ಒಂದು ಕ್ಷಣವೂ ಬರಬಾರದು. ಅಂತಹ ಮಾನಸಿಕ ಸ್ಥಿತಿಯನ್ನು ಸಂಪಾದಿಸಿಕೊಳ್ಳುವುದನ್ನೇ ಜ್ಞಾನಿಗಳು “ವೈರಾಗ್ಯ” ಎಂಬ ಶಬ್ದದಿಂದ ವ್ಯಾಖ್ಯಾನಿಸಿದ್ದಾರೆ. ಈ ವೈರಾಗ್ಯ ಪ್ರತಿಯೊಬ್ಬ ಮನುಷ್ಯನಿಗೂ ಬರುವುದಕ್ಕೆ ಸಾಧ್ಯವಿದೆ. ಆದರೆ ನಮ್ಮ ಸುತ್ತಲೂ ಬಿಗಿಯಾಗಿ ಕಟ್ಟಲ್ಪಟ್ಟ ಸಂಸಾರ-ಸಮಾಜವೆಂಬ ಮೋಹದ ಬಂಧನ ಈ ವೈರಾಗ್ಯದ ಆಗಮನಕ್ಕೆ ತಡೆಗೋಡೆಯಾಗಿ ನಿಲ್ಲುತ್ತದೆ. ಮನುಷ್ಯ ತಾನು ಹುಟ್ಟುವಾಗ ಏಕಾಂಗಿಯಾಗಿಯೇ ಹುಟ್ಟುತ್ತಾನೆ. ಆದರೆ ಅವನು ಪ್ರಪಂಚಕ್ಕೆ ಬಂದ ಮೇಲೆ, ಭೂಮಿಯನ್ನು ಸ್ಪರ್ಶಿಸಿದ ಮೇಲೆ ಅವನಿಗೆ ಒಂದೊಂದೇ ಮೋಹದ ಜಾಲಗಳು ಸಂಬಂಧ ಎಂಬ ಶಿರೋನಾಮೆಯಲ್ಲಿ ಸುತ್ತಿಕೊಳ್ಳುವುದಕ್ಕೆ ಆರಂಭವಾಗುತ್ತದೆ. ಮುಂದೆ ಆತನ ಶಾರೀರಿಕ ಬೆಳವಣಿಗೆ ಆಗುತ್ತಾ ಹೋದಂತೆ ಈ ಬಂಧನಗಳು ಬಿಗಿ ಆಗುತ್ತಾ ಹೋಗುತ್ತವೆ. ಕೊನೆಯ ಕ್ಷಣದಲ್ಲಿ ಅದು ಅತ್ಯಂತ ಬಿಗಿಯಾಗಿ ಅದರಿಂದ ಹೊರಬರಲು ಸಾಧ್ಯವೇ ಇಲ್ಲದಷ್ಟು ಗಟ್ಟಿಯಾಗಿ ನಮ್ಮ ಮನಸ್ಸನ್ನು ಆವರಿಸಿಬಿಡುತ್ತದೆ. ಆದ್ದರಿಂದ ಲೋಕದಲ್ಲಿ ನೂರಕ್ಕೆ ತೊಂಭತ್ತೊಂಭತ್ತು ಮಾನವರು ವೈರಾಗ್ಯದ ಯೋಚನೆಯನ್ನು ಮಾಡದೆ ತಮ್ಮ ಜನ್ಮವನ್ನು ಮುಗಿಸಿಬಿಡುತ್ತಾರೆ. ಪೂರ್ವ ಜನ್ಮದ ವಾಸನಾ ಬಲದಿಂದಲೋ ಅಥವಾ ತಾನು ಬದುಕುತ್ತಿರುವ ವಾತಾವರಣದ ಪ್ರಚೋದನೆಯಿಂದಲೋ ನೂರಕ್ಕೆ ಒಬ್ಬ ವೈರಾಗ್ಯದ ಚಿಂತನೆಯನ್ನು ಮಾಡುತ್ತಾನೆ. ಆ ಚಿಂತನೆ ಮಾಡಿದ ಒಬ್ಬನು ವೈರಾಗ್ಯವನ್ನು ಸಾಧಿಸಿ ಮೋಕ್ಷ ಮಾರ್ಗದಲ್ಲಿ ತೆರಳುತ್ತಾನೆ ಎಂದು ಹೇಳಲಾಗದು. ಆದರೆ ಆತನಿಗೆ ಮೋಹಜಾಲದಿಂದ ಸ್ವಲ್ಪ ಹೊರಬರಲು ಸಾಧ್ಯವಿದೆ. ಇದು ನಮ್ಮೆಲ್ಲ ಸಾಮಾನ್ಯ ಮಾನವರ ಪರಿಸ್ಥಿತಿ. ಇದೆಲ್ಲವನ್ನು ಮೀರಿ, ಈ ಎಲ್ಲ ಮೋಹಜಾಲವನ್ನು ದಾಟಿ ಹೊರಬಂದು ನಿಲ್ಲುವ ವ್ಯಕ್ತಿ ಸನ್ಯಾಸಿಯಾಗುತ್ತಾನೆ. ಆದ್ದರಿಂದ ಸನ್ಯಾಸ ಅತ್ಯಂತ ಶ್ರೇಷ್ಠವಾದದ್ದು. ಸನ್ಯಾಸದ ಸಾಧನೆ ಅಥವಾ ಸನ್ಯಾಸದ ಉದ್ದೇಶ ವಿವೇಕಾನಂದರ ಮಾತು ಇರುವಂತೆ “ಆತ್ಮನೋ ಮೋಕ್ಷಾರ್ಥಂ ಜಗತ್ ಹಿತಾಯ”
ಮುಂದಿನ ಲೇಖನದಲ್ಲಿ ಸನ್ಯಾಸದ ವಿಧಗಳನ್ನು ನೋಡೋಣ
-ವಿ. ರವಿಶಂಕರ ದೊಡ್ನಳ್ಳಿ (ಸ್ವರ್ಣವಲ್ಲೀ ಭಕ್ತವೃಂದ)