🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

🔥 ಧರ್ಮಶಾಸ್ತ್ರ-ಆಚಾರಚಿಂತನ 🔥- ೨. ಪ್ರಬೋಧೋತ್ತರಕೃತ್ಯಗಳು (ಪ್ರಾತಃಕೃತ್ಯಗಳು)

 *🔥 ಧರ್ಮಶಾಸ್ತ್ರ-ಆಚಾರಚಿಂತನ 🔥*

೨. ಪ್ರಬೋಧೋತ್ತರಕೃತ್ಯಗಳು (ಪ್ರಾತಃಕೃತ್ಯಗಳು)


ಬ್ರಾಹ್ಮಮುಹೂರ್ತದಲ್ಲಿ ಪ್ರಬೋಧವಾದ ಅನಂತರ ಮಾಡಬೇಕಾದ ಕಾರ್ಯಗಳೇ 

ಪ್ರಬೋಧೋತ್ತರಕೃತ್ಯಗಳು. ಇವನ್ನೇ ಪ್ರಾತಃಕೃತ್ಯಗಳೆಂದೂ ಕರೆದಿದ್ದಾರೆ.  

ಬ್ರಾಹ್ಮಮುಹೂರ್ತದಲ್ಲಿ ಎಚ್ಚರವಾಗಿ, ಹಾಸಿಗೆಯಿಂದ ಎದ್ದಾದ ಅನಂತರ ಮಾಡಬೇಕಾದ ಕೃತ್ಯಗಳು ಈ ರೀತಿಯಾಗಿವೆ...

೧. ಪರಮಾತ್ಮಸ್ಮರಣೆ.

೨. ಕೈಕಾಲುಮುಖಗಳನ್ನು ತೊಳೆಯುವುದು.

೩. ರಾತ್ರಿ ಧರಿಸಿದ ವಸ್ತ್ರವನ್ನು ತ್ಯಜಿಸಿ ಬೇರೆ ವಸ್ತ್ರವನ್ನು ಉಡುವುದು. 

೪. ಪುರುಷಾರ್ಥಸಾಧನೆಯ ಕುರಿತು ಚಿಂತನೆ.

೫. ಅಹಃಕೃತ್ಯಚಿಂತನೆ.

೬. ಇಷ್ಟದೇವತಾಗುರುಮಾತಾಪಿತೃಗಳ ವಂದನೆ.

೭. ಪ್ರಾತಃಸೂಕ್ತವನ್ನು, ಪ್ರಾತಃಸ್ಮರಣೆಯ ಶ್ಲೋಕಗಳನ್ನು ಪಠಿಸುವುದು.


ಈ ಮೇಲೆ ಹೇಳಿದ್ದಕ್ಕಿಂತಲೂ ಭಿನ್ನವಾದ ಪೌರ್ವಾಪರ್ಯಕ್ರಮಗಳೂ ಕೂಡ ಧರ್ಮಶಾಸ್ತ್ರ-ಪ್ರಯೋಗಗ್ರಂಥಗಳಲ್ಲಿ ಹೇಳಲ್ಪಟ್ಟಿದೆ. ಇವೆಲ್ಲವೂ ಕೂಡ ಪ್ರತ್ಯೇಕವಾಗಿ ಹೇಳಲ್ಪಟ್ಟ ವಿಧಿಗಳಾದ್ದರಿಂದ ಇವುಗಳ ಪೌರ್ವಾಪರ್ಯವನ್ನು ನಿರ್ಣಯಿಸುವುದೂ ಕಷ್ಟ. ಇವೆಲ್ಲವೂ ಕೂಡ ಪ್ರಾತಃಕಾಲದಲ್ಲಿ ಮಾಡಲೇಬೇಕಾದ ಕರ್ಮಗಳಾದ್ದರಿಂದ ಕ್ರಮವ್ಯತ್ಯಾಸವಾದರೂ ಕೂಡ ಎಲ್ಲವನ್ನೂ ಮಾಡಬೇಕು. 


೧. ಪ್ರಾತಃಕಾಲದಲ್ಲಿ ಎದ್ದು ಪರಮಾತ್ಮನ ಸ್ಮರಣೆಯನ್ನು ಮಾಡಬೇಕು. 'ಧ್ಯಾಯೀತ ಮನಸೇಶ್ವರಂ' ಎಂಬುದಾಗಿ ವ್ಯಾಸವಚನವಿದೆ. ಹಾಗೆಯೇ ಮನುಸ್ಮೃತಿಯ "ವೇದತತ್ವಾರ್ಥಮೇವ ಚ" (೪-೯೨) ಎಂಬ ವಾಕ್ಯವೂ ಕೂಡ ಇದೇ ಅರ್ಥವನ್ನು ಹೇಳುತ್ತದೆ. ವೇದತತ್ತ್ವಾರ್ಥವೆಂದರೆ ಪರಮಾತ್ಮ. ಪ್ರಾತಃಕಾಲದಲ್ಲಿ ಪರಮಾತ್ಮಚಿಂತನೆಯನ್ನು ಮಾಡಬೇಕು. 


೨. ಬೇರೆ ವಸ್ತ್ರವನ್ನು ಉಡುವುದು.

ಮಲಗಿದಾಗ ಧರಿಸಿದ ವಸ್ತ್ರಗಳನ್ನು ತ್ಯಜಿಸಿ ಬೇರೆ ವಸ್ತ್ರಗಳನ್ನು ಧರಿಸಬೇಕು. 'ಉತ್ಥಾಯ ಪಶ್ಚಿಮೇ ಯಾಮೇ ರಾತ್ರಿವಾಸಃ ಪರಿತ್ಯಜೇತ್' ಎಂಬ ಅಂಗಿರಸಸ್ಮೃತಿವಾಕ್ಯವಿದೆ. ಪ್ರಾತಃಕಾಲದಲ್ಲಿ ಎದ್ದು ರಾತ್ರಿ ಧರಿಸಿದ ವಸ್ತ್ರವನ್ನು ತ್ಯಜಿಸಬೇಕು. ಹಾಗೆಯೇ 'ಅನ್ಯದೇವ ಭವೇದ್ವಾಸಃ ಶಯನೀಯೇ ಸದೈವ ಹಿ' ಎಂಬ ಮಹಾಭಾರತವಚನದಿಂದಲೂ ಇದೇ ಅರ್ಥವು ಧ್ವನಿಸುತ್ತದೆ. (ಶಯನಕಾಲಾದಿಧೃತವಾಸಃಸು ಕಾಲಾಂತರಧೃತವಾಸೋನ್ಯತ್ವವಿಧಾನಾತ್ ಕಾಲಾಂತರೇ ಅರ್ಥಾತ್ ವಾಸೋಂತರಧಾರಣಂ ನಿಯಮ್ಯತೇ- ವೀರಮಿತ್ರೋದಯ). 


೩. ಕೈ-ಕಾಲು-ಮುಖಗಳನ್ನು ತೊಳೆಯುವುದು. 

ಪ್ರಾತಃಕಾಲದಲ್ಲಿ ಎದ್ದಾದ ಅನಂತರ ಕೈ, ಕಾಲು ಮುಖಗಳನ್ನು ತೊಳೆಯಬೇಕು. 'ಪ್ರಕ್ಷಾಲ್ಯ ಹಸ್ತಪಾದಾಸ್ಯಾನ್ಯುಪಸ್ಪೃಶ್ಯ ಹರಿಂ ಸ್ಮರೇತ್' ಎಂಬ ಅಂಗಿರೋವಚನವು (ವೀರಮಿತ್ರೋದಯ) ಹಾಗೂ 'ಉತ್ಥಾಯ ನೇತ್ರೇ ಪ್ರಕ್ಷಾಲ್ಯ ಶುಚಿರ್ಭೂತ್ವಾ ಸಮಾಹಿತಃ' ಎಂಬ ಕಾತ್ಯಾಯನವಚನವು ಈ ವಿಷಯದಲ್ಲಿ ವಿಧಿಬೋಧಕವಾಕ್ಯಗಳು. ಕೈಕಾಲುಮುಖ ಕಣ್ಣುಗಳನ್ನು ತೊಳೆಯುವುದರಿಂದ ರಾತ್ರಿ ಮಲಗಿದಾಗ ಉಂಟಾದ ಜಾಡ್ಯವು ಹೋಗಲ್ಪಟ್ಟು ಜಾಗ್ರತೆಯು ಉಂಟಾಗುತ್ತದೆ. (ಕೈಕಾಲುಮುಖಗಳನ್ನು ತೊಳೆದಾದ ಮೇಲೆ ಭಸ್ಮಧಾರಣೆಯನ್ನು ಮಾಡಿ ದೇವರಿಗೆ ನಮಸ್ಕರಿಸುವುದು)

 

೪. ಪುರುಷಾರ್ಥಚಿಂತನೆ.

ಬ್ರಾಹ್ಮ ಮುಹೂರ್ತದಲ್ಲಿ ಎದ್ದಾದ ಅನಂತರ ಪುರುಷಾರ್ಥ ಚಿಂತನೆಯನ್ನು ಮಾಡಬೇಕು. 

'ಬ್ರಾಹ್ಮೇ ಮುಹೂರ್ತೇ ಬುಧ್ಯೇತ ಧರ್ಮಾರ್ಥೌ ಚಾನುಚಿಂತಯೇತ್|' (ಮನು-೪-೯೨),

'ಬ್ರಾಹ್ಮೇ ಮುಹೂರ್ತೇ ಉತ್ಥಾಯ ಧರ್ಮಮರ್ಥಂ ಚ ಚಿಂತಯೇತ್|' (ಕೂರ್ಮಪುರಾಣ),

'ವಿಬುದ್ಧಃ ಚಿಂತಯೇತ್ ಧರ್ಮಮ್ ಅರ್ಥಂಚಾಸ್ಯ ಅವಿರೋಧಿನಮ್| ಅಪೀಡಯಾ ತಯೋಃ ಕಾಮಮ್....||' (ವಿಷ್ಣುಪುರಾಣ) 

ಈ ಮುಂತಾದ ಸ್ಮೃತಿವಾಕ್ಯಗಳಿಂದ ಪುರುಷಾರ್ಥಚಿಂತನೆಯು ಹೇಳಲ್ಪಟ್ಟಿದೆ. ಧರ್ಮವನ್ನು, ಧರ್ಮ ವಿರೋಧವಲ್ಲದ ಅರ್ಥ ಕಾಮಗಳನ್ನು ಯಥೋಚಿತ ಕಾಲಗಳಲ್ಲಿ ಸೇವಿಸುವ ಕುರಿತು ಚಿಂತಿಸಬೇಕು. 'ಪರಸ್ಪರಾನು ಬದ್ಧಾಂಶ್ಚ ಸರ್ವಾನೇತಾನ್ ವಿಚಿಂತಯೇತ್' 'ವಿಪರೀತಾನುಬದ್ಧಾಂಶ್ಚ ಧರ್ಮಾದೀಂಸ್ತಾತ ವರ್ಜಯೇತ್' ಎನ್ನುವ ವೀರಮಿತ್ರೋದಯದಲ್ಲಿ ಹೇಳಿದ ಮಾರ್ಕಂಡೇಯ ವಚನದಂತೆ ಇವುಗಳು ಪರಸ್ಪರ ಪೂರಕವಾದವುಗಳು ಆಗಿರಬೇಕು ಹಾಗೂ ಲೋಕಗರ್ಹಿತವಾದ ಧರ್ಮವನ್ನೂ, ಧರ್ಮವಿರುದ್ಧವಾದ ಅರ್ಥ-ಕಾಮಗಳನ್ನೂ ಬಿಡಬೇಕು. ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ಚತುರ್ವಿಧಪುರುಷಾರ್ಥಗಳನ್ನು ಸಾಧಿಸುವ ಕುರಿತು ಚಿಂತಿಸಬೇಕು. ಹಾಗೆಯೇ ತನ್ನ ಹಿತವನ್ನೂ ಚಿಂತಿಸಬೇಕು. 'ಚಿಂತಯೇದಾತ್ಮನೋ ಹಿತಮ್' (ಯಾಜ್ಞವಲ್ಕ್ಯಸ್ಮೃತಿ ೧-೧೧೫). 


೫. ಅಹಃಕೃತ್ಯಚಿಂತನೆ. 

ಅಹಃಕೃತ್ಯವೆಂದರೆ ಆ ದಿನದಲ್ಲಿ ಮಾಡಬೇಕಾದ ಕೆಲಸವೆಂದರ್ಥ. ಬೆಳಿಗ್ಗೆ ಎದ್ದು ಆಯಾಯ ದಿನ ಮಾಡಬೇಕಾದ ಕೆಲಸಗಳನ್ನು ಚಿಂತಿಸಬೇಕು. ಪ್ರಭಾತೇ ಉತ್ಥಾಯ ಇಷ್ಟಂ ದೈವತಂ ಮನಸಾ ನತ್ವಾ ತದಹಃಕೃತ್ಯಂ ಸ್ಮರೇತ್ (ಸ್ಮೃತ್ಯರ್ಥಸಾರ). ಬೆಳಿಗ್ಗೆ ಎದ್ದು ಇಷ್ಟದೇವತೆಯ ಸ್ಮರಣೆಯನ್ನು ಮಾಡಿ ಆ ದಿನದಲ್ಲಿ ಮಾಡಬೇಕಾದ ಕಾರ್ಯ-ಕಲಾಪಗಳ ಬಗ್ಗೆ ಚಿಂತಿಸಬೇಕು. ದಿನದ ಯಾವ ಭಾಗವನ್ನೂ ಕೂಡ ನಿಷ್ಫಲಗೊಳಿಸದೇ ಪುರುಷಾರ್ಥ ಸಾಧನೆಯ ಮೂಲಕ ಸಫಲಗೊಳಿಸಬೇಕೆಂದು 'ನ ಪೂರ್ವಾಹ್ಣಮಧ್ಯಾಹ್ನಾಪರಾಹ್ಣಾನ್ ಅಫಲಾನ್ ಕುರ್ಯಾತ್' ಎಂಬ ಗೌತಮವಚನದಿಂದ ತಿಳಿಯುತ್ತದೆ.


೬. ಇಷ್ಟದೇವತಾಗುರು-

-ಮಾತಾಪಿತೃಗಳ ವಂದನೆ.

 'ಪ್ರಭಾತೇ ಉತ್ಥಾಯ ಇಷ್ಟಂ ದೈವತಂ ಮನಸಾ ನತ್ವಾ...' (ಸ್ಮೃತ್ಯರ್ಥಸಾರ), 

'ಗುರುಂ ವಿಷ್ಣುಂ ನಮಸ್ಕೃತ್ಯ ಮಾತಾಪಿತ್ರೋಸ್ತಥೈವ ಚ' (ಶೌನಕ),

'ಬ್ರಾಹ್ಮೇ ಮುಹೂರ್ತೇ ಪ್ರಥಮಂ ವಿಬುಧ್ಯೇತ್

ಅನುಸ್ಮರೇದ್ದೇವವರಾನ್ ಮುನೀಂಶ್ಚ|' (ವಾಮನಪುರಾಣ)

 ಈ ಎಲ್ಲ ವಚನಗಳು ಪ್ರಾತಃಕಾಲದಲ್ಲಿ ಇಷ್ಟದೇವತೆಗಳಿಗೆ, ಗುರುಗಳಿಗೆ, ತಂದೆತಾಯಿಗಳಿಗೆ ನಮಸ್ಕರಿಸಬೇಕೆಂದು ಹೇಳುತ್ತವೆ. ಗುರುಗಳು, ಮಾತಾಪಿತೃಗಳು ಸನ್ನಿಹಿತರಾಗಿ ಇಲ್ಲದಿದ್ದರೆ ಅವರ ಸ್ಮರಣೆಯನ್ನಾದರೂ ಮಾಡಬೇಕು.

೭. ಪ್ರಾತಃಸೂಕ್ತವನ್ನು, ಪ್ರಾತಃಸ್ಮರಣೆಯ ಶ್ಲೋಕಗಳನ್ನು ಪಠಿಸುವುದು.

ಪ್ರಾತಃಕಾಲದಲ್ಲಿ ಪ್ರಾತಃಸೂಕ್ತವನ್ನು ಪಠಿಸಬೇಕೆಂದು ಋಗ್ವಿಧಾನದಲ್ಲಿ ಹೇಳಲ್ಪಟ್ಟಿದ್ದು ಆಹ್ನಿಕಚಂದ್ರಿಕಾ ಮುಂತಾದ ಗ್ರಂಥಗಳಲ್ಲಿ ಪ್ರಾತಃಪಠನೀಯಗಳೆಂದು ಪ್ರಾತಃಸೂಕ್ತವನ್ನು ಗಣಿಸಿದ್ದಾರೆ. ಪುರಾಣಗಳಲ್ಲಿ, ನಿಬಂಧಗ್ರಂಥಗಳಲ್ಲಿ ಹಾಗೂ ಪ್ರಯೋಗಗ್ರಂಥಗಳಲ್ಲಿ ವಿಸ್ತಾರವಾದ ಪ್ರಾತಃಸ್ಮರಣೆಯ ಶ್ಲೋಕಗಳಿವೆ. ಅವುಗಳನ್ನು ಯಥಾಸಾಧ್ಯ ಪಠಿಸಬೇಕು. ಪ್ರಾತಃಸ್ಮರಣೆಯ ಶ್ಲೋಕಗಳನ್ನು ಮುಂದಿನ ಭಾಗದಲ್ಲಿ ಸಂಗ್ರಹಿಸಿ ಕೊಡಲಾಗುವುದು. 

ನಿರೂಪಣೆ - 

 ಶ್ರೀಸ್ವರ್ಣವಲ್ಲೀ ಭಕ್ತವೃಂದ