ಗೋಪಾಲಕರಿಂದ ಭೂಪಾಲಕರವರೆಗೆ, ಎಳೆಯರಿಂದ ಹಳೆಯರವರೆಗೆ ಎಲ್ಲರೂ ಸೇರಿ ಸಮಗ್ರ ಭಾರತದಲ್ಲಿ ಆಚರಿಸುವ ರಂಗುರಂಗಿನ ಹಬ್ಬ “ಹೋಳಿ". ಈ ಹಬ್ಬ ಒಂದು ದಷ್ಟಿಯಿಂದ ಕಟ್ಟಾ ಧರ್ಮಪಾಲನೆಯಿಲ್ಲದ ,ಎಲ್ಲಾ ವಯಸ್ಸಿನ ಸ್ರೀ-ಪುರುಷರಿಗೂ ,ಎಲ್ಲಾ ವರ್ಣಿಯರಿಗೂ, ಒಂದೇ ರೀತಿ ಮನರಂಜನೆ ನೀಡುವ ,ಬಿಚ್ಚು ಮನಸ್ಸಿನಿಂದ ಒಬ್ಬರೊನ್ನೊಬ್ಬರು ಬೆರೆತು ಆಚರಿಸುವ ಹಬ್ಬ.ಈ ಹಬ್ಬದ ಬಗ್ಗೆ ನಿರ್ಣಯಸಿಂಧುವಿನಲ್ಲಿ ಹೀಗೆ ಹೇಳಿದೆ:-
“ಫಾಲ್ಗುಣ ಪೌರ್ಣಮಾಸಿ ಹೋಲಿಕಾ, ಸಾಚ ಸಾಯಾಹ್ನ ವ್ಯಾಪಿನೀ ಭಧ್ರರಹಿತಾ ಗ್ರಾಹ್ಯಾ” ಅಂದರೆ, ಫಾಲ್ಗುಣ ಶುದ್ಧ ಹುಣ್ಣಿಮೆಯಂದು ರಾತ್ರಿ ಹೋಳಿ ಆಚರಿಸಬೇಕು. ಧರ್ಮಸಿಂಧುವಿನ ರೀತ್ಯಾ ಈ ಹಬ್ಬದ ಸಂಕಲ್ಪ ಹೀಗೆ ಮಾಡಬೇಕು :-“ ಮಮ ಸಕುಟುಂಬಸ್ಯ ಢುಂಢಾರಾಕ್ಷಸೀ ಪ್ರೀತ್ಯರ್ಥಂ ,ತತ್ಪೀಡಾ ಪರಿಹಾರಾರ್ಥಂ ಹೋಲಿಕಾ ಪೂಜನಂ ಕರಿಷ್ಯೆ” ಅಂದರೆ ನನ್ನ ಕುಟುಂಬ ವರ್ಗಕ್ಕೆ ಢುಂಢಾ ರಾಕ್ಷಸಿಯ ಪೀಡೆಯಾಗದಿರಲು ,ಅವಳ ಪ್ರೀತ್ಯರ್ಥವಾಗಿ ಹೋಳಿಕಾಪೂಜೆ ಮಾಡುತ್ತೇನೆ.ಹೀಗೆ ಸಂಕಲ್ಪ ಮಾಡಿ ಕಟ್ಟಿಗೆ,ಕುರುಳು, ಹುಲ್ಲು ಇತ್ಯಾದಿ ಹಾಕಿ ಬೆಂಕಿ ಹಚ್ಚಬೇಕು. ಆ ಜ್ವಾಲೆಗೆ ಷೋಡಶೋಪಚಾರ ಪೂಜೆಮಾಡಿ “ಅಸ್ಮಾಭಿ: ಭಯಸಂತ್ರಸ್ತ್ತೈ: ಕ್ರತಾತ್ವಾಂ ಹೋಲಿಕೆಯತಃ l ಅತಃ ತ್ತ್ವಾಂ ಪೂಜಯಿಷ್ಯಾಮಿ ಭೂತೇ ಭೂತಿಪ್ರದಾ ಭವ l l ಅಂದರೆ, 'ನಾವು ಭಯಸಂತ್ರಸ್ತರಾಗಿ ನಿನ್ನನ್ನು ಪೂಜಿಸುತ್ತಿದ್ದೇವೆ. ನಮಗೆ ಐಶ್ವರ್ಯ ನೀಡುವವಳಾಗು' ಎಂದು ಪ್ರಾರ್ಥಿಸಬೇಕು. ಕಟ್ಟಿಗೆ, ಕುರುಳು - ರಾಶಿಗೆ ಹಚ್ಚುವ ಬೆಂಕಿಯನ್ನು, ಚಾಂಡಾಲ ಸೂತಿಕಾ ಗ್ರಹದಿಂದ ಮಕ್ಕಳು ತರಬೇಕು.
“ಚಾಂಡಾಲ ಸೂತಿಕಾಗೇಹಾತ್ ಶಿಶುಹಾರಿತ ವಹ್ನಿನಾ|
ಪ್ರಾಪ್ತಾಯಾಂ ಪೂರ್ಣಿಮಾಯಾಂ ತು ಕುರ್ಯಾತ್ತತ್ ಕಾಷ್ಠದೀಪನಂ||
ತಮಗ್ನಿಂ ತ್ರಿಃಪರಿಕ್ರಮ್ಯ ಶಬ್ದೈಃ ಲಿಂಗ - ಭಗಾಂತಿಕೈಃ|
ತೆನೆ ಶಬ್ದೇನ ಸಾ ಪಾಪಾ ರಾಕ್ಷಸೀ ತೃಪ್ತಿಮಾಪ್ನುಯಾತ್||”
ಹುಣ್ಣಿಮೆ ತಿಥಿ ಬಂದ ಬಳಿಕ ಹಚ್ಚಿದ ಆ ಅಗ್ನಿಗೆ ಮೂರು ಬಾರಿ ಪ್ರದಕ್ಷಿಣೆ ಮಾಡಿ ‚ ಅಸಭ್ಯವಾದ ಹಾಡುಗಳನ್ನು ಹೇಳುತ್ತಾ , ನೃತ್ಯ- ವಾದ್ಯ ಸಹಿತ ಕುಣಿದಾಗ, ಆ ರಾಕ್ಷಸಿಗೆ ಖುಷಿಯೋ ಖುಷಿ. ‘ವಂದಯೇತ್ ಹೋಲಿಕಾಭೂತಿಂ ಸರ್ವದೋಷೋಪ ಶಾಂತಯೇ’ ಅಂದರೆ ಹೋಳಿ ಭಸ್ಮಕ್ಕೆ ವಂದಿಸಿದಾಗ
ಎಲ್ಲಾ ಪಾಪ ಪರಿಹಾರವಾಗುತ್ತದೆ. ಈ ರಾತ್ರಿ ಮಕ್ಕಳನ್ನು ಹೊರಗೆ ಬಿಡಬಾರದು ಎಂದು ಭವಿಷ್ಯ ಪುರಾಣದಲ್ಲಿ ಹೇಳಿದೆ.
ಅಸ್ಯಾಃ ನಿಷಾಗಮೇ ಪಾರ್ಥ ಸಂರಕ್ಷ್ಯಾಃ ಶಿಶವೋಗೃಹೇ ಎಂಬ ಮಾತು ಸ್ಮರಣಾರ್ಹ.
'ಕಾಮನ ಹಬ್ಬ' ಹೆಸರಿನ ಔಚಿತ್ಯ:
ಈ ಹಬ್ಬಕ್ಕೆ ಹುತಾಶನೀ ಪೂರ್ಣಿಮಾ, ಕಾಮನ ಹುಣ್ಣಿಮೆ, ವಸಂತ ಪೂರ್ಣಿಮೆ, ಹೋಳಿ ಹುಣ್ಣಿಮೆ ಮುಂತಾದ ಹೆಸರುಗಳಿವೆ. ಈ ಹಬ್ಬದ ಸಂದರ್ಭದಲ್ಲಿ ತರುಲತೆಗಳೆಲ್ಲಾ ಚಿಗುರಿ ನಿಂತಿರುತ್ತವೆ. ಎಲ್ಲೆಲ್ಲೂ ಕೋಗಿಲೆಯ ಪಂಚಮದ ಇಂಚರ ಕೇಳಿ ಬರುತ್ತದೆ. ಮಾವು,ಮಲ್ಲಿಗೆ, ಸಂಪಿಗೆಗಳೆಲ್ಲಾ ಹೂಬಿಟ್ಟು ನಿಸರ್ಗ ಕಂಗೊಳಿಸುತ್ತಿರುತ್ತದೆ. ಲಗ್ನ ಮಾಸ ಆರಂಭವಾಗಿರುತ್ತದೆ. ಈ ರೀತಿಯ ಶೃಂಗಾರ ರಸದ ಪರಿಸರ, ಪರಿಸ್ಥಿತಿಗಳಿಂದ ಸ್ತ್ರೀ- ಪುರುಷರಲ್ಲಿ ಹುದುಗಿದ್ದ ಕಾಮ-ರತಿವಾಸನೆ ಚಿಗುರುತ್ತದೆ. ಪ್ರತ್ಯಕ್ಷ ಪರಶಿವನೂ ಸಹ, ಕಾಮನನ್ನು ಸುಟ್ಟರೂ, ನಂತರ ಪಾರ್ವತಿಗೆ ಒಲಿದು ಅರ್ಧ ಶರೀರವನ್ನೇ ನೀಡಿದ್ದರಿಂದ ಕಾಮನಿಗೆ ಒಲಿದಂತೇ ಸರಿ. ಇಲ್ಲಿ ಕಾಮ ಸೋತು ಗೆದ್ದ, ಶಿವ ಗೆದ್ದು ಸೋತ. ಪರಶಿವನಕಥೆಯೇ ಹೀಗಾದರೆ ಸಾಮಾನ್ಯರ ಪಾಡೇನು?
ಹೀಗೆ ಈ ದಿನ ಶಿವನು ತನ್ನ ಹಣೆಗಣ್ಣಿನಿಂದ ಕಾಮನನ್ನು ಸುಟ್ಟು, ಲೋಕಹಿತಕ್ಕಾಗಿ ಹುತಾತ್ಮನಾದ ಕಾಮನಿಗೆ, ಲೋಕದ ಸ್ತ್ರೀ-ಪುರುಷರೆಲ್ಲರ ಹೃದಯದಲ್ಲಿ ಸ್ಥಾನ ಕೊಟ್ಟ ದಿನ. ಢುಂಢಾ ರಾಕ್ಷಸಿಯನ್ನು ಬಾಲಕರೆಲ್ಲ ಸೇರಿ ಓಡಿಸಿದ ದಿನ. ಹಿರಣ್ಯ ಕಶಿಪುವಿನ ತಂಗಿ ಹೋಲಿಕಾಳ ದಹನ ಸ್ಮಾರಕ ದಿನ. ಅಕಾಲ ಸಂಭೋಗ ನಿರತರಾದ ಕಾಮ-ರತಿಯರು ಋಷಿ ಶಾಪಕ್ಕೆ ತುತ್ತಾದ ದಿನ. ವರ್ಷವೆಲ್ಲಾ ಕಾದುಕೊಂಡು ಬಂದ ಶ್ರೀಮದ್ಗಾಂಭೀರ್ಯವನ್ನು ತೊರೆದು, ಅನಿರ್ಭಂದ ವಿಹಾರಿಗಳಾಗಿ, ಸ್ವಚ್ಛಂದ ಲಹರಿಯಲ್ಲಿ ಬಣ್ಣ-ಬಣ್ಣದ ನೀರಿನಿಂದ ಓಕುಳಿಯಾಡಿ, ಮನಬಂದಂತೆ ಕುಣಿದು ಕುಪ್ಪಳಿಸಿ, ಅಶ್ಲೀಲ ಹಾಡು ಹೇಳಿ ನಲಿವ ದಿನ.
ಭಾರತದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಹೋಳಿ ಹಬ್ಬದ ಆಚರಣೆಯ ವೈವಿಧ್ಯ-
೧. ಕೆಂಡ ಹಾಯುವುದು : ಸಾವಿರಾರು ವರ್ಷಗಳ ಇತಿಹಾಸವುಳ್ಳ ಹೋಳಿ ಹಬ್ಬವನ್ನು ಉತ್ತರ ಪ್ರದೇಶ, ದೆ ಹಲಿ, ಮಧ್ಯಪ್ರದೇಶ, ರಾಜಸ್ಥಾನ,ಗೋವಾ, ಕರ್ನಾಟಕ ಮುಂತಾದೆಡೆ ಭಾರೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಧಗ- ಧಗ ಉರಿಯುವ ಸುಮಾರು ೧೦ ಅಡಿ ಉದ್ದ ೪-೫ ಅಡಿ ಅಗಲವುಳ್ಳ ಕೆಂಡದ ರಾಶಿಯ ಮೇಲೆ, ದೈವೀ ಧ್ಯಾನಮಗ್ನರಾಗಿ ನಡೆದಾಡುವುದು, ಕುಣಿದಾಡುವುದು, ಕಾಮನ ಹಬ್ಬದ ವೈಶಿಷ್ಟ್ಯ. ಮಥುರಾದಿಂದ ೫೩ ಕಿ.ಮೀ. ದೂರದ ಫಲಾತೇದ್ ಎಂಬಲ್ಲಿ ಇಂದು ಕೂಡ ಹೋಲಿ ಹಬ್ಬದ ರಾತ್ರಿ ಪಂಡಾ ಅಥವಾ ಪೂಜಾರಿಗಳು ಹೋಳಿ ಬೆಂಕಿಯಲ್ಲಿ ನಡೆದಾಡುತ್ತಾರೆ. ಈ ಹಬ್ಬದಲ್ಲಿ ಬಿಕಾನೇರದ ಸಂತರಾದ ಜಸ್ನಾಥಿ ಜನಾಂಗದ ಸಿದ್ಧಿಗಳು, ಲಯಬದ್ಧವಾಗಿ ಭಜನೆ ಹಾಡುತಾ ಒಬ್ಬರ ಹಿಂದೊಬ್ಬರು ಕೆಂಡದ ರಾಶಿಯಲ್ಲಿ ಕುಣಿಯುತ್ತಾ ಚೆಂಡಿನಂತೆ ಕೆಂಡದುಂಡೆಗಳನ್ನು ಕೈಯಲ್ಲಿ ಹಿಡಿದು ಆಡುವ ದೃಶ್ಯ ವಿಸ್ಮಯಕಾರಿಯಾದುದು. ಹಿಂದೆ ಔರಂಗಜೇಬ್ ಕೂಡಾ ಇದನ್ನು ನೋಡಿ ಸಂತೋಷ ವ್ಯಕ್ತಪಡಿಸಿದ್ದನಂತೆ.
ಗೋವಾದ ಪಿರ್‌ಮಾವೋ ಎಂಬ ಗ್ರಾಮದಲ್ಲಿ, ಈ ಹಬ್ಬದಲ್ಲಿ ಬೆಂಕಿ ಹಾಯುವ ರೂಢಿಯಿದೆ. ಆ ದೃಶ್ಯ ನೋಡಲು ಸಾವಿರಾರು ಜನ ಸೇರುತ್ತಾರೆ. ಕೆಂಡ ಹಾಯುವವರು ಈ ಹಬ್ಬದ ಮುನ್ನ ಕೆಲವು ದಿನ ಉಪವಾಸ ಆಚರಿಸುತ್ತಾರೆ. ಧ್ಯಾನ ಮಗ್ನರಾಗಿ ಯಾವುದೇ ಬಾಹ್ಯ ಒತ್ತಡಗಳಿಗೆ ಒಳಗಾಗದೆ, ಕಹಳೆ, ನಗಾರಿ, ವಾದ್ಯ ಜನಸಂದಣಿಯ ಕೋಲಾಹಲದಲ್ಲಿ ಮೈ- ಮರೆತು ಕೆಂಡ ಹಾಯುತ್ತಾರೆ. ಈ ದಿನ ಹಾಗೂ ಈ ತಿಂಗಳಲ್ಲಿ ಕರ್ನಾಟಕದ ಕರಾವಳಿಯಲ್ಲಿ ನಡೆಯುವ ಕೆಲವು ದೇವತಾ
ಹಬ್ಬಗಳಲ್ಲಿ ಕೂಡ “ಕೆಂಡ ಹಾಯುವ ರೂಢಿ ಇಂದೂ ಇದೆ. ಕೆಂಡ ಹಾಯುವ ವ್ಯಕ್ತಿಗೆ ಸೊಂಟದ ಮೇಲೆ ಚಿಕ್ಕ ಬಟ್ಟೆಯನ್ನು ಬಿಟ್ಟರೆ ಉಳಿದೆಲ್ಲಾ ಭಾಗ ಬೆತ್ತಲೆಯಾಗಿರುತ್ತದೆ. ಭಾವಾವೇಶದ (ಮೈ ಮೇಲೆ ದೇವರು ಬರುವುದು) ಈ ಸಂದರ್ಭದಲ್ಲಿ ಕೈಯಲ್ಲೊಂದು ಬೆಳ್ಳಿ ಕಟ್ಟಿದ ಬೆತ್ತವನ್ನು, ಎದೆಗೊತ್ತಿ ಮೇಲ್ಮುಖವಾಗಿ ಹಿಡಿದಿರುತ್ತಾರೆ.
ಮಧ್ಯಪ್ರದೇಶದ `ಉಜ್ಜಯನಿ' ಬಿಹಾರದ 'ಛೋಟಾ ನಾಗಪುರ್' ಮುಂತಾದೆಡೆ ಇದೇ ರೀತಿ “ಬೆಂಕಿ ನೃತ್ಯ' ಕಾಣಬಹುದು.
ವಿದೇಶಗಳಲ್ಲಿ:-
ವಿದೇಶಗಳಲ್ಲಿ ಕೂಡ ಹೋಳಿ ಹಬ್ಬ ಎನ್ನದಿದ್ದರೂ, ಇದೇ ಮಾದರಿಯ ಹಬ್ಬವನ್ನು ಇದೇ ವಸಂತ ಋತುವಿನಲ್ಲಿ ಆಚರಿಸುವುದು ಸ್ಮರಣೀಯ. ಬಲ್ಗೇರಿಯಾ, ಮಾರಿಷಿಯನ್, ಜಪಾನ್, ಮುಂತಾದ ದೇಶಗಳಲ್ಲಿ ಕೆಂಡದಲ್ಲಿ ನಡೆಯುವ ರಂಗು ರಂಗಿನ ಹಬ್ಬ ಆಚರಿಸಲಾಗುತ್ತದೆ. ಇದರಲ್ಲಿ ಹೋಳಿ ಹಬ್ಬದ ಛಾಯೆ ಕಂಡು ಬರುತ್ತದೆ. ಇದರಿಂದ ಬೆಳೆಗಳ ಅಭಿವೃದ್ಧಿಯಾಗುವುದೆಂಬ ನಂಬಿಕೆ ಸಹ ಕೆಲವು ದೇಶಗಳಲ್ಲಿದೆ.
ಕರಾವಳಿಯಲ್ಲಿ ಕಾಮನ ಹಬ್ಬ :-
ಸುಗ್ಗಿ ಕುಣಿಯುತ ಬಂತು; ಹಿಗ್ಗಿ ಮಾಮರ ನಿಂತು; ಬಗ್ಗುತಿದೆ ಕಮ್ಮಲರ ಮುಕುಟವಾಂತು
ಎಂಬ ಕವಿವಾಣಿಯಂತೆ ಕರಾವಳಿಯವರಿಗೆ ಇದು ಸುಗ್ಗಿ ಹುಣ್ಣಿಮೆ. ಆಗ ತಾನೇ ಕಾರು ಬೆಳೆ ಕೈಸೇರಿರುತ್ತದೆ. ರೈತರು ಹಿಗ್ಗಿನ ಬುಗ್ಗೆಯಾಗಿ ಸುಗ್ಗಿಯನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಉತ್ತರ ಕನ್ನಡದ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಕುಣಿತವಂತೂ ಕಣ್ಣಿಗೆ ಹಬ್ಬ.
ಮೈ ಮುಚ್ಚಲು ಜುಬ್ಬ,ಎದೆಗೆ ಕತ್ತರಿಯಾಗಿ ಕಟ್ಟುವ ಶಾಲು , ಪೈಜಾಮದ ಬಿಗಿ - ಬಿಗಿತ, ಆದರ ಮೇಲೆ ಪಂಚೆ ಅಥವಾ ಚೌಕುಳಿ ಸೀರೆ , ಕಾಲಿಗೆ ಗೆಜ್ಜೆ, ಎಡಗೈಗೆ ಕರವಸ್ತ್ರ, ಕೈಗೆ ಕಡಗ , ಕೊರಳಿಗೆ ಹಾರಗಳು, ತಲೆಗೆ ಮುಂಡಾಸು, ಅದರ ಮೇಲೆ ಉದ್ದದ ಕಡ್ಡಿಗೆ ಬಣ್ಣ- ಬಣ್ಣದ ಬೆಂಡು ಬೇಗಡೆ ಸೇರಿಸಿ ಮಾಡಿದ ತುರಾಯಿ ಧರಿಸಿ ೧೦-೧೫ ಜನ ಗುಂಪು ಗುಂಪಾಗಿ, ಸುತ್ತ ಮುತ್ತಲಿನ ಊರುಗಳಿಗೆ ೩-೪ ದಿನಗಳ ಕಾಲ ಓಡಾಡಿ ಲಯಬದ್ಧವಾಗಿ ನರ್ತಿಸುವ ಸುಗ್ಗಿ ಕುಣಿತದ ನೋಟ ನೋಡೇ ಅನುಭವಿಸಬೇಕು.ಈ ಹೋಳಿ ಹಾಡು ಕುಣಿತಕ್ಕೆ ಮಣ್ಣಿನ ಅರ್ಧ ಮಡಿಕೆಯಾಕರಾದ ‘ಗುಮಟೆ ' ಎಂಬ ಚರ್ಮವಾದ್ಯ ಬಾರಿಸಿದಾಗ ಕುಣಿತಕ್ಕೆ ರಂಗು ಬರುತ್ತದೆ. ತುಳಸೀ ಹುಣ್ಣಿಮೆಯ ನಂತರ ನಿತ್ಯ ರಾತ್ರಿ, ಹೋಳಿ ಹಾಡು ಕುಣಿತದ ತರಬೇತು ನಡೆಯುತ್ತದೆ. ಗು ಮಟೆ ವಾದ್ಯದೊಂದಿಗೆ ಜಾಗಟೆ, ಕಾಂಸ್ಯತಾಳವನ್ನು ಹಿಮ್ಮೆಳಕ್ಕೆ ಬಳಸುತ್ತಾರೆ. ದೇವರನಾಮ ಅಥವಾ ಜಾನಪದ ಗೀತೆಯನ್ನು ಹಿಮ್ಮೆಳಕರ ಲಯಬದ್ಧವಾಗಿ ಹೇಳಿಕೊಡುತ್ತಾನೆ. ನರ್ತಕರು ಅದನ್ನು ಎರೆಡೆರಡು ಬಾರಿ ಹೇಳುತ್ತಾ ಗುಮಟೆ ವಾದ್ಯಕ್ಕೆ ಅನುಸಾರವಾಗಿ ಲಯಬದ್ಧವಾಗಿ ಕುಣಿಯುತ್ತಾರೆ. ನಂತರ ಕೋಲಾಟ ಆಡುತ್ತಾರೆ. ಇವರು ಕುಣಿಯುತ್ತಿರುವಾಗ ಮುಂಡಾಸದ ತುರಾಯಿ ಗಗನಕ್ಕೆ ಹಾರುವಂತೆ ಕುಣಿಯುತ್ತದೆ.
ಹಾಲಕ್ಕಿ ಒಕ್ಕಲಿಗರ ಸುಗ್ಗೀಕುಣಿತ, ಹಳ್ಳಿಯಿಂದ ದಿಲ್ಲಿಯವರೆಗೆ ಪ್ರಸಿದ್ಧ. ಇವರ ಕುಣಿತಕ್ಕೆ ಮೆಚ್ಚಿದ ದಣಿಗಳು ಬೆಲ್ಲ ನೀರು ಕುಡಿಯಲು ನೀಡುವುದಲ್ಲದೆ , ಉಡುಗೊರೆ ವಸ್ತ್ರ, ತೆಂಗಿನಕಾಯಿ, ಭಕ್ಷೀಸು ವಗೈರೆ ನೀಡುತ್ತಾರೆ .
ಇದೇ ಮಾದರಿಯಲ್ಲಿ ದಕ್ಷಿಣ ಕನ್ನಡದ ಆದಿವಾಸಿಗಳಾದ ಕುಣಬಿಯರು, ತಲೆಯ ಮುಂಡಾಸಿಗೆ ಬಣ್ಣ ಬಣ್ಣದ ಹಕ್ಕಿಯ ಗರಿ ಸಿಕ್ಕಿಸಿ ಸುರಗಿಯ ಹೂಗಳ ಸರ ಬಿಗಿದು ವೇಷ -ಭೂಷಣ ತೊಟ್ಟು ಮಾಡುವ "ಹೋಳಿ ಕುಣಿತ " ಸಮೂಹ ನರ್ತನ ನಿಸರ್ಗ ರಮ ಣೀಯವಾಗಿರುತ್ತದೆ.
ಹೋಳಿ ಹಬ್ಬಕ್ಕೆ ಸಂಬಂಧಿಸಿದ ಕಥೆಗಳು:-
೧. ಕಾಮ ದಹನದ ಕಥೆ:-
ಹಿಂದೆ ತಾರಕಾಸುರನೆಂಬ ರಾಕ್ಷಸನ ಉಪಟಳಕ್ಕೆ ದೇವಾನುದೇವತೆಗಳೆಲ್ಲಾ ಸೋತು ಸುಣ್ಣವಾಗಿದ್ದರು ‘ಶಿವ ಪಾರ್ವತಿ’ಯರ ಮಗನಲ್ಲದೆ ಬೇರೆ ಯಾರೂ ತಾರಕನನ್ನು ಕೊಲ್ಲಲಾರರು. ಆದ್ದರಿಂದ ಶಿವ-ಪಾರ್ವತಿಯರ ವಿವಾಹ ಮಾಡಿಸಿ ಎಂದು ಬ್ರಹ್ಮ ಸಲಹೆ ನೀಡುತ್ತಾನೆ. ಇತ್ತ ಶಿವ‚ ಭೀಕರ ತಪೋನಿರತನಾಗಿದ್ದಾನೆ. ಅವನು ಪಾರ್ವತಿಯಲ್ಲಿ ಅನುರಕ್ತನಾಗುವಂತೆ ಮಾಡಬಲ್ಲವನೆಂದರೆ ಜನರ ಮನಸನ್ನೇ ಮಥಿಸಬಲ್ಲ ಮನ್ಮಥ ಮಾತ್ರ, ಎಂದು ನಿರ್ಧರಿಸಿದ ಇಂದ್ರ, ಅವನನ್ನು ಕರೆಸಿ ಬಾಯಿತುಂಬಾ ಹೊಗಳುತ್ತಾನೆ. ಹೊಗಳಿಕೆಗೆ ಉಬ್ಬುವುದು ಮನ್ಮಥನ ಸ್ವಭಾವ. ಆ ಕ್ಷಣವೇ ‘ನಿನ್ನ ಅನುಗ್ರಹ, ವಸಂತನ ಸಹಾಯವೊಂದಿದ್ದರೆ, ಕುಸುಮಾಯುಧನಾದರೂ ಪಿನಾಕಪಾಣಿಯಾದ ಪರಶಿವನನ್ನೇ ಬೇಕಾದರೂ ವಶಪಡಿಸಿಕೊಳ್ಳಬಲ್ಲೆ. ಉಳಿದವರು ಯಾವ ಲೆಕ್ಕ’ ಎಂದು ಜಂಭ ಕೊಚ್ಚಿಕೊಳ್ಳುತ್ತಾನೆ. ಮಹಾಕವಿ ಕಾಳಿದಾಸನ ಕುಮಾರ ಸಂಭವ ಕಾವ್ಯದಲ್ಲಿ ಮನ್ಮಥ ಇಂದ್ರನನ್ನು ಕುರಿತು ಹೀಗೆ ಹೇಳುತ್ತಾನೆ.
ತವಪ್ರಸಾದತ್ ಕುಸುಮಾಯುಧೋಪಿ
ಸಹಾಯಮೇಕಂ ಮಧುಮೇಹ ಲಬ್ದ್ವಾl
ಕುರ್ಯಾಂ ಹರಸ್ಯಾಪಿ ಪಿನಾಕ ಪಾಣಿಃ ಧೈರ್ಯ ಚ್ಯುತಿಂ ಕೇ ಮಮ ಧನ್ವಿನೋನ್ಯೆll
ಹೀಗೆ ಹೇಳಿದಾಗ ಈ ಮಾತನ್ನೇ ಗಟ್ಟಿಯಾಗಿಟ್ಟುಕೊಂಡ ಇಂದ್ರ, ನಿನ್ನಿಂದ ಆಗಬೇಕಾದ ಕೆಲಸವೇ ಅದು “ತದ್ಗಚ್ಚ ಸಿದ್ಧೈ ಕುರುದೇವಕಾರ್ಯಂ” ನೀನು ಎಲ್ಲಾ ಜನರನ್ನು ಸೆಳೆಯಬಲ್ಲ ಮಹಸಾಧಕ. ಎಲ್ಲಾ ದೇವತೆಗಳು ನಿನ್ನನ್ನೇ ನಂಬಿದ್ದಾರೆ. ಮಹಾಕಾರ್ಯ ಸಾಧಿಸಬಲ್ಲ ನೀನೇ ಧನ್ಯ. ನಿನ್ನಿಂದ ಮೂರು ಲೋಕಕ್ಕೂ ಹಿತವಾಗುತ್ತದೆ. ಪಾರ್ವತಿಯ ಸೌಂದರ್ಯಕ್ಕೆ ಶಿವನು ಮನಸೋಲುವಂತೆ ಮಾಡು, ಎಂದು ಹುರಿದುಂಬಿಸಿ ಕಳಿಸುತ್ತಾನೆ.
ಇತ್ತ ಮದನ ಸುಕೋಮಲ ಸೈನ್ಯ, ಕಣ್ಣು ಕುಕ್ಕಿಸುವಂಥ ರೂಪರಾಶಿ ಸತಿ - ರತಿ, ಸುಖ - ವಸಂತರೊಂದಿಗೆ, ಶಿವನ ತಪೋಭೂಮಿಯಾದ ಹೀಮಕೂಟಕ್ಕೆ ಬಂದಿದ್ದಾನೆ. ಪಾರ್ವತಿ ಬೆಂಗಾವಲಿಗೆ ನಿಂತು ಸಹಕರಿಸುತ್ತಿದ್ದಾಳೆ. ಸಮಯ ನೋಡಿ ತನ್ನ ಅರವಿಂದ, ಅಶೋಕ, ಚೂತ, ನವಮಲ್ಲಿಕ, ನೀಲೋತ್ಪಲಗಳೆಂಬ ಐದು ಪುಷ್ಪ ಬಾಣಗಳನ್ನೂ ಪ್ರಯೋಗಿಸಿದ್ದಾನೆ. ಕೆರಳಿದ ಶಿವ ಚಿತ್ತ - ಚಂಚಲಗೊಂಡು ಹಣೆಗಣ್ಣಿನ ಕಿಚ್ಚಿನಿಂದ ಕಾಮನನ್ನು ದಹಿಸುತ್ತಾನೆ. ರತಿ ಕರುಣಾಜನಕವಾಗಿ ಅಳುತ್ತಿದ್ದಾಳೆ. ಕೊನೆಗೂ ಪಾರ್ವತಿಯ ಕಠೋರ ತಪಸ್ಸಿಗೆ ಶಿವ ಒಲಿದಾಗ, ಮನಸಿಜ ಸತ್ತು ಬದುಕಿದಂತಾಯಿತು. ಆಗ ಪಾರ್ವತಿ ಶಿವನಿಗೆ " ಈಕೆಯ ಪತಿಯನ್ನು ನಿಮ್ಮಿಂದ ಪಡೆದುಕೊಡುವೇನೆಂದು ಹೇಳಿದ್ದೆ " ಎಂದು ರತಿಯನ್ನು ತೋರಿಸುತ್ತಾಳೆ. ಶಿವ ದಯೆ ತೋರಿ ರತಿಯ ಬೇಡಿಕೆ ಈಡೇರಿಸಿದ. ರತಿಯ ಮಟ್ಟಿಗೆ ಕಾಮನ ಪ್ರಾಪ್ತಿ ಸಶರೀರವಾಗಿ ಆಯಿತು. ಕಾಮನಿಗೆ ಎಲ್ಲಾ ಸ್ತ್ರೀ - ಪುರುಷರ ಹೃದಯದಲ್ಲಿ ಸ್ಥಾನ ದೊರೆಯಿತು. ಅಂದಿನಿಂದ ಕಾಮ ಅನಂಗ ಮನಸಿಜನೆನಿಸಿದ.
ಈ ಘಟನೆ ನಡೆದದ್ದು ಫಾಲ್ಗುಣ ಶುಕ್ಲ ಹುಣ್ಣಿಮೆಯಂದು. ಆದ್ದರಿಂದ ಇದು ಕಾಮನ ಹುಣ್ಣಿಮೆ ಅಥವಾ ಕಾಮನ ಹಬ್ಬ.
೨.ಇನ್ನೊಂದು ಜಾನಪದ ಕಥೆ ಹೀಗಿದೆ:- ಪ್ರೇಮಮಯರಾದ ಕಾಮ ರತಿಯರು ಕಾಲ ವೇಳೆ ನೋಡದೆ ಪ್ರೇಮಾಲಾಪದಲ್ಲಿ ಮುಳುಗುತ್ತಿದ್ದರು. ಒಮ್ಮೆ ಒಬ್ಬ ಋಷಿ ಇವರ ಅಕಾಲ ಸಂಯೋಗವನ್ನು ಕಂಡು ಕೆರಳಿ ಶಾಪ ಕೊಟ್ಟ. ಅದರ ಪರಿಣಾಮವಾಗಿ ಕಾಮ ಭೂಲೋಕದ ಒಬ್ಬ ಬ್ರಾಹ್ಮಣ ಕುಮಾರನಾಗಿಯೂ, ರತಿ ಒಬ್ಬ ಹರಿಜನ ಕನ್ಯೆಯಾಗಿಯೂ ಜನಿಸಿದಳು.
ಒಂದು ದಿನ ಬೀದಿಯಲ್ಲಿ ಕಸಗುಡಿಸುತ್ತಿರುವ ರತಿಯನ್ನು ಕಂಡ ಕಾಮ, ಪೂರ್ವಜನ್ಮ ಸಂಸ್ಕಾರದಿಂದ ಅನುರಕ್ತನಾದ. ತಂದೆ ಪ್ರತಿಭಟಿಸಿದಾಗ ಮನೆಯನ್ನೇ ತೊರೆದು, ಅವಳ ಮನೆಯಲ್ಲೇ ವಾಸ ಮಾಡಿದ. ಅಲ್ಲಿ ನಿತ್ಯ ಏಕಾದಶಿ ಪ್ರತ್ಯಕ್ಷ: ಹಸಿವಿನ ಬೇಗೆ ತಡೆಯಲಾರದೆ ಕಾಮ ಅವಳ ಮನೆಯಲ್ಲೇ ಸತ್ತ. ಅವನ ದಹನದ ಚಿತೆಗೆ ಕಟ್ಟಿಗೆ ಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಅಷ್ಟು ಕಿತ್ತು ತಿನ್ನುವ ಬಡತನ. ಆಗ ಕಾಮನ ಗೆಳೆಯರು ಅಕ್ಕಪಕ್ಕದ ಮನೆಗಳಿಂದ ಕಾಡಿ-ಬೇಡಿ ಒತ್ತಾಯಿಸಿ ಕಟ್ಟಿಗೆ -ಕುರುಳು ಸೇರಿಸಿ ,ಹರಿಜನ ರತಿಯ ಮನೆಯ ಬೆಂಕಿ ತಂದು ಅಗ್ನಿ ಸಂಸ್ಕಾರ ಮಾಡಿದರು.
ಇದೆಲ್ಲ ನಡೆದದ್ದು ಫಾಲ್ಗುಣ ಶುದ್ಧ ಹುಣ್ಣಿಮೆಯಂದು. ಆ ನೆನಪಾಗಿಯೇ ಇಂದೂ ಕಾಮದಹನ ಕಾಲಕ್ಕೆ ಹರಿಜನ ಕೇರಿಯಿಂದ ಬೆಂಕಿ ತರುವ ರೂಢಿ ಬಳಕೆಗೆ ಬಂದಿರಬೇಕು.
೩.ಹೋಲಿಕಾ ಕಥೆ:- ಹಿರಣ್ಯ ಕಶಿಪುವಿಗೆ ಪ್ರಲ್ಹಾದನೆಂಬ ಮಗನಿದ್ದ. ತಂದೆಯ ಮನಸ್ಸಿಗೆ ವಿರುದ್ಧವಾಗಿ ಅವನು ಸದಾ ಹರಿನಾಮ ಸ್ಮರಣೆ ಮಾಡುತ್ತಿದ್ದ. ತನ್ನ ವೈರಿಯಾದ ಹರಿಯನ್ನು ಸ್ಮರಿಸುವುದನ್ನು ಸಹಿಸಲಾರದೆ ಮಗನನ್ನು ತಿದ್ದುವ ಪ್ರಯತ್ನವೆಲ್ಲಾ ವಿಫಲವಾದಾಗ, ತಂದೆ ಮಗನನ್ನೇ ಮುಗಿಸಿ ಬಿಡಲು ಯೋಚಿಸಿದ.ಅನೇಕ ಮಾಟ - ಮರೂಡಿ, ಶಂಬರನ ಮಾಯೆ ಏನೆಲ್ಲಾ ಮಾಡಿಸಿದ. ಅದೂ ವಿಫಲವಾದಾಗ ಸಮುದ್ರದಲ್ಲಿ ತಳ್ಳಿಸಿದ. ಪರ್ವತದಿಂದ ಕೆಡಹಿಸಿದ. ಸರ್ಪಗಳಿಂದ ಕಚ್ಚಿಸಿದ. ಆನೆಗಳಿಂದ ತುಳಿಸಿದ. ಬೆಂಕಿಯಲ್ಲಿ ನೂಕಿಸಿದ. ವಿಷಮಿಶ್ರಿತ ಆಹಾರ ತಿನ್ನಿಸಿದ. ನೌಕರರಿಂದ ಹಿಂಸಿಸಿದ. ತನ್ನ ಭಕ್ತಿಯಿಂದ ಪ್ರಹ್ಲಾದ ಎಲ್ಲದರಲ್ಲೂ ಜಯಿಸಿದ. ಆಗ ಹಿರಣ್ಯಕಶಿಪು ತಂಗಿಯಾದ ಹೋಲಿಕಾಳನ್ನು ಕರೆದು ಹೇಳಿದ. “ ನೀನು ಬಾಲ ಪ್ರಹ್ಲಾದನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಮುದ್ದಾಡುತ್ತಿರು.ಅಕಸ್ಮತ್ತಾಗಿ ನಿನ್ನ ಮೇಲೆ ದಿಕ್ಕು - ದಿಕ್ಕುಗಳಿಂದ ಕಟ್ಟಿಗೆಯ ರಾಶಿ ಹಾಕಿ ಸುಡಲಾಗುವುದು. ಆ ಮಗು ಸುಟ್ಟು ಬೂದಿಯಾದ ಮೇಲೆ ನೀನು ಬೆಂಕಿಯಿಂದ ಎದ್ದು ಬಾ”. ರಾಜನ ಹಾಗೂ ಅಣ್ಣನ ಆಜ್ಞೆ ಮೀರಲಾಗದೆ ಅವಳು ಅದಕ್ಕೆ ಸಮ್ಮತಿಸಿದಳು. ಹಿಂದೆ ಅನೇಕ ಬಾರಿ ಅವಳು ಉರಿಯುವ ಬೆಂಕಿಯಿಂದ ಎದ್ದು ಬಂದಿದ್ದಳು. ಅದೆಲ್ಲಾ ಅವಳಿಗೆ ಕರತಲಾಮಲಕ.
ಆದರೆ ವಿಧಿಯ ವಿಲಾಸ ಬೇರೆಯಾಗಿತ್ತು. ಹೋಲಿಕಾ ಭಸ್ಮವಾಗಿ, ಪ್ರಹ್ಲಾದ ಬಂಗಾರದಂತೆ ಹೊಳೆಯುತ್ತಾ, ‘ಶ್ರೀಹರಿ’ ಎನ್ನುತ್ತಾ ಹೊರ ಬಂದ. ಆ ಹೋಲಿಕಾ ದಹನದ ಸ್ಮಾರಕವಾದ ಹುಣ್ಣಿಮೆಯೇ “ಹೋಳಿ ಹುಣ್ಣಿಮೆಯಾಗಿದೆ”.
ಈ ಎಲ್ಲಾ ಕಥೆಗಳಿಂದ ತಿಳಿಯುವುದೇನೆಂದರೆ, ಇದು ಹುಡುಗರು ರಾಕ್ಷಸಿಯ ಸಂಹಾರಕ್ಕಾಗಿ ನಡೆಸಿದ ಹಬ್ಬ. ರಾತ್ರಿ ವೇಳೆಯಲ್ಲಿ ಕಾಮನ ಪ್ರತಿಮೆ ಸುಟ್ಟು , ಹಾಡು ಹೇಳುತ್ತಾ ಮೆರೆಯುವುದೇ ಮುಖ್ಯಕಲಾಪ.
ಹೋಳಿ ಹಬ್ಬದ ಅಂತರಂಗ :- ಕಾಮ, ಜಗತ್ತಿಗಾಗಿ ಹುತಾತ್ಮನೆನಿಸಿ ಸುತ್ತು ಬದುಕಿ ಪೂಜಾರ್ಹನಾದ. ಎಲ್ಲರ ಹೃದಯದಲ್ಲಿ ನೆಲೆಸಿ ಅವರಿಗೇ ಅರಿವಿಲ್ಲದಂತೆ ನಿತ್ಯಾರಾಧನೆ ಹೊಂದುವವನಾದ.
ಜಗತ್ತಿನ ಎಲ್ಲಾ ಪಶು, ಪಕ್ಷಿ, ನಿಸರ್ಗದಲ್ಲೂ ಅವನು ಸರ್ವವ್ಯಾಪಿ. ವಿಶ್ವಾಮಿತ್ರ - ಪರಾಶರಾದಿ ಮುನಿಗಳಿಗೂ ಅವನಿಂದ ತಪ್ಪಿಸಿಕೊಳ್ಳಲಾಗಿಲ್ಲ. ಹಾಗೇ ‘ಕಾಮ’ ಪುರುಷಾರ್ಥಗಳಲ್ಲೂ ಒಂದೆನಿಸಿತು.
ಹೋಳಿಯ ಬಹಿರಂಗ ರೂಪ:- ಓಕಳಿಯ ನೆಪದಲ್ಲಿ ಬಣ್ಣ ಎರಚಿ ಬೆಲೆಬಾಳುವ ಬಟ್ಟೆ ಹಾಳು ಮಾಡುವುದು, ಕಂಡು ಕಂಡವರನ್ನು ಚುಡಾಯಿಸಿ ಕೇಕೆ ಹಾಕುವುದು, ಒಳ್ಳೆ ವಸ್ತುಗಳನ್ನು ಸುಟ್ಟು ಹಾಳು ಮಾಡುವುದು. ಇಂದು ಕಂಡು ಬರುತ್ತಿದೆ. ಇದು ಸಲ್ಲ; ಇಂದು ಈ ಹಬ್ಬದ ಆಚರಣೆಯಲ್ಲಿ ಹಿಟ್ಟಿಗಿಂತ ಉಪ್ಪೇ ಹೆಚ್ಚಾಗಿದೆ. ಹೂಳಿಕಾ ದೇವಿಯ ಪೂಜೆ ಹೋಗಿ ‘ಹೋಳಿ’ ಉಳಿದು ಬಿಟ್ಟಿದೆ.
ಕೇವಲ ದೇಹ ಸೌಂದರ್ಯದ ಪ್ರೇಮ ಶಿವಾರ್ಪಿತವಾಗಲಾರದು. ಪ್ರಣವ ರೂಪಿಯನ್ನು ಬರೀ ಪ್ರಣಯದಿಂದ ಗೆಲ್ಲಲಾಗದು. ಮನ್ಮಥನ ಬಾಣಕ್ಕೂ ಶಿವನೊಲಿಯದೇ ಹೋದಾಗ, ಪಾರ್ವತಿ ತನ್ನ ಸೌಂದರ್ಯವನ್ನು ಹಳಿದುಕೊಂಡು, ತಪೋನಿರತಳಾಗಿ, ಪುಟಕ್ಕಿಟ್ಟ ಚಿನ್ನದಂತೆ ,ನಾನಾ ರೀತಿಯ ಅಗ್ನಿ ಪರೀಕ್ಷೆಯಲ್ಲಿ ಗೆದ್ದು, ಗುರಿ ಮುಟ್ಟುವಲ್ಲಿ ಯಶಸ್ವಿಯಾದಳು. ‘ಅನ್ನ' , ‘ಪ್ರಸಾದ'ವಾದಾಗ ಸ್ವೀಕಾರಾರ್ಹವಾಗುವಂತೆ, ತಪೋಪುನೀತವಾದ ಪ್ರೇಮ ಮಾತ್ರ ಶಿವಾರ್ಪಿತವಾಗಬಲ್ಲದು. ಕಾಮ, ಪ್ರೇಮವಾಗಿ, ಸಾಮಾನ್ಯ ರತಿ, ಶಿವರತಿಯಾದಾಗ ಮಾತ್ರ ದೇವರು ಒಲಿಯುತ್ತಾನೆ. ಎಂಬುದೇ ಕಾಮನ ಹಬ್ಬದ ರಹಸ್ಯವಾಗಿದೆ ಎನ್ನಬಹುದು.
ಲೇಖಕರು: ಈಶ್ವರ ಭಟ್ಟ (ಕರ್ಣಜ್ಜರಮನೆ) ಮಲವಳ್ಳಿ
ಸಂಗ್ರಹ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ