ತಿರುತಿರುಗಿ ತೊಳಲುವುದು ತಿರಿದನ್ನವುಣ್ಣುವುದು ।
ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು ॥
ಮರಳಿ ಕೊರಗಾಡುವುದು ಕೆರಳುವುದು ನರಳುವುದು ।
ಇರವಿದೇನೊಣರಗಳೆ? - ಮಂಕುತಿಮ್ಮ ॥ ೨೩ ॥
ಮನುಷ್ಯ ಮತ್ತೆ ಮತ್ತೆ, ನಿತ್ಯವೂ ಗಳಿಕೆಗಾಗಿ ಪರದಾಡುವುದು, ನಾವು ಎಲ್ಲ ಕಡೆಯೂ ಕಾಣಬಹುದು. ಪರದಾಡಿ ಅವರಿವರನ್ನು ಕಾಡಿ ಬೇಡಿ ಹೊಟ್ಟೆ ತುಂಬಿಸಿಕೊಳ್ಳುವುದು. ಪಡೆದದ್ದು ಹೆಚ್ಚಾದರೆ ಮೆರೆದು ಅಹಂಕಾರ ತೋರಿಸುವುದು. ತಮ್ಮನ್ನು ತಾವು, ಬಹಳ ಸಾಧಿಸಿದೆವೆಂದು ಅಹಂಕಾರದಿಂದ ಮೆರೆಯುವುದು., ಪಡೆದದ್ದನ್ನು ಉಳಿಸಿಕೊಳ್ಳಲು ಅವರಿವರ ಮುಂದೆ ಹಲ್ಲು ಕಿರಿಯುವುದು, ಗಿಂಜುವುದು, ಬೇಡುವುದು ನಾವು ಸರ್ವೇ ಸಾಮಾನ್ಯವಾಗಿ ಎಲ್ಲರಲ್ಲೂ ಕಾಣುತ್ತೇವೆ. ತಾವು ಅಂದುಕೊಂಡದ್ದು ಸಿಗದಿದ್ದ್ದರೆ ಕೋಪಗೊಳ್ಳುವುದು,ಹಾಗೂ ಸಿಗದಿದ್ದರೆ, ಕೈಲಾಗದತನದಿಂದ ಸಂಕಟಪಡುವುದು ಅಥವಾ ನರಳುವುದು, ಇವೆಲ್ಲವೂ ಸತ್ವವಿಲ್ಲದ ಒಣ ರಗಳೆ ಅಥವಾ ಸತ್ವವಿಲ್ಲದ ಜೀವನದ ಪರಿ .
ಇಷ್ಟಕ್ಕಾಗಿಯೇ ಜೀವನ ಮುಗಿದು ಹೋದರೆ ಆ ಜೀವನ ವ್ಯರ್ಥ. ಬದಲಿಗೆ ಜೀವನವು ಸಾರ್ಥಕತೆಯನ್ನು ಪಡೆಯುತ್ತ ಸಾಗಬೇಕು ಎನ್ನುವ ಆಶಯ ಇಲ್ಲಿದೆ.
ಲೇಖಕರು: ತಿಮ್ಮಣ್ಣ ಭಟ್ ಬೆಂಗಳೂರು
ಪ್ರಸರಣ : ಶ್ರೀ ಸ್ವರ್ಣವಲ್ಲೀ ಭಕ್ತವೃಂದ