🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಕಗ್ಗ ಸೌರಭ -13




ಪುರುಷಸ್ವತಂತ್ರೆಯ ಪರಮಸಿದ್ಧಿಯದೇನು? ।

ಧರಣಿಗನುದಿನದ ರಕ್ತಾಭಿಷೇಚನೆಯೆ? ॥

ಕರವಾಲವನು ಪುಷ್ಪಸರವೆಂದು ಸೆಳೆದಾಡೆ ।

ಪರಿಮಳವ ಸೂಸುವುದೆ? - ಮಂಕುತಿಮ್ಮ ॥ ೧೩ ॥


ಅಂದು ನಡೆಯುತ್ತಿದ್ದ ಯುದ್ದ, ಯುದ್ದದಿಂದ ಆಗುತ್ತಿದ್ದ ದುಷ್ಪರಿಣಾಮಗಳು, ಇವುಗಳ ಬಗ್ಗೆ ಮನಕರಗಿ ಭಾವುಕರಾದ ಮಾನ್ಯ ಗುಂಡಪ್ಪನವರು ಶಕ್ತಿಯ ಸ್ವಾತಂತ್ರದ ಸರ್ವೋಚ್ಚ ಗುರಿ, ಈ ಭೂಮಿಗೆ ಪ್ರತಿದಿನವೂ ರಕ್ತದ ಅಭಿಷೇಕವೇ, ಒರೆಯಿಂದ ಕತ್ತಿಯನ್ನು ಹೂವಿನ ಮಾಲೆ ಎಂದು ಎಳೆದರೆ ಅದರಿಂದ ಸುಗಂಧ ಬರಬಹುದೇ ಎನ್ನುತ್ತಾರೆ.

ಹೂವಿನಮಾಲೆ ಎಂದು ಒರೆಯಿಂದ ಕತ್ತಿಯನ್ನು ಎಳೆದರೆ, ಅದು ಸುಗಂಧವನ್ನು ಬೀರುತ್ತದೆಯೇ. ನಮ್ಮಲ್ಲಿ ಶಕ್ತಿ ಇದ್ದರೆ ನಮ್ಮ ಅವಶ್ಯಕತೆಗೆ ಮೀರಿ ಶಕ್ತಿ ಇದ್ದರೆ, ಅದನ್ನು ಪರಹಿತಕ್ಕಾಗಿ ಉಪಯೋಗಿಸಬೇಕು. ಆ ಪರಮಾತ್ಮನ ಕೃಪೆಯಿಂದ ನಮಗೆ ಸಿಕ್ಕ ಅಧಿಕ ಶಕ್ತಿಯನ್ನು ನಮಗಿಂತ ಕಡಿಮೆ ಶಕ್ತಿ ಇರುವವರ ಒಳಿತಿಗಾಗಿ ಉಪಯೋಗಿಸಬೇಕು. ಹಾಗಾದಾಗ ಪರಸ್ಪರ ಪ್ರೀತಿ ವಿಶ್ವಾಸಗಳು ಬೆಳೆದು ಇಡೀ ಸಮಾಜವೇ ವಾಸಿಸಲು ಒಂದು ಸುಂದರ ತಾಣವಾಗುತ್ತದೆ. ಇಂದಿನ ಸ್ವಾರ್ಥಭರಿತ ಸಮಾಜದಲ್ಲಿ ಎಂತೆಂತಹ ವಿಧ್ಯಮಾನಗಳು ನಡೆಯುತ್ತಿವೆ ಎಂದು ವಿಷದಪಡಿಸುವ ಅವಶ್ಯಕತೆಯೇ ಇಲ್ಲ. ಅದು ಸರ್ವರಿಗೂ ಗೊತ್ತಿರುವ ವಿಷಯವೇ. ಅದು ತಪ್ಪು, ಅದು ಸರಿಯಿಲ್ಲ ಎಂಬ ಅರಿವೂ ಎಲ್ಲರಿಗೂ ಇದೆ. ನಮ್ಮ ಶಕ್ತಿಯನ್ನು, ಸ್ವರಕ್ಷಣೆಗೆ / ಪರರ ರಕ್ಷಣೆಗೆ ಉಪಯೋಗಿಸೋಣ. ಆದರೆ ದುರಾಸೆಗೆ ಸ್ವಾರ್ಥಕ್ಕೆ ಪರರ ಹಾನಿಗಾಗಿ ಉಪಯೋಗಿಸುವ ಬುದ್ಧಿ ನಮಗೆ ಎಂದೂ ಬರದಿರಲಿ ಎಂದು ಪ್ರಾರ್ಥಿಸುತ್ತ, ನಮ್ಮಲ್ಲಿ ಇರಬಹುದಾದ ಕೊರತೆಗಳನ್ನು ನೀಗಿಸಿಕೊಳ್ಳುವ ಪ್ರಯತ್ನವನ್ನು ಮಾಡೋಣ.

ನಿರೂಪಣೆ - ತಿಮ್ಮಣ್ಣ ಭಟ್, ಬೆಂಗಳೂರು.

ಪ್ರಸರಣ-  ಶ್ರೀ  ಸ್ವರ್ಣವಲ್ಲಿ ಭಕ್ತವೃಂದ.