ಹಳೆಯ ಭಕ್ತಿಶ್ರದ್ಧೆಯಳಿಸಿಹೋಗಿವೆ ಮಾಸಿ ।
ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ ॥
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ ।
ತಳಮಳಿಸುತಿದೆ ಲೋಕ - ಮಂಕುತಿಮ್ಮ ॥ ೧೫ ॥
ಪುರಾತನ ಕಾಲದಿಂದಲೂ ಅನೂಚಾನವಾಗಿ ಜನಗಳಲ್ಲಿ ಇದ್ದ ದೇವರಲ್ಲಿ ಭಕ್ತಿ ಮತ್ತು ಸಂಪ್ರದಾಯಗಳಲ್ಲಿ ಇದ್ದ ಶ್ರದ್ಧೆ ಈಗ ಅಳಿಸಿ ಹೋಗಿದೆ. ಇಲ್ಲಿ ಸಂಪ್ರದಾಯ ಎಂದರೆ ಹಿಂದಿನಿಂದ ಬಂದಿರುವ ನಡವಳಿಕೆ ಎಂದಷ್ಟೆ ಅರ್ಥ. ಜನರಲ್ಲಿ ಮತ್ತೆ ಈ ಭಕ್ತಿ ಮತ್ತು ಶ್ರದ್ಧೆಗಳನ್ನು ತರಲು ಯಾವ ಹೊಸ ಸಿದ್ಧಾಂತಗಳೂ ಪ್ರತಿಪಾದಿಸಲ್ಪಟ್ಟು ಪ್ರಚಾರಕ್ಕೆ ಬಂದಿಲ್ಲ. ಹಾಗಾಗಿ ಜನರೆಲ್ಲರೂ ಮೊದಲಿನಿಂದ ಬಂದದನ್ನು ಕಳೆದು ಕೊಂಡು ಹೊಸದಿಲ್ಲದೆ ಒಂದು ಅತಂತ್ರ ಸ್ಥಿತಿಯಲ್ಲಿದ್ದಾರೆ. ಯಾರ ಸಹಾಯವೂ ಇಲ್ಲದೆ ಸುಲಭವಾಗಿ ಮತ್ತು ಚೆನ್ನಾಗಿ ಓಡಾಡಲು ಅಭ್ಯಾಸವಾಗಿರುವ ಮನೆ ಕುಸಿದು ಹೋದರೆ, ಆ ಮನೆಯಲ್ಲಿ ವಾಸಿಸುವ ಕುಂಟನಿಗೋ ಕುರುಡನಿಗೋ, ಪಾಪ ತಳಮಳಿಸುವ ಮತ್ತು ಪರದಾಡುವಂತೆ ಆಗುತ್ತದಲ್ಲವೇ? ಹಾಗೆ ಆಗಿದೆ ಇಂದಿನ ಲೋಕದ ಪರಿಸ್ಥಿತಿ.
ನಿರೂಪಣೆ - ತಿಮ್ಮಣ್ಣ ಭಟ್, ಬೆಂಗಳೂರು.
ಪ್ರಸರಣ ಶ್ರೀಸ್ವರ್ಣವಲ್ಲೀ ಭಕ್ತವೃಂದ.
.jpg)