🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಪಕ್ಷಕ್ಕೊಂದು ಪುರಾಣ - 6 ವರಾಹಪುರಾಣ

 ಪಕ್ಷಕ್ಕೊಂದು ಪುರಾಣ - 6   ವರಾಹಪುರಾಣ 


ವರಾಹಪುರಾಣ - 

       ವರಾಹಪುರಾಣವು ಹದಿನೆಂಟು ಪುರಾಣಗಳಲ್ಲಿ ಹನ್ನೆರಡನೆಯದು ಎಂದು ತಿಳಿದು ಬರುತ್ತದೆ. "ವರಾಹಂ ದ್ವಾದಶಂ" ಎಂಬ ದೇವೀಭಾಗವತದ ವಾಕ್ಯ ಹಾಗೂ ವಿಷ್ಣುಪುರಾಮದ ಮಾತುಗಳು ಈ ಪುರಾಣವನ್ನು ಹನ್ನೆರಡನೇಯ ಪುರಾಣವೆಂದು ಹೇಳಿವೆ. ವರಾಹಪುರಾಣವು 218 ಅಧ್ಯಾಯಗಳಿಂದ ಕೂಡಿದ್ದು, ಸುಮಾರು 24 ಸಾವಿರ ಶ್ಲೋಕಗಳಿದ್ದವೆಂದು ಬೇರೆ ಬೇರೆ ಉಲ್ಲೇಖಗಳು ದೊರಕಿದರೂ ಸಹ ಈಗ ಉಪಲಬ್ಧವಿರುವ ವರಾಹಪುರಾಣ ಸುಮಾರು 12 ಸಾವಿರ ಶ್ಲೋಕಗಳಿಂದ ಕೂಡಿದೆ. 

        ಹಿರಣ್ಯಾಕ್ಷವಧೆಯ ಅನಂತರ ಭೂದೇವಿ ಹಾಗೂ ವರಾಹಸ್ವಾಮಿಯ ನಡುವಿನ ಸಂಭಾಷಣಾರೂಪವಾಗಿ ಅಥವಾ ವರಾಹಸ್ವಾಮಿಯ ಉಪದೇಶರೂಪವಾಗಿ ಈ ಪುರಾಣ ಪ್ರಕಟವಾಗಿದೆ. ಸೃಷ್ಟಿಯೇ ಮುಂತಾದ ವಿಷಯಗಳನ್ನು ಹೇಳಿ ಮುಂದೆ ನಾರದರ ಚರಿತ್ರೆ, ನಾರಾಯಣನ ದಶಾವತಾರ, ಪ್ರಿಯವ್ರತ ಉಪಾಖ್ಯಾನ, ಅಶ್ವಶಿರ ವೃತ್ತಾಂತ, ರೈಭ್ಯೋಪಾಖ್ಯಾನ ಭೂರಾದಿ ಲೋಕಗಳ ವರ್ಣನೆ, ವರ್ಣವ್ಯವಸ್ಥೆ, ಆಶ್ರಮವ್ಯವಸ್ಥೆ, ದುರ್ಜಯಚರಿತ್ರೆ, ಗೌರಮುಖ ಉಪಾಖ್ಯಾನ, ಪ್ರಜಾಪಾಲ ಚರಿತೆ, ಅಗ್ನಿ, ಗಣಪತಿ, ಸೂರ್ಯ, ಪಂಚಮಹಾಭೂತಗಳು, ಶನಿ, ಯಮ , ಮುಂತಾವಗಳ ಉತ್ಪತ್ತಿ, ಗಿರಿಜಾಕಲ್ಯಾಣ, ಗಣಪತಿಯ ಉತ್ಪತಾತಿ, ಗಣೇಶಚತುರ್ಥೀ ವ್ರತ, ಸರ್ಪಗಳ ಉತ್ಪತ್ತಿ, ನಾಗಲೋಕದ ವಿವರಣೆ, ಷಣ್ಮುಖನ ಉತ್ಪತ್ತಿ ಹಾಗೂ ವೃತ್ತಾಂತ, ಮಾತೃಕೆಗಳು, ದುರ್ಗೆಯರ ಉತಪತ್ತಿ ಮೊದಲಾದ ವಿಷಯವನ್ನು ವಿವರಿಸಲಾಗಿದೆ. 

         ಅಗಸ್ತ್ಯರಿಂದ ವಿವರಿಸಲ್ಪಟ್ಟ ಪಶುಪಾಲೋಪಾಖ್ಯಾನ, ಅನೇಕ ದಾನಗಳು ಹಾಗೂ ವ್ರತಗಳ ಬಗ್ಗೆ ವಿಶೇಷವಾಗಿ ವಿವರಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಗೋದಾನದ ವಿಷಯವು ಬಹು ವಿಸ್ತಾರವಾಗಿ ಉಲ್ಲೇಖವಾಗಿದೆ. ಬೇರೆ ಬೇರೆ ವರ್ಣದ ಬೇರೆ ಬೇರೆ ಲೋಹಗಳಿಂದ ಮಾಡಲ್ಪಟ್ಟ ಗೋವುಗಳನ್ನು ದಾನ ಮಾಡಿದರೆ ದೊರಕುವ ಪುಣ್ಯದ ಬಗ್ಗೆ ಉಲ್ಲೇಖಿಸಲಾಗಿದೆ. ಭರತ ಖಂಡದ ನವ ದ್ವೀಪಗಳು, ಮೇರು ಮುಂತಾದ ಪರ್ವತಗಳು, ಇಲ್ಲಿ ಉಲ್ಲೇಖಿಸಲ್ಪಟ್ಟಿವೆ. ತ್ರಿಕಳಾದೇವಿ ಗಾಯತ್ರಿ ವೈಷ್ಣವಿ ಮುಂತಾದ ದೇವಿಯರ ವಿಷಯಗಳು ಇಲ್ಲಿ ಉಲ್ಲೇಖವಾಗಿವೆ. 32 ವಿಧವಾದ ಮಹಾಪರಾಧಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ದೇವೋಪಚಾರ, ದೇವ ಪೂಜಾ ವಿಧಾನ,ದೇವತೆಗಳಿಗೆ ಸಮರ್ಪಿಸುವ ನೈವೇದ್ಯ ವಸ್ತುಗಳನ್ನು ಇಲ್ಲಿ ವಿವರಿಸಲಾಗಿದೆ. ಕೋಕಮುಖಕ್ಷೇತ್ರವೇ ಮೊದಲಾದ 800 ಕ್ಕೂ ಹೆಚ್ಚು ತೀರ್ಥಕ್ಷೇತ್ರಗಳ ಪೂರ್ವಕಥೆ ಹಾಗೂ ಮಹಿಮೆಗಳು ಉಲ್ಲೇಖಿಸಲ್ಪಟ್ಟಿದೆ. ಭಾರತದ ಅನೇಕ ವಿದ್ವಾಂಸರು ಯತಿಗಳು ರಚಿಸಿರುವ ತೀರ್ಥ ಪ್ರಬಂಧಗಳಿಗೆ ವರಾಹ ಪುರಾಣವೇ ಆಧಾರ ಹಾಗೂ ಪ್ರೇರಣೆ ಎಂಬುದು ಹಲವು ವಿದ್ವಾಂಸರ ಅಭಿಪ್ರಾಯವಾಗಿದೆ. ಕಾಶ್ಮೀರದಿಂದ ಆರಂಭಿಸಿ ಕನ್ಯಾಕುಮಾರಿಯವರೆಗೆ ಅಖಂಡ ಭಾರತದಲ್ಲಿ ಹರಡಿಕೊಂಡಿರುವ ಅನೇಕ ತೀರ್ಥಗಳು ವರಾಹ ಪುರಾಣದಲ್ಲಿ ಉಲ್ಲೇಖವಾಗಿರುವುದು ಈ ಭರತ ಭೂಮಿಯ ಪ್ರತಿಯೊಂದು ಮಣ್ಣಿನ ಕಣವು ಸಹ ಪವಿತ್ರವಾದದ್ದು,ಅಷ್ಟೇ ಅಲ್ಲದೆ ಈ ಪುಣ್ಯ ಭೂಮಿಯಲ್ಲಿ ಹರಿಯುವ ಒಂದೊಂದು ಹನಿ ಜಲವು ಸಹ ತೀರ್ಥವೇ ಆಗಿದೆ ಎಂಬುದನ್ನು ವರಾಹ ಪುರಾಣ ಎತ್ತಿ ಹಿಡಿಯುತ್ತದೆ. 

       ವರಾಹ ಪುರಾಣದ ಕೊನೆಯ ಭಾಗದಲ್ಲಿ ವಿಗ್ರಹಾರಾಧನೆಯ ಮಹತ್ವ ಪಂಚಮೂರ್ತಿ ಆರಾಧನೆಯ ಮಹತ್ವ ಶಾಲಗ್ರಾಮದ ಆರಾಧನೆಯ ಪದ್ಧತಿ, ವಿಸ್ತಾರವಾಗಿ ಉಲ್ಲೇಖವಾಗಿದೆ. ಕಠೋಪನಿಷತ್ತಿನಲ್ಲಿ ವಿವರಿಸಲ್ಪಟ್ಟ ನಚಿಕೇತೋಪಾಖ್ಯಾನ, ಅಗ್ನಿ ವಿದ್ಯೆ ಮರಣ ನಂತರದ ಅವಸ್ಥೆಗಳು ಇಲ್ಲಿ ಉಲ್ಲೇಖವಾಗಿವೆ. 

       ದಕ್ಷಿಣ ಭಾರತದ ಶ್ರೇಷ್ಠ ಪುಣ್ಯಕ್ಷೇತ್ರಗಳಲ್ಲಿ ಒಂದಾದ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಗೋಕರ್ಣ ಕ್ಷೇತ್ರದ ಚರಿತ್ರೆ ಮಹಿಮೆಗಳನ್ನು ವಿವರಿಸುತ್ತಾ ವರಾಹ ಸ್ವಾಮಿಯು ಈ ಸಂವಾದವನ್ನು ಸಮಾಪ್ತಿಗೊಳಿಸುತ್ತಾನೆ. ಇದು ಭೂದೇವಿ ಹಾಗೂ ವರಾಹ ಸ್ವಾಮಿಯ ಸಂವಾದ ರೂಪವಾದ ವರಾಹ ಪುರಾಣದ ಸಂಕ್ಷಿಪ್ತ ಪರಿಚಯ.

ಲೇಖಕ - ವಿ. ರವಿಶಂಕರ ಹೆಗಡೆ. 

ಪ್ರಸರಣ - ಶ್ರೀ ಸ್ವರ್ಣವಲ್ಲೀ ಭಕ್ತವೃಂದ.