ಕೃತ್ರಿಮವೊ ಜಗವೆಲ್ಲ! ಸತ್ಯತೆಯದೆಲ್ಲಿಹುದೊ? ।
ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು ॥
ಚತ್ರವೀ ಜಗವಿದರೊಳಾರ ಗುಣವೆಂತಹುದೊ! ।
ಯಾತ್ರಿಕನೆ, ಜಾಗರಿರೊ - ಮಂಕುತಿಮ್ಮ ॥ ೨೨ ॥
ಈ ಜಗತ್ತು ಕೃತ್ರಿಮ ಎನ್ನುವುದನ್ನು ಕೇವಲ ಮಾನವರ ಜಗತ್ತಿಗೆ ಅನ್ವಯಿಸಿಕೊಳ್ಳಬೇಕು. ಏಕೆಂದರೆ, ಗಿಡ, ಮರ, ಪಶು ಪಕ್ಷಿ ಮತ್ತು ಅನ್ಯ ಜೀವಿಗಳಲ್ಲಿ ಇಂದಿಗೂ ಕೃತ್ರಿಮತೆ ನಾವು ಕಾಣುವುದಿಲ್ಲ. ಈ ಕೃತ್ರಿಮತೆ ಏನಿದ್ದರೂ ಕೇವಲ ಮಾನವರಿಗೆ ಅನ್ವಯಿಸುತ್ತದೆ. “ಏಕೆ ಹೀಗೆ? ಮಾನವರಲ್ಲಿ ಮಾತ್ರ ಏಕೆ? ಮಾನವರು ಮೊದಲಿನಿಂದಲೂ ಹೀಗೇ ಇದ್ದಾರೆಯೇ ಅಥವಾ ಈ ಕೃತ್ರಿಮತೆ ಕಾಲಕ್ರಮೇಣ ಜನಮಾನಸದಲ್ಲಿ ಹೊಕ್ಕಿದೆಯೇ?” ಎಂಬುದನ್ನು ಯೋಚಿಸಿದಾಗ ನಮಗೆ ಕಾಣುವುದು ಹೀಗೆ . ಮಾನವಮೊದಲಿನಿಂದಲೂ ಕೃತ್ರಿಮನಲ್ಲ. ಪ್ರಕೃತಿಯ ಮಗುವಾಗಿ ಪ್ರಕೃತಿಯಲ್ಲಿ ಒಂದಾಗಿ ಅಲ್ಲೇ ಜೀವಿಸುತ್ತಿದ್ದ.
ಸಮಸ್ತ ಸೃಷ್ಟಿಯ ನಿಯಾಮಕ ಭಗವಂತ ಕಾಣದಂತೆ ಇದ್ದಾನೆ. ಇದೇ ಕಾರಣದಿಂದ ಅವಗುಣಗಳು, ಗುಣಗಳು ಅಗಣಿತ. ಭಗವಂತನ ಅನುಪಸ್ಥಿತಿಯಲ್ಲಿ ಸಾಗುತ್ತಿರುವಂತೆ ಭಾಸವಾಗುವ ಈ ಜೀವನ ಯಾತ್ರೆಯಲ್ಲಿ ಯಾತ್ರಿಕರು ಜಾಗೃತರಾಗಿ ಇರಬೇಕು ಎಂಬ ಎಚ್ಚರಿಕೆ ನೀಡಿದ್ದಾರೆ ಮಾನ್ಯ ಗುಂಡಪ್ಪನವರು.
ಲೇಖಕರು: ತಿಮ್ಮಣ್ಣ ಭಟ್ ಬೆಂಗಳೂರು
ಪ್ರಸರಣ- ಶ್ರೀ ಸ್ವರ್ಣವಲ್ಲೀ ಭಕ್ತವೃಂದ