🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಹಿಂದೂ ವತ್ಸರಾರಂಭ ವಿಧಗಳು

ಹೊಸವರುಷ ಎಂಬುದು ಎಲ್ಲರಿಗೂ ಒಂದು ಸಂತಸದ ಕ್ಷಣ. ಆದರೆ ಹುರುಳಿಲ್ಲದ ವಿದೇಶಿಗರ ಹೊಸವರ್ಷದಂತಲ್ಲ ನಮ್ಮ ಹಿಂದೂ ಹೊಸವರ್ಷ. ಪ್ರಕೃತಿಯಲ್ಲಿನ ಬದಲಾವಣೆಯಿಂದ ಒಡಗೂಡಿರುತ್ತದೆ ನಮ್ಮ ವತ್ಸರಾರಂಭ. ಹೊಸ ವರುಷಕೆ ಹೊಸತನ ನಮ್ಮಲ್ಲಿ ಬರುತ್ತದೆ. ಅದೇ ನಮ್ಮ ಸಾಂಪ್ರದಾಯಿಕ, ಜ್ಯೌತಿಷ, ಪ್ರಾಕೃತಿಕ ಸಂತಸ ತರುವ ಹೊಸ ವರ್ಷ.

ಯುಗಾದಿ ಹಬ್ಬದ ದಿನ ಸಂವತ್ಸರ ಬದಲಾಗುವ ಮೂಲಕ ಹೊಸವರ್ಷವೇನೋ ಪ್ರಾರಂಭವಾಗುತ್ತದೆ ನಿಜ. ಆದರೆ ಅದರಲ್ಲಿ ಎಷ್ಟು ವಿಧವಿದೆ ಎಂಬುದು ಯಾರಿಗೆಲ್ಲ ಗೊತ್ತು ಅಲ್ಲವೆ? ಸಂವತ್ಸರ ಬದಲಾಗುವುದರಲ್ಲಿ ಐದು ವಿಧವಿದೆ. ಆದರೆ ಅವೆಲ್ಲವೂ ಯುಗಾದಿ ಹಬ್ಬದಂದೇ ಬದಲಾಗುವುದಿಲ್ಲ ಎಂಬುದೂ ಸಹ ಸತ್ಯ ಸಂಗತಿ. ನಾವು ಆಚರಿಸುವ ಯುಗಾದಿ ಹಬ್ಬವು ಚಾಂದ್ರಮಾನ ಯುಗಾದಿಯಾಗಿದೆ. ಇನ್ನು ಉಳಿದ ನಾಲ್ಕು ವಿಧವೆಂದರೆ ಸೌರಮಾನ ಯುಗಾದಿ, ಸಾವನ ಯುಗಾದಿ, ನಾಕ್ಷತ್ರ ಯುಗಾದಿ, ಬಾರ್ಹಸ್ಪತ್ಯ ಯುಗಾದಿ. ಇಲ್ಲಿ ಹೇಳಿರುವ ಯುಗಾದಿ ಎಂಬುದನ್ನು ಹಬ್ಬವೆಂದು ತಿಳಿಯದೇ ಸಂವತ್ಸರದ ಆರಂಭ ಎಂಬುದಾಗಿ ತಿಳಿಯಬೇಕು. ಏಕೆಂದರೆ ಎಲ್ಲಾ ವಿಧದ ಯುಗಾದಿಗೂ ನಾವುಗಳು ಹಬ್ಬದ ಆಚರಣೆ ಮಾಡುವುದಿಲ್ಲ. ಇರಲಿ ಈಗ ಒಂದೊಂದೆ ಸಂವತ್ಸರ ಆರಂಭದ ಕುರಿತು ಸ್ವಲ್ಪಮಟ್ಟಿನ ಮಾಹಿತಿಯನ್ನು ತಿಳಿಯೋಣ.

ಶುಕ್ಲಪಕ್ಷದ ಪ್ರತಿಪದೆಯಿಂದ ಕೃಷ್ಣಪಕ್ಷದ ಅಮಾವಾಸ್ಯೆಯವರೆಗೆ ಒಂದು ಮಾಸವಾಗಿ ಪರಿಗಣಿಸಿ ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತೀಕ,  ಮಾರ್ಗಶೀರ್ಷ, ಪುಷ್ಯ, ಮಾಘ, ಫಾಲ್ಗುಣ ಎಂದು ಹನ್ನೆರಡು ಮಾಸಗಳನ್ನು ಹೇಳಲಾಗಿದೆ. ಅಧಿಕ ಮಾಸ ಬಂದಾಗ ಹದಿಮೂರು ಮಾಸವನ್ನು ಪರಿಗಣಿಸಲಾಗುತ್ತದೆ. ಈ ಕ್ರಮದಲ್ಲಿ ಎಣಿಸಿದಾಗ 354  ದಿನಗಳಿಂದ ಕೂಡಿದ ಒಂದು ವರ್ಷವನ್ನು ಚಾಂದ್ರಮಾನ ಸಂವತ್ಸರ ಎಂಬುದಾಗಿ ಹೇಳಲಾಗುತ್ತದೆ. ಇದನ್ನು ಪ್ರಭವಾದಿ 60 ಸಂವತ್ಸರಗಳ ಮೂಲಕ ಹೇಳಲಾಗುತ್ತದೆ. ಅಂದರೆ ಚೈತ್ರಾದಿ ಮಾಸಗಳ ಒಂದು ವೃತ್ತ ಮುಗಿದರೆ ಒಂದು ಸಂವತ್ಸರ. ಮುಂದಿನ ಸಂವತ್ಸರ ಪ್ರಾರಂಭವಾಗುವ ದಿನವೇ ಚಾಂದ್ರಮಾನ ಯುಗಾದಿಯಾಗಿರುತ್ತದೆ.

ಸೌರ ಸಂವತ್ಸರವೆಂಬುದು ಸೂರ್ಯನ ಸ್ಥಾನವನ್ನು ಅನುಸರಿಸಿ ಹೇಳುವ ಪದ್ದತಿಯಾಗಿದೆ. ಅಂದರೆ  ಸೂರ್ಯನು ಮೇಷಾದಿ ರಾಶಿಗಳಲ್ಲಿ ಇರುವ ಸ್ಥಾನವನ್ನನುಸರಿಸಿ ಹೇಳಲಾಗುತ್ತದೆ. ಮೇಷ ರಾಶಿಯಿಂದಾರಂಭಿಸಿ ಮೀನ ರಾಶಿಯವರೆಗೆ ಹನ್ನೆರಡು ಮಾಸಗಳು. ಇದರಲ್ಲಿ 365 ದಿನಗಳಿರುತ್ತವೆ. ಇದಕ್ಕೆ ಸಂವತ್ಸರ ಸಂಜ್ಞೆ ಇರುವುದಿಲ್ಲವಾದರೂ ಸಾಮಾನ್ಯವಾಗಿ ಮೀನ ರಾಶಿಯನ್ನು ದಾಟಿ ಮೇಷ ರಾಶಿಯಲ್ಲಿ ಸೂರ್ಯನ ಪಥಾರಂಭವಾಗುವ ದಿನವನ್ನು ಸೌರಮಾನದಂತೆ ಹೊಸವರ್ಷ ಎಂದು ಹೇಳಬಹುದು.

ಇನ್ನು ಸಾವನ ಸಂವತ್ಸರ. ಸೂರ್ಯೊದಯದಿಂದ ಮತ್ತೊಂದು ಸೂರ್ಯೋದಯಕ್ಕೆ ಒಂದು ದಿನವೆಂದು ಪರಿಗಣಿಸಿ ಅದರಂತೆ 360  ದಿನಗಣನೆ ಮಾಡಲಾಗುತ್ತದೆ. ಇದನ್ನು ಸಾವನ ಸಂವತ್ಸರವೆಂದು ಪರಿಗಣಿಸುತ್ತಾರೆ. ನಾಕ್ಷತ್ರವತ್ಸರಕ್ಕೆ 12 ನಾಕ್ಷತ್ರ ಮಾಸಗಳಾಗುವವು. ಇದಕ್ಕೆ 324 ದಿನಗಳು. ಮೇಷಾದಿ ರಾಶಿಗಳಲ್ಲಿ ಗುರುವು ಸಂಚರಿಸುವ ವರ್ಷಕ್ಕೆ ಬಾರ್ಹಸ್ಪತ್ಯ ಎನ್ನುವರು. ಇದಕ್ಕೆ 361 ದಿನಗಳು. ನಿತ್ಯ ನೈಮಿತ್ತಿಕಾದಿ ಕರ್ಮಗಳಲ್ಲಿ ಚಾಂದ್ರಮಾನ ಸಂವತ್ಸರದಂತೆ ಸಂಕಲ್ಪಾದಿಗಳನ್ನು ಮಾಡಬೇಕು ಎಂಬುದಾಗಿ ಧರ್ಮಸಿಂಧುವಿನಲ್ಲಿ ಉಲ್ಲೇಖಿಸಲ್ಪಟ್ಟಿದೆ. 

ಇನ್ನು ಉತ್ತರಾಯಣ ಹಾಗೂ ದಕ್ಷಿಣಾಯನವನ್ನು ಸೌರಮಾನಕ್ಕನುಗುಣವಾಗಿ ಹೇಳಲಾಗುತ್ತದೆ. ಸೂರ್ಯನು ಕರ್ಕ ರಾಶಿಯಿಂದ ಧನುವಿನವರೆಗೆ ಸಂಚರಿಸುವ ಕಾಲವನ್ನು ದಕ್ಷಿಣಾಯನವೆಂದೂ, ಮಕರದಿಂದ ಸಿಂಹ ರಾಶಿಯವರೆಗಿನ ಸಂಚಾರವನ್ನು ಉತ್ತರಾಯಣವೆಂದೂ ಪರಿಗಣಿಸಲಾಗುತ್ತದೆ. ಇಲ್ಲಿ ಉತ್ತರಾಯಣ ದಕ್ಷಿಣಾಯನ ಎಂಬುದು ಸೂರ್ಯನ ಚಲನೆಯನ್ನು ತಿಳಿಸುತ್ತದೆ. ಪೂರ್ವದಲ್ಲಿ ಉದಯಿಸಿದ ಸೂರ್ಯನು ಪಶ್ಚಿಮದಲ್ಲಿ ಅಸ್ತನಾಗುವವರೆಗೆ ಉತ್ತರವಕ್ರಿಯಾಗಿ ಚಲಿಸಿದರೆ ಅದು ಉತ್ತರಾಯಣವಾಗಿರುತ್ತದೆ. ಸೂರ್ಯನು ದಕ್ಷಿಣದ ಕಡೆ ಬಾಗಿ ಚಲಿಸುವುದು ದಕ್ಷಿಣಾಯನದಲ್ಲಿ. ಸೂರ್ಯನು ಮಕರ ಮಾಸ ಪ್ರಾರಂಭವಾದ ತಕ್ಷಣವೇ ಉತ್ತರದಿಂದ ಚಲಿಸುತ್ತಾನೆ ಅಥವಾ ಸಿಂಹ ಮಾಸ ಪ್ರಾರಂಭವಾದೊಡನೆ ದಕ್ಷಿಣದಿಂದ ಚಲಿಸುತ್ತಾನೆ ಎಂದರ್ಥವಲ್ಲ. ಜ್ಯೋತಿಷ್ಯದ ಪ್ರಕಾರ ಸೂರ್ಯನ ಉತ್ತರ ಅಥವಾ ದಕ್ಷಿಣದ ಚಲನೆಯು ಮೊದಲೇ ಪ್ರಾರಂಭವಾಗಿರುತ್ತದೆ. ಆದರೆ ಅದಕ್ಕೊಂದು ನಿಗದಿತ ದಿನ ಸೂಚಿಸುವುದಕ್ಕೋಸ್ಕರ ಮಾಸಗಳ ಪರಿಕಲ್ಪನೆ ನೀಡಲಾಗಿದೆ. 

ವಸಂತಾದಿ ಸಂಜ್ಞೆಯಿಂದ ಹೇಳಲಾಗುವ ಋತುಗಳನ್ನೂ ಸಹ ಸೌರ ಹಾಗೂ ಚಾಂದ್ರ ಎಂಬುದಾಗಿ ಎರಡು ವಿಧವಾಗಿ ಹೇಳಲಾಗುತ್ತದೆ. ಮೇಷದಿಂದಾರಂಭಿಸಿ ಎರಡೆರಡು ಮಾಸಗಳಿಗೊಂದರಂತೆ ಒಟ್ಟು ಆರು ಋತುಗಳೆ ಸೌರಮಾನ ಋತುಗಳು.  ಚೈತ್ರಾದಿ ಮಾಸಗಳನ್ನು ಎರಡೆರಡರಂತೆ ವಿಂಗಡಿಸಿ ಕ್ರಮವಾಗಿ ಆರು ವಿಭಾಗ ಮಾಡಿ ಹೇಳುವ ವಿಧಾನವೇ ಚಾಂದ್ರಮಾನ ಋತುಗಳು. ಮಾಸಗಳಲ್ಲಿ ನಾಲ್ಕು ವಿಧ. ಚಾಂದ್ರ, ಸೌರ, ಸಾವನ, ನಾಕ್ಷತ್ರ ಎಂಬುದಾಗಿ. ಪಕ್ಷಗಳನ್ನು ಶುಕ್ಲ (ಶುದ್ಧ) ಹಾಗೂ ಕೃಷ್ಣ (ಬಹುಳ) ಪಕ್ಷ ಎಂಬುದಾಗಿ ಹೇಳುತ್ತಾರೆ. ಶುಕ್ಲ ಪಕ್ಷ ಪೌರ್ಣಿಮೆಯಲ್ಲಿ ಅಂತ್ಯವಾದರೆ, ಕೃಷ್ಣಪಕ್ಣವು ಅಮಾವಾಸ್ಯೆಯಲ್ಲಿ ಅಂತ್ಯವಾಗುತ್ತದೆ.

ಕಾಲದ ವಿಧಗಳೇನೇ ಇರಲಿ
ಅತಃ ಸಂವತ್ಸರಫಲಂ ಗ್ರಹಾಧೀನಮಭೂತ್ ಕಿಲ|
ಗ್ರಹಾಃ ಕಾಲಾನುಸಾರೇಣ ದಾಸ್ಯಂತಿ ಸದಸತ್ಫಲಮ್||
ಸಕಾಲಃ ಸೃಷ್ಟಿಮುಖ್ಯೇಷು ಯುಗ-ಕಲ್ಪವ್ಯವಸ್ಥಯಾ|
ಸದಾಕ್ಲಪ್ತಃಪರೇಣೈವ ತಸ್ಮಾದ್ವಕ್ಪ್ಯೇಹಮಾದಿತಃ||
ಅಂದರೆ ಸಂವತ್ಸರಾದಿ ಫಲಗಳು ಗ್ರಹಾಧೀನವಾಗಿದೆ  ಗ್ರಹಗಳು ಕಾಲಕಾಲಕ್ಕೆ ಒಳ್ಳೆಯ ಹಾಗೂ ಕೆಟ್ಟ ಫಲಗಳನ್ನು ಕೊಡುತ್ತವೆ. ಈ ಕಾಲ ನಿರ್ಣಯವು ಯುಗ ಕಲ್ಪಾದಿಗಳಾಗಿ ಪರಬ್ರಹ್ಮನಿಂದಲೆ ಮಾಡಲ್ಪಟ್ಟಿದ್ದಾಗಿವೆ ಎಂಬುದಾಗಿದೆ. ಪ್ರತಿನಿತ್ಯ ಕಾಲಾದಿಗಳ ಪಠಣ ಅಥವಾ ಶ್ರವಣದಿಂದ ವಿವಿಧ ಪುಣ್ಯಫಲವನ್ನು ಶಾಸ್ತ್ರದಲ್ಲಿ ಹೇಳಲಾಗಿದೆ.
ತಿಥೇಶ್ಚೈಶ್ವರ್ಯಮಾಪ್ನೋತಿ ವಾರಾದಾಯುಷ್ಯವರ್ಧನಮ್|
ನಕ್ಷತ್ರಾದ್ಧರತೇಪಾಪಂ ಯೋಗಾದ್ರೋಗನಿವಾರಣಮ್|
ಕರಣಾತ್ಕಾರ್ಯಸಿದ್ಧಿಂಚ ಪಂಚಾಗಫಲಮುತ್ತಮಮ್||
ಅಂದರೆ ಕಾಲಮಾನದ ಪ್ರಮುಖ ಐದು ಅಂಗಗಳಾದ ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇವುಗಳನ್ನು ತಿಳಿಯುವುದರಿಂದ ವಿವಿಧ ಫಲಗಳನ್ನು ಹೇಳಿದ್ದಾರೆ. ಆ ಫಲಗಳು ಹೀಗಿವೆ ತಿಥಿ- ಐಶ್ವರ್ಯ ಪ್ರಾಪ್ತಿ, ವಾರ- ಆಯುಷ್ಯ ಪ್ರಾಪ್ತಿ, ನಕ್ಷತ್ರ- ಪಾಪನಿವಾರಣೆ, ಯೋಗ- ರೋಗನಿವಾರಣೆ, ಕರಣ- ಕಾರ್ಯಸಿದ್ಧಿ. ಇವೆಲ್ಲವೂ ಅಂದರೆ ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳು ಪ್ರತಿನಿತ್ಯ ಬಲಲಾಗುತ್ತವಾದ್ದರಿಂದ ಪ್ರತಿನಿತ್ಯವೂ ಇವುಗಳನ್ನು ಗಮನಿಸುವುದು ಅವಶ್ಯಕ. ಇನ್ನುಳಿದ ಕಾಲಮಾನಗಳು ಅಂದರೆ ಸಂವತ್ಸರ, ಅಯನ, ಮಾಸ, ಪಕ್ಷಗಳು ಪ್ರತಿನಿತ್ಯ ಬದಲಾಗದಿರುವುದರಿಂದ ಅವುಗಳನ್ನು ತಿಳಿಯುವುದಕ್ಕೆ  ಪ್ರತ್ಯೇಕವಾಗಿ ಫಲಗಳನ್ನು ಹೇಳಿಲ್ಲ, ಅಂದಮಾತ್ರಕ್ಕೆ ಫಲಗಳಿಲ್ಲವೆಂದಲ್ಲ.

ಅದೇನೇ ಇರಲಿ ಯುಗಾದಿಯ (ಹೊಸ ವರ್ಷ ಆರಂಭದ) ಬಗ್ಗೆ ತಿಳಿಯುವ ಮೊದಲು ಅವುಗಳ ಕಾಲಮಾನದ ಕುರಿತು ತಿಳಿಯುವುದು ಅವಶ್ಯಕ. ಯುಗಾದಿ ಎಂಬುದು ಒಂದೊಂದು ಯುಗದ ಆದಿಯಾಗಿಗೆ. ಅಂದರೆ ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ ಈ ನಾಲ್ಕು ಯುಗಗಳ ಆದಿಯೂ ಒಂದೇ ತಿಥಿಯಂದಾಗಿಲ್ಲ. ನಾಲ್ಕೂ ಯುಗಗಳಿಗೂ ಬೇರೆ ಬೇರೆ ಆರಂಭದ ದಿನಗಳಿದೆ. ಅವೆಲ್ಲವುಗಳ ಮಾಹಿತಿಯನ್ನು ಪ್ರತ್ಯೇಕ ಲೇಖನದಲ್ಲಿ ತಿಳಿಯಬೇಕಷ್ಟೆ!
ಲೇಖಕರು: ಸುಬ್ರಹ್ಮಣ್ಯ ಜೋಶಿ ಕೋಡೀಗಾರ್
ಸಂಗ್ರಹ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ