ಕಗ್ಗ ಸೌರಭ - 16
ಇಳೆಯ ಬಿಟ್ಟಿನ್ನು ಮೆತ್ತಲುಮೈದದ ಪ್ರೇತ ।
ವಲೆವಂತೆ ಲೋಕ ತಲ್ಲಣಿಸುತಿಹುದಿಂದು ॥
ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ
ತಳಮಳಕೆ ಕಡೆಯೆಂದೊ? - ಮಂಕುತಿಮ್ಮ ॥ ೧೬ ॥
ಭಾರತ ದೇಶವು ಅನ್ಯ ದೇಶದವರ ಆಕ್ರಮಣಕ್ಕೆ ಬಲಿಯಾಗಿ, ಹಾಗೆ ಬಂದ ಆಕ್ರಮಣಕಾರರು ಈ ದೇಶದಲ್ಲೇ ನೆಲೆಯೂರಿ ನಿಂತಾಗ, ಅವರ ನಂಬಿಕೆಗಳು ವಿಶ್ವಾಸಗಳು ಅಚಾರ ವಿಚಾರಗಳು ಉಡುಗೆ ತೊಡಿಗೆಗಳ ಶೈಲಿ ಹೀಗೆ ಎಲ್ಲವೂ ನಮ್ಮ ದೇಶದ ಸಂಸ್ಕೃತಿಯ ಮೇಲೆ ತನ್ನ ಪರಿಣಾಮವನ್ನು ಬೀರುತ್ತ, ಕಾಲಕ್ರಮದಲ್ಲಿ ಇಲ್ಲಿನ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ನೆಲೆ ನಿಂತಿತು. ಆಗ ಅದರದು ಬೇರೆಯೇ ರೂಪ. ಆ ರೂಪ ಹಳೆಯದನ್ನು ಬಿಡಲಾಗದೆ, ಹೊಸದನ್ನು ಸಂಪೂರ್ಣ ಅಳವಡಿಸಿಕೊಳ್ಳಲಾಗದೆ ಒಂದು ಹೊಸರೂಪವನ್ನೇ ತಾಳಿತು. ಆದರೆ ಆ ಹೊಸರೂಪದಲ್ಲೂ ಒಂದು ತಳಮಳ, ಒಂದು ಚಡಪಡಿಕೆ ಇತ್ತು. ಅತ್ತ ಹಳೆಯದನ್ನು ಬಿಟ್ಟರೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಭಯ, ಇತ್ತ ಹೊಸದರ ಹೊಸತನದ ಮೋಜು. ಇವೆರಡರ ರೂಪವೇ ಒಂದು ಎಡಬಿಡಂಗಿ ಸ್ವರೂಪ. ಇಂದು ನಾವು ಇರುವುದೇ ಅಂತಹ ಸ್ಥಿತಿಯಲ್ಲಿ. ” ಈ ಭೂಮಿಯನ್ನು ಬಿಟ್ಟು ಎತ್ತಲೂ ಸೇರದ ಪ್ರೇತದಂತೆ ” ಎಂಬ ಉಪಮೆ
ಆದರೆ ವಿಷಾದವೇನೆಂದರೆ ಇಂದು ಯಾರಿಗೂ ಹಳೆಯದು ಬೇಡ. ಅದರ ಅರ್ಥ ಬೇಡ. ಅದರ ಸತ್ವ ಬೇಡ. ಅದನ್ನು ಗೊಡ್ಡು ಸಂಪ್ರದಾಯ ಎಂದು ಮೂದಲಿಸುವ, ಜರಿಯುವ, ನೇಪಥ್ಯಕ್ಕೆ ಸರಿಸುವ ಇಂದಿನ ಜನಾಂಗವು “ಎತ್ತಲೂ ಸೇರದ ಪ್ರೇತದಂತೆ ಲೋಕ ತಲ್ಲಣಿಸುತ್ತಿದೆ”.ಅಂತರ್ಪಿಶಾಚಿಗಳ ತರಹೆ ಇದ್ದಾರೆ.ಎಲ್ಲರಲ್ಲೂ ಹಳೆಯ ಸತ್ವಯುತವಾದ ಸಿದ್ಧಾಂತಗಳ, ಸಂಸ್ಕೃತಿಯ, ಸಂಸ್ಕೃತಿಯನ್ನು ಒಳಗೊಂಡ ಭಾಷೆ, ಸಾಹಿತ್ಯ, ಕಲೆ ಮುಂತಾದವುಗಳನ್ನು ಪುರುಜ್ಜೀವನ ಮಾಡಲು ಒಂದು ಪ್ರಾಮಾಣಿಕ ಪ್ರಯತ್ನ ನಡೆಯಬೇಕು. ಅಂತಹ ಪ್ರಯತ್ನ ಎಲ್ಲ ಅಯಾಮಗಳಿಂದಲೂ ಒಂದೇ ಸಲಕ್ಕೆ ಒಂದು ಸ್ಫೋಟದಂತೆ ಆದಾಗ ಒಂದು ಸಕಾರಾತ್ಮಕವಾದ ಬದಲಾವಣೆಯನ್ನು ನಾವು ನೋಡಬಹುದು. ನಮ್ಮ ಭಾರತೀಯತೆಯನ್ನು, ಸಂಸ್ಕೃತಿಯನ್ನು ಉಳಿಸಬೇಕಾದರೆ ಅಂತಹ ಪ್ರಯತ್ನ ಅಗತ್ಯ.
ನಿರೂಪಣೆ - ಶ್ರೀ ತಿಮ್ಮಣ್ಣ ಭಟ್, ಬೆಂಗಳೂರು.
ಪ್ರಸರಣ- ಶ್ರೀ ಸ್ವರ್ಣವಲ್ಲಿ ಭಕ್ತವೃಂದ.
.jpg)