ಹನ್ನೊಂದು ವರುಷದ ಹಿಂದೆ ಇದೇ ಮಾಘ ಬಹುಳದಲ್ಲಿ ( ಚತುರ್ಥಿ ಶನಿವಾರ 2 - 2 - 1991 ) ಪೂಜ್ಯ ಗಂಗಾಧರೇಂದ್ರರೆಂಬ ಅಭಿಧಾನದಿಂದ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧಿಪತಿಗಳಾಗಿ ಪೀಠಾರೋಹಣ ಮಾಡಿದ ಓರ್ವ ಯುವ ಸಂನ್ಯಾಸಿಗಳಿವರು. ಅಂದು ಪೀಠವೇರಿದ ಸಮಯದಲ್ಲಿ ಅವರಿಗೊಂದು ಪತ್ರ ಬರೆದಿದ್ದೆ. ಆಧುನಿಕ ಯುವ ಜನತೆಯನ್ನು ಸ್ಪಂದಿಸುವಂತಹ ಸಂಸ್ಕೃತ ಶಿಕ್ಷಣದ ಬಗೆಗೆ ಯೋಜನೆಯಿರಬೇಕೆಂದು ಆ ಪತ್ರದ ಪ್ರಮುಖ ವಿಷಯವಾಗಿತ್ತು. ಆದರೆ ಅದಕ್ಕೆ ಉತ್ತರ ಬಂದಿರಲಿಲ್ಲ. ಮರೆತಿರಬಹುದೆಂದು ತಿಳಿದಿದ್ದೆ. ಒಂದೆರಡು ವರುಷಗಳ ನಂತರ ಕಾರ್ಯಾರ್ಥವಾಗಿ ಸ್ವರ್ಣವಲ್ಲಿಗೆ ಹೋದಾಗ ಈ ವಿಷಯವನ್ನು ಸ್ವಾಮಿಗಳೇ ಪ್ರಸ್ತಾಪಿಸಿದ್ದು ನನ್ನ ಪತ್ರದ ವಿಷಯವನ್ನು ಅವರು ಗಂಭೀರವಾಗಿ ಪರಿಗಣಿಸಿದ ವಿಷಯ ತಿಳಿದು ಆಶ್ಚರ್ಯವಾಯಿತು! ಶ್ರೀಮಠದ ಆಶ್ರಯದಲ್ಲಿ ಸಂಸ್ಕೃತಾಧ್ಯಯನ ಹಾಗೂ ಸಂಶೋಧನೆಗಾಗಿ ಪ್ರತಿಷ್ಠಾನವನ್ನು ಪ್ರಾರಂಭಿಸಲು ಯೋಜನೆ ತಯಾರಿಸಲೋಸುಗ ನನ್ನ ಸಂಚಾಲಕತ್ವದಲ್ಲೇ ಒಂದು ಸಮಿತಿಯ ರಚನೆಯಾದುದು ನನ್ನ ಸಲಹೆಗೆ ನನ್ನನ್ನೇ ಕಾರ್ಯರೂಪಕ್ಕಿಳಿಸಿದುದು ಚಾತುರ್ಯಪೂರ್ಣವೆಂದೆನಿಸಿತು. ನನ್ನ ಪ್ರಾರ್ಥನೆಯಂತೆ ಶ್ರೀಮಠದಲ್ಲಿ "ಸಂಸ್ಕೃತ ಸಾಹಿತ್ಯಕ್ಕೆ ಉತ್ತರಕನ್ನಡ ಜಿಲ್ಲೆಯ ಕೊಡುಗೆ" ಕುರಿತು ರಾಜ್ಯಸ್ತರದ ದ್ವಿದಿನಗಳ ವಿಚಾರಗೋಷ್ಠಿಯೊಂದನ್ನು ಏರ್ಪಡಿಸುವ ಅವಕಾಶ ಲಭಿಸಿತು. ನಾನಾಗ ಕಟಿಲು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲನಾಗಿದ್ದು ಹಾಗೂ ಸಂಸ್ಕೃತ ಸ್ನಾತಕೋತ್ತರ ಕೇಂದ್ರದ ನಿರ್ದೆಶಕನೂ ಆಗಿರುವ ನೆಲೆಯಲ್ಲಿ ಈ ಗೋಷ್ಠಿಯು ಎರಡು ಸಂಸ್ಥೆಗಳ ಸಹಯೋಗದಲ್ಲಿ ಸ್ವಾಮಿಗಳ ಕೃಪಾಶೀರ್ವಾದದಿಂದ ಯಶಸ್ವಿಯಾಗಿ ನಡೆಯಿತು. ಅನಂತರ 1998ರಲ್ಲಿ ಶ್ರೀಗಳು ಮಂಗಳೂರಿಗೆ ಪ್ರಪ್ರಥಮವಾಗಿ ಆಗಮಿಸಿದಾಗಿನ ಯಶಸ್ವೀ ಕಾರ್ಯಕ್ರಮಗಳಿಂದ ಸಂಪರ್ಕ ಬೆಳೆದು ಮುಕ್ತವಾಗಿ ಪ್ರಶ್ನಿಸಿ ಸಂದರ್ಶನ ನಡೆಸುವವರೆಗೂ ಪೂಜ್ಯ ಗಂಗಾಧರೇಂದ್ರರೊಡನೆ ಸಂದರ್ಭ ಸಾಧಿಸಿ ಸಂದರ್ಶನ ನಡೆಸಿದ ಪೂರ್ಣ ಪಾಠವಿಂತಿದೆ.
ಪ್ರಶ್ನೆ 1 : ತಮಗೆ ಸಂನ್ಯಾಸ ಸ್ವೀಕರಿಸಬೇಕೆಂಬ ಯೋಚನೆಗೆ ಯಾವಾಗ ಮೊಳಕೆಯೊಡೆಯಲು ಆಸ್ಪದವಾಯಿತು ?
ಸ್ವಾಮಿಗಳು: ಬಾಲ್ಯಕಾಲದಲ್ಲಿಯೇ ಸಂಸಾರಕ್ಕಿಂತ ಸಂನ್ಯಾಸದ ಮೇಲೆ ತೀವ್ರವಾದ ಮನಸ್ಸಿತ್ತು, ಆದರೆ ನಿಶ್ಚಿತವಾಗಿ ಯಾವಾಗ ಈ ಯೋಚನೆ ಬಂದಿತು ಎನ್ನುವುದು ನೆನಪಿಲ್ಲ.
ಪ್ರಶ್ನೆ 2 : ಪೂರ್ವಾಶ್ರಮದ ಸಂಸ್ಕಾರ ಸಂನ್ಯಾಸ ಸ್ವೀಕರಿಸಿದ ನಂತರ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುವುದುಂಟೆ ? ಇದ್ದರೆ ಯಾವ ರೀತಿಯಲ್ಲಿ?
ಉತ್ತರ : ಪೂರ್ವಾಶ್ರಮದ ಸಂಸ್ಕಾರವೆಂದರೆ ಗುರುಹಿರಿಯರಲ್ಲಿ ಶ್ರದ್ದೆ, ಮಠ - ಮಂದಿರಗಳ ಬಗೆಗೆ ಪರಿಜ್ಞಾನ, ಧಾರ್ಮಿಕ ಸಾಮಾಜಿಕ ಕ್ಷೇತ್ರಗಳ ಪರಿಚಯ, ಇವುಗಳೆಲ್ಲ ಬರುವುದರಿಂದ ಆ ಪ್ರಭಾವ ಇದ್ದೇ ಇರುತ್ತದೆ . ಅಂತಹ ಸತ್ಪ್ರಭಾವದ ಸಂಗಡ ಸಂನ್ಯಾಸ ಸ್ವೀಕರಿಸಿ ಶ್ರೀಮಠಕ್ಕೆ ಆಗಮಿಸಿದ ನಂತರವೂ ಕೆಲವು ವಿಶಿಷ್ಟ ಸಂಸ್ಕಾರಗಳ ಪ್ರಭಾವದ ಅನುಭವವಾಗುತ್ತದೆ.
ಪ್ರಶ್ನೆ 3 : ವಿರಕ್ತರಾಗಿದ್ದರೂ ಪೀಠಾಧಿಪತಿಗಳಾಗಿರುವುದರಿಂದ ಪ್ರಾಪಂಚಿಕ ಜವಾಬ್ದಾರಿಯ ಹೊಣೆಯನ್ನು ಹೊತ್ತ ಅನುಭವವಾಗುವುದಿಲ್ಲವೆ?
ಉತ್ತರ : ನಿಜ ಹಾಗಾಗುತ್ತದೆ. ಆದರೆ ವಿರಕ್ತಿ ಹಿನ್ನೆಲೆಯಲ್ಲಿ ಗಟ್ಟಿಯಾಗಿರಬೇಕು. ಅವರ ಮುಂದೆ ಪೀಠಾಧಿಪತ್ಯದ ಜವಾಬ್ದಾರಿ ಇರಬೇಕು. ಹಾಗಿದ್ದಲ್ಲಿ ಇದನ್ನು ಸಂತುಲನದಿಂದ ನಡೆಸಿಕೊಂಡು ಹೋಗಬಹುದು. ಮತ್ತು ವಿರಕ್ತಿ ಕಡಿಮೆಯಾಗಿ ಪೀಠಾಧಿಪತಿತ್ವವೇ ಹೆಚ್ಚಾದಲ್ಲಿ ಅಂಥವನಿಗೆ ತುಂಬ ಕಷ್ಟ ಬರುವುದು. ಹಾಗಾಗಿ ಯಾವಾಗಲೂ ವಿರಕ್ತಿಗೇ ಪ್ರಾಧಾನ್ಯ. ಪೀಠಾಧಿಪತಿತ್ವಕ್ಕೆ ಗೌಣ ಸ್ಥಾನವೇ!
ಪ್ರಶ್ನೆ 4 : ಇತ್ತೀಚೆಗೆ ವಿರಕ್ತಿಗಿಂತ ಸ್ವಾಮಿಗಳಲ್ಲಿ ಪೀಠಾಧಿಪತ್ಯವನ್ನೇ ವಿಶೇಷವಾಗಿ ಬಯಸುವ ಜನ ಹೆಚ್ಚಾಗಿದ್ದಾರೆ. ಅಂತಹವರು ಸಾಮಾಜಿಕ, ಶೈಕ್ಷಣಿಕ ಕಾರ್ಯಗಳನ್ನು ಪೀಠಾಧಿಪತಿಗಳಿಂದ ಹೆಚ್ಚು ಬಯಸುತ್ತಾರೆ. ಅಂತಹ ಜನರಿಗೆ ತಿಳಿಹೇಳುವ ಬಗೆ ಹೇಗೆ?
ಉತ್ತರ : ಈ ವಿಷಯದಲ್ಲಿ ಜನರಿಗೆ ತಿಳುವಳಿಕೆ ಕೊಡುವ ಬದಲು ಪೀಠಾಧಿಪತಿಗಳೇ ಹೆಚ್ಚು ತಿಳಿದುಕೊಳ್ಳುವುದು ಒಳ್ಳೆಯದು. ಜನರು ಒಂದೊಂದು ಕಾಲಕ್ಕೆ ಅನುಸಾರವಾಗಿ ಒಂದೊಂದು ಮನೋಭೂಮಿಕೆಯಲ್ಲಿ ಇರುತ್ತಾರೆ. ಆದರೆ ಪೀಠಾಧಿಪತಿಯಾದವನು ತನಗೆ ವಿರಕ್ತಿಯೇ ಪ್ರಧಾನ ಎನ್ನುವುದನ್ನು ಅರಿತುಕೊಳ್ಳಬೇಕು. ಶಿಕ್ಷಣ ಮತ್ತು ಸಾಮಾಜಿಕ ಕಾರ್ಯ ಅನಂತರ ಎಂಬುದನ್ನು ತಮ್ಮ ಆಚರಣೆಯಿಂದಲೇ ತೋರಿಸುವುದು ಸೂಕ್ತ.
ಪ್ರಶ್ನೆ 5 : ಖಾಖಿ, ಖಾವಿ, ಖಾದಿ ಇವುಗಳಿಂದ ತುಂಬ ದೂರವೂ ಇರಬಾರದು, ಹತ್ತಿರವೂ ಇರಬಾರದು ಎನ್ನುವ ಒಂದು ಅಭಿಪ್ರಾಯವಿದೆ. ಅದಕ್ಕೆ ನಿಮ್ಮ ಅನಿಸಿಕೆಯೇನು?
ಉತ್ತರ : ಅಪ್ರಾಮಾಣಿಕತೆ ಅತಿಯಾದಾಗ ಇಂತಹ ಮಾತುಗಳು ಬರುತ್ತವೆ. ಇಲ್ಲಿಯೂ ಅಪ್ರಾಮಾಣಿಕತೆ ಇದ್ದಲ್ಲಿ ಅಂತಹವರಿಂದ ದೂರವಿರುವುದೇ ಲೇಸು. ಆದರೆ ಈ ಮೂರೂ ಕ್ಷೇತ್ರಗಳಲ್ಲಿ ಒಳ್ಳೆಯವರೂ ಇದ್ದಾರೆ ಎಂಬುದನ್ನು ನೆನಪಿಡಬೇಕು.
ಪ್ರಶ್ನೆ 6: ಪೀಠಾಧಿಪತಿಯಾಗಿ ಹತ್ತು ವರ್ಷಗಳಾದವು. ಈ ಅವಧಿಯಲ್ಲಿ ತಮಗನಿಸಿದಂತೆ ಪರಿಣಾಮಕಾರಿ ಆದ ಕಾರ್ಯ ಯಾವುದು? ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಪರಿಸರ ಕ್ಷೇತ್ರಗಳಲ್ಲಿ ತಾವು ತೊಡಗಿಸಿಕೊಂಡಿರುವುದರಿಂದ ಅದರಲ್ಲಿ ಮಠದ ಪ್ರಮುಖ ಕೊಡಿಗೆಯೇನು ಎಂಬುದನ್ನು ತಿಳಿಸುವಿರಾ?
ಉತ್ತರ : ಜನರಿಗೆ ಹೆಚ್ಚು ಪ್ರಭಾವ ಮುಟ್ಟಿದ್ದು ಸಾರ್ವಜನಿಕ ಕ್ಷೇತ್ರದಲ್ಲಿ ವಿಶೇಷವಾಗಿ ಸ್ವಾಗತಿಸಲ್ಪಟ್ಟಿದ್ದು ನಮ್ಮ ಪರಿಸರ ಆಂದೋಲಯನವೇ ಆಗಿದೆ. ಆದರೆ ಮಠದ ಶಿಷ್ಯರು ಮತ್ತು ಹೆಚ್ಚು ಆಧ್ಯಾತ್ಮಿಕ ಚಿಂತನ ಒಲವು ಇರುವಂಥವರು ಹೆಚ್ಚು ಮೆಚ್ಚಿಕೊಂಡಿರುವುದು ನಾವು ನಡೆಸಿದ ಗಾಯತ್ರೀ ಜಪಯಜ್ಞವನ್ನು. (ಗಾಯತ್ರೀ ಜಪಯಜ್ಞದ ಕುರಿತು ಪ್ರತ್ಯೇಕ ಲೇಖನವಿದೆ) ಇಂತಹ ಕಾರ್ಯಕ್ರಮ ಹಿಂದೆ ಎಲ್ಲೂ ನಡೆದಿರಲಿಲ್ಲ. ಅದರಿಂದಲೇ ವೈಯಕ್ತಿಕ ಪ್ರಭಾವವೂ ಆಗಿದೆ. ಈಗಲೂ ಅದರ ಪ್ರಭಾವವಿದ್ದು ಪ್ರತಿವರ್ಷವೂ ವಾರ್ಷಿಕ ಕಾರ್ಯಕ್ರಮವಾಗಿ ನಡೆಯುತ್ತಿದೆ. ಇನ್ನು ಅನೇಕ ಕಾರ್ಯಕ್ರಮಗಳು ನಡೆದಿವೆ. ಉದಾ: ಪ್ರತಿವರ್ಷ ನಡೆಯುವ ವಟುಶಿಕ್ಷಣ, ಹೆಣ್ಣು ಮಕ್ಕಳಿಗಾಗಿ ಕುಮಾರಿ ಸಂಸ್ಕೃತ ಶಿಕ್ಷಣ, ವ್ಯಸನರಹಿತ ಸಮಾಜ ಶಿಕ್ಷಣ, ಪುಸ್ತಕ ಪ್ರಕಾಶನಗಳು ಇತ್ಯಾದಿಗಳು ನಡೆಯುತ್ತಿದ್ದು ಅನೇಕರು ತುಂಬಾ ಮೆಚ್ಚಿಕೊಂಡಿದ್ದಾರೆ. ನಮಗೂ ಸಂತೋಷವಾಗಿದೆ. ಇತ್ತೀಚೆಗೆ ಶಿರಸಿಯಲ್ಲಿ ಯೋಗಮಂದಿರ ನಿರ್ಮಾಣ ಮಾಡಲಾಗಿದೆ. ಅದು ಇನ್ನೂ ಪ್ರಗತಿಯ ಹಂತದಲ್ಲಿದೆ. ಹಾಗೆಯೇ ಹುಲೇಕಲ್ಲಿನಲ್ಲಿ ಶ್ರೀದೇವಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ, ಅದರಲ್ಲಿ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಾಗಿದ್ದು, ಕಂಪ್ಯೂಟರ್ ಶಿಕ್ಷಣವನ್ನು ಅಲ್ಲಿ ನೀಡಲಿದ್ದೇವೆ. ವ್ಯಸನರಹಿತ ಸಮಾಜ ಶಿಕ್ಷಣವನ್ನು ಹತ್ತನೆಯ ತರಗತಿಯ ಹಂತಕ್ಕೆ ನಿಲ್ಲಿಸಿದ್ದೇವೆ. ಯಾಕೆಂದರೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇದು ಪ್ರಭಾವಿಯಲ್ಲ. ಇದು ನಮ್ಮ ಅನುಭವಕ್ಕೂ ಬಂದಿದ್ದು ಮನೋವಿಜ್ಞಾನಿಗಳು ಅದಕ್ಕೆ ಪೂರಕವಾಗಿ ಪ್ರತಿಕ್ರಯಿಸಿದ್ದಾರೆ.
ಪ್ರಶ್ನೆ 7 : ತಮಗೂ ಶಿಷ್ಯರಿಗೂ ತೃಪ್ತಿ ನೀಡಿದ ಗಾಯತ್ರೀ ಜಪಯಜ್ಞದ ಯೋಚನೆ ಹೇಗೆ ಬಂತು? ಇಂದು ಅದೆಷ್ಟು ಪ್ರಭಾವಿಯಾಗಿದೆ?
ಉತ್ತರ : ಹೇಗೋ ಬಂತು. ಎಲ್ಲರೂ ಪ್ರತಿನಿತ್ಯ ಗಾಯತ್ರೀ ಜಪ ಮಾಡುವವರು ಮಾಡಲೇಬೇಕೆಂದು, ಅದಕ್ಕೊಂದು ಕಾರ್ಯಕ್ರಮ ರೂಪಿಸಿಕೊಳ್ಳಬೇಕೆಂದು ಮನಸ್ಸಿನಲ್ಲಿ ಪ್ರೇರಣೆಯೊಂದು ಬಂತು. ಅದನ್ನು ಕಾರ್ಯರೂಪಕ್ಕಿಳಿಸಲು ಸುಮಾರು ಒಂದು ವರ್ಷ ತೆಗೆದುಕೊಂಡಿದ್ದೇವೆ. ಇದನ್ನು ಎಲ್ಲಿಂದಲೋ ತೆಗೆದುಕೊಂಡಿದ್ದಲ್ಲ. ಯಾಕೆಂದರೆ ಈ ರೀತಿಯಾಗಿ ಹಿಂದೆಂದೂ ನಡೆದಿರಲಿಲ್ಲ. ಇದರ ಪ್ರಭಾವದಿಂದ ಈಗಲೂ ಹಿಂದೆ ಯಾವ ಯಾವ ಕೇಂದ್ರಗಳಲ್ಲಿ ಜಪವಾಗಿತ್ತೋ ಆ ಕೇಂದ್ರಗಳಲ್ಲಿ ಹಿಂದಿನ ಜಪಯಜ್ಞದ ದಿವಸವೇ ಒಟ್ಟಾಗಿ ಸೇರಿ ವರ್ಷಕೊಮ್ಮೆ ಕಾರ್ಯಕ್ರಮ ಮಾಡುತ್ತಾರೆ. ಪ್ರತಿದಿನ ಈ ಹಿಂದೆ ಗಾಯತ್ರೀ ಮಾಡದವರೂ ಇಂದು ಗಾಯತ್ರೀ ಜಪ ಮಾಡುತ್ತಿರುವುದೇ ಇದು ಪ್ರಭಾವಿಯಾಗಿದೆ ಎಂಬುದನ್ನು ಹೇಳುತ್ತದೆ.
ಪ್ರಶ್ನೆ 8 : ಶ್ರೀಮಠದ ಸಂಸ್ಕೃತಾಧ್ಯಯನದ ವ್ಯವಸ್ಥೆಯಲ್ಲಿ ತಮ್ಮ ಪಾತ್ರವೇನು?
ಉತ್ತರ : ನೀವು ಅಂದುಕೊಂಡಂತೆ ಮಾರ್ಗದರ್ಶನ ಮಾಡುವುದಲ್ಲದೇ ವಿದ್ಯಾರ್ಥಿಗಳಿಗೆ ಸ್ವತಃ ಪಾಠವನ್ನು ಮಾಡುತ್ತೇವೆ. ಹಾಗೂ ಪ್ರತೀ ಅಷ್ಟಮಿಯಂದು ಅಂದರೆ ತಿಂಗಳಿಗೆ ಎರಡು ಸಲ ಚರ್ಚೆ, ಗೋಷ್ಠಿಗಳು ನಡೆಯುತ್ತವೆ. ಅದರಲ್ಲಿ ನಾವೂ ಸ್ವತಃ ಭಾಗಿಗಳಾಗುತ್ತೇವೆ. ನಮ್ಮಲ್ಲಿ ಪಾಠಶಾಲೆ ಬೇರೆಯಲ್ಲ ಮಠ ಬೇರೆಯಲ್ಲ! ಮಠದಿಂದಲೇ ಅನ್ನ ವಸತಿಗಳನ್ನು ನೀಡಿ ವಿದ್ಯೆ ನೀಡುವ ಕ್ರಮದಲ್ಲಿ ನಾವು ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇವೆ.
ಪ್ರಶ್ನೆ 9 : ಈ ಪಾಠಶಾಲೆಯಲ್ಲಿ ವಿದ್ಯಾರ್ಜನೆ ಮಾಡಿದ ನಂತರ ಸಮಾಜದಲ್ಲಿ ಹೇಗಿದ್ದಾರೆ? ಮುಂದೆ ಅವರ ವೃತ್ತಿ, ಪ್ರವೃತ್ತಿಗಳು ಹೇಗಿರಬೇಕೆಂಬುದರ ಬಗ್ಗೆ ನಿಮ್ಮ ಅಪೇಕ್ಷೆ ಏನು?
ಉತ್ತರ : ನಾವು ಇಲ್ಲಿಗೆ ಬಂದು 10 ವರ್ಷಗಳಾದವು. ಆದರೆ ಇಲ್ಲಿಂದ ಪೂರ್ತಿ ಪಾಠವನ್ನು ಮುಗಿಸಿ ಹೋದವರು ವಿರಳ. ಇಲ್ಲಿಯೇ ಪೂರ್ತಿ ಓದಿದವನು ಒಬ್ಬ ಈ ವರ್ಷ ಪರೀಕ್ಷೆಗೆ ಕುಳಿತಿದ್ದಾನೆ. ಆದರೆ ಇಲ್ಲಿಂದ ಕೆಲವು ವರ್ಷಗಳ ಅಧ್ಯಯನದ ನಂತರ ಬೇರೆ ಸಂಸ್ಥೆಗಳಿಗೆ ಹೋಗಿ ಕೋರ್ಸುಗಳನ್ನು ಮುಗಿಸಿ ಒಳ್ಳೆಯ ಸ್ಥಾನವನ್ನು ಸೇರಿದವರಿದ್ದಾರೆ. ಈ ಪಾಠಶಾಲೆ ಪ್ರಾರಂಭವಾಗಿ 50 ವರ್ಷಗಳ ಮೇಲಾಯಿತು. ಈ ಅವಧಿಯಲ್ಲಿ ಇಲ್ಲಿಯೇ ವಿದ್ಯಾರ್ಜನೆಯನ್ನು ಮುಗಿಸಿ ಸಮಾಜದಲ್ಲಿ ಒಳ್ಳೆಯ ಸ್ಥಾನ-ಮಾನ ಪಡೆದವರಿದ್ದಾರೆ. ವಿಶೇಷವಾಗಿ ನಾನೇ ಈ ಪಾಠಶಾಲೆಯ ಹಳೆ ವಿದ್ಯಾರ್ಥಿ. ಹಿಂದಿನ ಇಲ್ಲಿಯ 2, 3 ಹಳೆಯ ವಿದ್ಯಾರ್ಥಿಗಳೇ ಈಗ ಇಲ್ಲಿ ಅಧ್ಯಾಪಕರಾಗಿ ಮುಂದುವರಿದಿದ್ದಾರೆ.
ಪ್ರಶ್ನೆ 10 : ಸಂಸ್ಕೃತಾಧ್ಯಯನಕ್ಕೆ ಬರುವವರು ಪ್ರತಿಭಾಸಂಪನ್ನರಲ್ಲ. (ಈಗಿನ ಪದವೀ ತರಗತಿಗಳಿಗೆ ಬರುವವರಂತೆ) ಉಳಿದ ಕಡೆ ಪ್ರವೇಶ ಸಿಕ್ಕದ ಸಾಮಾನ್ಯ ಬುದ್ದಿಯವರು ಅಥವಾ ಮನೆಯವರ ಒತ್ತಡಕ್ಕೆ ಒಳಗಾಗಿ ಬರುವವರು ಎಂಬ ಅಭಿಪ್ರಾಯವಿದೆ. ಅದು ಎಷ್ಟರ ಮಟ್ಟಿಗೆ ನಿಜ?
ಉತ್ತರ : ಆರಂಭದ ದಿವಸಗಳಲ್ಲಿ ಇಲ್ಲಿಯೂ ನೀವು ಹೇಳಿದ ಹಾಗೆ ಇತ್ತು. ಆದರೆ ಇತ್ತೀಚೆಗೆ ಐದಾರು ವರ್ಷಗಳಿಂದ ಸ್ವಯಂ, ಪ್ರತಿಭಾವಂತ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿಯೇ ಪಾಸಾದವರು ಇಲ್ಲಿ ಅಧ್ಯಯನಕ್ಕಾಗಿ ಬರುತ್ತಿದ್ದಾರೆ . ಈ ರೀತಿ ಬದಲಾವಣೆ ಆಗಲಿಕ್ಕೆ ಕಾರಣ ಬಹುಶಃ ವೇದಗಳ ವ್ಯಾಪಕ ಪ್ರಚಾರವಾಗಿದ್ದು ಅವುಗಳಲ್ಲಿ ಆಧುನಿಕ ಕಾಲಕ್ಕೆ ಬೇಕಾದ ವಿಷಯಗಳು ಇವೆ ಎಂಬ ತಿಳುವಳಿಕೆ ಬಂದಿರುವುದೇ ಆಗಿದೆ.
ಪ್ರಶ್ನೆ 11 : ಉಳಿದ ಮಠಗಳ ಸಂಗಡ ಅಥವಾ ಪೀಠಾಧಿಪತಿಗಳೊಡನೆ ಸೇರಿ ಸಹಮತವಿರುವ ವಿಶಿಷ್ಟ ಕಾರ್ಯಕ್ರಮಗಳನ್ನು ಸಹಯೋಜನೆಯಾಗಿ ಹಮ್ಮಿಕೊಳ್ಳುವ ಯೋಜನೆ ಇದೆಯೇ?
ಉತ್ತರ : ಈ ಪ್ರಶ್ನೆಗೆ ಉಳಿದ ಮಠಾಧಿಪತಿಗಳೂ ಉತ್ತರಿಸಬೇಕಾದುದು. ನಾವಂತೂ ಅಂತಹದನ್ನು ಪ್ರಾರಂಭಿಸಿದ್ದೇವೆ. “ವೇದಸಂಗಮ" ಕಾರ್ಯಕ್ರಮ ಅಂತಹದೊಂದರ ಪರಿಕಲ್ಪನೆಯಾಗಿದೆ. ಶ್ರೀರಾಮಚಂದ್ರಾಪುರ ಮಠದ ಸ್ವಾಮಿಗಳು ಇದರಲ್ಲಿ ಪೂರ್ಣ ಸಹಕರಿಸುತ್ತಿದ್ದಾರೆ. ಎರಡೂ ಮಠಕ್ಕೆ ಹವ್ಯಕ ಶಿಷ್ಯರ ಸಮುದಾಯವೇ ಹೆಚ್ಚಿನದಾಗಿದ್ದರಿಂದ ಇದು ಸಾಧ್ಯವಾಗಿರಲೂಬಹುದು. ಇನ್ನು ಕೊಯಮತ್ತೂರಿನ ಶ್ರೀ ದಯಾನಂದ ಸ್ವಾಮಿಗಳು ರಾಷ್ಟ್ರಮಟ್ಟದಲ್ಲಿ ಆಚಾರ್ಯ ಸಭಾ ಎಂಬ ಒಂದು ಸಂಘಟನೆಯನ್ನು ಪ್ರಾರಂಭಿಸಿದ್ದಾರೆ. ಅದರಲ್ಲಿ ಹೆಚ್ಚಿನೆಲ್ಲಾ ಸ್ವಾಮಿಗಳು, ಪೀಠಾಧಿಪತಿಗಳೂ ಇದ್ದಾರೆ. ಅದರಲ್ಲಿ ನಾವೂ ಓರ್ವ ಸದಸ್ಯರಾಗಿದ್ದೇವೆ. ಕೃಷಿ, ಗ್ರಾಮೀಣ ಅಭಿವೃದ್ಧಿ, ಉಪೇಕ್ಷಿತರ ಏಳಿಗೆ ಮುಂತಾದ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ.
ಪ್ರಶ್ನೆ 12 : ಕುಂಭಮೇಳಕ್ಕೆ ದಕ್ಷಿಣಭಾರತದ ಕಡೆಯಿಂದ ಹೆಚ್ಚಿನ ಪೀಠಾಧಿಪತಿಗಳು ಹೋಗುತ್ತಿದ್ದ ಹಾಗೆ ಕಾಣುವುದಿಲ್ಲವಲ್ಲಾ? (ಈ ಪ್ರಶ್ನೆ ಕೇಳುವಾಗ 12 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳವು ಪ್ರಯಾಗದಲ್ಲಿ ನಡೆಯುತ್ತಿತ್ತು)
ಉತ್ತರ : ಅನೇಕ ಜನ ಹೋಗಿದ್ದಾರೆ. ಆದರೆ ಪ್ರತಿಸಲ ಅಲ್ಲಿಗೆ ಹೋಗಬೇಕಾದರೆ ವ್ಯವಸ್ಥೆಯಾಗುವುದು ದುಸ್ತರ. ಕೋಟಿಗಟ್ಟಲೆ ಜನ ಅಲ್ಲಿ ಸೇರುತ್ತಾರೆ.
ಪ್ರಶ್ನೆ 13 : ಶ್ರೀಮಠದ ಸಂಗಡ ಶಿಷ್ಯರು ಹಾಗೂ ಅಭಿಮಾನಿಗಳು ನಿರಂತರವಾಗಿ ಸಂಪರ್ಕವಿರಿಸಿಕೊಳ್ಳಲು ಹಾಗೂ ತಮ್ಮ ಮಾರ್ಗದರ್ಶನ ಪಡೆಯಲು ನಿಶ್ಚಿತ ಕಾರ್ಯಯೋಜನೆ ಇಲ್ಲಿ ಇದೆಯೇ?
ಉತ್ತರ : ಅನೇಕ ಶತಕ-ದಶಕಗಳಿಂದಲೇ ಇಲ್ಲಿ ಒಂದು ವಿಶಿಷ್ಟ ಸಂಪರ್ಕ ಜಾಲವೇ ಇದೆ. ಸೀಮಾಸಭೆ, ಸೀಮಾ ಪ್ರತಿನಿಧಿಗಳು, ಗ್ರಾಮಸ್ತರೂ, ಆಚಾರ್ಯ ಭಟ್ಟರೂ ಇದ್ದಾರೆ. ಅವರವರ ಕಾರ್ಯಕ್ಷೇತ್ರಗಳೂ ವಿಶಿಷ್ಟವಾಗಿವೆ. ಮೊದಲಿಗಿಂತ ಇತ್ತೀಚೆಗೆ ಹೆಚ್ಚು ಕ್ರಿಯಾಶೀಲವಾಗಿವೆ ಎನ್ನಬಹುದು. ಆಧುನಿಕವಾಗಿ ಸಂಪರ್ಕ ಮಾಧ್ಯಮವಾಗಿ ಸ್ವರ್ಣವಲ್ಲೀ ಪ್ರಭಾ ಎಂಬ ಮಾಸಪತ್ರಿಕೆಯನ್ನು ಪ್ರಕಟಣೆ ಮಾಡುತ್ತಿದ್ದೇವೆ. ಸದ್ಯದಲ್ಲಿಯೇ ಶ್ರೀಮಠದ ವೆಬ್ ಸೈಟ್ ಬರಲಿದೆ.
ಪ್ರಶ್ನೆ 14 : ಇಲ್ಲಿಯವರೆಗೆ ಎಷ್ಟು ಸಲ ತೀರ್ಥಯಾತ್ರೆ - ಪ್ರವಾಸಗಳಿಗೆ ಹೋಗಿದ್ದೀರಿ? ಮತ್ತು ಯಾವುದು ಹೆಚ್ಚು ಪ್ರಭಾವಿಯಾಗಿ ನಿಮ್ಮ ಮನದಲ್ಲಿದೆ?
ಉತ್ತರ : ಎಷ್ಟು ಸಲವೆಂಬುದು ಈ 10 ವರ್ಷಗಳಲ್ಲಿ ಲೆಕ್ಕವಿಡಲಿಲ್ಲ. ವರ್ಷದಲ್ಲಿ 2-3 ಸಲ ಹೋಗಿದ್ದೂ ಉಂಟು. ಆದರೆ ಧಾರ್ಮಿಕ ಕ್ಷೇತ್ರಗಳಿಗೆ ಹೋದಾಗ ಪ್ರಭಾವವಾಗುವುದು ನಾವು ಸಂದರ್ಶಿಸುವ ವೇಳೆ ನಮ್ಮ ಮನೋಭಾವ ಅಲ್ಲಿಯ ಅರ್ಚಕರು, ಮೊದಲಾದವರ ಆಚಾರ, ಮಾತು ಇವೆಲ್ಲವೂ ಪರಿಗಣಿತವಾಗುತ್ತದೆ. ನನಗೆ ಹೆಚ್ಚು ಪ್ರಭಾವವಾದದ್ದು ಕಾಶೀಕೇತ್ರ. ಮೇಲ್ನೋಟಕ್ಕೆ ಕಾಶಿಯ ಜನಜಂಜಾಟ, ಗಲೀಜು, ಅವ್ಯವಸ್ಥೆಗಳು ಕಂಡುಬಂದರೂ ಅದರ ಇಡೀ ವಲಯ ತುಂಬಾ ದಿವ್ಯತೆಯ ಸಾನ್ನಿಧ್ಯತೆ ಇರುವಂತೆ ಅನುಭವವಾಗುತ್ತದೆ. ಧ್ಯಾನ, ಜಪಗಳಲ್ಲಿ ಇದು ವಿಶೇಷವಾಗಿ ಅನುಭವಕ್ಕೆ ಬರುತ್ತದೆ. ಇನ್ನೊಂದು ನನ್ನ ಗಾಢವಾದ ನೆನಪಿನಿಂದ ಬರುವುದು ಸಜ್ಜನಗಡಕ್ಷೇತ್ರ. ಸಮರ್ಥ ರಾಮದಾಸರು ತಪಸ್ಸು ಮಾಡಿ ಸಿದ್ದಿಹೊಂದಿದ ಸ್ಥಳ. ಶ್ರೀಧರ ಸ್ವಾಮಿಗಳು ಅಲ್ಲಿ ತಪಸ್ಸು ಮಾಡಿದ್ದಾರೆ.
ಪ್ರಶ್ನೆ 15 : ಶ್ರೀಮಠದ ಪ್ರಕಾಶನ ಹಾಗೂ ವ್ಯವಸ್ಥೆಗೊಳಿಸಿದ ಶೈಕ್ಷಣಿಕ ಗೋಷ್ಠಿಗಳು, ಶಿಬಿರಗಳು - ಇವುಗಳೆಲ್ಲವುಗಳ ಒಟ್ಟು ಪರಿಣಾಮವೇನು? ಆ ಕುರಿತು ತಮಗೆ ತೃಪ್ತಿ ಇದೆಯೇ?
ಉತ್ತರ : 10 ವರ್ಷಗಳ ಕಾಲಮಿತಿಯಲ್ಲಿ ಇವೆಲ್ಲವುಗಳನ್ನು ಒಟ್ಟಾಗಿ ಪರಿಗಣಿಸಿದಾಗ ತೃಪ್ತಿಯಿದೆ. ಆದರೆ ಪರಿಣಾಮದ ದೃಷ್ಟಿಯಿಂದ ಹೆಚ್ಚಿನದು ಇನ್ನೂ ಆಗಬೇಕಿದೆ. ಉದಾಹರಣೆಗೆ ಶ್ರೀಮಠದಿಂದ ಹೋಗುವ ಪ್ರಕಾಶನಗಳನ್ನು, ಪುಸ್ತಕಗಳನ್ನು, ಮಠದ ಮೇಲಿನ ಗೌರವದಿಂದ ಮನೆಯವರು ಸ್ವೀಕರಿಸುತ್ತಾರೆ. ಪುಟಗಳನ್ನು ತಿರುಗಿಸುತ್ತಾರೆ. ಆದರೆ ಓದುವ, ಅಧ್ಯಯನ ಮಾಡುವ, ಹವ್ಯಾಸ ಇನ್ನೂ ಮೂಡಿ ಬರಲಿಲ್ಲ. ಆ ದೃಷ್ಟಿಯಲ್ಲಿ ಅಗಾಧಕಾರ್ಯ ಮುಂದಿದೆ.
ಪ್ರಶ್ನೆ 16 : ತಾವು ಸಂನ್ಯಾಸಿಯಾಗಿ, ಪೀಠಾಧಿಪತಿಯಾಗಿ ಎದುರಿಸಿದ ಗಂಭೀರ ಸವಾಲು ಹಾಗೂ ಅದನ್ನು ಪರಿಹರಿಸಿಕೊಂಡ ಬಗೆ ತಿಳಿಸುವಿರಾ?
ಉತ್ತರ : ಅನೇಕ ಸಮಸ್ಯೆಗಳು ಬಂದಿವೆ. ಅದರಲ್ಲಿ ಪ್ರಮುಖವಾದದ್ದು ರಾಜಕೀಯ ಸಮಸ್ಯೆ. ಜಾತೀಯತೆ, ಜನರನ್ನು, ಸಮಾಜವನ್ನು ಒಡೆಯುತ್ತಾ ಬಂದಿದೆ ಎಂದು ಹಲವು ವರ್ಷಗಳಿಂದ ಹೇಳುತ್ತಾ ಬಂದಿದ್ದಾರೆ. ಆದರೆ ನನ್ನ ದೃಷ್ಟಿಯಲ್ಲಿ ಅದಕ್ಕಿಂತ ಹೆಚ್ಚು ಅಪಾಯಕಾರಿ ರಾಜಕೀಯ. ಅವರಲ್ಲಿರುವ ಭಿನ್ನಾಭಿಪ್ರಾಯ ನಮಗೂ ಮಠಕ್ಕೂ, ತೊಂದರೆ ನೀಡಿದ್ದುಂಟು. ಅದನ್ನು ನಾನು ಪರಿಹರಿಸಿಕೊಂಡಿದ್ದು ಸಹನೆಯಿಂದ. ನನಗೆ ಬೇಸರವಾದರೂ ಮುನಿಸಿಕೊಂಡವರನ್ನು ತಾಳ್ಮೆಯಿಂದ ಪುನಃ ಅವರನ್ನು ಅರ್ಥೈಸಿಕೊಂಡು ಸಹಕರಿಸುವಂತೆ ಪ್ರಯತ್ನಿಸಿದ್ದೇನೆ. ಆದುದರಿಂದ ನಾವು ಎಲ್ಲಾ ರಾಜಕೀಯ ಪಕ್ಷಗಳ ಸಂಗಡವೂ ಸಾಮಾನ್ಯವಾಗಿ ವ್ಯವಹರಿಸುತ್ತೇವೆಂದು ಜನರಿಗೂ ತಿಳುವಳಿಕೆ ಬಂದಿದೆ. ಆದುದರಿಂದ ಹಿಂದೆ ಬಂದಷ್ಟು ದೊಡ್ಡ ಸಮಸ್ಯೆ ಬರಲಿಕ್ಕಿಲ್ಲ ಎಂಬ ವಿಶ್ವಾಸವಿದೆ.
ಪ್ರಶ್ನೆ 17 : ರಾಜಕಾರಣಿಗಳು ಬೋಧಿಸುವ ಜಾತ್ಯತೀತತೆ ಆದರೆ ಅವರ ಜಾತೀಯತೆ ಹಾಗೂ ಧರ್ಮ ನಿರಪೇಕ್ಷ ಸಂವಿಧಾನ (ಇತ್ತೀಚೆಗೆ ಸಂವಿಧಾನದ ಪರಾಮರ್ಶೆ ಕುರಿತು ಚರ್ಚೆ ಹಾಗೂ ಸಂವಿಧಾನದಲ್ಲಿ ಅಧ್ಯಾತ್ಮ ಸೇರಿಸಬೇಕೆಂಬ ತಮ್ಮ ನಿಲುವು) ಈ ಹಿನ್ನೆಲೆಯಲ್ಲಿ ರಾಷ್ಟ್ರದ ಭವಿಷ್ಯದ ಕುರಿತು ತಮ್ಮ ಅನಿಸಿಕೆ ಏನು?
ಉತ್ತರ : ರಾಷ್ಟ್ರದ ಭವಿಷ್ಯದ ದೃಷ್ಟಿಯಿಂದ ನೋಡಿದಾಗ ಅನೇಕ ಜನರು ಈ ಕುರಿತು ಗಂಭೀರ ಚಿಂತನೆ ಮಾಡುತ್ತಿರುವುದೇ ಸಂತಸದ ವಿಷಯ. ಆದರೆ ಈಗ ನಡೆಯುತ್ತಿರುವ ನೈತಿಕ ಅಧಃಪತನವು ತುಂಬಾ ಚಿಂತೆಗೆ ಎಡೆಮಾಡಿಕೊಟ್ಟಿದೆ. ಧರ್ಮನಿರಪೇಕ್ಷತೆ, ಜಾತೀಯತೆ, ಜಾತ್ಯತೀತತೆ ಇವುಗಳಲ್ಲಿ ಗೊಂದಲವಿದೆ. ಸೆಕ್ಯುಲರಿಸಂ ಎಂಬ ಶಬ್ದಕ್ಕೆ ಧರ್ಮನಿರಪೇಕ್ಷಾ ಎಂಬ ಅನುವಾದವನ್ನು ಕೈಬಿಡಬೇಕು. ಇದನ್ನು ಇನ್ನೂ ಹಲವರು ಹೇಳಿದ್ದಾರೆ. ಸಂಪ್ರದಾಯ ನಿರಪೇಕ್ಷೆ ಎಂದು ಇದನ್ನು ಬದಲಾಯಿಸಿಕೊಳ್ಳಬಹುದು. ಧರ್ಮದಲ್ಲಿ ಆಧ್ಯಾತ್ಮಿಕತೆ ಕಡಿಮೆಯಾದಾಗ ನೈತಿಕತೆಯ ಕೊರತೆಯೂ ಬರುತ್ತದೆ. ನಿಜವಾದ ಧರ್ಮ ಆಧ್ಯಾತ್ಮಿಕತೆಯಲ್ಲಿದೆ. ಆದುದರಿಂದ ನಮ್ಮ ಸಂವಿಧಾನ ಆಧ್ಯಾತ್ಮಿಕತೆಯನ್ನು ಎತ್ತಿಹಿಡಿಯಬೇಕು. ಅದಕ್ಕಾಗಿ ಸಂವಿಧಾನದಲ್ಲಿ ಆಧ್ಯಾತ್ಮಿಕ ಪದವನ್ನು ಅಳವಡಿಸಿ ವಿವರಿಸಬೇಕು. ಧರ್ಮದಲ್ಲಿ ಆಧ್ಯಾತ್ಮಿಕ ಕೊರತೆಯಾದಾಗೆಲ್ಲ ಋಷಿಮುನಿಗಳು ಎಚ್ಚರಿಸಿದ್ದಾರೆ. ಈ ಹಿಂದೆ ರಾಜರಿಗೆ ಆಧ್ಯಾತ್ಮಿಕ ಮಾರ್ಗದರ್ಶನವಿದ್ದಾಗಲೆಲ್ಲ ಅವರು ಆಳಿದ ರಾಜ್ಯವು ಚೆನ್ನಾಗಿ ಸಾಗಿತ್ತು. ಉತ್ತರದ ಸಮುದ್ರಗುಪ್ತ, ವಿಜಯನಗರ ಸಾಮಾಜ್ಯಗಳು, ಅದಕ್ಕಿಂತ ಹಿಂದೆ ರಾಮರಾಜ್ಯ ಇವೆಲ್ಲವೂ ಆಧ್ಯಾತ್ಮಿಕ ಮಾರ್ಗದರ್ಶನದಿಂದಲೇ ಸುವರ್ಣಯುಗಗಳಾಗಿದ್ದವು. ಅವತರಿಸಿದ ಆಚಾರ ಪುರುಷರೆಲ್ಲರೂ ಆಧ್ಯಾತ್ಮಿಕತೆಯೇ ಧರ್ಮದಸಾರ ಎಂದು ಘೋಷಿಸಿದ್ದಾರೆ. ಆದ್ದರಿಂದ ಸಂವಿಧಾನದ ಪೀಠಿಕೆಯಲ್ಲಿಯೇ ಸೋಷಿಯಲ್ ಮುಂತಾದ ಪದಗಳೊಡನೆಯೇ ಸ್ಪಿರಿಚುಯಲ್ (ಆಧ್ಯಾತ್ಮಿಕ) ಎಂಬ ಪದವನ್ನು ಸೇರಿಸಿ ಅದಕ್ಕೆ ವಿವರಣೆ ನೀಡಬೇಕು. ಇನ್ನು ಇಂದಿನ ರಾಜಕಾರಿಣಿಗಳ ವಿಷಯ. ಅವರಲ್ಲಿ ಹೆಚ್ಚಿನವರಿಗೆ ಆಧ್ಯಾತ್ಮಿಕ ಶಿಕ್ಷಣದ ಕೊರತೆ ಇರುವುದರಿಂದ ಈ ಸ್ಥಿತಿಗೆ ಬಂದಿದ್ದಾರೆ. ಈಗೇನೂ ಮಾಡುವಂತಿಲ್ಲ. ಭವಿಷ್ಯದ ಬಗೆಗೆ ಯೋಚಿಸಬೇಕು. ಧರ್ಮನಿರಪೇಕ್ಷ ಎನ್ನುವ ಬದಲು ಸರ್ವಧರ್ಮ ಸಮಭಾವ ಎಂದು ಹೇಳುವುದು ಸೂಕ್ತ.
ಪ್ರಶ್ನೆ 18: ಮಠಾಧಿಪತಿಗಳು ಮತ್ತು ಮಠಗಳು ಮೇಲ್ವರ್ಗಗಳಿಗೆ ಮಾತ್ರ ಇವೆ. ಕೆಳವರ್ಗಗಳಿಗೆ ಅವುಗಳಿಂದ ಯಾವ ಪ್ರಯೋಜನವೂ ಇಲ್ಲ ಎಂಬ ಆರೋಪ ಅನಿಸಿಕೆಗಳು ಇವೆಯಲ್ಲಾ?
ಉತ್ತರ : ಎಲ್ಲಾ ಜನಸಾಮಾನ್ಯರ ಮನ-ಮನೆಗಳಿಗೆ ಮಠಗಳು ನೀಡುವ ಸಂದೇಶಗಳನ್ನು ಕೊಂಡುಹೋಗುವುದು ಜೀವನ ಶಿಕ್ಷಣವನ್ನು ನೀಡುವುದೇ ಅದಕ್ಕಿರುವ ಉಪಾಯ. ಇಂತಹ ಮಠಗಳ ಬಗೆಗಿನ ಅನಿಸಿಕೆಗಳು ಇಂದು , ನಿನ್ನೆಯದಲ್ಲ. ಹಾಗಾಗಿ ವಿಶೇಷ ಚಿಂತನೆ ನಡೆದು ಸರ್ವಸ್ವರ್ಶಿ ಕಾರ್ಯಕ್ರಮಗಳು ಹಾಕಿಕೊಂಡಾಗ ಕಹಿ ಭಾವನೆಗಳು ಸಾವಕಾಶವಾಗಿ ದೂರವಾದಾವು.
ಪ್ರಶ್ನೆ 19 : "ಕೌಪೀನವಂತಃ ಖಲು ಭಾಗ್ಯವಂತಃ" ಹಾಗೂ "ಧನ್ಯೋ ಗೃಹಸ್ಥಾಶ್ರಮಃ" ಈ ಮಾತುಗಳ ತಾತ್ವಿಕ ಹಿನ್ನೆಲೆಯ ಕುರಿತು ಹೇಳುವಿರಾ?
ಉತ್ತರ : ಮೊದಲಿನದು ಸಂನ್ಯಾಸಿಗಳಿಗೆ ಹೇಳಿದ ಮಾತು. ಎರಡನೆಯದು ಗೃಹಸ್ಥರಿಗೆ ಹೇಳಿದ ಮಾತು. ಎರಡನ್ನೂ ಪ್ರಾರಂಭದಲ್ಲೇ ಸಮನ್ವಯ ಮಾಡಬಾರದು. ಗೃಹಸ್ಥ ಎಲ್ಲ ರೀತಿಯಿಂದಲೂ ಸಮೃದ್ಧಿಯನ್ನು ಹೊಂದಿ ಲೌಕಿಕವಾಗಿ ತೃಪ್ತಿಹೊಂದುತ್ತಾನೆ. ಸಂನ್ಯಾಸಿಯು ಕೌಪೀನ ಭಾಗ್ಯ ಕಠಿಣ ಬ್ರಹ್ಮಚರ್ಯವನ್ನು ಸೂಚಿಸುತ್ತದೆ. ಅವನು ಲೌಕಿಕ ವೇಷಭೂಷಣಗಳನ್ನು ಧರಿಸುವಂತಿಲ್ಲವೆಂದೂ ಸೂಚಿಸುತ್ತದೆ. ಕಠಿಣ ವ್ರತಗಳಿಂದ ಪಡೆದ ಯಮನಿಯಮಗಳೇ ಅವನಿಗೆ ಅಲೌಕಿಕ ಆನಂದಭಾಗ್ಯ ಕೊಡುತ್ತದೆ.
ಪ್ರಶ್ನೆ 20 : ಸಂನ್ಯಾಸಿಗಳ ಪೀಠತ್ಯಾಗ, ಧನಾಕರ್ಷಣೆ, ಪ್ರಾಪಂಚಿಕ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಅತಿಮಡಿವಂತಿಕೆ, ಲೌಕಿಕ ವಿಷಯಗಳಲ್ಲಿ ತೀವ್ರ ಅನಾಸಕ್ತಿ ಸಾಮಾಜಿಕ ಸಮಸ್ಯೆಗಳ ಬಗೆಗೆ ಉದಾಸೀನತೆ ಹೀಗೆ ಈ ಎರಡೂ ಭಾಗಗಳಲ್ಲಿ ಪೀಠಾಧಿಪತಿಗಳ ಕುರಿತು ಟೀಕೆ ಟಿಪ್ಪಣಿಗಳು ಬರುತ್ತಿವೆ. ಅದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಉತ್ತರ : ಎಲ್ಲರದೂ ಪ್ರಾಮಾಣಿಕ ಟೀಕೆಗಳೇನೂ ಅಲ್ಲ. ಆದರೂ ಪರಿಶೀಲಿಸುವ. ಸಂನ್ಯಾಸಿಗಳ ಪೀಠತ್ಯಾಗದ ವಿಷಯದಲ್ಲಿ ಹೇಳುವುದಾದರೆ ಎಳೆಯ ವಯಸ್ಸಿನಲ್ಲಿಯೇ ಸಂನ್ಯಾಸಿಯಾಗಿದ್ದರೆ ಅವನಿಗೆ ಪ್ರಾಪಂಚಿಕ ವಿಷಯಗಳೇ ತಿಳಿಯುವುದಿಲ್ಲ. ಪ್ರೌಢನಾದ ನಂತರ ಮುಂದಿನ ಬದುಕಿನ ಸ್ಥಿತಿಗತಿಗಳ ಪರಿಚಯವಾದಾಗ ಸಂನ್ಯಾಸ ತನ್ನಿಂದ ಸಾಧ್ಯವಿಲ್ಲ. ಇದರಿಂದ ತನಗೂ ಪೀಠಕ್ಕೂ ದ್ರೋಹ ಬಗೆದಂತಾದೀತು. ಹಾಗಾಗಿ ಸಂನ್ಯಾಸ ತ್ಯಾಗ ಮಾಡುವುದೇ ಲೇಸು ಎಂದು ಪ್ರಾಮಾಣಿಕವಾಗಿ ಎನಿಸಿದ್ದಲ್ಲಿ ಅವನು ಪೀಠತ್ಯಾಗ ಮಾಡುವುದು ಒಳ್ಳೆಯದು. ಇದು ಸಮಾಜಕ್ಕೆ ಕೆಟ್ಟ ಪರಂಪರೆ ನೀಡುತ್ತಿದೆ ಎಂದೂ 'ಪತಿತ'ನಾಗುತ್ತಾನೆಂದೂ ಇದ್ದರೂ ಕೂಡ ಪೀಠದಲ್ಲೇ ಇದ್ದುಕೊಂಡು ಪತಿತ ಪ್ರವೃತ್ತಿಯಲ್ಲಿರುವುದಕ್ಕಿಂತ ಪೀಠತ್ಯಾಗ ಮಾಡಿ ಮನಃ ಸಾಕ್ಷಿಯಂತೆ ವರ್ತಿಸುವುದೇ ಒಳ್ಳೆಯದು. ಆದರೆ ಯಾವುದೇ ಆಕರ್ಷಣೆಗಾಗಿ ಈ ರೀತಿ ಮಾರ್ಪಾಡು ಸಲ್ಲ. ಇನ್ನು ಆಸಕ್ತಿ ಅನಾಸಕ್ತಿ ವಿಷಯ. ಸಾಮಾಜಿಕ ವಿಷಯಗಳಲ್ಲಿ 'ತೀವ್ರ' ಅನಾಸಕ್ತಿಯೂ ಸಲ್ಲ, 'ಅತೀ' ಮಡಿವಂತಿಕೆಯೂ ಸಲ್ಲ. ಹೀಗೆಯೇ ಮಡಿವಂತಿಕೆ ಅಗತ್ಯವೆಂಬುದು ಪ್ರಶ್ನೆಯಿಂದಲೇ ವೇದ್ಯವಾಗುತ್ತದೆ. ಅದೇ ಸರಿ ಎನ್ನಬಹುದು.
ಪ್ರಶ್ನೆ 21: ಜನರಲ್ಲಿಂದು ಧಾರ್ಮಿಕ ಶ್ರದ್ದೆಯಿದೆ. ಆದರೆ ಆಚಾರ ಹಾಗೂ ಶಾಸ್ತ್ರಗಳ ಬಗೆಗೆ ಮೌಢ್ಯವಿದೆ. ವಿದ್ಯಾವಂತರಲ್ಲೂ ಇದು ಗೋಚರಿಸುತ್ತಿದೆ. ಇದನ್ನು ಸರಿಪಡಿಸಲು ತಮ್ಮಲ್ಲಿ ಕಾರ್ಯಯೋಜನೆಯಿದೆಯೇ?
ಉತ್ತರ : ಇದೊಂದೇ ಉದ್ದೇಶಕ್ಕಾಗಿ ಪ್ರತ್ಯೇಕ ಕಾರ್ಯಯೋಜನೆ ನಮ್ಮಲ್ಲಿಲ್ಲ. ಆದರೆ ಜನರಿಗೆ ಆಚರಣೆಗಳ ಬಗೆಗೆ, ಶಾಸ್ತ್ರಗಳ ಬಗೆಗೆ ತಿಳಿಸಿಕೊಡಲು ಚಿಂತನೆಗಳು, ಗೋಷ್ಠಿಗಳು ನಮ್ಮಲ್ಲಿ ಆಧುನಿಕ ಹಾಗೂ ಪ್ರಾಚೀನ ಸಂಪ್ರದಾಯಗಳ ಜನರನ್ನು ಸೇರಿಸಿ ನಡೆಯುತ್ತಿದೆ. ಉಳಿದ ಮಠಗಳಲ್ಲೂ ಇವು ನಡೆದರೆ ಹೆಚ್ಚು ಸ್ವಾಗತಾರ್ಹ. ಮಠ ಮಂದಿರಗಳಲ್ಲಿ ಹೇಗೆ ವ್ಯವಹರಿಸಬೇಕು ಎಂದು ಇಂದಿನ ಯುವ ಪೀಳಿಗೆಗೆ ತಿಳಿಸುವಂತಹ ಶಿಬಿರಗಳನ್ನು ಮಾಡಬೇಕೆಂಬ ಅಪೇಕ್ಷೆ ಪಟ್ಟಲ್ಲಿ ಅದನ್ನು ನಾವು ಕೈಗೊಳ್ಳಬಹುದು.
ಪ್ರಶ್ನೆ 22 : ಸಂನ್ಯಾಸಗಳಲ್ಲಿ ಪೀಠಾಧಿಪತಿಗಳಲ್ಲಿ ಸಂಪ್ರದಾಯ ಭೇದಗಳಿವೆ. ಸಾಮಾಜಿಕವಾಗಿಯೂ ಆಚರಣೆಯಲ್ಲಿ ಭಿನ್ನರೀತಿಯಿದೆ. ಅದರಿಂದ ಲೌಕಿಕರಲ್ಲಿ ವಿಶೇಷವಾಗಿ ಪಟ್ಟಣ-ನಗರಗಳಲ್ಲಿ ವ್ಯವಹರಿಸುವಾಗ ತೊಂದರೆಯಾಗುತ್ತದೆ. ಇದನ್ನು ಪರಿಹರಿಸುವುದು ಹೇಗೆ?
ಉತ್ತರ : ಇದಕ್ಕೆ ಉತ್ತರ ಕೊಡುವುದು ಕಷ್ಟ. ಸಂನ್ಯಾಸ ಸ್ವೀಕಾರದಲ್ಲಿಯೂ ಮಠಗಳ ಸಂಪ್ರದಾಯ ಪದ್ಧತಿಗಳಲ್ಲೂ ತುಂಬಾ ಭಿನ್ನತೆಯಿದೆ. ಆದರೂ ವ್ಯಾವಹಾರಿಕವಾಗಿ ಸಾಮಾಜಿಕ ದೃಷ್ಟಿಯಿಂದ ಸಾಮಾನ್ಯ ಸೂತ್ರವೊಂದನ್ನು ಸಂನ್ಯಾಸಕ್ಕೆ ಪ್ರತಿಕೂಲವಾಗದ ಹಾಗೆ ಯೋಚಿಸಬಹುದು.
ಪ್ರಶ್ನೆ 23 : ಶಾಂಕರ ಸಂದೇಶವನ್ನು ವ್ಯಾಪಕಗೊಳಿಸುವುದರಲ್ಲಿ ನಿಮ್ಮ ಕಾರ್ಯಯೋಜನೆ ಇದೆಯೇ?
ಉತ್ತರ : ಸಮಾಜಕ್ಕೆ ಮಠಗಳು ಹಿತವನ್ನು ಮಾಡುತ್ತಿವೆ ಎಂಬ ಭಾವನೆ ಜನರಿಗೆ ಬರುವಂತೆ ಮೊದಲು ಮಾಡಬೇಕಾಗಿದೆ. ಅನಂತರ ನಮ್ಮ ಮಠದ ವತಿಯಿಂದಲು ಬೇರೆ ಮಠಗಳ ಸಹಯೋಗದಿಂದಲೂ ಮನೆ ಮನೆಗಳಿಗೂ ಶೈಕ್ಷಣಿಕ ಸಂಸ್ಥೆಗಳಿಗೂ ಶಾಂಕರಸಂದೇಶ ತಲುಪಿಸುವ ಯೋಜನೆಯಿದೆ.
ಪ್ರಶ್ನೆ 24 : ತಾವು ವಿರಕ್ತರು, ಪೀಠಾಧಿಪತಿಗಳು ಆದರೆ ಯುವಕರು. ಇಂದಿನ ಯುವ ಜನಾಂಗಕ್ಕೆ ಸಂದೇಶವೇನು?
ಉತ್ತರ : ಯುವಕರು ತುಂಬಾ ವಿವೇಕದಿಂದ ವರ್ತನೆ ಮಾಡಿದ್ದಲ್ಲಿ ಇಡೀ ಜೀವನವನ್ನು ಯಶಸ್ಸಿನಿಂದ ಬದುಕಬಹುದು.
ಯೌವನವೇ ಇಡೀ ಜೀವನಕ್ಕೆ ಭದ್ರ ಬುನಾದಿ. ಯೌವನದಲ್ಲಿ ವಿವೇಕವಿದ್ದಲ್ಲಿ ಸಂತೃಪ್ತಿ ಜೀವನ, ಅದಿಲ್ಲವಾದಲ್ಲಿ ಮತ್ತೆ ಪಶ್ಚಾತ್ತಾಪದ ಜೀವನವಾಗುತ್ತದೆ. ಎಲ್ಲ ಮಹಾನುಭಾವರು ತಮ್ಮ ಜೀವನದಲ್ಲಿ ಸಾಧನೆ ಮಾಡಿದ್ದು ಸಾಕ್ಷಾತ್ಕಾರ ಮಾಡಿಕೊಂಡದ್ದು ಯೌವನದಲ್ಲಿಯೇ. ಹಾಗಾಗಿ ಸಾಮಾನ್ಯ ಯುವಕರೂ ಕೂಡ ತಮ್ಮ ಲೌಕಿಕ ಜೀವನಕ್ಕಾಗಿಯಾದರೂ ಯೌವನದಲ್ಲಿಯೇ ಮುಂದಿನ ಜೀವನಕ್ಕಾಗಿ ಸಾಧನೆಗೆ ತೊಡಗಬೇಕು. ಅದರ ಸಂಗಡ ಹಿರಿಯರ ಮಾರ್ಗದರ್ಶನ, ಸಾಮಾಜಿಕ ದೃಷ್ಟಿ ಅಗತ್ಯ. ಇದರಿಂದ ರಾಷ್ಟ್ರದ ಪ್ರಗತಿಗೂ ಒಳಿತಾಗುತ್ತದೆ.
ಪೂಜ್ಯ ಸ್ವಾಮಿಗಳೊಡನೆ ಸಂದರ್ಶನ ಪ್ರಾರಂಭಿಸಿದಾಗ ರಾತ್ರಿ 10ರ ಮೇಲಾಗಿತ್ತು. ಮುಗಿದಾಗ 11 1/2 ಕಳೆದಿತ್ತು. ಆದರೂ ಹಸನ್ಮುಖರಾಗಿಯೇ ಉತ್ತರಿಸುತ್ತಿದ್ದರು . ಹಲವು ಸಲ ಪ್ರಶೋತ್ತರಗಳು ಚರ್ಚೆ, ಜಿಜ್ಞಾಸೆಗಳಿಗೆ ದಾರಿ ಮಾಡಿಕೊಡುತ್ತಿದ್ದವು. ಪುನಃ ಮರುದಿನ ಬ್ರಾಹ್ಮ ಮುಹೂರ್ತದಲ್ಲಿ ಎದ್ದು ಅವರ ಅನುಷ್ಠಾನಗಳಿಗೆ ಭಂಗ ಬರಬಾರದೆಂದು ನಾವೇ ಮಾತುನಿಲ್ಲಿಸಿದೆವು. ನಮ್ಮ ಪ್ರಶ್ನೆಗಳು ಟೀಕೆಯ ರೂಪದಲ್ಲಿದ್ದರೂ ಪ್ರಶ್ನಿಸುವ ರೀತಿಯಲ್ಲಿದ್ದರೂ ಅತ್ಯಂತ ಸಹನೆಯಿಂದ, ಸಹೃದಯತೆಯಿಂದ ಅವರು ಉತ್ತರಿಸಿದ್ದು ಸಂದರ್ಶನದಲ್ಲಿ ಅವರೇ ಹೇಳಿದ ಸಹನೆ ಹಾಗೂ ಸಂನ್ಯಾಸದ ಧನ್ಯತೆಯ ಆಚರಣೆಯನ್ನು ಸೂಚಿಸುತ್ತದೆ. ಈ ಸಂದರ್ಶನವನ್ನು ವ್ಯವಸ್ಥೆಗೊಳಿಸಿ ಕೊನೆಯತನಕವೂ ನನ್ನೊಡನೆಯಿದ್ದ ಪ್ರೊ. ಪಿ.ಐ. ಹೆಗಡೆಯವರಿಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ.
ಲೇಖಕರು: ಡಾ|| ಜಿ. ಎನ್. ಭಟ್
ಸಂಗ್ರಹ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ