ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು ।
ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು ॥
ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು ।
ಬಂದುದೀ ವೈಷಮ್ಯ? - ಮಂಕುತಿಮ್ಮ ॥ ೧೪ ॥
ಸಕಲ ಜೀವಿ ಸಂಕುಲಕ್ಕೂ ಆಕಾಶ ಒಂದೇ. ಇರುವ ಭೂಮಿಯೂ ಒಂದೇ, ಎಲ್ಲರೂ ತಿನ್ನುವುದು ಒಂದೇ ರೀತಿಯ ಆಹಾರ, ಕುಡಿಯುವ ನೀರಿಗೂ ಒಂದೇ ಮೂಲ, ಹಾಗಿದ್ದರೂ ಏಕೆ ಈ ವೈಷಮ್ಯ, ಈ ದ್ವೇಷ ಎಂಬ ಪ್ರಶ್ನೆ. ನಾವು ಮಾಡುವ ಕೆಲಸ, ವಸ್ತು, ವ್ಯಕ್ತಿ, ವಿಷಯಗಳನ್ನು ಬಯಸುವಾಗ, ನಮ್ಮ ಮಿತಿಗಳನ್ನು ಅರಿತುಕೊಂಡರೆ ಸುಖ ಇಲ್ಲದಿದ್ದರೆ? ಇಲ್ಲದಿದ್ದರೆ, ನಮಗೆ ಸಿಗಲಿಲ್ಲವೆಂದು ಕೋಪ, ನಮಗಿಂತ ಪರರಿಗೆ ಅಧಿಕವಾಗಿ ಸಿಕ್ಕಿದೆ ಎಂದು ಅಸೂಯೆ, ಸಿಕ್ಕರೆ ಮತ್ತಷ್ಟರ ಲೋಭ, ಅಧಿಕವಾಗಿ ಸಿಕ್ಕರೆ ಮದ, ಸಿಕ್ಕದ್ದು ನನ್ನಲ್ಲೇ ಇರಬೇಕೆನ್ನುವ ಮೋಹ ಹೇಗೆ ಎಲ್ಲವೂ ಅಂಟಿಕೊಳ್ಳುತ್ತದೆ. ಜೀವನವೇ ನರಕವಾಗುತ್ತದೆ .ಒಂದೇ ಭೂಮಿ ಒಂದೇ ಆಕಾಶ ಈ ಭೂಮ್ಯಾಕಾಶಗಳ ಸಂಬಂಧವನ್ನು ಎಲ್ಲರೂ ಒಂದೇ ರೀತಿಯಲ್ಲಿ ಹೊಂದಿರುವಾಗ ಏಕೆ ಈ ವೈಷಮ್ಯವೆಂದರೆ, ಜಾತಿ, ಮತ, ಭಾಷೆ, ಪ್ರಾಂತ, ದೇಶಗಳ ಎಲ್ಲೆಗಳನ್ನು ಹಾಕಿ ಕೊಂಡು ಮಾನವರು ಅದನ್ನು ದಕ್ಕಿಸಿಕೊಳ್ಳಲು, ಕಾಪಾಡಲು ಮತ್ತು ತಮ್ಮ ಆಧಿಕ್ಯವನ್ನು ಸಾರಲು, ಸ್ಥಿರಪಡಿಸಲು ಮಾಡುವ ನಿರಂತರ ಹೋರಾಟದ ಫಲವೇ ಈ ದ್ವೇಷಾಸೂಯೆಗಳ ವಿಷ ವೃತ್ತ. ತೃಪ್ತಿಗೆ ಒಂದು ಎಲ್ಲೆ ಅಥವಾ ಮಿತಿ ಹಾಕಿಕೊಂಡರೆ ಎಲ್ಲರಿಗೂ ಸುಖ ಇಲ್ಲದಿದ್ದರೆ ಎಲ್ಲರಿಗೂ ಹಿಂಸೆ ಮತ್ತು ಈ ಬಾಳೇ ನರಕ ಸದೃಶ. ಇಂತಹ ಪ್ರವೃತ್ತಿಯಿಂದ ನಿರಂತರ ದ್ವೇಷಾಸೂಯಗಳ ವಿಷ ವೃತ್ತದಲ್ಲಿ ನಾವು ಬೀಳುವುದು ಬೇಡ. ಎಲ್ಲರೂ ಒಂದೇ ಎಂಬ ಭಾವನೆ ಇರಬೇಕು ಅಲ್ಲವೇ?
ನಿರೂಪಣೆ - ತಿಮ್ಮಣ್ಣ ಭಟ್, ಬೆಂಗಳೂರು.
ಪ್ರಸರಣ - ಶ್ರೀ ಸ್ವರ್ಣವಲ್ಲಿ ಭಕ್ತವೃಂದ.
.jpg)