ - ಶ್ರೀ ಸ್ವರ್ಣವಲ್ಲಿ ಭಕ್ತವೃಂದ.
.jpg)