🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಶ್ರೀ ಸ್ವರ್ಣವಲ್ಲಿಯ ಸಂತ


ಶಾಲ್ಮಲಾ ನದಿಯ ಹೆಸರನ್ನು ಕೇಳುತ್ತಿರುವಂತೆಯೆ, ನಮ್ಮಂತರಂಗದ ಪುಳಕವನ್ನು ಹೊಳೆಯಾಗಿಸುತ್ತಾಳೆ. ಹಲವು ಪುನೀತ ನೆನಪನ್ನು ತೆರೆಯಾಗಿ ಉನ್ಮೀಲಿಸುತ್ತಾಳೆ. ಇವಳು ಹರನ ಜಟೆಯಿಂದಿಳಿದ ಜಾನ್ಹವಿ. ಸಹಸ್ರಲಿಂಗವೆಂಬ ಶಿವಸಾನ್ನಿಧ್ಯವಿದ್ದದ್ದು ಇವಳ ತೊಡೆಯ ಮೇಲೆಯೆ. ಸ್ವರ್ಣವಲ್ಲಿಯನ್ನು ಬಳಸಿ ಹರಿಯುವ ತನ್ನೊಡಲಲ್ಲಿ ಎಷ್ಟೊಂದು ಲೌಕಿಕರಿಗೆ ಕಾವಿಯನ್ನು ಉಡಿಸಿದ್ದಾಳೆ. ಉಪಾದಿರಹಿತ ಆತ್ಮದಂತೆ ಪಾರದರ್ಶಕವಾಗಿ, ಪ್ರಸನ್ನವಾಗಿ ಬೇಸಿಗೆಯಲ್ಲಿ ನಿಂತರೆ, ಮಳೆಗಾಲದಲ್ಲಿ ತಾನು ಕೊಟ್ಟ ಕಾವಿಯ ನೆನಪಾಗಿ ಅದೇ ಬಣ್ಣದಲ್ಲಿ ಹರಿಯುತ್ತಾ, ತನ್ನಲ್ಲಿ ತ್ಯಾಗ ಮಾಡಿದ ಕರ್ಮವನ್ನೆಲ್ಲ ತೆರೆಯಾಗಿ ಹರಿದು, ನೊರೆಯಾಗಿ ಮೆರೆದು, ಪತನವಾಗಿ ಕುಕ್ಕಿ ಸಮುದ್ರವನ್ನು ಸೇರಿಸುತ್ತಾಳೆನೊ!  ಅದೆಷ್ಟು ಚಾತುರ್ಮಾಸ್ಯ ವ್ರತಗಳನ್ನು ಕಂಡಳೊ! ಅದೆಷ್ಟು ಜ್ಞಾನಿಗಳ ಚರಣರಜವನ್ನು ತೊಳೆದಳೊ! ಇಳೆಗೆ ಅವತರಿಸಿದ ಈ ಭಾಗೀರಥಿ! ಸ್ವರ್ಣವಲ್ಲಿ ಶಿಷ್ಯರ ಅಜ್ಞಾನವನ್ನು ಹರಿಸುವುದಕ್ಕಾಗಿ ಹರಿಯುತ್ತಲೇ ಇದ್ದಾಳೆ.

         ನದಿ ಕೂಲದಲ್ಲಿ ಬೆಳೆದ ಶಾಲ್ಮಲಿ (ಬೂರುಗದ ಮರ) ವೃಕ್ಷದ ಬಾಹುಲ್ಯದಿಂದಲೇ ಈ ನದಿಗೂ ಶಾಲ್ಮಲಾ ಎಂಬ ಹೆಸರು ಬಂದಿರಬಹುದು.  ಅಜ್ಞಾನದಂತೆ ಬೃಹತ್ತಾಗಿ ಕಪ್ಪಾಗಿ ಬೆಳೆವ ಈ ಬೂರುಗದ ಮರಗಳು ತನ್ನೊಡಲಲ್ಲಿ ಇರುವ ಜ್ಞಾನದ ಬೆಳಕಿನಂತೆ ಹತ್ತಿಯನ್ನು ಹಾರಿಬಿಡುವುದು.  ಸುಧೆ ಸೋದೆಯಾಯಿತೋ, ಸೋದೆ ಸೋಂದೇಯಾಯಿತು ತಿಳಿಯದು. ಹೆಸರು ಬದಲಾದರು ಅಮೃತತ್ವ ಬದಲಾಗದಲ್ಲವೇ? ಶಾಂತಿಯಿಂದ ಶೋಭಿಸುವ ಸಂತರು, ಆಪೋಜ್ಯೋತಿಯಂತೆ ಬೆಳಗುವ ತಪೋ ಪರಂಪರೆ, ಸ್ವರ್ಣವಲ್ಲಿ ಆಗದೇ? ಹೀಗೆ ಗುರು ಸಾನಿಧ್ಯದಿಂದ ಗಿಡ ಮರ ಹೊಳೆ ಹಳ್ಳಗಳೆಂಬ ಚರಾಚರ ಪ್ರಕೃತಿಯೆ ವೇದಾಂತ ಪಾಠವನ್ನು ಮಾಡುತ್ತಿವೆ.

      ಪ್ರಕೃತ ಸ್ವರ್ಣವಲ್ಲಿ ಮಠದ ಪೀಠಾಧಿಪತಿಗಳಾದ ಶ್ರೀ ಗಂಗಾಧರೇಂದ್ರ ಸರಸ್ವತಿಗಳ ಬಗ್ಗೆ ಯಲ್ಲಾಪುರದ ಅವಧಾನವೊಂದರಲ್ಲಿ ಶತಾವಧಾನಿ ರಾ ಗಣೇಶರು ಸ್ನೇಹಿತ ವಿನಯ ಹೆಗಡೆಯವರ ನೆರಳಿನ ಚಿತ್ರಕ್ಕೆ ಹೀಗೆ ಜೀವ ತುಂಬಿದ್ದರು,

ಹರಿಚ್ಚಂಕರರೂಪೋಯಮ್

ಸರಿತ್ಪರ್ವತಮಧ್ಯಗ:/

ಗಂಗಾಧರೇಂದ್ರಸನ್ಯೋಸೌ

ಗಂಗಾಂಚ ಧರ್ತುಮುತ್ಸುಖ://

“ಈ ಹಸಿರೆ ಶಂಕರನ ರೂಪವನ್ನು ಧರಿಸಿ ಈ ನದಿ ವನಗಳ ಮಧ್ಯದಲ್ಲಿ ಓಡಾಡುತ್ತಿರುವಂತೆ ಕಾಣುವ ಗಂಗಾಧರೇಂದ್ರರು, ಜ್ಞಾನವನ್ನು ಭೂಮಿಯನ್ನು ರಕ್ಷಿಸುವಲ್ಲಿ ನಿರತರಾಗಿದ್ದಾರೆ” ಎಂದು ಭಾವ ತುಂದಿಲರಾಗಿ ಹೇಳಿದ್ದರು. ಕಾಣುವುದಕ್ಕೆ ಸರಳವಾದ ಅನುಷ್ಟುಪ್ ಛಂದಸ್ಸಿನಲ್ಲಿರುವ ಈ ಪದ್ಯ, ಗಂಗಾಧರೇಂದ್ರರ ಸನ್ಯಾಸಿ ಜೀವನವನ್ನು ದರ್ಷಿಸುವ ದೀಪದ ಕುಡಿಯಾಗಿದೆ.  ಗಂಗಾಧರೇಂದ್ರರಾದರು ಸರ್ವಜ್ಞೇಂದ್ರ ಸರಸ್ವತಿಗಳ ತಪ:ಫಲವಾಗಿ ಈ ಮಠಕ್ಕೆ ಬಂದವರು.

       ಬ್ರಹ್ಮಿಭೂತರಾದ ಸರ್ವಜ್ಞೆಂದ್ರರು ಶ್ರೀ ಚಕ್ರ ಆರಾಧನೆಯ ಮೂಲಕ ಲಲಿತಾ ಚರಣದಾಸ ಎಂಬ ಅಭಿದಾನವನ್ನು ಹೊಂದಿದವರು. ಶ್ರೀಮಠದಲ್ಲಿಯೇ ಒಮ್ಮೆ ಸರ್ವಜ್ಞೆಂದ್ರ ಸರಸ್ವತಿಗಳ ದರ್ಶನವನ್ನು ಪಡೆದಿದ್ದೆ. ಆಗ ನನಗಿನ್ನೂ ಹತ್ತರ ಆಶು ಪಾಸಿನ ವಯಸ್ಸು. ಮಠದ ಉಪ್ಪರಿಗೆ, ಹಂಚಿನ ಮಾಡು ಇಳಿದು ಗುಹೆಯಂತಾದ ಅಂಚು, ಆ ಸಂಧಿಯಲ್ಲಿ ಕುಳಿತು, ಏಕಾಂತದಿಂದ ಹೊರಬರುವ ಗುರುಗಳ ನಿರೀಕ್ಷೆಯಲ್ಲಿ ನಾವಿದ್ದೆವು. ರೆಡಾಕ್ಸ್ಯಿಡ್ ನೆಲದ ತಂಪು, ಮಳೆಗಾಲದ ಚಳಿ, ಕೇಸರಿಯ ಕಂಪು ಇಡೀ ಉಪ್ಪರಿಗೆಯನ್ನು ತುಂಬಿತ್ತು.  ಗಾಢವಾದ ಮೌನ  ಉಪ್ಪರಿಗೆಯಲ್ಲಿದ್ದರೂ, ಇದಾವುದರ ಪರಿವೆಯೇ ಇಲ್ಲದೆ, ದೂರದಲ್ಲಿ ದೊಡ್ಡ ದೊಡ್ಡದಾಗಿ ಮಾತಾಡುವ ಕೆಲಸದವರ ದನಿ ಅಲ್ಲಿ ಕೇಳಿಸುತ್ತಿತ್ತು. ಅದೇ ಮೊದಲಾಗಿ ಮಠವನ್ನು ನಾನು ನೋಡಿದ್ದು. ಹಿರಿಯರು ನಮ್ಮಲ್ಲಿ ಭಕ್ತಿಗಿಂತ ಭಯವನ್ನೇ ಹೆಚ್ಚು ತುಂಬಿದ್ದರು. ಬಹುಶಃ ಅವರಿಗೂ ಅದೇ ಇತ್ತು! ನಿಧಾನವಾಗಿ ತೆರೆದ ಬಾಗಿಲು ಭಯವನ್ನು ಕುತೂಹಲವನ್ನು ಹೆಚ್ಚಿಸಿತ್ತು. ವಯೋ ಭಾರದಿಂದ ಶರೀರ ಮುದುಡಿತ್ತು. ಆದರೂ ಎಲ್ಲರನ್ನೂ ನಿರೀಕ್ಷಿಸುತ್ತಾ ಕಂಬದ ಬಳಿ ಇರುವ ಪೀಠದಲ್ಲಿ ಸರ್ವಜ್ಞೆಂದ್ರರು ಆಸೀನರಾದರು. ಅಲ್ಲಿರುವ ಹದಿನೈದಿಪ್ಪತ್ತು ಜನರು ಎದ್ದಿದ್ದರು. ಅವರೆಲ್ಲ ನಮಸ್ಕರಿಸಿ ಕುಳಿತರು. ನಾನು ಸ್ವಾಮಿಗಳನ್ನು ನೋಡುತ್ತಲೇ ಇದ್ದೆ. ನನ್ನ ಭಯ ಮಾಯವಾಗಿತ್ತು. ಈಗಲೂ ನೆನಪಿಸಿಕೊಳ್ಳುವುದಕ್ಕೆ, ನನ್ನ ಜ್ಞಾಪಕದಲ್ಲಿ ಸ್ನೇಹಾರ್ದ್ರವಾದ ಸ್ವಾಮಿಗಳ ಕಣ್ಣಿನ ಚಿತ್ರ ಹಾಗೆ ಇದೆ. ಮುಂದೆ ಮಠಕ್ಕೆ ಹೋದಾಗಲೆಲ್ಲ ಯಶವಂತ ಆಚಾರ್ಯರ ಚಿತ್ರದ ಮೂಲಕ ನನ್ನ ನೆನಪನ್ನು ಮತ್ತೆ ಮತ್ತೆ ಜೀವಂತಗೊಳಿಸಿಕೊಂಡಿದ್ದೇನೆ.

      ಸರ್ವಜ್ಞೇಂದ್ರ ಸರಸ್ವತಿಗಳು ಮೈಸೂರಿನಲ್ಲಿ ಹಾನಗಲ್ ವಿರೂಪಾಕ್ಷ ಶಾಸ್ತ್ರಿಗಳಲ್ಲಿ ಶಾಸ್ತ್ರಾಭ್ಯಾಸವನ್ನು ಮಾಡಿದವರಂತೆ. ಶೃಂಗೇರಿಯ ಶ್ರೀ ಚಂದ್ರಶೇಖರ ಭಾರತಿಗಳಿಗೂ ವಿರೂಪಾಕ್ಷ ಶಾಸ್ತ್ರಿಗಳೆ ಪಾಠವನ್ನು ಮಾಡಿದ್ದರು. ವಿರೂಪಾಕ್ಷ ಶಾಸ್ತ್ರಿಗಳ ನಡೆ ನುಡಿಗಳ ಪ್ರಭಾವ ಶ್ರೀ ಚಂದ್ರಶೇಖರ ಭಾರತಿಗಳ ಮೇಲೆ ಆಗಿತ್ತು ಎಂದು “ಶಾರದಾ ಪೀಠದ ಮಾಣಿಕ್ಯ” ಪುಸ್ತಕದಲ್ಲಿ ಶ್ರೀ ಸಾ.ಕೃ. ರಾಮಚಂದ್ರ ರಾಯರು ಉಲ್ಲೇಖಿಸಿದ್ದಾರೆ. ಮುಂದೆ ವಿರೂಪಾಕ್ಷ ಶಾಸ್ತ್ರಿಗಳು ವಾಲುಕೇಶ್ವರ ಭಾರತಿ ಎಂಬ ಸನ್ಯಾಸ ಅಭಿದಾನದಿಂದ  ಕೂಡಲಿ ಶೃಂಗೇರಿ ಮಠದ ಪೀಠಾಧಿಪತಿಗಳಾದರು. ವಿರೂಪಾಕ್ಷ ಶಾಸ್ತ್ರಿಗಳು ಸನ್ಯಾಸಿ ಆಗುವವನು ಆದವನು ಹೇಗಿರಬೇಕೆಂದು ಸರ್ವಜ್ಞೆಂದ್ರರಿಗೆ ಸಂದರ್ಭದ ಮೂಲಕವೆ ತಿಳಿಸಿಕೊಟ್ಟ ಘಟನೆಯನ್ನು ಗಡಿಕೈ ಮಹದೇವ ಹೆಗಡೆಯವರು ಒಮ್ಮೆ ವಿವರಿಸಿದ್ದರು.

     ಶೃಂಗೇರಿಯಂತೆ ಮಠಕ್ಕೊಂದು ಆಡಳಿತಾಧಿಕಾರಿಗಳು ನಮ್ಮ ಮಠದಲ್ಲಿ ಇಲ್ಲದ ಕಾರಣ, ಪೀಠಾಧಿಪತಿಗಳೆ ವ್ಯವಹಾರವನ್ನು ನೋಡಿಕೊಳ್ಳುವ ಅನಿವಾರ್ಯತೆ ಇತ್ತು. ಸರ್ವಜ್ಞೆಂದ್ರ ಸರಸ್ವತಿಗಳಿಗೆ ಸಮಕಾಲೀನರಾದ ದ್ವೈತ ಮಠದ ಸೋದೆಯತಿಗಳ  ಸ್ನೇಹವು ಇತ್ತಂತೆ. ಸೋದೆ ಮಠದ ಯತಿಗಳು ಸ್ನೇಹದ ಸಲಿಗೆಯಲ್ಲಿ ಮಠದ ವ್ಯವಹಾರಕ್ಕೆ ಬೇಕಾಗುವ ಹಣ ಸಂಪತ್ತುಗಳನ್ನು  ಹೇಗೆ ಸಂಪಾದಿಸಬೇಕೆಂದು ಸರ್ವಜ್ಞೆಂದ್ರರಿಗೆ ಹೇಳಿಕೊಡುತ್ತಿದ್ದರಂತೆ. ಆದರೆ ಸರ್ವಜ್ಞೆಂದ್ರರಿಗೆ ವ್ಯವಹಾರ ಆಸಕ್ತಿಯಲ್ಲ, ಅನಿವಾರ್ಯವಾಗಿತ್ತು. ಹಾಗಾಗಿ ಸರ್ವಜ್ಞೆಂದ್ರರಿಗೆ ಆ ಮಾತುಗಳು ಕಿವಿಯಿಂದ ಮನಸ್ಸಿಗೆ ಇಳಿಯಲೇ ಇಲ್ಲ. ಮುಂದೆ ವಯಸ್ಸು ಅನಾರೋಗ್ಯಗಳ ಜೊತೆಗೆ ಲೌಕಿಕ ಅನಾಸಕ್ತಿಯು ಸೇರಿ ಮಠದ ವ್ಯವಹಾರ ಶೈಥಿಲ್ಯವು ಹೆಚ್ಚುತ್ತಲೆ ಹೋಯಿತು. ಸರ್ವಜ್ಞೆಂದ್ರರು ಶಿಷ್ಯ ಸ್ವೀಕಾರಕ್ಕೆ ಮೊದಲೇ ಬ್ರಹ್ಮಿಭೂತರಾದರು. ಗುರುಗಳ ಕೊನೆಯ ಕಾಲದಲ್ಲಿ ಹದ ತಪ್ಪಿದ ಮಠದ ಅಧಿಕಾರಿ ವರ್ಗ, ಕೆಲಸದವರಿಗೆಲ್ಲ ಗುರುಗಳು ಇಲ್ಲದಿರುವಿಕೆ ಕಟ್ಟು ಬಿಚ್ಚಿದ ದನ ಕರುಗಳಂತಾಯಿತು. ಮಠದ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳುವವರು ಮಠದಲ್ಲಿಯೇ ವಾಸ್ತವ್ಯವನ್ನು ಹೂಡಿದವರಲ್ಲ. ಅವರಾದರೂ ಆಗಲೋ ಈಗಲೋ ಅಥವಾ ಅವಕಾಶವಾದಾಗಲೋ ಬಂದು ಇದ್ದ ಬಿದ್ದ ಕೆಲಸ ಕಾರ್ಯಗಳನ್ನು ಅಲ್ಲಿರುವವರಿಗೆ ಹೇಳಿ ಹೋಗುವವರು. ಮಠದಲ್ಲಿರುವವರಾದರು ಇವರ ಅನುಪಸ್ಥಿತಿಯನ್ನೇ ಕಾಯುತ್ತಿರುವವರು. ಹಾಗಾಗಿ ಹಿರಿಯರಿಲ್ಲದ ಮನೆ ಗುರುವಿಲ್ಲದ ಮಠ ಎಂಬ ಗಾದೆಗೆ ಜೀವಬಂದಂತಿತ್ತು.

     ಮಠದ ಪಾಠಶಾಲೆಯು ಸೂತ್ರ ಹರಿದ ಗಾಳಿಪಟದಂತಾಗಿತ್ತು. ಆಗೆಲ್ಲ ಕಲಿತ ಪುರೋಹಿತರು ಕಡಿಮೆ. ಹಾಗಾಗಿ ಗ್ರಹಸ್ಥರ ನಿತ್ಯ ನೈಮಿತ್ತಿಕಗಳಿಗೆಲ್ಲ ಪಾಠಶಾಲೆಯನ್ನೇ ಅವಲಂಬಿಸುವುದು ಅನಿವಾರ್ಯವಾಗಿತ್ತು. ಪಾಠಶಾಲೆಯ ಅಧ್ಯಾಪಕರಿಗೂ ಗ್ರಹಸ್ಥರು ಕರೆದ ಕಾರ್ಯಕ್ರಮಗಳಿಗೆ ಹೋಗುವುದು ಅನಿವಾರ್ಯವಾಗಿತ್ತು. ಪಾಠಶಾಲೆಯಲ್ಲಿ ಸಿಗುವ ಸಂಭಾವನೆ ಕಡಿಮೆ, ಸಂಸಾರದ ಆವಶ್ಯಕತೆಗೆ ಇತರ ದುಡಿಮೆ ಎಂದರೆ ಇದೇ ಆಗಿತ್ತು. ಹಾಗಾಗಿ ಪಾಠ ಪ್ರವಚನಕ್ಕೆ ಸಮಯದ ಕೊರತೆಯಾಯಿತು. ಅಧ್ಯಾಪಕರಿಗೆ ಪೀಠಾಧಿಪತಿಗಳ ಭಯವಿಲ್ಲ ವಿದ್ಯಾರ್ಥಿಗಳಿಗೆ ಅಧ್ಯಾಪಕರ ಭಯವಿಲ್ಲ ಎಂಬಂತಾಯಿತು.

       ಇದೇ ಸಮಯದಲ್ಲಿ ನಾನೊಮ್ಮೆ ಮಠಕ್ಕೆ ಹೋಗಿದ್ದೆ. ಮಠದ ಬಾಗಿಲಲ್ಲೆ ಅಲ್ಲಿ ಓದುತ್ತಿರುವ ನನ್ನ ರಕ್ತ ಸಂಬಂಧಿ ವಿದ್ಯಾರ್ಥಿಯೊಬ್ಬ ಸಿಕ್ಕಿದ. ಬಟ್ಟೆ ಬದಲಾಯಿಸಲು ನನ್ನನ್ನು ಉಪ್ಪರಿಗೆಯ ಕೊಠಡಿಗೆ ಕರೆದುಕೊಂಡು ಹೋದ. ಆ ಕೊಠಡಿಯ ಬಾಗಿಲನ್ನು ಒದ್ದು ತೆಗೆದ. ಇಡೀ ಮಠವನ್ನು ಮಾರ್ಧನಿಸಿದ ಆ ಶಬ್ದ ನನಗೆ ಆತಂಕವನ್ನುಂಟು ಮಾಡಿತು. ಈಗಲೂ ಅವನ ಕ್ರಮ, ಆ ಶಬ್ದಗಳೆರಡು ನೆನಪಾದಾಗಲೆಲ್ಲ ಕಸಿವಿಸಿಯನ್ನು ಉಂಟುಮಾಡುತ್ತವೆ. ಮನೆಯಾದರೇನು ಮಠವಾದರೇನು ಮನುಷ್ಯನ ಸಹಜ ಭಾವಗಳೆಲ್ಲ ವಿಜೃಂಭಿಸುವುದಕ್ಕೆ ಅವಕಾಶ ಸಿಕ್ಕರೆ ಸಾಕುತಾನೇ?

      ಇನ್ನು ಮಠಕ್ಕೆ ಬರುವ ಭಕ್ತಾದಿಗಳಲ್ಲಿ ಅನೇಕರಿಗೆ ದೇವತಾ ಸನ್ನಿಧಿ, ಗುರುದರ್ಶನಗಳಿಗಿಂತ ಅಹಂಕಾರ ತೃಪ್ತಿಯೇ ಮುಖ್ಯವಾಗುವುದನ್ನು ನೋಡಿದ್ದೇನೆ. ಮಠದಲ್ಲಿ ಮಾತಾಡಿಸುವವರಿಲ್ಲ! ಚಹಾ ಕೊಡುವವರಿಲ್ಲ! ಎಂಬಂತಹ ಮಾತುಗಳಿಂದ ಪ್ರಾರಂಭಿಸಿ ಆಕ್ಷೇಪಗಳ ಅಭಿಷೇಕವನ್ನೇ ಮಠದ ಮೇಲೆ ಮಾಡಿದ್ದನ್ನು ಕೇಳಿದ್ದೇನೆ  ಆ ಕಾಲದಲ್ಲಿ ಹತ್ತೊ ಇಪ್ಪತ್ತೊ ರೂಪಾಯಿಗಳನ್ನು ದೀಪಾರಾಧನೆಯ ಕಾಣಿಕೆಯಾಗಿ ಕೊಡುತ್ತೇವೆ ಎಂಬುದೇ ಮಠವೆಂಬುದು ಹಕ್ಕಿನ ಸ್ಥಳವೆಂಬ ಭಾವನೆಗೆ ಕಾರಣವಾಗಿತ್ತು. ಹಾಗಾಗಿ ಮಠಕ್ಕೆ ಬಂದಾಗ ಎಲ್ಲ ಸತ್ಕಾರವನ್ನು ಅಪೇಕ್ಷಿಸುವ ಎಲ್ಲವನ್ನು ಆಕ್ಷೇಪಿಸುವ ಅಧಿಕಾರವು ಬಳಸಲ್ಪಡುತ್ತಿತ್ತು.

      ಇಲ್ಲೆಲ್ಲ ತಿಳಿದವರಂತೆ ಅವಿಚಾರಿತ ರಮಣೀಯವಾಗಿ ಮಾತಾಡುವ ಆಕ್ಷೇಪಿಸುವ ಜನರ ಅಹಂಕಾರ ಶಮನಕ್ಕೊ, ಅಂತರಂಗದ ದೌರ್ಬಲ್ಯ ಮೂಲವಾಗಿಯೋ ಆಗಾಗ ಅನೇಕ ಘಟನೆಗಳು ನಡೆಯುತ್ತಲೇ ಇರುತ್ತದೆ. ಮಠದಲ್ಲಿ ನಿರಂತರವಾಗಿ  ಪೂಜಾದಿ ಕೈಂಕರ್ಯಗಳನ್ನು ನಡೆಸುವ ಯತಿಗಳ ಮಹತ್ವ ಅರ್ಥವಾಗದು. ಮಠದ ಅಕ್ಕಪಕ್ಕದಲ್ಲಿ  ಅವರ ಅವತಾರ, ಇವರ ಪ್ರತಿರೂಪ, ಅವರ ಪಾದುಕೆ, ಇವರ ದಂಡವೆಂಬ ಕಥೆಗಳಿಗೆ ಮರುಳಾಗಿ, ತಮ್ಮ ವಿಚಾರಶಕ್ತಿಯನ್ನೆಲ್ಲ ಅಲ್ಲಿರುವ ಕಾಷಾಯವೇಶದ ಕಾಲಡಿಯಲ್ಲಿ ಹಾಕಿ, ಅಲ್ಲಿ ಮಾಡುವ ಸೇವೆ ನೀಡುವ ಕಾಣಿಕೆಗಳಿಗೆ ಲೆಕ್ಕವೇ ಇಲ್ಲ. ಆಕ್ಷೇಪವೊ ಅಪೇಕ್ಷೆಯೋ ಇಲ್ಲದೆ ಅಲ್ಲೆಲ್ಲ ನಡೆದುಕೊಂಡು, ಅಲ್ಲಿ ಉಗುಳಲ್ಪಡುವ ಪವಾಡ ಕಥೆಗಳನ್ನು ಹೇಳಿಕೇಳಿ ಧನ್ಯರಾಗುವುದೇನು! ಅಲ್ಲಿಯ ಮಡಿಗೆ ಭಯಪಡುವುದೇನು! ಮುಚ್ಚು ಮರೆಯನ್ನೇ ದೈವ ಶಕ್ತಿ ಎಂದು ಭ್ರಮಿಸುವುದೇನು! ಒಟ್ಟಾರೆ ಇವರ ಅಜ್ಞಾನ ಅವರ ಬಂಡವಾಳ. ಪ್ರಾತಿಬಾಸಿಕ ಸತ್ಯವನ್ನು ನಂಬಿ, ವ್ಯಾವಹಾರಿಕ ಅಜ್ಞಾನದಲ್ಲಿ ತೊಳಲುತ್ತಾ, ಆತ್ಯಂತಿಕ ಸತ್ಯವನ್ನು ಮರೆಯುವುದೇ ಈ ಜಗತ್ತಿನ ಸ್ವಾರಸ್ಯವು ಇರಬಹುದು.

      ಓದಿದವರಿಗೆ ಬುದ್ಧಿಪೂರ್ವಕ ಅಶ್ರದ್ಧೆ. ಓದದಿದ್ದವರಿಗೆ ಅಜ್ಞಾನದ ಹೊದಿಕೆ. ಹೀಗೆ ಆಡಿಕೊಳ್ಳುವುದಕ್ಕೆ, ಅಣಕಿಸುವುದಕ್ಕೆ, ಆಕ್ಷೇಪಿಸಿ ಅಹಂಕಾರ ತೃಪ್ತಿ ಪಡುವುದಕ್ಕೆ ಮಠವೊಂದು ವಿಷಯವಾಗಿತ್ತು. ಆಗಷ್ಟೇ ಪ್ರಾರಂಭವಾದ ಮಂಡಲ ಪಂಚಾಯತ ಚುನಾವಣೆಯ ದ್ವಾರದ ಮೂಲಕ ಮನೆಮನೆಗೂ ರಾಜಕೀಯ ಪ್ರವೇಶಿಸುತ್ತಿತ್ತು. ಅದು ಮಠವನ್ನು ಮಾತ್ರ ಬಿಡುವುದು ಹೇಗೆ?  ನಮ್ಮ ದೇಶದ ಸ್ಥಿತಿಯೇ ಹೀಗಿರುವಾಗ, ನಮ್ಮ ಸೀಮೆಗಳು ಮಾತ್ರ ಬೇರೆಯಾಗಲು ಹೇಗೆ ಸಾಧ್ಯ?!

   ಆರ್ಥಿಕ ದುಸ್ಥಿತಿ, ಆಡಳಿತದಲ್ಲಿ ಅರಾಜಕತೆ ಅಶೃದ್ಧೆಯ ಶಿಷ್ಯ ಸಂದೋಹವುಳ್ಳ ಮಠಕ್ಕೆ ಸನ್ಯಾಸಿಯೊಬ್ಬರನ್ನು ಹುಡುಕುವ ಕೆಲಸವು ಬಂತು. ಇಂತಹ ಸಂದರ್ಭದಲ್ಲಿ ಹುಡುಕುವ ಅಧಿಕಾರ ಉಳ್ಳವರ ಆಸೆಯೇ ಪ್ರಧಾನ ವಾಗುವುದೇ ವಿನಾ ಲೌಕಿಕ ಆಸೆಯನ್ನು ಬಿಟ್ಟವನನ್ನು ಹುಡುಕುವುದು ಸುಲಭವಲ್ಲ. ಮಂದ, ಮದ್ಯಮ, ಉತ್ತಮ ವೈರಾಗ್ಯಗಳನ್ನು ಗುರುತಿಸುವುದು ಜ್ಞಾನಿಗೆ ಮಾತ್ರ ಸಾಧ್ಯ. ಅಂತಹ ಜ್ಞಾನಿಗಳಾದ ಗುರುಗಳು ಸಶರೀರಿಗಳಾಗಿ ಇಲ್ಲ. ಇನ್ನು ಜ್ಯೋತಿಷ್ಯವನ್ನು ನಂಬಬಹುದಾದರು ಜ್ಯೋತಿಷಿಗಳಿಗೆ ಮಿತಿ ಇದೆಯಲ್ಲವೇ? ಇಂತಹ ಪರೀಕ್ಷೆಗೆ ಲೌಕಿಕ ಹೊರಟರೆ ಅವನ ಅಜ್ಞಾನವೇ ಪ್ರಕಟವಾಗುವುದು.

      ಶೃಂಗೇರಿ ಮಠದಲ್ಲೂ ಒಮ್ಮೆ, ಶಿಷ್ಯ ಸ್ವೀಕಾರಕ್ಕೂ ಮೊದಲೆ ಗುರುಗಳು ಬ್ರಹ್ಮಿಭೂತರಾದ ಸಂದರ್ಭವೊಂದು ಒದಗಿತ್ತು. ಶ್ರೀ ಸಚ್ಚಿದಾನಂದೇಂದ್ರ ಶಿವಾಭಿನೃಸಿಂಹ ಸ್ವಾಮಿಗಳು ಬೆಂಗಳೂರಿನ ಸಂಸ್ಕೃತ ಪಾಠಶಾಲೆಯಲ್ಲಿ ಓದುತ್ತಿರುವ ನರಸಿಂಹನನ್ನೆ ಶಿಷ್ಯನನ್ನಾಗಿ ಸ್ವೀಕರಿಸುವ ಸಂಕಲ್ಪವನ್ನು ಮಾಡಿದ್ದರು. ಗುರುಗಳಿಗೆ ಅನಾರೋಗ್ಯ ಪ್ರಾರಂಭವಾದಾಕ್ಷಣ ಬೆಂಗಳೂರಿನಲ್ಲಿರುವ ನರಸಿಂಹನನ್ನು ಕರೆತರಲು  ಜನರನ್ನು ಕಳುಹಿಸಿದರು. ಅದು 1930ರ ದಶಕ, ಬೆಂಗಳೂರಿನಿಂದ ಒಂದಷ್ಟು ದೂರದವರೆಗೆ ಮಾತ್ರ ಬಸ್ಸಿನಲ್ಲಿ ಬಂದು, ಮುಂದೆ ನಡೆದೇ ಬರಬೇಕಾದ ಕಾಲ. ಅಷ್ಟು ಅವಧಿಯವರೆಗೆ ದೇಹಧಾರಣೆ ಸಾಧ್ಯವಿಲ್ಲವೆಂದು ತಿಳಿದ ಸ್ವಾಮಿಗಳು, ಮಠದ ಆಡಳಿತಾಧಿಕಾರಿಗಳ ಮೇಲೆ ಭರವಸೆಯು ಸಾಲದೆ, ಮೈಸೂರು ಮಹಾರಾಜರಿಗೆ ಪತ್ರವನ್ನು ಬರೆದು, ನನ್ನ ಆಯ್ಕೆಯ ವ್ಯಕ್ತಿಯಾದ ನರಸಿಂಹನನ್ನೆ ಪೀಠಕ್ಕೆ ತರಬೇಕು. ಈ ಕಾರ್ಯವನ್ನು ತಾವೇ ನಿಂತು ಮಾಡಿಸಬೇಕೆಂದು ಪತ್ರವನ್ನು ಬರೆದಿದ್ದರಂತೆ. ಮುಂದೆ ಮಹಾರಾಜರ ಅಪ್ಪಣೆಯಂತೆ ಗುರುಗಳ ಸಂಕಲ್ಪ ನೆರವೇರಿತು. ಇಂತಹ ಸಂದರ್ಭದಲ್ಲಿ ಆ ಮಠ ಈ ಮಠವೆಂಬ ಭೇದವಿಲ್ಲದೆ, ತಮ್ಮ ತಮ್ಮ ಅಧಿಕಾರಕ್ಕೆ ಆಶಯಕ್ಕೆ ಕೈಗೊಂಬೆಯಾಗುವ ಗುರುಗಳೇ ಬೇಕೆಂದು ಬಯಸುವುದು ನಡೆದೆ ಇದೆ. ನಡೆಯುತ್ತಲೂ ಇದೆ. ಆದರೆ ಎಷ್ಟೋ ಬಾರಿ ಈ ರೀತಿಯ ಆಶಯಕ್ಕಿಂತ ಹಿಂದಿನ ಗುರುಗಳ ತಪ:ಪ್ರಭಾವವೇ ಮುಂದಾಗಿ ಎಲ್ಲವನ್ನು ನಡೆಸಿದಂತೆಯೂ ಕಾಣುತ್ತದೆ. ನಮ್ಮ ಮಠದಲ್ಲಿಯೂ ಲಲಿತಾ ಚರಣದಾಸರ ಆಶಯವನ್ನು ಬಿಟ್ಟು ಬೇರೇನು ನಡೆಯಲು ಸಾಧ್ಯ?!

        ಎಂಬತ್ತರ ದಶಕ ರಾಜಕೀಯವಾಗಿ ದೇಶ ಬದಲಾಗುತ್ತಿರುವ ಸಂದರ್ಭ. ಎಲ್ಲೆಲ್ಲೂ ಹೋರಾಟ ಚಳುವಳಿಗಳು ಪ್ರಾರಂಭವಾದ ಕಾಲ. ರಸ್ತೆ ಬೇಕು ಅಭಿವೃದ್ಧಿಯಾಗಲಿ ಎಂಬುದಕ್ಕೊಂದು ಹೋರಾಟವಾದರೆ, ರಸ್ತೆ ಬಂದರೆ ಅದರೊಟ್ಟಿಗೆ ಕಳ್ಳನು ಬರುತ್ತಾನೆ ಹಾಗಾಗಿ ರಸ್ತೆ ಬೇಡ ಎಂಬುದಕ್ಕೊಂದು ಹೋರಾಟ ನಡೆಯುತ್ತಿತ್ತು. ಏನಾದರಾಗಲಿ ನಿದ್ದೆಗಿಂತ ಎಚ್ಚರ ಲೇಸು, ತಮಸ್ಸಿಗಿಂತ ರಜೋಗುಣ ಒಳ್ಳೆಯದು.  ಈ ರೀತಿಯ ಬದಲಾವಣೆಯ ಗಾಳಿಯಲ್ಲಿ ಜನ ಮಗ್ಗಲು ಬದಲಿಸುತ್ತಿದ್ದರು ಮಠಕ್ಕೆ ಬರುವ ಸೀಮೆಯ ಶಿಷ್ಯರು ಕಡಿಮೆ. ಸಂಪರ್ಕ ವ್ಯವಸ್ಥೆಯ ಕೊರತೆ ನಿದ್ದೆ ಬಂದವನಿಗೆ ಹಾಸಿಗೆ ಹಾಸಿದಂತಿತ್ತು. ಬಹುಕಾಲದ ನಂತರ ಕೇಳಿದ ಮಠದ ಶಿಷ್ಯ ಸ್ವೀಕಾರ ಜನರ ಕುತೂಹಲವನ್ನು ಹೆಚ್ಚಿಸಿತ್ತು. ಅದು ಮಠವನ್ನು ನೋಡುವುದಕ್ಕೂ, ತಮ್ಮ ಮಠವೆಂದು ಅರಿವಾಗುವುದಕ್ಕೂ ಸಮಯವನ್ನು ಸೃಷ್ಟಿಸಿತು.

ಹೀಗೆ ಶ್ರೀ ಗಂಗಾಧರೇಂದ್ರರ ಪೀಠಾರೋಹಣ ಕಾರ್ಯಕ್ರಮಕ್ಕೆ ಸಾಕಷ್ಟು ಜನ ಸೇರಿದ್ದರು. ಊಟ ತಿಂಡಿ ವ್ಯವಸ್ಥೆಗಳು ಪವಾಡವೆಂಬಂತೆ ನಡೆಯಿತು ಎಂಬುದನ್ನು ಕೇಳಿದ್ದೇನೆ. ನಮ್ಮ ಸೀಮೆಗಳಲ್ಲಿ ಈ ಪೀಠಾರೋಹಣ ಕಾರ್ಯಕ್ರಮ ಸಂಚಲನವನ್ನಂತು ಉಂಟುಮಾಡಿತು.

    ಗಂಗಾಧರೇಂದ್ರರಿಗೆ  ಸಹಜವಾಗಿಯೇ ಮಠದಲ್ಲಿ ಎಲ್ಲವೂ ಹೊಸತು. ಪೂಜೆ ನೇಮ ನಿಷ್ಠೆಗಳನ್ನು ಹಿರಿಯರ ಸಲಹೆ ಸೂಚನೆಯಂತೆ ಸ್ವಯಂ ಕೈಗೊಂಡರು, ವ್ಯವಹಾರದಲ್ಲಂತೂ ಪರಾವಲಂಬಿಯಾಗಬೇಕಾದದ್ದು ಅನಿವಾರ್ಯವಾಗಿತ್ತು. ಮೊದಲೇ ಸ್ಥಾನಾಪನ್ನರಾದ ಆಡಳಿತ ವರ್ಗದವರನ್ನೆಲ್ಲಾ  ನಿಭಾಯಿಸಬೇಕು. ಇವರು ಮಠಕ್ಕೆ ಗುರುಗಳಾದರು ತಾವು ಮೊದಲಿನಿಂದಲೂ ಇಲ್ಲಿ ಇರುವವರೆಂಬ ಅವರ ಹಕ್ಕಿನ ಭಾವವನ್ನು ತಿದ್ದಿಕೊಂಡು, ಮಠವನ್ನು ನೇರ್ಪುಗೊಳಿಸುವಾಗ ಎಷ್ಟು ಶ್ರಮವಾಯಿತೊ ದೇವರೇ ಬಲ್ಲ!

  ಅಧ್ಯಯನ ಅಧ್ಯಾಪನ ಪೂಜೆಗಳನ್ನು ಒಂದು ದಿನವೂ ವ್ಯತ್ಯಯವಾಗದಂತೆ ಇಂದಿನವರೆಗೂ ನಡೆಸಿಕೊಂಡು ಬಂದಿದ್ದಾರೆ. ಮಠದ ವ್ಯವಹಾರ, ಪೂಜೆ, ವಿವಿಧ ಸಮಾಜ ಸುಧಾರಣಾ ಕಾರ್ಯಕ್ರಮಗಳ ನಡುವೆ ಅಧ್ಯಯನವನ್ನು ಹೇಗೆ ನಡೆಸಿದರೊ ತಿಳಿಯದು. ಪೀಠಾಧಿಪತಿಗಳಾಗಿ ಅಧ್ಯಯನವನ್ನು ಹೇಗೆ ಮಾಡಬೇಕೆಂದು ಹೇಳುವಾಗ ಶೃಂಗೇರಿಯ ಭಾರತಿ ತೀರ್ಥರು ನಮ್ಮ ಗುರುಗಳನ್ನು ಉದಾಹರಿಸುತ್ತಾರಂತೆ. ಅಧ್ಯಾಪನವಂತು ಬಿಡುವಿಲ್ಲದ ಕೆಲಸದ ನಡುವೆಯೂ ಸಾಗುವುದನ್ನು ನಾನೂ ನೋಡಿದ್ದೇನೆ. ಯಾವುದೋ ಕಾರ್ಯಕ್ರಮವನ್ನು ಮುಗಿಸಿ ಬಂದು,ರಾತ್ರಿಯ ಪೂಜಾದಿ ಕೈಂಕರ್ಯವನ್ನು ಮಾಡಿ, ಆಮೇಲೆ ಕಾಣಲು ಬಂದ ಭಕ್ತರ ಅಹವಾಲುಗಳನ್ನು ಸ್ವೀಕರಿಸಿ, ಸಮಾಧಾನವನ್ನು ಹೇಳುವಾಗ ರಾತ್ರಿ ಹನ್ನೆರಡು ಗಂಟೆಯ ಹತ್ತಿರವಾಗಿತ್ತು. ಆಮೇಲೆ ವೇದಾಂತ ವಿದ್ಯಾರ್ಥಿಗಳಿಗೆ ಪಾಠ ಮಾಡುವುದನ್ನು ನೋಡುವಾಗ, ಒಳಗಿನ ಚೈತನ್ಯವೇ ಯಂತ್ರವಾಗಿ ಕೆಲಸ ಮಾಡುತ್ತಿರುವಂತೆ ಅನಿಸಿತು.

ಪೂಜೆಗೆ ಕುಳಿತರೆ ಮುಗಿಯುವವರೆಗೆ ದೇವತಾ ಸನ್ನಿಧಾನದಿಂದ ದೃಷ್ಟಿಯನ್ನು ಕದಲಿಸದೆ, ಆಸನ ಭಂಗವು ಇಲ್ಲದೆ ಶ್ರೀಗಳು ಮಾಡುವ ಪೂಜೆ ಮನನೀಯವಾದದ್ದು. ಒಮ್ಮೆ ಶತಾವಧಾನಿ ಗಣೇಶರು, ಗುರುಗಳೊಂದಿಗೆ ತೀರ್ಥ ಪರಿಕ್ರಮಕ್ಕೆ ಹೋಗಿದ್ದರು. ಆ ಸಮಯದಲ್ಲಿ ಸ್ವಾಮಿಗಳ ಪೂಜೆಯ ಕಾಲ, ಒಂದು ದಿನ ಬೇಗ ಇನ್ನೊಂದು ದಿನ ದೀರ್ಘವಾಗಿ ನಡೆಯುವುದನ್ನು ನೋಡಿದ ಅವಧಾನಿಗಳು, ಯಾಕೆ ಪೂಜಾ ಸಮಯದಲ್ಲಿ ಒಂದೊಂದು ದಿನ ಒಂದೊಂದಷ್ಟು  ಕಾಲ ಹೆಚ್ಚು ಕಡಿಮೆಯಾಗುವುದು  ಎಂದು ಸ್ವಾಮಿಗಳನ್ನು ಕೇಳಿದರಂತೆ. ಆಗ ಸ್ವಾಮಿಗಳು “ಏಕಾಗ್ರತೆ ಬಂದ ದಿವಸ ಬೇಗ ಪೂಜೆಯಾಗುತ್ತದೆ. ಏಕಾಗ್ರತೆ ಬರದಿದ್ದರೆ ಬರುವವರೆಗೂ ಪೂಜೆಯನ್ನು ಮಾಡುವುದಾಗುತ್ತದೆ” ಅದರಿಂದ ಹೆಚ್ಚು ಕಾಲ ಪೂಜೆಯಾಗುತ್ತದೆ ಎಂದು ಹೇಳಿದರಂತೆ. ಅವಧಾನಿಗಳು ಏಕಾಗ್ರತೆ ಬಂದ ದಿವಸ ಸಮಯದ ಪರಿವೆಯೇ ಇಲ್ಲದೆ ಪೂಜೆ ದೀರ್ಘವಾಗುವುದು. ಏಕಾಗ್ರತೆ ಇಲ್ಲದ ದಿನ ಬೇಗ ಪೂಜೆ ಮುಗಿಯುವುದೆಂದು ಊಹಿಸಿದ್ದರಂತೆ. ಆದರೆ ತದ್ವಿರುದ್ಧವಾದ ರೀತಿ ಸ್ವಾಮಿಗಳ ಪೂಜೆಯಲ್ಲಿ ಅಡಗಿತ್ತು.

   ಒಮ್ಮೆ ಬೆಂಗಳೂರಿನ ಚಿಕ್ಕಬೆಟ್ಟಳ್ಳಿಗೆ ಬಂದ ಸ್ವಾಮಿಗಳ ದರ್ಶನಕ್ಕೆ ನಾನೂ ಹೋಗಿದ್ದೆ. ಪೂಜೆ ಇನ್ನು ನಡೆಯುತ್ತಲೇ ಇತ್ತು. ದೇವರ ಕೋಣೆಯ ಹೊರಗೆ ಕುಳಿತು ನಾಲ್ಕಾರು ವಿದ್ಯಾರ್ಥಿಗಳು ಮಂತ್ರ ಪಠಣವನ್ನು ಮಾಡುತ್ತಿದ್ದರು. ಪೂಜೆಯನ್ನು ಮುಗಿಸಿ ಬಂದ ಸ್ವಾಮಿಗಳು, ಮಂತ್ರವನ್ನು ಹೇಳಿದ ವಿದ್ಯಾರ್ಥಿಗಳಲ್ಲಿ ಒಬ್ಬನ ಹೆಸರನ್ನು ಕರೆದರು. ಮಂತ್ರದ ಒಂದು ಪಾದವನ್ನು ಹೇಳಿಸಿ, ಇಲ್ಲಿ ನಿನ್ನ ಸ್ವರೋಚ್ಛಾರ ತಪ್ಪಿದೆ, ಹೀಗಾಗಬೇಕು ಎಂದು ತಿದ್ದಿ ಹೇಳಿದರು. ಪೂಜಾ ಸಮಯದಲ್ಲಿ ತಿರುಗಿಯು ನೋಡದ ಸ್ವಾಮಿಗಳು, ನಾಲ್ಕಾರು ವಿದ್ಯಾರ್ಥಿಗಳ ನಡುವೆ ಇಂತವನೇ ಸ್ವರೋಚ್ಛಾರವನ್ನು ತಪ್ಪಿದನೆಂದು ಹೇಗೆ ಗುರುತಿಸಿದರೊ ತಿಳಿಯದು. ಆದರೆ ಸ್ವಾಮಿಗಳ ಗ್ರಹಿಕೆಯ ವೇಗವಂತು ಅರ್ಥವಾಗದಿರದು.

        ಹೀಗೆ ಪೂಜೆ ಮಂತ್ರ ಅಧ್ಯಯನ ಅಧ್ಯಾಪನ ಎಲ್ಲವುಗಳಲ್ಲಿ ಪೂರ್ಣತೆಯನ್ನು ಬಯಸುವ ಸ್ವಾಮಿಗಳು, ಮಠದ ವ್ಯವಸ್ಥೆಯಲ್ಲಿ ಅನಾಸ್ಥೆಯನ್ನು ತೋರಲು ಸಾಧ್ಯವೇ? ಮಠದ ಆಡಳಿತವನ್ನು ಪಾಠಶಾಲೆಯನ್ನು ಸರಿದಾರಿಗೆ ತರಲು ಸಾಕಷ್ಟು ಶ್ರಮವಂತು ಆಗಿಯೇ ಇರುತ್ತದೆ. ಮಠದಲ್ಲಿ ಸಂಪತ್ತು ತುಂಬಿದ್ದರೆ ಅನೇಕ ಕೆಲಸಗಳನ್ನು ನಿರಾಯಾಸವಾಗಿ ಸಾಗಿಸಬಹುದೇನೋ. ಆದರೆ ಈ ಸ್ವಾಮಿಗಳು ಪೀಠಕ್ಕೆ ಬರುವಾಗಲೇ ಮಠ ಸಾಲದಿಂದ ತುಂಬಿತ್ತು. ಇರುವ ಸ್ವಲ್ಪ ತೋಟವು ಊರ್ಜಿತವಾಗಿ ಇರಲಿಲ್ಲ. ಸ್ವಾಮಿಗಳ ಓಡಾಟಕ್ಕೊಂದು ಕಾರು ಕೂಡ ಮಠದಲ್ಲಿ ಇರಲಿಲ್ಲ. ಅವರಿವರಿಂದ ಬಾಡಿಗೆಯನ್ನು, ಸೇವಾಭಾವದ ಭಕ್ತರಿಂದಲೋ ಕಾರನ್ನು ಪಡೆದು, ಅನಿವಾರ್ಯದ ಓಡಾಟವನ್ನು ಸ್ವಾಮಿಗಳು ಮಾಡಬೇಕಾಯಿತು.

      ಈ ರೀತಿ ಹಣದ ಮುಗ್ಗಟ್ಟಿರುವಾಗ ಭಕ್ತರು ಬಂದು ಮಾಡಿಸುವ ಪೂಜೆ ಸೇವೆಗಳಿಗೆಲ್ಲ ಇಷ್ಟೆಂದು ಶುಲ್ಕವನ್ನು ವಿಧಿಸೋಣವೆಂಬ ಸಲಹೆಯನ್ನು ಸ್ವಾಮಿಗಳು ಸುತಾರಾಂ ಒಪ್ಪಲೇ ಇಲ್ಲ. ಅಷ್ಟೇ ಅಲ್ಲದೆ ಮಠದ ಶಿಷ್ಯ ಪರಂಪರೆಗೆ ಸೇರದ ಭಕ್ತರು, ಮಠದ ಸಂಪೂರ್ಣ ವ್ಯವಸ್ಥೆಯನ್ನು ಮಾಡುವುದಕ್ಕೆ ಮುಂದಾದಾಗಲೂ ಸ್ವಾಮಿಗಳು ಒಪ್ಪಲಿಲ್ಲ. ಹದಿನಾರು ಸೀಮೆಯ ಶಿಷ್ಯರ ಮಠವನ್ನು, ಹಣವನ್ನು ಕೊಡಲು ಸಿದ್ದರಿದ್ದ ಹೊರಗಿನ ವ್ಯಕ್ತಿಗಳ ಮರ್ಜಿಯಲ್ಲಿಡಲು ಹಣದ ಮುಗ್ಗಟ್ಟಿನಲ್ಲೂ ಸ್ವಾಮಿಗಳು ಮನಸ್ಸನ್ನು ಮಾಡಲಿಲ್ಲ. ಹದಿನಾರು ಸೀಮೆಯ ಶಿಷ್ಯರೆಲ್ಲ ನತಮಸ್ತಕರಾಗಲು ಸ್ವಾಮಿಗಳ ಈ ಒಂದು ನೆಡೆ ಸಾಕು.  ದೂರದ ಪ್ರಯಾಣಗಳಿಗೆಲ್ಲ ಎರವಲು ತಂದ ವಾಹನವನ್ನು ತಿರುಗಿಕೊಡುವಾಗ, ಎಲ್ಲ ರೀತಿಯ ಸರ್ವಿಸ್ ಗಳನ್ನು ಮಾಡಿಸಿ, ಇಂಧನವನ್ನು ಸಂಪೂರ್ಣ ತುಂಬಿಸಿ ಕೊಡಬೇಕಿತ್ತು. ಈ ರೀತಿಯ ವ್ಯಾವಹಾರಿಕ ಶಿಸ್ತು ಲೌಕಿಕರಿಗೂ ಕಡಿಮೆ ಎಂಬುದನ್ನು ಗಮನಿಸಬಹುದು.

ಸುತ್ತಮುತ್ತಲಿನ ಅನೇಕ ಮಠಗಳಲ್ಲಿ ಸ್ವಾಮಿಗಳ ಪೂರ್ವಾಶ್ರಮದ ಅಣ್ಣ ತಮ್ಮ ಅಕ್ಕ ತಂಗಿ ಭಾವನೆಂಟರೆ ಮಠದ ಆಯಕಟ್ಟಿನ ಸ್ಥಳಕ್ಕೆ ಬಂದು ಕುಳಿತುಕೊಂಡಿದ್ದನ್ನು ನೋಡಿದ್ದೇವೆ.ಆದರೆ ನಮ್ಮ ಮಠದಲ್ಲಿ ಸ್ವಾಮಿಗಳ ಪೂರ್ವಾಶ್ರಮದ ಸಂಬಂಧಿಗಳು ಯಾರೂ ಕೂಡ ಮಠದ ವ್ಯವಸ್ಥೆಯಲ್ಲಿ ಇಲ್ಲವೇ ಇಲ್ಲ.  ಸಾಮಾನ್ಯ ಭಕ್ತರಂತೆ ಮಠಕ್ಕೆ ಬಂದು ಹೋಗುವುದಷ್ಟೇ ಅವರಿಗೆಲ್ಲ ಇರುವ ಅವಕಾಶ. ಸ್ವಾಮಿಗಳ ಪೂರ್ವಾಶ್ರಮದ ಸಹೋದರರೊಬ್ಬರು ಚೆನ್ನಾಗಿಯೆ ವೇದಶಾಸ್ತ್ರಗಳನ್ನು ಓದಿಕೊಂಡಿದ್ದಾರೆ. ಆದರೂ ಮಠದ ಪಾಠಶಾಲೆಗೆ ಅವರನ್ನು ಸೇರಿಸಲಿಲ್ಲ. ಸ್ವಾಮಿಗಳ ತಂದೆ ತಾಯಿಗಳು ಮಠಕ್ಕೆ ಬಂದರು ಶಾಸ್ತ್ರದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಉಲ್ಲೇಖಿತವಾಗಿದೆಯೋ ಅಷ್ಟು ಗೌರವ ಅವರಿಗೆ ಸಲ್ಲುತ್ತದೆ. ಅದರಾಚೆ ಒಂದು ನೂಲಿನಷ್ಟು ವ್ಯತ್ಯಯವಿಲ್ಲದಂತೆ ಸನ್ಯಾಸಿ ಧರ್ಮ ಪಾಲನೆ ಯಾಗುತ್ತದೆ. ಹೀಗೆ ವ್ಯವಹಾರ ಶುದ್ಧತೆಯಿಂದಲೇ ಮಠದ ಪ್ರಗತಿಯನ್ನು ಸಾಧಿಸಬೇಕೆಂಬ ಧ್ಯೇಯವನ್ನು ಇಟ್ಟುಕೊಂಡ ಸ್ವಾಮಿಗಳು, ಮಠದಲ್ಲಿ ವ್ಯವಸ್ಥೆಯನ್ನು ಮಾಡುವ ಪ್ರತಿಯೊಬ್ಬರನ್ನು ತಿದ್ದಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಆಗೆಲ್ಲ ಸಂಯಮವನ್ನು ಮೀರಿದರೆ ಸನ್ಯಾಸಕ್ಕೆ ಕುತ್ತು. ಉದಾಸೀನರಾದರೆ ಪೀಠಾಧಿಪತಿತ್ವಕ್ಕೆ ಆಪತ್ತು, ಎಂಬ ಕತ್ತಿಯಲಗಿನ ದಾರಿಯಲ್ಲಿ ಸ್ವಾಮಿಗಳು ಹೆಜ್ಜೆಯನ್ನು ಇಟ್ಟು ನಡೆದಿದ್ದಾರೆ.

      ನಮ್ಮ ಮಠಕ್ಕೆ ಮಾತ್ರ ಆರ್ಥಿಕವಾಗಿ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಈ ದುಸ್ಥಿತಿ ಎಂಬಂತಿಲ್ಲ. ಶಂಕರ ಪೀಠದ ನೂರಕ್ಕೆ ತೊಂಬತ್ತರಷ್ಟು ಮಠಗಳ ಸ್ಥಿತಿ ಹೀಗೆಯೇ ಇತ್ತು, ಇದೆ ಎಂಬುದನ್ನು ಎಲ್ಲ ಮಠಗಳ ಇತಿಹಾಸವನ್ನು ಕೆದಕಿದಾಗ ತಿಳಿಯುತ್ತದೆ. ಶೃಂಗೇರಿ ಪೀಠದ ಶ್ರೀ ಶ್ರೀ ವೃದ್ಧ ನೃಸಿಂಹ ಭಾರತಿ ಸ್ವಾಮಿಗಳ ಕಾಲದಲ್ಲಿ ಪೂಜೆಗೂ ಹಣವಿಲ್ಲದೆ ದೇವರ ಪೂಜೆಗೆ ಬಳಸುವ ಬೆಳ್ಳಿ ಪಾತ್ರೆಗಳನ್ನು ಅಡವಿಟ್ಟು ಪೂಜಾ ಕೈಂಕರ್ಯನ್ನು ಮಾಡಿದ್ದಿದೆಯಂತೆ.  ಅದೇ ವೃದ್ಧ ನೃಸಿಂಹ ಭಾರತಿಗಳು ತಿರುಪತಿಗೆ ಹೋದಾಗ ವೇಂಕಟರಮಣನಲ್ಲಿ ಸ್ತೋತ್ರ ಮಾಡಿ ಒಂದು ಕೋರಿಕೆಯನ್ನು ಇಟ್ಟಿದ್ದರು. ಅದೆಂದರೆ “ದಾರಿದ್ರ್ಯಂ ಮಮ ದುಷ್ಟಭೃತ್ಯಜನಿತಮ್”–ಇದನ್ನು ಪರಿಹಾರ ಮಾಡು ದೇವರೆ ಎಂದು ಮಾಡಿದ ಪ್ರಾರ್ಥನೆ ಇಂದಿಗೂ ಲಭ್ಯ.

  ಇದಕ್ಕೆಲ್ಲ ಕಾರಣವೂ ಇಲ್ಲದಿಲ್ಲ . ಸಾಮಾನ್ಯವಾಗಿ ಸಮರ್ಥರನ್ನು ಆಕರ್ಷಿಸುವಷ್ಟು ಸಂಬಳವೂ ಮಠದಲ್ಲಿ ಇರುವುದಿಲ್ಲ. ಹೊರಗೆ ನಿಂತು ಮಠವನ್ನು, ಅಲ್ಲಿಯ ವ್ಯವಸ್ಥೆಯನ್ನು, ಅಲ್ಲಿಯ ಜನರನ್ನು ಆಕ್ಷೇಪಿಸುವ ಪ್ರಾಮಾಣಿಕನೆಂಬ ಭ್ರಮೆಯಲ್ಲಿರುವ ನಾನೊ ನನ್ನಂಥವನೊ ಮಠದ ಕೆಲಸಕ್ಕೆ ಹೋಗಲಾರ. (ಹೊರಗೆ ನಿಂತು ಪ್ರಾಮಾಣಿಕತೆಯ ಮಾತನ್ನು ಆಡುವುದು, ತಾನು ಹರಿಶ್ಚಂದ್ರನ ವಂಶದ ತುಣುಕೆಂದು ತೋರ್ಪಡಿಸಿಕೊಳ್ಳುವುದು ಸುಲಭ. ಮಠವಿರಲಿ ರಾಜಕೀಯವಿರಲಿ ಅಲ್ಲಿ ನಿಂತು ಪ್ರಾಮಾಣಿಕತೆಯಿಂದ ಕೆಲಸವನ್ನು ಸಾಧಿಸಿದ ಮೇಲೆ ಈ ಮಾತಿಗೆಲ್ಲ ಬೆಲೆ. ಹೊರತು ದೂರ ನಿಂತು ಹೇಳುವುದು ಅಭಾವವೈರಾಗ್ಯವೇ ಸರಿ) ಬೇರೆಡೆಯಲ್ಲಿ ಕೆಲಸಕ್ಕೆ ಅವಕಾಶವಿಲ್ಲದೆ ಮಠವನ್ನು ಸೇರಿಕೊಳ್ಳುವವರ ಸಂಖ್ಯೆಯೇ ಹೆಚ್ಚು. ಎಲ್ಲರೂ ಹಾಗಲ್ಲ ಸೇವಾಬುದ್ಧಿ ಶ್ರದ್ಧೆಯಿಂದ ಬರುವವರ ಸಂಖ್ಯೆಯು ಸಾಕಷ್ಟು ಇರುತ್ತದೆ. ಅಂತ ಸಂದರ್ಭದಲ್ಲಿ ಕೇಡು, ವಂಚನೆ, ಕುಹಕ ಬುದ್ಧಿಯುಳ್ಳ ವ್ಯಕ್ತಿಗಳಿಗೂ ಈ ಶ್ರದ್ಧಾವಂತರಿಗೂ ಸಂಘರ್ಷಗಳು ತಪ್ಪಿದ್ದಲ್ಲ. ಆಗ ನಿಧಾನವಾಗಿ ಶ್ರದ್ಧಾವಂತನೆ ಮಠವನ್ನು ಬಿಡುತ್ತಾನೆ. ಆದರೆ ಈ ಸ್ವಾತಂತ್ರ್ಯ ಗುರುಗಳಿಗೆ ಇಲ್ಲವಲ್ಲ. ಹಾಗಾಗಿ ಈ ಜಗತ್ತಿನ ಒಳಿತು ಕೆಡುಕುಗಳು ಆತ್ಯಂತಿಕ ದೃಷ್ಟಿಯಿಂದ ಒಂದೇ ಎಂಬ ಬುದ್ಧಿಯಿಂದ ಎಲ್ಲರನ್ನು ಸಮಭಾವದಲ್ಲಿ ಕಂಡು, ಇದ್ದವರನ್ನೇ ತಿದ್ದುವಷ್ಟು ತಿದ್ದಿ, ಬೆಳೆಸುವಷ್ಟು ಬೆಳೆಸಿ ಮಠವನ್ನು ಉಚ್ಛ್ರಾಯ  ಸ್ಥಿತಿಗೆ ತಂದ ಸ್ವಾಮಿಗಳನ್ನು ಎಷ್ಟು ಅಭಿವಂದಿಸಿದರು ಸಾಲದು. ಸನ್ಯಾಸಿಯಾಗಿಯೂ ಲೌಕಿಕರಿಗೆ ವ್ಯವಹಾರ ಶುದ್ದಿಯನ್ನು ನಡೆದು ತೋರಿ ಆದರ್ಶಪ್ರಾಯರಾಗಿದ್ದಾರೆ. ವ್ಯವಹಾರಿಕ ದಕ್ಷತೆ ಪಾರಮಾರ್ಥಿಕ ದೃಷ್ಟಿ ಎರಡನ್ನು ಸರಿದೂಗಿಸಿಕೊಂಡು ಮಠವನ್ನು ಮುನ್ನಡೆಸುತ್ತಿದ್ದಾರೆ.

    ಸ್ವರ್ಣವಲ್ಲಿ ಮಠಕ್ಕೆ ಹದಿನಾರು ಸೀಮೆಗಳ ಶಿಷ್ಯ ಪರಂಪರೆ ಇದೆ. ಇಲ್ಲಿಯಾದರೂ ಶ್ರದ್ಧೆ ಕ್ಷೀಣಿಸತೊಡಗಿತ್ತು. ಇದು ಕೇವಲ ಸ್ವರ್ಣವಲ್ಲಿ ಸೀಮೆಗೆ ಮಾತ್ರ ಸಂಬಂಧಿಸಿದ್ದಲ್ಲ. ಇತಿಹಾಸ ಮತ್ತು ರಾಜಕೀಯ ಪ್ರಭಾವವು ಈ ವಿಷಯದಲ್ಲಿ ಸಾಕಷ್ಟು ಇದೆ. ಇಲ್ಲಿ ಕ್ಷೀಣವಾದದ್ದು ಕೇವಲ ಮಠದ ಮೇಲಿನ ಶ್ರದ್ಧೆಯಲ್ಲ. ಸನಾತನ ಸಂಸ್ಕೃತಿ ಅಥವಾ ಧರ್ಮದ ಮೇಲೆಯೇ ಶ್ರದ್ಧೆ ಕುಸಿಯತೊಡಗಿತ್ತು. ಹವ್ಯಕರ ಮೂಲ ಅಹಿಚ್ಛತ್ರ, ಕದಂಬರ ಕಾಲಕ್ಕೆ ರಾಜನ ಆಮಂತ್ರಣದಂತೆ ಇಲ್ಲಿಗೆ ಬಂದವರೆಂದು ಇತಿಹಾಸ ಹೇಳುತ್ತದೆ. ಆದರೆ ರಾಜಾಡಳಿತವೇ ಅಳಿದ ಮೇಲೆ ಹವ್ಯಕರಿಗೆ ಆಶ್ರಯವಿಲ್ಲದಂತಾಯಿತು. ಮೆಖಾಲೆಯ ಕಾರಣದಿಂದ ಗುರುಕುಲಗಳೆಲ್ಲ ನಿಂತು ಹೋದವು. ಅದರಿಂದ ಅಧ್ಯಯನ ಅಧ್ಯಾಪನವು ನಿಂತು ಹೋಯಿತು. ಆಪತ್ಸು ಅನಂತರಾ ವೃತ್ತಿ:  ಎಂಬಂತೆ ಕೃಷಿ ಹವ್ಯಕರ ಬದುಕಾಯಿತು ಎಂದು ಅನಿಸುತ್ತದೆ. ಮುಂದೆ ಪುರೋಹಿತ ಮನೆತನದವರು ಮಾತ್ರ ಮಂತ್ರವನ್ನು ಓದುವುದೆಂಬ ಪ್ರತೀತಿಯು ಬಂತು. ತದನಂತರ ಅವರಿಗೂ ವೇದವನ್ನು ಓದುವುದು ಕಷ್ಟವೇ ಆಯಿತು. ಹಾಗಾಗಿ ಈ ಹಿಂದಿನ ತಲೆಮಾರಿನ ಅನೇಕ ಪುರೋಹಿತರಿಗೆ ಅಗ್ನಿಮುಖವು ಆಗಿರಲಿಲ್ಲ. ಕೆಲವರಿಗೆ ಕಾಲೋಚಿತ ಪ್ರಯೋಗ ಭಾಗಶಃ ಆಗಿತ್ತು . ಅವರಾದರೊ ಕೇವಲ ಮಂತ್ರವನ್ನು ಕಂಠಪಾಠ ಮಾಡಿದವರು. ಸಂಸ್ಕೃತ ಭಾಷೆಯ ಪರಿಚಯವನ್ನು ಪಡೆಯಲೂ ಅನುಕೂಲ ಇರಲಿಲ್ಲ. ಅದರಿಂದ ಅವ್ಯಯಕ್ಕೂ ವಿಸರ್ಗ ಅನುಸ್ವಾರಗಳನ್ನು ಸೇರಿಸಿ, ವಿಸರ್ಗ ಭಟ್ರು, ಅನುಸ್ವಾರ ಭಟ್ರು ಎಂಬಂತ ಅನ್ವರ್ಥಕಕ್ಕು ತುತ್ತಾದರು. ಆದರೆ ಇಂತಹ ಹಲವರಲ್ಲಿ ವಿದ್ಯೆ ಕಡಿಮೆಯಾದರೂ ಶೃದ್ಧೆ ಮಾತ್ರ ಅಸೀಮವಾಗಿತ್ತು. ಈ ಪುರೋಹಿತರೆಲ್ಲ ಶ್ರೀಮಂತರೇನಲ್ಲ. ಇವರ ಶಿಷ್ಯವರ್ಗವು ಇದಕ್ಕೆ ಹೊರತಲ್ಲ. ವಾರ್ಷಿಕವಾಗಿ ಗಣೇಶ ಚತುರ್ಥಿ, ನವರಾತ್ರಿ ಪೂಜೆಗಳಾದರೆ ಒಂದಷ್ಟು ಪಿತೃ ಕಾರ್ಯಗಳು ಇರುತ್ತಿತ್ತು. ಇಲ್ಲಿಯೂ ಸಂಭಾವನೆ ನಿರೀಕ್ಷೆಯಿಲ್ಲದೆ ಶಿಷ್ಯನ ಅನುಕೂಲಕ್ಕೆ ತಕ್ಕಂತೆ ಕಾರ್ಯಕ್ರಮವನ್ನು ಮಾಡಿಸಿ ಸಂತೋಷಪಡುತ್ತಿದ್ದರು. ಅಷ್ಟೇ ಅಲ್ಲದೆ ಅಂತ್ಯೇಷ್ಠಿ ಮಾಡುವುದಕ್ಕೂ ಕಷ್ಟವಾಗುವ ಶಿಷ್ಯರ ಮನೆಗೆ, ತಮ್ಮ ಮನೆಯಿಂದಲೇ ಸಾಮಾನು ಸರಂಜಾಮುಗಳನ್ನು  ಒಯ್ದು ಕಾರ್ಯವನ್ನು ಮುಗಿಸಿ ಕೊಟ್ಟಿದ್ದನ್ನೂ ನೋಡಿದ್ದೇನೆ. ಇನ್ನೂ ಕೆಲವು ಪುರೋಹಿತರು ತಮ್ಮ ಮಕ್ಕಳ ಉಪನಯನ ಮದುವೆಗಳೊಟ್ಟಿಗೆ ಶಿಷ್ಯವರ್ಗದ ಬಡ ಮಕ್ಕಳ ಮುಂಜಿ ಮದುವೆಗಳನ್ನು ಮಾಡಿಸಿದ್ದೂ ಇದೆ. ಈ ಶೃದ್ಧಾ ಸಂಸ್ಕಾರವೆಲ್ಲ ನಮ್ಮ ಸಮಾಜದಲ್ಲಿ ಬೀಜ ರೂಪವಾಗಿ ಉಳಿಯಿತೆ ವಿನಾ ಚಿಗುರಲಿಲ್ಲ.

      ಎಂಬತ್ತರ  ದಶಕದಿಂದ ನಿಧಾನವಾಗಿ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆಯು ತೋರತೊಡಗಿತು. ಲೌಕಿಕ ವಿದ್ಯಾಕೇಂದ್ರಗಳಾದ ಶಾಲಾ, ಕಾಲೇಜುಗಳು ತುಂಬ ತೊಡಗಿದವು. ಬಹುತೇಕರಿಗೆ ಎಸ್ ಎಸ್ ಎಲ್ ಸಿ ಆದರೆ ಕೆಲವರು ಕಾಲೇಜಿನ ಮೆಟ್ಟಿಲನ್ನು ತುಳಿದರು. ಇನ್ನೂ ಕೆಲವರು ಡಿಗ್ರಿ ಯ ಸರ್ಟಿಫಿಕೇಟ್ ನ್ನು ಪಡೆದರು. ಇವರಲ್ಲಿ ಅನೇಕರು ಮಾರ್ಕ್ಸಿಷ್ಟರಿಂದ ಪೂರ್ವಯೋಜಿತವಾದ ಪಾಠ ಪ್ರವಚನಗಳನ್ನು ಕೇಳಿ ಸನಾತನ ಶ್ರದ್ದೆಯನ್ನು ಕಳೆದುಕೊಂಡರು. ಅದೇ ವಿಷವನ್ನು ಊರಲ್ಲೂ ಹರಡಿದರು. ಹೀಗೆ ಸನಾತನ ಶೈಥಿಲ್ಯ ಮಾರ್ಕ್ಸ್ ವಾದದ ಭ್ರಮೆಯಲ್ಲಿ ನೈತಿಕತೆ ಕುಸಿಯಿತು. ನಮ್ಮ ಸಮಾಜದ ಬಹುಪಾಲು ವ್ಯಕ್ತಿಗಳು ವ್ಯಸನದ ಕಡೆ ವಾಲಿದರು. ಅಪೇಯ ಪೇಯ ಅಭಕ್ಷಭಕ್ಷಣಗಳ ಜೊತೆಗೆ ಜೂಜು ಸೇರಿತು. ಮನೆಯಲ್ಲಿ ಶ್ರಾದ್ಧವೆಂದರೆ ರಾತ್ರಿಯಲ್ಲಿ ಇಸ್ಪೀಟ್ ಜಾಗರಣೆ ಎಂಬುದು ಸಹಜವಾಗಿ ಹೋಯಿತು.

     ಈ ಸ್ಥಿತಿಯಿಂದ ಸಮಾಜವನ್ನು ಎತ್ತುವುದು ಮಠವನ್ನು ಆರ್ಥಿಕ ದುಸ್ಥಿತಿಯಿಂದ ಎತ್ತುವುದಕ್ಕಿಂತ ಕಷ್ಟದಾಯಕವಾಗಿತ್ತು. ಆದರೆ ಸದುದ್ದೇಶಕ್ಕೆ ಕಾಲವೇ ಅವಕಾಶವನ್ನು ಸೃಷ್ಟಿಸಿದಂತೆ, ಬೇಡ್ತಿ ಡ್ಯಾಮ್ ಮುನ್ನೆಲೆಗೆ ಬಂತು. ನೆಲೆಯನ್ನು ಕಳೆದುಕೊಳ್ಳುವ ಭಯ ಮಠದ ಹಲವು ಸೀಮೆಗಳಿಗೆ ಒದಗಿತು. ಅದಾಗಲೇ ಸೂಪಾ ಕೊಡಸಳ್ಳಿಗಳಲ್ಲಿ ಡ್ಯಾಮ್ ಗಳಿಂದಾದ ಸ್ಥಿತಿಯು ಜನರ ಕಣ್ಣ್ಮುಂದೆ ಇತ್ತು. ಹಾಗಾಗಿ ಡ್ಯಾಮ್ ವಿರುದ್ಧ ಹೋರಾಟಕ್ಕೆ ನಿಂತ ಸ್ವಾಮಿಗಳನ್ನು ಶಿಷ್ಯ ಸೀಮೆಗಳು ಒಕ್ಕೊರಳಿನಿಂದ ಬೆಂಬಲಿಸಿತು. ಸರಕಾರವು ಬಗ್ಗಿತು. ದೇಶದಾದ್ಯಂತ ಸ್ವರ್ಣವಲ್ಲಿ ಗುರುಗಳನ್ನು “ಹಸಿರು ಸ್ವಾಮಿ”ಗಳೆಂದೆ  ಕರೆದರು. ಅಲ್ಲಿಂದ ಸೀಮೆಯ ಶಿಷ್ಯರಲ್ಲಿ ಶ್ರದ್ಧೆಯನ್ನು ಜಾಗೃತಗೊಳಿಸುವ ಯೋಜನೆಯೊಂದನ್ನು ಶ್ರೀಗಳು ಕೈಗೊಂಡರು. ಅದೇ ಹದಿನಾರು ಸೀಮೆಗಳಲ್ಲಿ ವ್ಯಾಪಕವಾಗಿ ಮನೆಮನೆಯನ್ನು ಶಿಷ್ಯರ ಮನಗಳನ್ನು ತಲುಪಿದ ಎಚ್ಚರಿಸಿದ “ಗಾಯತ್ರಿ ಜಪಯಜ್ಞ” ಉಪನೀತರಾದ ಪ್ರತಿಯೊಬ್ಬರು ಗಾಯತ್ರಿ ಮಂತ್ರವನ್ನು ಜಪಿಸಿದರು. ಅಲ್ಲಿಂದ ಶಿಷ್ಯರ ಸಂಪರ್ಕವು ಮಠಕ್ಕೆ ಹೆಚ್ಚುತ್ತಾ ಹೋಗತೊಡಗಿತು. ಎಲ್ಲರ ಒಳಗೊಳ್ಳುವಿಕೆ ಶೃದ್ಧೆಯ ಉತ್ಥಾನವಾಗಿ ದೈವಿಕ ಭವ್ಯತೆಯಿಂದ ಕಾರ್ಯಕ್ರಮ ನಡೆಯಿತು. ಶ್ರೀಗಳು ಎಲ್ಲರಲ್ಲಿ ನಿಂತು ಸದ್ಬುದ್ಧಿಯನ್ನು ಪ್ರಚೋದಿಸಿದರು.

ಬೀಜ ಬಿತ್ತಿದರೆ ಸಾಲದು. ಬೆಳವಣಿಗೆಗೆ ನೀರು ಬಿಡಬೇಕು. ಬಿಟ್ಟ ನೀರಿನಿಂದ ಹುಟ್ಟಿದ ಕಳೆಯನ್ನು ತೆಗೆಯಬೇಕು. ಅದೇ ಉದ್ದೇಶದಿಂದ ಪ್ರಾರಂಭವಾದ ಬಹುಮುಖ್ಯವಾದ, ಜನರಿಗೆ ಅರಿವಿಲ್ಲದೆ ಪರಿವರ್ತನೆಯನ್ನು ತಂದ ಕಾರ್ಯ, ಶ್ರೀಗಳು ಹಮ್ಮಿಕೊಂಡ “ವ್ಯಸನ ಮುಕ್ತ ಸಮಾಜ” ಕಾರ್ಯಕ್ರಮ. ನಮ್ಮ ಸೀಮೆಯ ಪ್ರತಿ ಹೈಸ್ಕೂಲ್ಗಳಲ್ಲಿ ಈ ಕಾರ್ಯಕ್ರಮವನ್ನು ಶ್ರೀಗಳು ಮಾಡಿದ್ದಾರೆ ಇನ್ನೂ ಮಾಡುತ್ತಲೇ ಇದ್ದಾರೆ.

    ದೇಶಾಭಿಮಾನವನ್ನು ಹೆಚ್ಚಿಸುವುದರಲ್ಲೂ ಸ್ವಾಮಿಗಳು ಹಿಂದುಳಿದಿಲ್ಲ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಮಾತೆಯರಿಂದ “ಕೋಟಿ ಕುಂಕುಮಾರ್ಚನೆ”ಯನ್ನು ಮಾಡಿಸಿದ್ದಾರೆ. ಹಾಗೆ “ಕೋಟಿ ತುಳಸಿ ಅರ್ಚನೆ”ಯು ನಡೆದಿದೆ. ಆಗ ಪ್ರಾರಂಭವಾದ ಕಾರ್ಯಕ್ರಮ ಈಗಲೂ ಮುಂದುವರೆದಿದೆ.

ಈ ಕಾರ್ಯಕ್ರಮಗಳೆಲ್ಲ ಕೇವಲ ಹದಿನಾರು ಸೀಮೆಗಳ ಶಿಷ್ಯರನ್ನು ಉದ್ದೇಶಿಸಿ ಮಾಡಿದರೆ, ಇಡೀ ರಾಜ್ಯಕ್ಕೂ ವಿಸ್ತರಿಸುವಂತೆ “ಭಗವದ್ಗೀತಾ ಅಭಿಯಾನ”ವನ್ನು ಕೈಗೊಂಡರು  ತುಂಬಾ ಪರಿಣಾಮಕಾರಿಯಾದ ಪರಿಕ್ರಮ ಇದಾಯಿತು. ರಾಜ್ಯದ ಪ್ರತಿ ತಾಲೂಕುಗಳಲ್ಲಿ ಈ ಕಾರ್ಯಕ್ರಮವು ನಡೆದಿದೆ. ಈಗಲೂ ನಡೆಯುತ್ತಿದೆ. ಪ್ರಾರಂಭದಲ್ಲಿ ಹಲವು ಕಡೆ ಭಗವದ್ಗೀತೆ ಯುದ್ಧದಂತಹ ಸನ್ನಿವೇಶವನ್ನು ಸೃಷ್ಟಿಸಿದೆ. ಎಡಚಿಂತಕರು ಮಾವೊವಾದಿ ಬೆಂಬಲಿಗರು ಅನೇಕ ಕಡೆ ತುಂಬಾ ಕಷ್ಟವನ್ನು ಕೊಟ್ಟಿದ್ದಾರೆ. ಆದರೆ ಖೇದಕರವಾದದ್ದು ನಮ್ಮವರು, ಧರ್ಮಾನುಯಾಯಿಗಳೆಂಬವರು ಕೂಡ ಕೈ ಎತ್ತುವವರೆಗೆ ಮುಂದುವರಿದಿದ್ದರು. ಏನು ಮಾಡುವುದು ಕೌರವರು ಕೂಡ ಕೃಷ್ಣನಿಗೆ ದೂರದವರೇನಲ್ಲವಲ್ಲ! ಆದರೆ ಶ್ರೀಗಳ ಉದ್ದೇಶ ಶುದ್ದಿ ಶಕ್ತಿಯ ಮುಂದೆ ಇವೆಲ್ಲ ಮಂಜಿನ ಬೆಟ್ಟಕ್ಕೆ ಬಿಸಿಲ ಕಿರೀಟವನ್ನು ಇಟ್ಟಂತಾಯಿತು.

   ಒಮ್ಮೆ ಈ ಅಭಿಯಾನವನ್ನು ನಿಲ್ಲಿಸಬೇಕೆಂದು ಶ್ರೀಗಳು ಅಂದುಕೊಂಡಿದ್ದರಂತೆ. ನಿಲ್ಲಿಸುವುದಕ್ಕೂ, ಮುಂದುವರಿಸುವುದಕ್ಕೂ ಹತ್ತಿರವಾದ ಸಮಯದಲ್ಲೊಮ್ಮೆ ತೀರ್ಥಯಾಟನೆ ಮಾಡುತ್ತಾ ಗಂಗಾ ನದಿಯಲ್ಲಿ ಸಾಗುತ್ತಿದ್ದರಂತೆ. ಆಗ ಹೂಮಾಲೆಗಳಿಂದ ಅಲಂಕೃತವಾದ ಪೆಟ್ಟಿಗೆಯೊಂದು ಬಂದು ಗಂಗೆಯಲ್ಲಿರುವ ಶ್ರೀಗಳ ಕೈಯನ್ನು ಸೇರಿತು. ಎತ್ತಿಕೊಂಡು ನೋಡಿದರೆ ಆ ಪೆಟ್ಟಿಗೆಯಲ್ಲಿ ಭಗವದ್ಗೀತೆಯ ಪುಸ್ತಕವಿತ್ತು. ಗಂಗಾಧರೇಂದ್ರರಿಗೆ  ಗಂಗೆಯೇ ಅನುಜ್ಞೆಯನ್ನು ನೀಡಿದಂತೆ ಅನಿಸಿತು. ಭಗವದ್ಗೀತಾ ಅಭಿಯಾನ ಮುಂದುವರಿಯಿತು.

     ಇವುಗಳೊಂದಿಗೆ ಅಕ್ಷಯ ಭವನ, ಶಾಲೆ, ಪ್ರೌಢಶಾಲೆ, ಮಠದ ನವೀಕರಣ, ವಿಮಾನ ಗೋಪುರ ಮುಂತಾದ ಸಾಕಷ್ಟು ಕೆಲಸಗಳು ನಡೆದಿದೆ. ಹೀಗೆ ಪ್ರಗತಿ, ವಿಕಾಸ ಎರಡನ್ನೂ ಗಂಗಾಧರೇಂದ್ರರು ಸಾಧಿಸಿದ್ದಾರೆ.  ಇವಾವುದನ್ನು ದುಡ್ಡಿದ್ದು ಮಾಡಲಿಲ್ಲ. ಯಾವ ಕಾರ್ಯವು ದುಡ್ಡಿಲ್ಲದೆ ನಿಂತಿಲ್ಲ. ಹಿಡಿದ ಎಲ್ಲ ಕೆಲಸವನ್ನು ಮುಗಿಸಬೇಕಾದದ್ದನ್ನು ಮುಗಿಸಿದ್ದಾರೆ. ಮುಂದುವರಿಸಬೇಕಾದದ್ದನ್ನು ಮುಂದುವರಿಸಿದ್ದಾರೆ. ಹಣ ಇಲ್ಲದಿರುವಿಕೆ ಇವರ ಕೆಲಸಗಳಿಗೆ ತೊಡಕೆ ಆಗಲಿಲ್ಲ. ಮಠದ ಸಾಲವು ಈಗ ಒಂದೆರಡು ವರ್ಷಗಳ ಹಿಂದೆ ಮ್ಯಾನೇಜರ್ ಆಗಿದ್ದ ಬೆಳ್ಳಿಪಾಲ್ ಸುಬ್ಬಣ್ಣನವರ ತೀವ್ರ ಪರಿಶ್ರಮದಿಂದ ತೀರಿತೆಂದು ಕೇಳಿದ್ದೇನೆ.

ಕ್ರಿಯಾಶಕ್ತಿ ಸತ್ವೇ ಭವತಿ ಮಹಾತಾಮ್ ನೋಪಕರಣೇ “

    ಗಂಗಾಧರೇಂದ್ರರು ಪೀಠಾಧಿಪತಿಗಳಾಗಿ ಮಠವನ್ನು ಹೊಕ್ಕಾಗ, ಹಿಂದಿನ ಗುರುಗಳು ಸಶರೀರಿಗಳಾಗಿ ಮಾರ್ಗದರ್ಶನಕ್ಕಿರಲಿಲ್ಲ. ಮಠದ ವ್ಯಾವಹಾರಿಕ ಸ್ಥಿತಿಯನ್ನು ಹಿಂದೆ ಹೇಳಿದ್ದೇನೆ. ಈ ಸ್ಥಿತಿಯಲ್ಲಿ ಅಧ್ಯಯನ, ಅಧ್ಯಾಪನ, ಪೂಜೆ, ಪ್ರವಚನ, ಸಮಾಜ ಸುಧಾರಣೆ ಎಲ್ಲದರಲ್ಲೂ ಸನ್ಯಾಸಿಯಾಗಿಯೂ ಪೀಠಾಧಿಪತಿಯಾಗಿಯೂ “ಸ್ವರ್ಣವಲ್ಲಿಯವರಂತಿರಬೇಕು” ಎಂಬ ಮಾತು ಎಲ್ಲ ಕಡೆ ಕೇಳುವಂತೆ ಬೆಳೆದು ನಿಂತರು. ಇತ್ತೀಚಿಗೆ ಪೀಠಾಧಿಪತಿಗಳಾದ ಅನೇಕ ಯತಿಗಳು ಸ್ವರ್ಣವಲ್ಲಿ ಶ್ರೀಗಳನ್ನೆ ಪಥಪ್ರದರ್ಶಕರೆಂಬಂತೆ ನಡೆದುಕೊಂಡದ್ದನ್ನು ಕಾಣಬಹುದು. ಕಂಚಿ ಮಠಕ್ಕೂ ಶೃಂಗೇರಿ ಮಠಕ್ಕೂ ಆಡಳಿತಾತ್ಮಕ ಅಭಿಪ್ರಾಯ ಭೇದ, ಸಂಘರ್ಷವಿದೆ ಎಂಬ ಮಾತುಗಳು ಕೇಳಿ ಬರುತ್ತದೆ,( ಅಲ್ಲಿನ ಸನ್ಯಾಸಿಗಳಿಗೆ ಪೀಠಾಧಿಪತಿಗಳಿಗೆ ಇದಾವುದೂ ಇಲ್ಲ ಎಂಬುದು ಅನೇಕ ಉಲ್ಲೇಖಿತ ಘಟನೆಗಳಿಂದಲೂ ತಿಳಿಯುತ್ತದೆ) ಕಂಚಿಮಠದಿಂದ ಸನ್ಯಾಸವನ್ನು ಪಡೆದು, ಶೃಂಗೇರಿಯವರು ಉಲ್ಲೇಖಿಸುವಂತೆ ಎರಡು ಮಠಗಳಿಗೂ ಗಂಗಾಧರೇಂದ್ರರು ನಡೆದುಕೊಂಡ ರೀತಿ ಅನನ್ಯ.

     ಸಂಪರ್ಕದ ಕೊರತೆಯಿಂದಲೂ ಮಠಕ್ಕೆ ಪ್ರಾದೇಶಿಕವಾಗಿ ದೂರವಾದ್ದರಿಂದಲೂ ಯಲ್ಲಾಪುರದ ಭಾಗಗಳು ಮಠದಿಂದ ದೂರವೇ ಇತ್ತು. ಶ್ರೀಗಳ ಆಸ್ಥೆಯಿಂದಲೂ ಸಂಪರ್ಕದಿಂದಲೂ ಯಲ್ಲಾಪುರದ ಭಾಗ ಮಠದಲ್ಲಿ ಒಳಗೊಳ್ಳುವಂತಾಯಿತು. ಹೀಗೆ ಪ್ರಾದೇಶಿಕ ಅಸಮತೋಲನವನ್ನು ತೊಡೆದು ಹಾಕಿದ ಶ್ರೀಗಳ ಅಂತರಂಗದ ಅನುಗ್ರಹವೊ ಎಂಬಂತೆ, ಯಲ್ಲಾಪುರದಲ್ಲೂ ಅನಾಮಧೇಯ ಊರಾದ ಇರಾಪುರದಲ್ಲಿ ಜನ್ಮಿಸಿದ, ಜನ್ಮಾಂತರದ ಯೋಗಿ ಶ್ರೀ ನಾಗರಾಜ ಭಟ್ಟರು ಮಠಕ್ಕೆ ಸನ್ಯಾಸಿ ಶಿಷ್ಯರಾಗಿ ದೊರೆತದ್ದು ಸಂತೋಷದ ಸಂಗತಿ.

 ನಾನು ಕಂಡಂತೆ ನಾಗರಾಜ ಭಟ್ಟರ ಪೂರ್ವಿಕರು ವೇದವನ್ನು ಶಾಸ್ತ್ರವನ್ನು ಓದಿದವರಲ್ಲ. ಯೋಗಾದಿ ಸಾಧಕರನ್ನು ಕಂಡಿಲ್ಲ. ಆದರೆ ನಾಗರಾಜ ಭಟ್ಟರ ಮುತ್ತಜ್ಜನನ್ನು ಮೂರು ಬಾರಿ ಕಂಡ ನೆನಪು ನನಗೆ ಇದೆ. ನಮ್ಮ ಮನೆಗೆ ಅವರು ಆಗಾಗ ಬರುತ್ತಿದ್ದರಂತೆ. “ಗಂಗೆಅಜ್ಜ”ರೆಂದೇ ಅವರನ್ನು ಕರೆಯುತ್ತಿದ್ದರು. ಒಮ್ಮೆ ಅವರು ನಮ್ಮ ಮನೆಯಲ್ಲಿ ಊಟ ಮಾಡಿದ ನೆನಪು ಸ್ಥಿರವಾಗಿ ನನಗೆ ಇದೆ. ಏಕೆಂದರೆ ಊಟಕ್ಕೆ ಕುಳಿತಾಗ ಮಾಡಿದ ಎಲ್ಲ ಬಗೆಯ ಭಕ್ಷಾದಿಗಳನ್ನು ಒಮ್ಮೆಲೇ, ಒಮ್ಮೆ ಮಾತ್ರ ಬಡಿಸಿದ್ದರು. ಕುತೂಹಲಗೊಂಡ ನಾನು ನನ್ನ ದೊಡ್ಡ ಅಕ್ಕನಲ್ಲಿ ವಿಚಾರಿಸಿದಾಗ ಹೇಳಿದಳು, ಅವರು “ಏಕಭುಕ್ತಿ ವೃತಿಷ್ಠ” ರು ಹಾಗಾಗಿ ಒಮ್ಮೆ ಮಾತ್ರ ಬಡಿಸಿದ್ದನ್ನು ಊಟ ಮಾಡುತ್ತಾರೆ ಎಂದು ವಿವರಿಸಿದಳು. ಗಂಗೆಅಜ್ಜರಿಗೆ ತಾಳಮದ್ದಳೆಯಲ್ಲಿ ಅರ್ಥ ಹೇಳುವ ಉತ್ಸುಕತೆಯು ಇತ್ತು. ಅದು ಸದಾ ರುಕ್ಮಾಂಗದನ ಪಾತ್ರವನ್ನೇ ಹೇಳುವವರು. ಆ ಪಾತ್ರದ ಮೇಲೆ ಅವರಿಗೆ ಭಾವನಾತ್ಮಕವಾದ ಸಂಬಂಧವೇ ಇತ್ತೆಂದು ತೋರುತ್ತದೆ. ಮಳವಳ್ಳಿ ಬಾರೆ ಊರುಗಳಿಗೆ ವಿಭಾಗವಾಗುವ ರಸ್ತೆಯ ಬದಿಯಲ್ಲಿ ಒಂದು ಚಿಕ್ಕದಾದ ದೇವಿ ವಂದಿರವಿದೆ. ಅಲ್ಲಿ ಕೆಲವು ಕಾಲ ಪೂಜೆ ಮಾಡಿಕೊಂಡಿದ್ದರೆಂದು ತೋರುತ್ತದೆ. ನಾನು ಆ ಕಡೆ ಬಸ್ಸಿನಲ್ಲೊಮ್ಮೆ ಹೋದಾಗ ಗಂಗೆಅಜ್ಜರನ್ನು ನೋಡಿದ ನೆನಪು ಇದೆ. ಸಹಜವಾಗಿಯೇ ಬಾವುಕರಾದ ಗಂಗೆಅಜ್ಜರು, ಊರಿನವರ ಪರಿಹಾಸಕ್ಕೆ ಒಳಗಾಗಿದ್ದರು. ಆದರೆ ಒಬ್ಬರ ಮನಸ್ಸನ್ನು ಅಧ್ಯಾತ್ಮದ ಪಾಕವನ್ನು ಅಳೆಯುವುದಕ್ಕೆ ಸಾಮಾನ್ಯರಿಂದ ಸಾಧ್ಯವೇ? ಹಾಗೆ ಬಿದ್ದ ಭಕ್ತಿಯ ಬೀಜ ಆ ವಂಶದ ನಾಗರಾಜ ಭಟ್ಟರಲ್ಲಿ ವಿರಕ್ತಿಯ ರೂಪದೂ ಚಿಗುರೊಡಯಿತೇನೋ ಎಂದು ನನ್ನ ಅನಿಸಿಕೆ. ಗಂಗೆಮನೆ ಎಂಬ ಹೆಸರೇ ಆ ಪುಣ್ಯವನ್ನು ತಂದಿರಬಹುದು. ಹಿಂದಿನ ಮುಂದಿನ ತಲೆಮಾರುಗಳನ್ನು ಉದ್ದರಿಸುವ ಮಹಾತ್ಮನ ಜನನಕ್ಕು ಕಾರಣವಾಗಿರಬಹುದು. ಎಲ್ಲಕ್ಕೂ ಶಿಖರ ಪ್ರಾಯವಾಗಿ ಗುರು ಮಹಾತ್ಮೆಯ ಬಗ್ಗೆ ಇರುವ ಮಾತೊಂದು ಸರಿಯಾದದ್ದೇನೋ! “ಸ್ಪರ್ಶಮಣಿ ಮುಟ್ಟಿದ್ದೆಲ್ಲವನ್ನು ಚಿನ್ನವಾಗಿಸುತ್ತದೆ. ಆದರೆ ಗುರುವೆಂಬ ಸ್ಪರ್ಶ ಮಣಿ ಮುಟ್ಟಿದರೆ ಮತ್ತೊಂದು ಸ್ಪರ್ಶಮಣಿಯೆ ಆಗುತ್ತದೆ” ಭೌತಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಗುರುವನುಗ್ರಹಕ್ಕಿಂತ ದೊಡ್ಡದು ಈ ಪ್ರಪಂಚದಲ್ಲಿ ಯಾವುದಿದೆ?!!

  ಗಂಗಾಧರೇಂದ್ರರು  ಪೀಠಾಧಿಪತಿಯಾಗಲು ಪುರ ಪ್ರವೇಶವನ್ನು ಮಾಡುವಾಗ ಬೆರಳೆಣಿಕೆಯಷ್ಟು ಜನರಿದ್ದರು. ಮೊನ್ನೆ ನಾಗರಾಜ ಭಟ್ಟರು ಪುರ ಪ್ರವೇಶವನ್ನು ಮಾಡುವಾಗ ನೂರಾರು ವಾಹನಗಳಲ್ಲಿ ಸಾವಿರಾರು ಭಕ್ತರು ಹಿಂಬಾಲಿಸಿದ್ದರು. ಇದು ಗಂಗಾಧರೇಂದ್ರರು ತಮ್ಮ ಸೀಮೆಯಲ್ಲಿ ಕಟ್ಟಿ ನಿಲ್ಲಿಸಿದ ಶ್ರದ್ಧೆಯ ಪ್ರತೀಕ. ಹೊಸದಾಗಿ ಸನ್ಯಾಸಿ ಶಿಷ್ಯರಾಗುವವರಿಗೆ ಪರೀಕ್ಷೆ. ಗಂಗಾಧರೇಂದ್ರರಿಗೆ ಬೆಳೆಸುವ ಪರೀಕ್ಷೆ ಇತ್ತು. ಮುಂದೆ ಬರುವವರಿಗೆ ಬೆಳೆಸಿದ್ದನ್ನು ಉಳಿಸುವ ಪರೀಕ್ಷೆ ಇದ್ದೆ ಇದೆ. ನಾಗರಾಜ ಭಟ್ಟರ ಯೋಗ ಬಹುದೊಡ್ಡದು. ಕೈ ಹಿಡಿದು ನಡೆಸಲು ಸಾಕ್ಷಾತ್ ಪರಮೇಶ್ವರನೆ ಇದ್ದಾನೆ.

        -ಶ್ರೀಪಾದ ಗದ್ದೆ ಬೆಂಗಳೂರು.