🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಕಗ್ಗ ಸೌರಭ - 19

 ಕಗ್ಗ ಸೌರಭ  - 19 




ಗಾಳಿ ಮಣ್ಣುಂಡೆಯೊಳಹೊಕ್ಕು ಹೊರಹೊರಳದು ।

ಆಳೆನಿಪುದಂತಾಗದಿರೆ ಬರಿಯ ಹೆಂಟೆ ॥

ಬಾಳೇನು ಧೂಳು ಸುಳಿ, ಮರ ತಿಕ್ಕಿದುರಿಯ ಹೊಗೆ ।

ಕ್ಷೇಳವೇನಮೃತವೇಂ - ಮಂಕುತಿಮ್ಮ ॥ ೧೯ ॥


ಈ ದೇಹವನ್ನು ಮಣ್ಣು೦ಡೆಗೆ ಹೋಲಿಸಿದ್ದಾರೆ ಮತ್ತು ಈ ದೇಹದಲ್ಲಿ ಆಡುವ ಉಸಿರು ( ಗಾಳಿ ) ಆಡುತ್ತಿದ್ದರೆ ನಾವುಗಳು “ಆಳು” ಎಂದು ಎನ್ನಿಸಿ ಕೊಳ್ಳುತ್ತೇವೆ. ಇಲ್ಲದಿದ್ದರೆ ಈ ದೇಹ ಬರೀ ಮಣ್ಣಿನ ಹೆಂಟೆ ಎಂದು ಒಂದು ಅತ್ಯುತ್ತ್ತಮ ಸತ್ಯವನ್ನು ಪ್ರತಿಪಾದಿಸಲಾಗಿದೆ.

ಒಟ್ಟಾರೆ ಅಂತರ್ಯವೇನೆಂದರೆ, ಮಣ್ಣಿಂದ ಆಗಿ, ಮಣ್ಣಲ್ಲೇ ಇದ್ದು ಮಣ್ಣಲ್ಲೇ ಸೇರುವ ಈ ಮಾನವನ ಬಾಳು ಕೇವಲ ಉಸಿರಿರುವ ತನಕ. ಹೀಗೆ ಬದುಕಿರುವಾಗ ನಾವು ಪಡೆಯುವ ಸುಖ ದುಃಖ ಅನುಭವಿಸುವ , ಕೋಪ ದ್ವೇಷ, ಅಸೂಯ, ಪ್ರೀತಿ, ಪ್ರೇಮ, ಅನುರಾಗ, ಬಂಧನಗಳಂಥಹ ಭಾವಗಳೆಲ್ಲವೂ, ” ಬಡಿತವಿರುವತನಕ . ಈ ಜೀವನದ ಎಲ್ಲಕ್ಕೂ ಒಂದು ಮಂಗಳವನ್ನು ಹಾಡುವ, ಸಾವನ್ನು ಅಪ್ಪಿ ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗುವಾಗುವಂಥಾ ಈ ಜೀವನದಲ್ಲಿ ಪಡೆದ ಸುಖಕ್ಕೆ ಏನು ಬೆಲೆ, ದುಃಖಕ್ಕೆ ಏನು ಬೆಲೆ. ಎಲ್ಲವೂ ಶೂನ್ಯ. (ಶೂನ್ಯಕ್ಕೆ ಪೂಜ್ಯ ಎಂಬ ಅರ್ಥವೂ ಇದೆ) ಇಂತಹ ಭಾವಗಳನ್ನು ವ್ಯಕ್ತಪಡಿಸುವ ಈ ಕಗ್ಗದ ಅಂತರ್ಯವನ್ನು ವಾಚಕರು ಅವರದೇ ಅನುಭವದ ಮೂಸೆಯಲ್ಲಿ ಹಾಕಿ ನೋಡಿದಾಗ, ಪ್ರತಿಯೊಬ್ಬರಿಗೂ ಅವರವರದೇ ಅನುಭವದ ಭಾವ ಸಿಗುತ್ತದೆ.

ನಿರೂಪಣೆ - ಶ್ರೀ ತಿಮ್ಮಣ್ಣ ಭಟ್, ಬೆಂಗಳೂರು. 

ಪ್ರಸರಣ  -  ಶ್ರೀ  ಸ್ವರ್ಣವಲ್ಲಿ ಭಕ್ತವೃಂದ.