ಗುಶಬ್ದಸ್ತ್ವಂಧಕಸರಸ್ಯಾತ್
ರುಶಬ್ದಸ್ತನ್ನಿರೋಧಕಃ|
ಅಂಧಕಾರವಿರೋಧಿತ್ವಾತ್
ಗುರುರಿತ್ಯಭಿಧೀಯತೆ||
ಅಂದರೆ ಗು ಶಬ್ದವು ಅಜ್ಞಾನ ಅಂಧಕಾರವನ್ನೂ ರು ಶಬ್ದವು ಅದನ್ನು ನಾಶಪಡಿಸುವುದು ಎಂಬ ಅರ್ಥದಲ್ಲಿಯೂ ಹೇಳಲಾಗಿತ್ತದೆ. ಅಂದರೆ ಗುರುವು ನಮ್ಮಲ್ಲಿರುವ ಅಂಧಕಾರವನ್ನು ನಾಶ ಮಾಡುವವನು. ಅಜ್ಞಾನವೇ ಅಂಧಕಾರ. ಅಜ್ಞಾನವಿದ್ದಲ್ಲಿ ಗುರಿ ತಲುಪಲು ಸಾಧ್ಯವಿಲ್ಲ. ಗುರಿ ತಲುಪುವ ಇಚ್ಛೆ ಉಳ್ಳವನು ತಾನು ಸಾಗುವ ದಾರಿಯ ಬಗ್ಗೆ ಕಿಂಚಿತ್ತಾದರೂ ತಿಳಿದಿರಬೇಕು. ಆದರೆ ಪೂರ್ಣ ತಿಳುವಳಿಕೆ ಇಲ್ಲದೇ ಗುರಿ ತಲುಪುವುದು ಕಷ್ಟಸಾಧ್ಯ. ಆಗ ತಿಳಿದವರನ್ನು ಕೇಳಲೇಬೇಕು. ತಿಳಿದವನು ಯಾರಿರುತ್ತಾನೋ, ಮಾರ್ಗದರ್ಶನ ಮಾಡುತ್ತಾನೋ ಅವನೇ ಗುರು. ಇನ್ನೊಂದು ರೀತಿಯಲ್ಲಿ ಗುರುವನ್ನು ಹೇಳಬಹುದು 'ಅಧಿಗತ ತತ್ವಃ ಶಿಷ್ಯಹಿತಾಯ ಉದ್ಯತಃ ಸತತಮ್' ಅಂದರೆ ಭಗವಂತನ್ನು ತಿಳಿದವನೂ ಶಿಷ್ಯನ ಹಿತವನ್ನು ಸದಾಕಾಲ ಬಯಸುವವನು ಎಂದರ್ಥ. ಇದು ಶಂಕರ ಭಗವತ್ಪಾದಾಚಾರ್ಯರು ಹೇಳಿದ ಮಾತಾಗಿದೆ. ಗುರುವನ್ನು ತ್ರಿಮೂರ್ತಿಗಳಿಗೆ ಹೋಲಿಸಿದ್ದಾರೆ. ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರ ಎಂಬುದಾಗಿ ಹೇಳಿರುವ ಶ್ಲೋಕವು ಎಲ್ಲರಿಗೂ ತಿಳಿದುದೇ ಆಗಿದೆ
ಗುರುಬ್ರಹ್ಮ ಗುರುರ್ವಿಷ್ಣುಃ
ಗುರುದೇವೋ ಮಹೇಶ್ವರಃ।
ಗುರುಃ ಸಾಕ್ಷಾತ್ ಪರಂ ಬ್ರಹ್ಮ
ತಸ್ಮೈ ಶ್ರೀ ಗುರವೇ ನಮಃ ।।
ಗುರುವು ಸಾಕ್ಷಾತ್ ದೈವೀಸ್ವರೂಪನು. ದೈವಾನುಗ್ರಹವಿಲ್ಲದೆ ಗುರಿ ತಲುಪಲು ಸಾಧ್ಯವೇ ಇಲ್ಲ. ಹಾಗೆಂದ ಮಾತ್ರಕ್ಕೆ ನಮ್ಮ ಪ್ರಯತ್ನವೂ ಬಹಳ ಮುಖ್ಯ.ಉದಾಹರಣೆಗೆ ಹೇಳುವುದಾದರೆ ಒಬ್ಬ ಬಾವಿಯಲ್ಲಿ ಬಿದ್ದಿರುತ್ತಾನೆ. ಮೇಲಿಂದೊಬ್ಬ ಅವನನ್ನು ಎತ್ತುವ ಪ್ರಯತ್ನ ಮಾಡುತ್ತಾನೆ. ಮೇಲೆ ಎತ್ತಲು ಹಗ್ಗವನ್ನು ನೀಡಿದವ ಗುರು. ಅವನು ಎಷ್ಟೇ ಪ್ರಯತ್ನ ಮಾಡಿದರೂ ಬಾವಿಯಲ್ಲಿ ಬಿದ್ದವನಿಗೆ ಮೇಲೆ ಬರಲು ಇಚ್ಛೆಯಿಲ್ಲದೆ ಅಥವಾ ಪ್ರಯತ್ನ ಮಾಡದೆ ಇದ್ದರೆ ಅವನು ಮೇಲೆ ಬರಲು ಸಾಧ್ಯವಿಲ್ಲ. ಬಿದ್ದವನು ಕೊಟ್ಟ ಹಗ್ಗವನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದಲ್ಲದೆ, ಹಗ್ಗದ ಸಹಾಯದಿಂದ ಸ್ವತಃ ಮೇಲೆ ಬರಲು ಪ್ರಯತ್ನಿಸಿದರೆ ಮಾತ್ರವೇ ಬೇಗ ಮೇಲೆ ಹತ್ತಲು ಸಾಧ್ಯ, ಜೀವ ಉಳಿಸಿಕೊಳ್ಳಲು ಸಾಧ್ಯ. ಗುರುವು ದಾರಿ ತೋರಿಸುತ್ತಾನೆಯೇ ಹೊರತು ಕರೆದೊಯ್ದು ತಲುಪುವ ಸ್ಥಳದಲ್ಲಿ ನಿಲ್ಲಿಸುವುದಿಲ್ಲ. ನಮ್ಮ ಪರಿಶ್ರಮದಿಂದ ಗುರು ತೋರಿಸಿದ ದಾರಿಯಲ್ಲಿ ಸಾಧನೆಯ ಮೂಲಕ ಸಾಗಿ ಗುರಿ ತಲುಪಬೇಕು. 'ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ' ಎಂದು ಗುರಿ ತಲುಪಲು ಗುರುವಿನ ಗುಲಾಮನಾಗಲೇ ಬೇಕೆಂದು ದಾಸಸಾಹಿತ್ಯದಲ್ಲೂ ಹೇಳಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಗುರಿ ತೋರುವವನೇ ಗುರುವು.
✍️ ಸಿಂಚನಾ ಪ್ರಸನ್ನ ಭಾಗ್ವತ್ ಮೇಗದ್ದೆ.
ಸಂಗ್ರಹ - ಶ್ರೀ ಸ್ವರ್ಣವಲ್ಲೀ ಭಕ್ತವೃಂದ.
