🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

"ಅಲಂಕೃತ್ಯ ಶಿರಶ್ಛೇದಃ" (ನ್ಯಾಯ)

 "ಅಲಂಕೃತ್ಯ ಶಿರಶ್ಛೇದಃ" (ನ್ಯಾಯ)


      ಸಾಮಾನ್ಯವಾಗಿ ಯಾವದೇ ಒಬ್ಬ ವ್ಯಕ್ತಿಯನ್ನು ಚೆನ್ನಾಗಿ ನಂಬಿಸಿ ಮೋಸಮಾಡುವುದನ್ನು "ಅಲಂಕೃತ್ಯ ಶಿರಶ್ಛೇದ" ಎಂದು ಕರೆಯುತ್ತಾರೆ. ಯಾವುದೇ ದೇವರಿಗೆ ಬಲಿಕೊಡುವುದಕ್ಕೆ ಕುರಿಯನ್ನೋ, ಕೋಣವನ್ನು ಚೆನ್ನಾಗಿ ಶೃಂಗರಿಸಿ, ಆ ಮೇಲೆ ಅದಕ್ಕೆ ಪುಜೆಯನ್ನೂ ಮಾಡಿ, ಕೊನೆಯಲ್ಲಿ ಅದನ್ನು ಬಲಿಕೊಡತ್ತಾರೆ. ಅಲಂಕಾರ ಮಾಡವಾಗ, ಪೂಜೆಮಾಡುವಾಗ, ಮೆರವಣಿಗೆ ಮಾಡವಾಗ ಆ ಪ್ರಾಣಿ ತನ್ನನ್ನು ಸನ್ಮಾನಿಸುತ್ತಿದ್ದಾರೆ ಎಂದೇ ತಿಳಿದುಕೊಳ್ಳುತ್ತದೆ. ಆದರೆ ಕೊನೆಯಲ್ಲಿ ಇದೆಲ್ಲ ಮಾಡುತ್ತಿರುವುದು ಬಲಿ ಕೊಡವದಕ್ಕೆ ಎಂಬುದು ಅರ್ಥವಾಗವಾಗ ಕಾಲ ಮಿಂಚಿ ಹೋಗಿರುತ್ತದೆ. ಕನ್ನಡದಲ್ಲಿಯೂ " ನಂಬಿಸಿ ಕತ್ತು ಕೊಯ್ಯುವುದು" ಎಂಬ ನಾಣ್ನುಡಿಯು ಈ ಅರ್ಥದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದೆ. ಹಿಂದೀ ಭಾಷೆಯಲ್ಲಿ ಪ್ರಸಿದ್ಧವಾದ "ಬಲಿ ಕಾ ಬಕರಾ" ಎಂಬ ಮಾತೂ ಸಹ ಇದೇ ಅರ್ಥವನ್ನು ನೀಡುತ್ತದೆ.ಕನ್ನಡದ ವಚನಕಾರರಾದ ಬಸವಣ್ಣನವರೂ ಸಹ "ಹೊಗಳಿ ಹೋಗಳಿ ಹೊನ್ನ ಶೂಲಕ್ಕೇರಿಸಿದರಯ್ಯ" ಎಂದು ಇದೇ ಅರೂಥದಲ್ಲಿಯೇ ಹೇಳಿದ್ದಾರೆ. 

     ಬಹಳವಾಗಿ ನಂಬಿಸಿ ಮೋಸಮಾಡುವ ದುಷ್ಟಕಾರ್ಯಕ್ಕೆ ಈ ನ್ಯಾಯವನ್ನು ಬಳಸುತ್ತಾರೆ.

ನಿರೂಪಣೆ - ಶ್ರೀಮತಿ ಪ್ರತಿಮಾ ಹೆಗಡೆ. 

ಪ್ರಸರಣ- ಶ್ರೀ ಸ್ವರ್ಣವಲ್ಲೀ ಭಕ್ತವೃಂದ.