"ಅನ್ನಾಧ್ಯೇವ ಖಲ್ವಿಮಾನಿ ಭೂತಾನಿ ಜಾಯಂತೇ| ಅನ್ನೇನ ಜಾತಾನಿ ಜೀವಂತಿ|"
ಅನ್ನದಿಂದಲೇ ಸಕಲ ಜೀವ ಜಗತ್ತಿನ ಜನನ, ಅನ್ನದಿಂದಲೇ ಜನಿಸಿದ ಜೀವಿಗಳ ಜೀವನ. ಇಲ್ಲ ಅನ್ನ ಎಂಬುದು ಆಹಾರ ಎಂಬರ್ಥದಲ್ಲಿ ಹೇಳಲ್ಪಟ್ಟಿದೆ.
ಆಹಾರವು ಪ್ರತಿಯೊಂದು ಜೀವಿಯ ಮೂಲವಾಗಿದೆ. ಆಹಾರ ದೇಹಕ್ಕೆ ಚೈತನ್ಯವನ್ನು ಕೊಡುವುದಲ್ಲದೆ ಪ್ರಾಣ ಶಕ್ತಿಯು ಸ್ಥಿರವಾಗಿರುವಂತೆ ಮಾಡುತ್ತದೆ. ನಾವು ತಿನ್ನುವ ಆಹಾರ ನಮ್ಮ ಆರೋಗ್ಯವನ್ನೂ, ಅನಾರೋಗ್ಯವನ್ನೂ ಉಂಟುಮಾಡುವ ಸಾಮರ್ಥವನ್ನು ಹೊಂದಿರುತ್ತದೆ. 'ಆರೋಗ್ಯವೇ ಭಾಗ್ಯ' ಎಂಬ ಮಾತನ್ನು ಕೇಳಿರುತ್ತೇವೆ. ಹೌದು ಆಹಾರದಲ್ಲಾಗುವ ವ್ಯತ್ಯಾಸ ನಮ್ಮ ಭಾಗ್ಯವನ್ನೂ ಬದಲಿಸಬಲ್ಲದು. ನಮ್ಮ ಹಿರಿಯರು ಆಹಾರವನ್ನು ಕೇವಲ ದೇಹವೃದ್ಧಿಯ ಸಾಧನವನ್ನಾಗಿ ನೋಡಿಲ್ಲ. ಆಹಾರವನ್ನು ದೇವರೆಂದು ಪೂಜಿಸುವುದು ಧಾರ್ಮಿಕವಾಗಿ ಅದಕ್ಕೆ ನೀಡಿದ ಸ್ಥಾನವನ್ನು ಸೂಚಿಸುತ್ತದೆ. ಆಹಾರವನ್ನು ವೈದ್ಯಕೀಯ ವಿಜ್ಞಾನವಾಗಿಯೂ ಹೇಳಿದ್ದಾರೆ. ಕಾಲ, ಸ್ಥಳ, ಸಂದರ್ಭಗಳಿಗೆ ತಕ್ಕಂತೆ ಆಹಾರ ಕ್ರಮವನ್ನು ನಮ್ಮ ಜೀವನದಲ್ಲಿ ಹಿರಿಯರು ಅಳವಡಿಸಿದ್ದಾರೆ. ವ್ರತಗಳಲ್ಲಿ ಉಪವಾಸಗಳು, ಕಾಲಕ್ಕನುಗುಣವಾಗಿ ಉಷ್ಣ, ಶೀತ ಆಹಾರಗಳನ್ನು ತಿಳಿಸಿದ್ದಾರೆ. ಅನಾರೋಗ್ಯದಲ್ಲಿ ಈರೀತಿಯ ಆಹಾರ ಸೇವನೆಯಿಂದ ಶೀಘ್ರ ಆರೋಗ್ಯ ಪ್ರಾಪ್ತವಾಗುತ್ತದೆ ಎಂಬುದೂ ಕೂಡ ಒಂದು ವೈಜ್ಞಾನಿಕವೇ ಆಗಿದೆ.
ಪ್ರತಿ ತಿಂಗಳ ಪೌರ್ಣಮಿಯಂದು ಆಹಾರ ವಿಷಯವಾಗಿ ಅಂದರೆ ಯಾವ ಯಾವ ಆಹಾರಗಳು ನಮ್ಮನ್ನು ಆರೋಗ್ಯದೆಡೆಗೆ ಕೊಂಡೊಯ್ಯುತ್ತವೆ ಹಾಗೂ ಯಾವ ರೀತಿಯ ಆಹಾರದಿಂದ ಅನಾರೋಗ್ಯ ಉಂಟಾಗುತ್ತದೆ ಇತ್ಯಾದಿ ವಿಷಯಗಳನ್ನೊಳಗೊಂಡು "ಪೂರ್ಣಸ್ವಾಸ್ಥ್ಯಕ್ಕೆ ಆಹಾರ ಸಂಜೀವಿನಿ" ಎಂಬ ಲೇಖನ ಮಾಲಿಕೆಯೊಂದನ್ನು ಪ್ರಾರಂಭಿಸುತ್ತಿದ್ದೇವೆ. ಪ್ರತಿಯೊಬ್ಬರೂ ಇದರ ಫಲಭಾಗಿಗಳಾಗಬೇಕು. ನಮಗೆ ತಿಳಿದೋ ತಿಳಿಯದೆಯೋ ಸೇವಿಸುತ್ತಿರುವ ಆಹಾರದಿಂದ ನಮ್ಮ ಆರೋಗ್ಯ ಉಳಿಸಿಕೊಳ್ಳುವುದು ಹೇಗೆಂದು ಮುಂದಿನ ಲೇಖನಗಳಲ್ಲಿ ತಿಳಿಯೋಣ.....
ಸಂಗ್ರಹ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ