ಸಾಮಾಜಿಕ ಪರಿಸರದಲ್ಲಿ ಧಾರ್ಮಿಕ ಪ್ರಭಾವ ಎಲ್ಲಿಯವರೆಗೆ ಜಾಗೃತವಾಗಿರುತ್ತದೆಯೋ ಅಲ್ಲಿಯವರೆಗೆ ಸಮಾಜದ ಸ್ವಾಸ್ಥ್ಯಕ್ಕೆ ಕುಂದಿಲ್ಲ; ಎಂಬುದು ತ್ರಿಕಾಲಾಬಾಧಿತವಾದ ಸತ್ಯ. ಪುರಾಣದಲ್ಲಿ ಧರ್ಮಸ್ಥಾಪನೆಗಾಗಿಯೇ ದೇವರು ಅವತಾರ ಎತ್ತಿದ್ದು, ಇತಿಹಾಸ ಕಾಲದಲ್ಲಿಯೂ ಶಂಕರಾಚಾರ್ಯ, ವಿದ್ಯಾರಣ್ಯ, ವಿವೇಕಾನಂದ, ಶ್ರೀಧರರಂಥ ವಿಭೂತಿ ಪುರುಷರು ಧರ್ಮದ ಉನ್ನತಿಗಾಗಿ ಶ್ರಮಿಸಿದ್ದು ವಿದಿತ; ಧರ್ಮಗ್ಲಾನಿಯ ಭಯದಿಂದಲೇ ಪೂರ್ವದಿಂದಲೂ ನಮ್ಮಲ್ಲಿ ದೇವಾಲಯ, ಮಠಮಾನ್ಯ ಸ್ಥಾಪನೆ, ಧರ್ಮಗುರುಗಳ ಸ್ಥಾನಮಾನ ಅವಿಚ್ಛಿನ್ನವಾಗಿಯೇ ಉಳಿದು ಬಂದಿದೆ. ಈ ಹಿನ್ನೆಲೆಯಲ್ಲಿಯೇ ಮಠಗಳು ಸ್ಥಾಪನೆಗೊಂಡು ಸಹಸ್ರಾರು ವರ್ಷಗಳ ಪ್ರೋಜ್ವಲ ಪರಂಪರೆಯ ಪ್ರಭಾವಳಿಯಿಂದ ಶೋಭಿಸುತ್ತಿದೆ. ಸ್ವಾದಿಯ ಸ್ವರ್ಣವಲ್ಲಿ ಶ್ರೀಮಠ! ಕಾಲದ ಬದಲಾವಣೆಯಿಂದಾಗಲೀ, ಕಾನೂನಿನ ತೊಡಕಿನಿಂದಲೇ ಆಗಲೀ ಈ ಮಠದ ಸಂಪ್ರದಾಯ, ಪರಂಪರೆ, ಅನುಷ್ಠಾನ ಹಾಗೂ ಮಠದ ವ್ಯಾಪ್ತಿಯೆನ್ನಿಸಿದ ೧೬ ಸೀಮೆಗಳ ಭಕ್ತರ ನೈತಿಕ ಅನುಸಂಧಾನ ಇಂದಿಗೂ ವ್ಯತ್ಯಸ್ತಗೊಂಡಿಲ್ಲದಿರುವುದು ಪವಾಡ! ಅತಿಕ್ರಾಂತವಲ್ಲದ ಒಂದು ಧೀಮಂತ ತತ್ವ ಇಲ್ಲಿಯ ಗುರುಪರಂಪರೆಯ ಹಿನ್ನೆಲೆಯಲ್ಲಿ ರಾಜರಾಜೇಶ್ವರಿಯೋ, ಚಂದ್ರಮೌಳಿಯೋ ಆಗಿ ನಿಂತಿದೆಯೆಂಬ ಪ್ರತೀತಿ, ನಾವು ಕಣ್ಣಾರೆ ಕಂಡಂತೆ ಪೂಜ್ಯ ಸರ್ವಜೇಂದ್ರರ ವಿಷಯದಲ್ಲಿ ಸತ್ಯವೇ ಎನ್ನಿಸಿದೆ. ಅಲ್ಲದೇ ಶುದ್ಧ ಸಂಸ್ಕಾರ ಪುನೀತನಾದ ಒಬ್ಬ ವ್ಯಕ್ತಿಯ ಅಂತರಾತ್ಮ-ಪರಮಾತ್ಮ ಸಂಬಂಧ ಅನನ್ಯವಾಗಿ, ನಂತರ ಆ ನಾಮ ಭೇದವೂ ತೊರೆದು, ನಿರ್ಮೋಹ ನಿರುಪದ್ರವ ಶರೀರ-ಶಾರೀರ, ಆ ಪರಮಾತ್ಮನ ನಿರ್ಮಲ ಆವರಣ ಮಾತ್ರವಾದಾಗ ಆತ ಬರೀ ವ್ಯಕ್ತಿಯಾಗದೇ, ಒಂದು ವಿಸ್ತೃತ ಧಾರ್ಮಿಕ ಕ್ಷೇತ್ರದ ಪ್ರಾತಿನಿಧಿಕ ಶಕ್ತಿ ಆಗಬಲ್ಲನೆಂಬುದಕ್ಕೆ ಸರ್ವಜ್ಞೇಂದ್ರರೇ ಜ್ವಲಂತ ಉದಾಹರಣೆ.
ಇಂಥ ಶಕ್ತಿ-ಪೀಠದ ಧರ್ಮಾಧಿಕಾರಿಯಾಗುವ ಹಾಗೂ ಸರ್ವಜ್ಞೇಂದ್ರರಂಥವರ ಉತ್ತರಾಧಿಕಾರಿಯಾಗುವ ಯೋಗ ಸಾಮಾನ್ಯದ್ದಲ್ಲ. ಕಾರಣವಿಲ್ಲದೇ ಕಾರ್ಯಕ್ಷೇತ್ರದ ನಿರ್ಮಾಣ ಹೇಗೆ ಆಗಲಾರದೋ ಹಾಗೆಯೇ ಸೂಕ್ತವಲ್ಲದ ಪಾತ್ರ, ಕ್ಷೇತ್ರದಲ್ಲಿ ನಿಲ್ಲಲೂ ಆರದು. ಧರ್ಮ ಪೀಠಾಧಿಪತ್ಯಕ್ಕೆ, ಧರ್ಮಪ್ರಚೋದನೆಗೆ ಅಗತ್ಯ ವ್ಯವಸ್ಥೆಯಾಗಿ, ಕೇವಲ ವ್ಯಕ್ತಿಗಣನೆ, ಯೋಗಾಯೋಗ ವಿಚಾರಕಿಂತ ಸತ್ಕುಲ ಪ್ರಸೂತತೆ ಹಾಗೂ ಸದ್ಗುಣ ಪ್ರಣೀತತೆಯಿಂದ ಮಾತ್ರ ವ್ಯಕ್ತವಾಗಬಲ್ಲ ವರ್ಚಸ್ಸು. ಪ್ರಸನ್ನತೆ, ಗಾಂಭೀರ್ಯ, ವಾಕ್ಯಶುದ್ಧಿ, ಸ್ವಸ್ಥಾನ ಪರಿಜ್ಞಾನ, ಮುಂತಾದ ಪಂಚಲಕ್ಷಣಗಳೊಂದಿಗೆ ಸಚ್ಛೀಲ, ಪ್ರಾಮಾಣಿಕತೆ, ಆತ್ಮವಿಶ್ವಾಸ, ಸದಭಿಮಾನಗಳಿಂದ ಶೋಭಿಸುವ ಪಾತ್ರದ ಆಯ್ಕೆ ಮುಖ್ಯ. ಈ ಎಲ್ಲ ಕಾರಣಗಳಿಂದ ಸದ್ಯ ಬ್ರಹ್ಮೀಭೂತರಾದ (೨೧-೧೧-೯೦ ) ಪೂಜ್ಯ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳ ಸ್ಥಾನದಲ್ಲಿ ಸ್ವರ್ಣವಲ್ಲಿ ಪರಂಪರೆಯಲ್ಲಿ ೧೧ನೆಯ (ಮೂಲದಿಂದ ೪೫ನೆಯ) ಮಹಾಸ್ವಾಮಿಗಳಾಗಿರುವ ಶ್ರೀ ಪರಮೇಶ್ವರ ಭಟ್ಟರ ಆಯ್ಕೆ ಅತ್ಯಂತ ಪ್ರಶಂಸನೀಯ ಹಾಗೂ ಸರ್ವಸಮ್ಮತವಾದದ್ದು.
ತೋಟದ ಸೀಮೆಯ ಪ್ರತಿಷ್ಠಿತ ವೈದಿಕ ಮನೆತನಗಳಲ್ಲೊಂದಾದ ನಡಗೋಡ ಭಟ್ಟರ ಮನೆಯ ಶಿವರಾಮ - ಶರಾವತಿ ದಂಪತಿಗಳ ಮಗ ಪರಮೇಶ್ವರ! ನಡಗೋಡ ಭಟ್ಟರ ಮನೆತನಕ್ಕೆ ಸುಮಾರು ಎರಡೂವರೆ ಶತಮಾನದ ಇತಿಹಾಸ ಸಿಗುತ್ತದೆ. ಗೌತಮ ಗೋತ್ರದ ಇವರ ಮೂಲ ಕುಟುಂಬ, ಸಿದ್ದಾಪುರದ ಬಳಿ ಇರುವ ನಿಡಗೋಡ ಎಂಬಲ್ಲಿಂದ ತಾರಗೋಡ (ಶಿರಸಿ ತಾ .) ಹೆಗಡೆ ಮನೆತನದವರು ಪೌರೋಹಿತ್ಯಕ್ಕಾಗಿ ಕರೆಸಿದರೆಂದು ಪ್ರತೀತಿ. ಇದಕ್ಕೆ ಆಧಾರ ಸುತ್ತಲ ನಾಲ್ಕು ಸೀಮೆಗಳಲ್ಲಿ 'ಗೌತಮ' ಗೋತ್ರದವರು ಇಲ್ಲದಿರುವುದು ಹಾಗೂ ಸಿದ್ದಾಪುರ (ಉ.ಕ.)ದ ಸುತ್ತ ಮುತ್ತ ಹೆಚ್ಚಾಗಿ ಇರುವುದು! ಈ ಮನೆತನದಲ್ಲಿ ಸುಮಾರು ೧೮ನೇ ಶತಮಾನದ ಆದಿಯಲ್ಲಿ ಆಗಿಹೋದ, 'ದೊಡ್ಡ ಶಂಭಟ್ಟರು' ಎಂದೇ ಖ್ಯಾತರಾದ, ಶಂಭು ಶಂಭುಭಟ್ಟ ಎಂಬವರ ಹೆಸರು ಹೆಚ್ಚು ಪ್ರಸಿದ್ಧ. ಪಾಂಡಿತ್ಯ, ಅನುಷ್ಠಾನ, ಜನಬಳಕೆ, ಹಲವಾರು ಕುಟುಂಬಗಳ ಪೌರೋಹಿತ್ಯ ಹಾಗೂ ಸಾಮಾಜಿಕ ವರ್ಚಸ್ಸುಗಳಿಂದ ಅಲ್ಲದೇ ಮನತನದ ಶ್ರೇಯಸ್ಸಿಗಾಗಿ ಊರಿನಲ್ಲೊಂದು ಶಂಭುಲಿಂಗೇಶ್ವರ ದೇವಸ್ಥಾನ ಕಟ್ಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಮನೆಯ ಮತ್ತೊಂದು ದೊಡ್ಡ ಹೆಸರು ಶಿವರಾಂ ಭಟ್ಟರದು. ಅಂದರೆ ಈ ಪರಮೇಶ್ವರರ ಮುತ್ತಜ್ಜ. ಇವರು ನಿಷ್ಠಾವಂತ ಘನವೈದಿಕರೂ, ಪ್ರಕಾಂಡ ಪಂಡಿತರೂ, ವರ್ಚಸ್ವಿಗಳೂ ಆಗಿದ್ದರೂ, ಅವರ ಮಗ ನರಸಿಂಹ ಭಟ್ಟರು - ಪರಮೇಶ್ವರರ ತಂದೆಯ ತಂದೆ ಸಾತ್ವಿಕರೂ, ಅನುಷ್ಠಾನಪರ ವೈದಿಕರೂ ಅಲ್ಲದೆ ಸ್ವಾತಂತ್ರಯೋಧರೂ ಆಗಿದ್ದರು. ಈ ಮನೆತನದಲ್ಲಿ ಉಳಿದಂತೆ ಕೇಳಿಬರುವ ಗಣ್ಯ ಹೆಸರುಗಳೆಂದರೆ ಶೇಷಭಟ್ಟರು, ಶಂಕರಭಟ್ಟರು, ಗಣಪಭಟ್ಟರು, (ಸಣ್ಣ) ಶಂಭಟ್ಟರು, ಗಣೇಶಭಟ್ಟರು (ಈಗಿನವರಲ್ಲಿ ಜಿ.ಎಸ್.ಭಟ್ಟರು) ವಿಶೇಷವೆಂದರೆ ಇವರೆಲ್ಲರೂ ಸ್ವರ್ಣವಲ್ಲಿ ಮಠಕ್ಕೆ ಅತ್ಯಂತ ನಿಷ್ಠರಾಗಿದ್ದರು, ಅಲ್ಲದೇ ಯಾವ ಸ್ಥಿತಿಯಲ್ಲೇ ಆಗಲಿ, ಯಾವುದಕ್ಕೇ ಆಗಲಿ ಕರುಬುವ ಸ್ವಭಾವ ಇವರದಾಗಿರಲಿಲ್ಲ. ನರಸಿಂಹಭಟ್ಟರ ಹಿರಿಯಮಗ - ಪರಮೇಶ್ವರನ ತಂದೆ - ಶಿವರಾಮಭಟ್ಟರೂ ಸಂಪ್ರದಾಯ ನಿಷ್ಠ ಅನುಷ್ಠಾನಪ್ರಿಯರಾದ ಒಬ್ಬ ಶ್ರದ್ಧಾವಂತ ಪುರೋಹಿತರು. ೩ ಜನ ತಮ್ಮಂದಿರು, ೬ ಜನ ಅಕ್ಕತಂಗಿಯರುಳ್ಳ ದೊಡ್ಡ ಸಂಸಾರದ ಜವಾಬ್ದಾರಿ ಬೇರೆ. ಆದರೆ ನೆಮ್ಮದಿಯ ಬದುಕಿಗೆ ತೊಂದರೆ ಇಲ್ಲ. ವರ್ಷಕ್ಕೊಮ್ಮೆಯಾದರೂ ಈ ಮನೆಗೆ ಸರ್ವಜೇಂದ್ರರ ಆಗಮನ. ಇಂಥ ಶುದ್ಧ ಸಂಸ್ಕೃತಿಯ ಹಿನ್ನೆಲೆಯಲ್ಲಿ ಶ್ರೀ ಶಾ. ಶಕೆ ೧೮೯೦ ಕೀಲಕ ಸಂ|| ಜೇಷ್ಠ ಶುಕ್ಲ ನವಮಿ ಬುಧವಾರ (೫-೬-೧೯೬೮) ರಂದು ಶುಭಮೂಹೂರ್ತದಲ್ಲಿ ಜನಿಸಿದ ಪರಮೇಶ್ವರನಿಗೆ ಒಬ್ಬ ಅಕ್ಕ (ಗಾಯತ್ರಿ) ಒಬ್ಬ ಅಣ್ಣ (ನರಸಿಂಹ) ಹಾಗೂ ಒಬ್ಬ ತಮ್ಮ (ನಾರಾಯಣ) ಇದ್ದಾರೆ. ತಾಯಿಯೂ ಉತ್ತಮ ಸಂಸ್ಕಾರ ಉಳ್ಳ, ದೊಡ್ಡಮನೆತನದವಳೇ, (ಅಗಸಾಲ ಬುಗಡೀಮನೆ) ಮೂವರು ಗಂಡುಮಕ್ಕಳಲ್ಲಿ ಮಧ್ಯದವನಾದ ಪರಮೇಶ್ವರ ಚಿಕ್ಕಂದಿನಿಂದಲೂ ಪ್ರತಿಭೆಯ ಚಿಲುಮೆ. ಪ್ರಾಥಮಿಕ (ನಡಗೋಡ-ತಾರಗೋಡ ಶಾಲೆ) ಮಾಧ್ಯಮಿಕ (ಭೈರುಂಬೆ ಹೈಸ್ಕೂಲ್) ಅಭ್ಯಾಸದ ಹಂತದಲ್ಲಿಯೇ ಹೆಚ್ಚಿನ ಗುಣಪಡೆದು ಸ್ಕಾಲರ್‌ಷಿಪ್ ಹಾಗೂ ವಿಜ್ಞಾನ ಪ್ರದರ್ಶನದಲ್ಲಿ ರಾಜ್ಯಮಟ್ಟದ ಬಹುಮಾನ ಪಡೆದದ್ದಲ್ಲದೇ, ರಾಷ್ಟ್ರಮಟ್ಟದಲ್ಲಿಯೂ ಆಯ್ಕೆಯಾಗುವ ಅರ್ಹತೆ ಪಡೆದಿದ್ದ. ಸಂಗಡವೇ ಮನೆಯ ಸತ್ಸಂಪ್ರದಾಯ ಸಂಸ್ಕಾರಗಳ ಹಿನ್ನೆಲೆಯಲ್ಲಿ ಸನಾತನ ಪರಂಪರೆಯಲ್ಲಿಯೂ ಆಸಕ್ತಿ ಬೆಳೆದಿತ್ತು. ಹಾಗಾಗಿಯೇ ಎಸ್. ಎಸ್. ಎಲ್. ಸಿ. ನಂತರ ಪಾಲಿಟೆಕ್ನಿಕ್ (ವಿಜ್ಞಾನ) ತರಗತಿ ಸೇರಿದರೂ ವೇದ, ಸಂಸ್ಕೃತ, ಶಾಸ್ತ್ರಗಳ ಅಧ್ಯಯನ ಮಾಡುವ ಹಂಬಲ ಹೆಚ್ಚಾಗಿ, ಒಂದು ತಿಂಗಳಿಗೇ ಅದನ್ನು ಬಿಟ್ಟು ಬಿಟ್ಟ. ಅಲ್ಲಿಂದ ನೇರವಾಗಿ ಸ್ಟರ್ನವಲ್ಲಿಯ ರಾಜರಾಜೇಶ್ವರಿ ಸಂಸ್ಕೃತ ಪಾಠಶಾಲೆಯಲ್ಲಿ ಸಂಸ್ಕೃತ ಸಾಹಿತ್ಯ, ಕೃಷ್ಣ ಯಜುರ್ವೇದ ಅಧ್ಯಯನ, ಮೈಸೂರಿನಲ್ಲಿ ವೇದಾಂತ-ವಿದ್ವತ್ ಹಾಗೂ ನ್ಯಾಯಶಾಸ್ತ್ರಾಧ್ಯಯನ. ಪರೀಕ್ಷೆ ಹಾಗೂ ಪಠ್ಯೇತರ ಸ್ಪರ್ಧೆಗಳಲ್ಲಿ ಅಸಂಖ್ಯ ಬಹುಮಾನ ಅಲ್ಲದೇ ೯೦ ಜನವರಿಯಲ್ಲಿ ಉತ್ತರ ಪ್ರದೇಶದ ಹರಿದ್ವಾರದಲ್ಲಿ ಭಾರತೀಯ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಶಿಕ್ಷಣ ವಿಭಾಗದವರು ಏರ್ಪಡಿಸಿದ್ದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಮೀಮಾಂಸಾ ಕುರಿತ ಭಾಷಣಕ್ಕೆ ಚಿನ್ನ ಹಾಗೂ ವೇದಾಂತ - ಆಶುಕವಿತ್ವಗಳಿಗೆ ಕಂಚಿನ ಪದಕಗಳಿಕೆ! ಇವೆಲ್ಲಕ್ಕೂ ಮುಕುಟ ಇಟ್ಟಹಾಗೆ ಅದೈತ ವೇದಾಂತ ವಿದ್ವತ್ ಪರೀಕ್ಷೆಯಲ್ಲಿ (೧೯೯೦ ಮಾರ್ಚ) ರಾಜ್ಯಮಟ್ಟದ ಪ್ರಪ್ರಥಮ ಸ್ಥಾನವನ್ನೂ, ಅಲ್ಲದೇ ಈ ವರೆಗೆ ಈ ಪರೀಕ್ಷೆಯಲ್ಲಿ ಹಿಂದೆ ಯಾರೂ ಪಡೆದಿರದಷ್ಟು ಹೆಚ್ಚಿನ ಗುಣಗಳನ್ನೂ (೬೦೦ ಕ್ಕೆ ೫೧೭) ಪಡೆದು ದಾಖಲೆ ಸ್ಥಾಪನೆ! ಸದ್ಯ ನ್ಯಾಯ ಶಾಸ್ತ್ರದ ಅಧ್ಯಯನ ಮುಂದುವರೆದಿತ್ತು.
ಮೂಲತಃ ಪರಿಸರದ ಪ್ರಭಾವ, ಸ್ವಯಂಪ್ರಯತ್ನ ಒಟ್ಟುಗೂಡಿದಾಗ ಮಾತ್ರ ವ್ಯಕ್ತಿತ್ವ ರೂಪಿತವಾಗುತ್ತದೆ. ಪರಿಸರವೆಂದರೆ ಹೆತ್ತವರು, ಹೊತ್ತವರು, ಕಲಿಸುವವರು, ಮನೆಯ ಇತರ ಹಿರಿಯರೂ ಸೇರುತ್ತಾರೆ. ಸಂತತಿಗೆ ಸತ್ಪಾತ್ರತೆ ನೀಡುವ ಜವಾಬ್ದಾರಿ ಇವರೆಲ್ಲರದೂ ಇರುತ್ತದೆ. ಈ ದೃಷ್ಟಿಯಿಂದಲೂ ಪರಮೇಶ್ವರ ಅದೃಷ್ಟವಂತನೇ! ಯಾಕೆಂದರೆ ಅವನ ಚಿಕ್ಕಪ್ಪಂದಿರೂ ಎರಡನೆಯ ತಮ್ಮ ಗಜಾನನ ಭಟ್ ಶಿರಸಿಯಲ್ಲಿ ಸಂಸ್ಕೃತ ಪ್ರೊಫೆಸರ್, ಉಳಿದವರೂ - ಮಹಾಬಲೇಶ್ವರ ಭಟ್, ಕೃಷ್ಣ ಭಟ್ ಕೂಡಾ ಮಂತ್ರ, ಕರ್ಮಕಾಂಡಗಳ ಅಧ್ಯಯನ, ಕೃಷಿ, ಪಶುವೈದ್ಯಕೀಯಗಳಲ್ಲಿ ಪರಿಣತಿ ಉಳ್ಳವರು. ಸದಾ ಅಧ್ಯಯನಶೀಲನೂ, ಚಿಂತನೆಯ ಸ್ವಭಾವದವನೂ ಹಾಗೂ ಮೇಧಾವಿಯೂ ಅಷ್ಟೇ ಸರಳ ವ್ಯಕ್ತಿತ್ವದ, ಉತ್ಸಾಹಿಯಾದ ಪರಮೇಶ್ವರ, ಇಂಥ ಶುದ್ಧ ಪರಿಸರದಲ್ಲಿ ಒಬ್ಬ ಸದಸದ್ವಿವೇಕಶಾಲೀ ಸನಾತನ ಪ್ರಿಯನಾಗಿ ಬೆಳೆದ. ಸಂಧ್ಯಾವಂದನಾದಿ ನಿತ್ಯಾನುಷ್ಠಾನ ಎಂದೂ ಬಿಟ್ಟವನಲ್ಲ. ಅಲ್ಲದೇ ಕಾಲಕ್ಕೆ ಉಚಿತವಾದ ಅಭ್ಯಾಸಪೂರ್ಣ ಉಪನ್ಯಾಸ ನೀಡಬಳ್ಳಿ ಸಮರ್ಥ. ವೇದ ಸಂಸ್ಕಾರಕಾಂಡಗಳ ಯಥಾರ್ಥ ಜ್ಞಾನ, ಅದರೊಂದಿಗೆ ಕೇವಲ ಕಲಿತರೆ ಬರಲಾರದ ಪ್ರಬುದ್ಧತೆ, ವಯಸ್ಸಿಗೆ ಮೀರಿದ ಗಂಭೀರ ವಿಚಾರಧಾರೆ ಅವನಿಗೆ ಸಹಜವಾಗಿಯೇ ಇದೆ ಎಂಬುದಕ್ಕೆ ಮುಂದೆ ಕೆಲವು ವಿಷಯಗಳಿಗೆ ನೀಡಿದ ವಿವರಣೆಗಳೇ ಉದಾಹರಣೆ.
• 'ಸನ್ಯಾಸ' ಶಬ್ದಕ್ಕೆ ನಿಮ್ಮ ದೃಷ್ಟಿಯಲ್ಲಿ ವ್ಯುತ್ಪತ್ತಿಪೂರ್ವಕ ಅರ್ಥ?
'ನ್ಯಾಸ' ಎಂದರೆ ಇಡು, ಬಿಡು, ಸಮರ್ಪಿಸು ಎಂದರ್ಥ. ಸಮ್ಯಕ್ + ನ್ಯಾಸ 'ಸನ್ಯಾಸ'. ಈಗ ಇದಕ್ಕೆ ಐಹಿಕ, ಪಾರಲೌಕಿಕ ಭೋಗಭಾಗ್ಯಗಳನ್ನೆಲ್ಲ ತ್ಯಜಿಸುವುದು ಎಂದರ್ಥ ಬರುತ್ತದೆ. "ಆತ್ಮಾರ್ಥೇ ಪೃಥಿವೀಂತ್ಯಜೇತ್" ಸಮಸ್ತ ಜಗತ್ತಿನ ಸಂಭಂಧವನ್ನೇ ಬಿಡುವುದರಿಂದ ಇದನ್ನು ಸಾಧಿಸಬಹುದು. ಏನದು ಸಂಬಂಧ? 'ನನ್ನದು' ಎಂಬ ಭಾವ(ಅಹಂಕಾರ). ಇದು ಸಮೂಲ ಕಿತ್ತು ಹೋದರೆ ಈ ಸನ್ಯಾಸ ಸಾರ್ಥಕ.
• ತ್ಯಾಗ ಮತ್ತು ಅಮೃತತ್ವ ? ಯಾವ ಕರ್ಮಕ್ಕೂ 'ಫಲ'ಗಳನ್ನು ಬಯಸದಿರುವುದೇ 'ತ್ಯಾಗ' (ಭಗವದ್ಗೀತಾ ಅಧ್ಯಾಯ ೧೮) ಅಮೃತತ್ವದ ಅರ್ಥ ಬಹಳ ಅಗಾಧ. ಅದೀಗ ಬೇಡ.
• ವರ್ತಮಾನ ಹಾಗೂ ಧರ್ಮಪೀಠಾಧಿಕಾರ.
ಕಾಲದ ಗತಿ ವಿಚಿತ್ರ ಇಂದಿನ (ವರ್ತಮಾನ) ಸಂಧಿಗ್ಧ ವಾತಾವರಣದಲ್ಲಿ ಸಮಾಜವನ್ನು (ಶುಷ್ಕ) ಭೌತಿಕತೆಯಿಂದ ಆಧ್ಯಾತ್ಮಿಕತೆಯಡೆಗೆ ಒಯ್ಯಲು ಅರ್ಹವ್ಯಕ್ತಿಯೊಬ್ಬನ ಅಗತ್ಯವಿದೆ. ಅವನಿಗೆ ಆ ಅರ್ಹತೆಯೋಂದೇ ಸಾಲದು; ಸ್ಥಾನವೂ ಅತ್ಯಗತ್ಯ. ಇಲ್ಲವಾದರೆ ಸಮಾಜ ಅವನನ್ನು ಗುರುತಿಸದಿರಬಹುದು ; ಗೌರವಿಸದಿರಬಹುದು. ಆ ಸ್ಥಾನವೇ ಧರ್ಮಪೀಠಾಧಿಪತ್ಯ. ಈ ದೃಷ್ಟಿಯಲ್ಲಿ ವರ್ತಮಾನಕ್ಕೂ ಪೀಠಾಧಿಕಾರಕ್ಕೂ ಸಾಮಾನ್ಯರು ನಿರೀಕ್ಷಿಸಲಾಗದ ಗಾಢ ಸಂಬಂಧ ಇದೆಯೆಂದು ತೋರುತ್ತದೆ.
•ಭವಿಷ್ಯದ ಯೋಜನೆಗಳ ರೂಪುರೇಷೆ?
ಈ ನಿಟ್ಟಿನಲ್ಲಿ ಭವಿಷ್ಯವನ್ನು ನಿರೂಪಿಸಬೇಕಾಗುವುದೆನ್ನುವುದು ಸತ್ಯ. ಮೌಢ್ಯದ ಕತ್ತಲಿನಿಂದ ವಿವೇಕದ ಬೆಳಕಿನೆಡೆಗೆ ನಮ್ಮ ಜನತೆಯನ್ನು ಒಯ್ಯುವ ಪ್ರಯತ್ನವೇ ನನ್ನ ಭವಿಷ್ಯದ ಯೋಜನೆಯಾಗಲಿಕ್ಕಿದೆ. ಅದರ ವಿಧಾನ, ಪ್ರಕಾರ ಹಾಗೂ ಪರಿಣಾಮಗಳನ್ನು ಕಾದೇ ನೋಡಬೇಕಾಗುತ್ತದೆ ಅಲ್ಲವೇ?
•ಬದುಕಿನ ಸಹಜತೆಗೆ ಮೀರಿದ ಒಂದು ಕ್ಲಿಷ್ಟ ಅಥವಾ ಸಂಕೀರ್ಣ ಎನಿಸುವ ಹೊಸ ಆಯಾಮಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ನಿಮ್ಮ ಭಾವನೆಗಳು?
ಅಯಾಚಿತವಾಗಿ ಒದಗಿಬಂದ ಇಂಥ ಹೊಸ ಆಯಾಮಕ್ಕೆ ನಮ್ಮ ಬದುಕನ್ನು ಸಮರ್ಪಿಸಿಕೊಂಡಾಗ ಅಥವಾ ಅದರಲ್ಲಿ ತೊಡಗಿಸಿಕೊಂಡಾಗ ತಾನೇ ಜೀವನ ಒಂದು ಉತ್ಕೃಷ್ಟತೆಯನ್ನು ಕಾಣುವುದು? ಕ್ಷಿಷ್ಟವಲ್ಲದ ಬದುಕು ನಿಜವಾದ ಅರ್ಥದಲ್ಲಿ ಸಾರ್ಥಕವೂ ಅಲ್ಲ; ಆದರ್ಶವೂ ಅಲ್ಲ. ಬದುಕಿನ ಸಮಾಜದ ಉತ್ಕರ್ಷಕ್ಕಾಗಿ ಪಡುವ ಕಷ್ಟಗಳು ಮನುಷ್ಯನನ್ನು ಮೃದುಗೊಳಿಸುತ್ತವೆ. ಎಂಬುದು ನನ್ನ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಒಂದು ಉತ್ಕೃಷ್ಟ ಜೀವನದ ಕಡೆಗೆ ಸಾಗುತ್ತಿದ್ದೇನೆ. ಎಂದು ಈ ಸಂದರ್ಭದಲ್ಲಿ ನನಗನಿಸುತ್ತದೆ.
ಹೀಗೆ ಸಮಾಜದ ಸಾಮಾನ್ಯ ಸ್ವರಕ್ಕಿಂತ ಮೇಲ್ಮಟ್ಟದಲ್ಲಿ ಯೇ ರೂಪುಗೊಂಡ ವ್ಯಕ್ತಿತ್ವವುಳ್ಳ ಪರಮೇಶ್ವರ ಶ್ರೀಗಳವರಾಗಿ ಆಯ್ಕೆಗೊಂಡದ್ದೂ ಒಂದು ಆಕಸ್ಮಿಕವೇ ! ವಿದ್ಯಾಭ್ಯಾಸಕ್ಕೆ ಸಂಬಂಧ ಪಟ್ಟಂತೆ ಇವನ ಭವಿಷ್ಯ ತಿಳಿಯಲು, ತಂದೆ ಶಿವರಾಮಭಟ್ಟರು ಜ್ಯೋತಿಷಿಗಳೊಬ್ಬರಲ್ಲಿ ಹೋದಾಗ, ಜಾತಕ ಪರಿಶೀಲಿಸಿದ ಅವರು, ಇವನ ಯೋಗ ತಿಳಿದು ಮಠದಲ್ಲಿ (ಅವರು ಮಠದ ಸಂಪರ್ಕ ಇದ್ದವರೇ ಆಗಿದ್ದುದೂ ಒಂದು ವಿಶೇಷ) ಪ್ರಸ್ತಾಪಿಸಿ, ಮಠದಿಂದ ಪರಮೇಶ್ವರನ ಜಾತಕ ತರುವಂತೆ ಶಿವರಾಮ ಭಟ್ಟರಿಗೆ ಕರೆಬರುವಂತೆ ಮಾಡಿದರು. ನಂತರ ಹಲವು ವಿದ್ವಾಂಸರ ಮಧ್ಯೆ ಪುನಃ ಪರಿಶೀಲನೆ ನಡೆದು ಪೀಠಕ್ಕೆ ಇವನೇ ಯೋಗ್ಯನೆಂದು ಅಂತಿಮ ನಿರ್ಧಾರವಾಯಿತು. ಇಲ್ಲಿಯ ಹಿಂದಿನ ಗುರುವರ್ಯರುಗಳ ಧರ್ಮಸೇವಾತತ್ಪರತೆಯ ಪುಣ್ಯವೇ(ಹಿಂದೆ ಮಾಡಲಾಗಿದ್ದ ಆಯ್ಕೆಯನ್ನೂ ಬದಿಗೊತ್ತಿ) ಇವರನ್ನು ಇಲ್ಲಿಗೆ ಕರೆಸಿತು, ಎಂದು ಅರ್ಥೈಸುವುದಾದರೆ, ೧೬ ಸೀಮೆಗಳ ಹವ್ಯಕರ ಧಾರ್ಮಿಕ ಸಂಕೇತವಾಗಿರುವ "ಸ್ವರ್ಣವಲ್ಲಿ" ಯಲ್ಲಿ, ಪುನಃ ಇವರಿಂದ ಧರ್ಮಧ್ವಜದ ಆರೋಹಣ. ಧರ್ಮಮಹಾದುಂದುಭಿಯ ಪ್ರತಾಡನ, ಧರ್ಮಶಂಖಧ್ವಾನದ ಪ್ರಪೂರಣ ಉಂಟಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.
ಲೇಖಕರು: ಜಿ. ಮಹಾಬಲೇಶ್ವರ ಭಟ್ ನಡಗೋಡು
ಆಕರ ಗ್ರಂಥ: ಸ್ವರ್ಣವಲ್ಲೀ ಪೀಠಾರೋಹಣ ಸ್ಮರಣ ಸಂಚಿಕೆ
ಸಂಗ್ರಹ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ